Menu

ಧನ್ವಂತರಿ ಜಯಂತಿ
ದಿನಾಂಕ: ೨೯ನೇ ನವೆಂಬರ್, ೨೦೧೩
ಸ್ಥಳ: ಪೂರ್ಣಪ್ರಮತಿ ಪ್ರಾಥಮಿಕ ಶಾಲಾ ಆವರಣ, ಗಿರಿನಗರ

‘ಆರೋಗ್ಯವೇ ಭಾಗ್ಯ’ ನಮ್ಮ ಹಿರಿಯರು ಆರೋಗ್ಯವನ್ನು ಭಾಗ್ಯವೆಂದು ಕರೆದಿದ್ದಾರೆ. ಯಾವ ಸಾಧನೆಗೇ ಆಗಲಿ ಶಾರೀರಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯವೂ ಮುಖ್ಯ ಎಂಬುದನ್ನು ಗಮನದಲ್ಲಿಟ್ಟುಕೊಂಡು ನಮ್ಮ ಪೂರ್ವಜರು ಆಹಾರ-ವಿಹಾರಗಳನ್ನು ರೂಪಿಸಿದ್ದರು. ಪೂರ್ಣಪ್ರಮತಿಯಲ್ಲಿ ಆರೋಗ್ಯದಿನವಾಗಿ ಧನ್ವಂತರಿ ಜಯಂತಿ ಆಚರಿಸಲಾಗುವುದು. ಸಮುದ್ರ ಮಥನದಲ್ಲಿ ಅಮೃತದ ಕಲಶವನ್ನು ಹೊತ್ತು ತಂದ ಧನ್ವಂತರಿ ಅವತಾರವನ್ನು ಸ್ಮರಿಸಿ ಆರೋಗ್ಯವನ್ನು ಹೊಂದುವುದು ಇದರ ಉದ್ದೇಶ. ಈ ಉದ್ದೇಶ ಪೂರ್ತಿಗಾಗಿ ಆಯುರ್ವೇದ ವೈದ್ಯರಾದ ಪ್ರಾಣೇಶ್ ಕುಲಕರ್ಣಿ ಅವರು ನಮ್ಮೊಂದಿಗಿದ್ದರು. ಆಯುರ್ವೇದವನ್ನು ಅವರ ಮಾತುಗಳಲ್ಲೇ ಕೇಳುವುದಾದರೆ:

‘ಆಯು, ವೇದ’ ಎಂಬ ಎರಡು ಪದಗಳಿಂದ ಆದದ್ದು ಆಯುರ್ವೇದ. ಆಯು ಎಂದರೆ ಆಯಸ್ಸು. ಒಬ್ಬ ವ್ಯಕ್ತಿ ಹುಟ್ಟಿನಿಂದ ಕೊನೆಯ ಉಸಿರಿನವರೆಗೆ ಇರುವ ಅವಧಿ. ವೇದ ಎಂದರೆ ಜ್ಞಾನ. ಆಯಸ್ಸಿನ ಜ್ಞಾನವನ್ನು ಕೊಡುವ ಶಾಸ್ತ್ರವೇ ಆಯುರ್ವೇದ. ಇದನ್ನು ಏಕೆ ಕಲಿಯಬೇಕು? ಅಥವಾ ಏಕೆ ತಿಳಿಯಬೇಕು?

ಕೃಷ್ಣ (೫ನೇ ತರಗತಿ):ನಮ್ಮ ಬಗ್ಗೆ ನಾವು ತಿಳಿಯಲು. ಅದನ್ನು ಕಲಿತು ಹಾಗೆ ನಡೆದರೆ ನಮಗೂ ಆರೋಗ್ಯ ಬರುವುದು.

ಆರೋಗ್ಯ ಭಾಗ್ಯವೇ ಇಲ್ಲದಿದ್ದರೆ ಶಾಲೆಗೆ ಬರಲು ಆಗುವುದಿಲ್ಲ. ಮನೆಯಲ್ಲೇ ಇರಬೇಕಾಗುವುದು. ಆರೋಗ್ಯ ಇರುವ ವ್ಯಕ್ತಿಯ ಜೀವನ ದೀರ್ಘವಾಗಿರುತ್ತದೆ. ರೋಗಿಗಳ ಆಯಸ್ಸು ತುಂಬಾ ಕಡಿಮೆ. ಆರೋಗ್ಯದಿಂದಾಗಿ ಆಯಸ್ಸಿನ ರಕ್ಷಣೆಯಾಗುತ್ತದೆ. ಒಂದು ಗಿಡವನ್ನು ಬೆಳೆಸಲು ಏನು ಬೇಕು?
ಮಕ್ಕಳು: ನೀರು, ಬೆಳಕು, ಗೊಬ್ಬರ, ಮಣ್ಣು…
ನೀವು ಇಷ್ಟೆಲ್ಲ ಹಾಕಿ ಬೆಳೆಸಿದ ಮೇಲೆ ಯಾವುದೋ ಹಸು ಬಂದು ತಿಂದುಬಿಟ್ಟರೆ?!
ಮಕ್ಕಳು: ಸಸಿಯನ್ನು ನೋಡಿಕೊಳ್ಳಬೇಕು. ಬೇಲಿ ಹಾಕಬೇಕು.
For more photos Click Here

