Menu

ದಿನಾಂಕ ೦೧.೧೧.೨೦೧೬ರಂದು ಮಧ್ಯಾಹ್ನ ೩.೦೦ ಘಂಟೆಗೆ ನಮ್ಮ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ಅರ್ಥಪೂರ್ಣವಾಗಿ ನಡೆಯಿತು. ಕನ್ನಡದ ಭಾವಕ್ಷೇತ್ರ ಮತ್ತು ವಿಜ್ಞಾನಕ್ಷೇತ್ರಗಳ ಹೊಯ್ಗೈ ಆಗಿ ಏರ್ಪಡಿಸಿದ್ದ ಈ ಕಾರ್ಯಕ್ರಮದಲ್ಲಿ ಕನ್ನಡದ ಹಿರಿಯ ಖ್ಯಾತ ಕವಿ ಡಾ|ಹೆಚ್.ಎಸ್.ವೆಂಕಟೇಶಮೂರ್ತಿಯವರು ಮಾತನಾಡಿ, ನಮ್ಮ ಶಾಲೆಯ ಮಕ್ಕಳು ಬರೆದ ಕವನ ಹಾಗೂ ಪ್ರಬಂಧಗಳನ್ನು ವಿಮರ್ಶಿಸಿ ಪ್ರಶಂಸಿದ್ದಲ್ಲದೆ ಮಕ್ಕಳಿಗೆ ಮಾರ್ಗದರ್ಶನವನ್ನೂ ನೀಡಿದರು. ಕನ್ನಡದ ದಟ್ಟ ವಾತಾವರಣವಿರುವ ಈ ನಿಮ್ಮ ಶಾಲೆಗೆ ಯಾವಾಗ ಕರೆದರೂ ಬರುತ್ತೇನೆಂಬ ವಚನ ನೀಡಿದರು.

ನಂತರ ನಡೆದ ಖಗೋಳವಿಜ್ಞಾನ ಸಂಬಂಧಿಸಿದ ಕಾರ್ಯಕ್ರಮದಲ್ಲಿ, ಬೆಂಗಳೂರಿನ ಜವಹರಲಾಲ್ ನೆಹರೂ ತಾರಾಲಯದ ನಿರ್ದೇಶಕಿ ಹಾಗೂ ನಾಡಿನ ಹೆಸರಾಂತ ಖಗೋಳವಿಜ್ಞಾನಿಯೂ, ವಿಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳ ಬರಹಗಾರರೂ ಆದ ಶ್ರೀಮತಿ ಬಿ.ಎಸ್.ಶೈಲಜಾ ಇವರು, ನಮ್ಮ ನಾಡಿನ ಹಿಂದಿನ ಶಿಷ್ಟ ಸಾಹಿತ್ಯ, ಜನಪದ ಸಾಹಿತ್ಯ, ಗಾದೆ, ಒಗಟು ಮತ್ತು ಆಡು ಭಾಷೆಗಳಲ್ಲಿ ಹೇಗೆ ಖಗೋಲ ಜ್ಞಾನ ಹೊಮ್ಮಿದೆ ಎಂಬುದನ್ನು ಉದಾಹರೆಣೆಗಳೊಂದಿಗೆ ವಿವರಿಸಿದರು.

“ಪೋಷಕರೊಡನೆ ಕಲಿಕೆ” ಎಂಬ ಕಾರ್ಯಕ್ರಮದಡಿಯಲ್ಲಿ ನಡೆದ ಈ ಸಮಾರಂಭದಲ್ಲಿ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತಿಯಿಂದ ಭಾಗವಹಿಸಿದ್ದರು. ನಮ್ಮ ಶಾಲಾವಿದ್ಯಾರ್ಥಿಗಳು ಕಾರ್ಯಕ್ರಮವನ್ನು ನಡೆಸಿಕೊಟ್ಟರಲ್ಲದೆ ಕನ್ನಡ ಭಾಷೆಯಲ್ಲಿ ತಮಗಿರುವ ಸಾಮರ್ಥ್ಯವನ್ನು ಪ್ರಸ್ತುತಪಡಿಸಿದರು.