ಗಿಡ ಬೆಳೆಯಲು ಪೂರಕವಾದ ಅಂಶಗಳನ್ನು ಹಾಕಬೇಕು ಮತ್ತು ನಾಶವಾಗದಂತೆ ನೋಡಿಕೊಳ್ಳಬೇಕು. ಇದ್ದದ್ದನ್ನು ಹೆಚ್ಚು ಮಾಡಿಕೊಳ್ಳುವುದು, ನಾಶವಾಗದಂತೆ ನೋಡಿಕೊಳ್ಳಬೇಕು. ದೇವರು ಆಯಸ್ಸನ್ನು ಕೊಟ್ಟಿದ್ದಾನೆ. ಅದನ್ನು ವೃದ್ಧಿಸುವ ಕೆಲಸ ಮಾಡಬೇಕು. ಕ್ಷಯವಾಗದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಕೆಲವೊಂದು ಆರೋಗ್ಯ ನಿಯಮಗಳನ್ನು ಪಾಲಿಸಬೇಕು. ಆರೋಗ್ಯದ ಸೂತ್ರಗಳಿವೆ. ಉದಾಹರಣೆಗೆ ದಿನಚರಿ. ಒಬ್ಬ ವ್ಯಕ್ತಿ ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಅನುಸರಿಸಬೇಕಾದ ನಿಯಮಗಳು. ಕೆಲವು ನಿಯಮಗಳನ್ನು ನಿಮಗೆ ಹೇಳುತ್ತೇನೆ.

ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಏಳಬೇಕು. ಬ್ರಹ್ಮ ಎಂದರೆ ಜ್ಞಾನ. ಸೂರ್ಯೋದಯಕ್ಕಿಂತ ಮೊದಲು ೨ ಮುಹೂರ್ತಕ್ಕೆ ಮೊದಲು ಅಂದರೆ ೯೦ ನಿಮಿಷಕ್ಕೆ ಮೊದಲು ಬ್ರಾಹ್ಮೀ ಮುಹೂರ್ತ ಪ್ರಾರಂಭವಾಗುತ್ತದೆ. ಚಳಿಗಾಲದಲ್ಲಿ ನಿಧಾನವಾಗಿ, ಬೇಸಿಗೆಯಲ್ಲಿ ಬೇಗನೆ ಸೂರ್ಯೋದಯವಾಗುತ್ತದೆ. ಋತುಗಳಿಗೆ ತಕ್ಕಂತೆ ಬ್ರಾಹ್ಮೀ ಮುಹೂರ್ತವನ್ನು ನಿಗದಿ ಮಾಡಿಕೊಂಡು ಬೆಳಗ್ಗೆ ಏಳಬೇಕು. ‘ಬ್ರಾಹ್ಮೇ ಮುಹೂರ್ತೇ ಉತ್ತಿಷ್ಠೇತ್ ಸ್ವಸ್ಥೋ ರಕ್ಷಾರ್ಥಮಾಯುಷಃ’ ಅಂದರೆ ಸ್ವಸ್ಥ ವ್ಯಕ್ತಿ ಬ್ರಾಹ್ಮೀ ಮುಹೂರ್ತದಲ್ಲಿ ಏಳಬೇಕು. ಬ್ರಾಹ್ಮೀ ಮುಹೂರ್ತ ಕಳೆದರೂ ಮಲಗಿದ್ದರೆ ಆಯಸ್ಸು ಕ್ಷಯವಾಗುತ್ತದೆ. ಎದ್ದ ನಂತರ ಸ್ವಚ್ಛವಾಗಬೇಕು. ಹಲ್ಲನ್ನು ಉಜ್ಜಲು ಮೃದುವಾದ ಬ್ರಷ್‌ಅನ್ನು ಉಪಯೋಗಿಸಬೇಕು ಮತ್ತು ನಾವು ಬಳಸು ಪೇಸ್ಟ್ ಅನ್ನು ಸ್ವಲ್ಪವೇ ಬಳಸಬೇಕು. ಅಥವಾ ಆಧುನಿಕ ಪೇಸ್ಟ್ ಬಳಸದೆ ಗಿಡಮೂಲಿಕೆಗಳನ್ನು ಬಳಸಿದರೆ ಇನ್ನೂ ಒಳ್ಳೆಯದು. ಇದರಿಂದ ಹಲ್ಲಿಗೆ ಕ್ರಿಮಿಗಳು ಬರುವುದಿಲ್ಲ ಮತ್ತು ಒಸಡುಗಳು ಬಲಗೊಳ್ಳುತ್ತವೆ. ದಂತಹರ್ಷ ರೋಗಕ್ಕೆ (ಬಿಸಿ ಅಥವಾ ತಂಪಾದ ಪದಾರ್ಥ ತಿಂದಾಗ ಹಲ್ಲು ಜುಮ್ ಎನಿಸುವುದು) ಗಿಡಮೂಲಿಕೆಗಳು ಔಷಧಿ. ನಮ್ಮ ಹಲ್ಲು ಪುಡಿ ಕಷಾಯ, ಕಟು, ತಿಕ್ತ (ಒಗರು, ಖಾರ, ಕಹಿ) ಈ ಮೂರು ರುಚಿಗಳಿಂದ ಕೂಡಿರಬೇಕು. ಮೃದುವಾಗಿ ಹಲ್ಲನ್ನು ಉಜ್ಜಬೇಕು. ಯಾವಾಗೆಲ್ಲಾ ಆಹಾರ ತಿನ್ನಿತ್ತೇವೋ ಆಗೆಲ್ಲಾ ಹಲ್ಲನ್ನು ಸ್ವಚ್ಛ ಮಾಡಿಕೊಳ್ಳಬೇಕು. ಹಲ್ಲನ್ನು ಉಜ್ಜಲು ದಂತಕಾಷ್ಠವನ್ನು (ಗಿಡದ ಟೊಂಗೆಯನ್ನು ಕೂರ್ಚದಂತೆ ಮಾಡಿದ ಸಾಧನ) ಉಪಯೋಗಿಸಬಹುದು.

ಹಲ್ಲು ಉಜ್ಜಿದ ನಂತರ ಎಣ್ಣೆ ಹಚ್ಚಿಕೊಂಡು ಸ್ನಾನಮಾಡಬೇಕು. ತಲೆಯಿಂದ ಕಾಲಿನವರೆಗೆ ಎಣ್ಣೆಯನ್ನು ಹಚ್ಚಿ ಸ್ನಾನ ಮಾಡಬೇಕು. ಇದರಿಂದ ಚರ್ಮವು ಮೃದುವಾಗಿ ಹೊಳಪಾಗಿರುತ್ತದೆ. ಮುದಿತನವನ್ನು ಇದರಿಂದ ದೂರಮಾಡಬಹುದು. ಅಂದರೆ ಚರ್ಮ ಸುಕ್ಕುಗಟ್ಟುವಿಕೆಯನ್ನು ಇದರಿಂದ ತಡೆಯಬಹುದು. ಇದನ್ನು ಅಭ್ಯಂಗ ಎಂದು ಕರೆಯುವರು. ಎಣ್ಣೆ ಹಚ್ಚಿ ಸ್ನಾನ ಮಾಡಿದರೆ ಶ್ರಮವೆಲ್ಲಾ ಹೋಗಿ, ಕಣ್ಣುಗಳ ರಕ್ಷಣೆಯಾಗಿ ಚೆನ್ನಾಗಿ ನಿದ್ದೆ ಬರುತ್ತದೆ. ಶರೀರವು ಗಟ್ಟಿಯಾಗುತ್ತಾ ಹೋಗುತ್ತದೆ.

ಮಕ್ಕಳು: ತಲೆಗೆ ಎಣ್ಣೆ ಹಚ್ಚುವುದರಿಂದ ಕಣ್ಣು ಹೇಗೆ ಶುದ್ಧವಾಗತ್ತೆ?
ಉತ್ತರ: ಕಣ್ಣಿಗೂ ತಲೆಗೂ ಒಳಗೆ ಒಂದು ಲಿಂಕ್ ಇರುತ್ತದೆ. ಮುಖದಲ್ಲಿರುವ ಎಲ್ಲಾ ಜ್ಞಾನೇಂದ್ರಿಯಗಳು ಅಂದರೆ ಕಣ್ಣು, ಕಿವಿ, ಮೂಗು, ನಾಲಗೆಗಳು ಒಂದು ಬಿಂದುವಿನಲ್ಲಿ ಸೇರುತ್ತವೆ. ಮರ್ಮ ಎನ್ನುತ್ತಾರೆ. ಅಂದರೆ ಸೂಕ್ಷ್ಮ ಅವಯವ. ತಲೆಗೆ ಎಣ್ಣೆ ಹಚ್ಚುವ್ಯದರಿಂದ ಈ ಬಿಂದುವಿಗೆ ಪುಷ್ಟಿ ಸಿಗುತ್ತದೆ. ಮುಖದಲ್ಲಿರುವ ಎಲ್ಲಾ ಇಂದ್ರಿಯಗಳೂ ಶಕ್ತಿಯುತವಾಗುತ್ತವೆ. ಮೂರು ಅವಯವಗಳಿಗೆ (ಮುಖ್ಯವಾಗಿ ತಲೆ, ಕಿವಿ, ಅಂಗಾಲುಗಳಿಗೆ) ಎಣ್ಣೆಯನ್ನು ಹಚ್ಚಬೇಕು. ಕಿವಿಗೆ ಎಣ್ಣೆ ಹಾಕುವುದರಿಂದ ಕಿವಿ ನೋವು ಬರುವುದಿಲ್ಲ.
ಹನುಮನ್ಯ ಎಂಬ ಒಂದು ರೋಗ. ಅಂದರೆ ದವಡೆಯು ಒಂದು ಸ್ಥಿತಿಯಲ್ಲಿ ಸ್ಥಿರವಾಗಿ ನಿಲ್ಲುವುದು. ತೆಗೆದರೆ ತೆರೆದಂತೆ, ಮುಚ್ಚಿದರೆ ಮುಚ್ಚಿದಂತೆಯೇ ಇರುವುದು. ಎಣ್ಣೆ ಹಚ್ಚಿ ಸ್ನಾನ ಮಾಡುವುದರಿಂದ ದವಡೆ ಚೆನ್ನಾಗಿ ಇರುತ್ತದೆ. ಮತ್ತೊಂದು ಪ್ರಮುಖ ವಿಷಯವೆಂದರೆ ಮಕ್ಕಳು ವಿಶೇಷವಾಗಿ ತುಪ್ಪ ತಿನ್ನಬೇಕು. ಇದರಿಂದ ಜ್ಞಾನವೃದ್ಧಿಯಾಗುತ್ತದೆ. ಬುದ್ಧಿ ಚೆನ್ನಾಗಿ ಬೇಕಾದರೆ ಚೆನ್ನಾಗಿ ತುಪ್ಪ ತಿನ್ನಬೇಕು. ಹೀಗೆ ತುಪ್ಪದ ಮಹತ್ವವನ್ನು ತಿಳಿಸುವ ಪುಟ್ಟ ಕಥೆಯೊಂದನ್ನು ಹೇಳಿ ಕುಲಕರ್ಣಿ ಅವರು ವಿರಮಿಸಿದರು.

ಮುಂದಿನ ದಿನಗಳಲ್ಲಿ ಆಯುರ್ವೇದ, ಶಿಲ್ಪಕಲೆಗಳನ್ನು ವಿಶೇಷವಾಗಿ ಅಧ್ಯಯನ ಮಾಡುವ ಉದ್ದೇಶ ಶಾಲೆಯದು, ಪ್ರಾಣೇಶ್ ಕುಲಕರ್ಣಿ ಅವರು ಆಯುರ್ವೇದ ವಿಭಾಗಕ್ಕಾಗಿ ವಿಶೇಷ ಪಠ್ಯವನ್ನು ತಯಾರುಮಾಡಿ ದಿನಚರಿಯಿಂದ ಆರಂಭವಾದ ಇಂದಿನ ಪಾಠವನ್ನು ವಿವಿಧ ವಯಸ್ಸಿನಲ್ಲಿ ಹೇಗೆ ಬೆಳೆಸಬಹುದು ಎಂಬುದನ್ನೆಲ್ಲ ತಿಳಿಸಲು ನಮ್ಮೊಂದಿಗೆ ಇರಬೇಕು ಎಂದು ಕೇಳಿಕೊಳ್ಳಲಾಯಿತು. ಅವರು ಸಂತೋಷದಿಂದ ಒಪ್ಪಿದ್ದು ನಮ್ಮ ಭಾಗ್ಯವೇ ಸರಿ.