ಹರಿತ್ ಮತ್ತು ಹರೀಶ್: ಕಳಚಿಕೊಂಡ ಹಸುರು ಕೊಂಡಿ

Nagesh Hegde
Ecologist

ನಿಸರ್ಗದ ಜೊತೆ ಗಾಢ ನಂಟನ್ನು ಇಟ್ಟುಕೊಂಡವರು ಕಣ್ಮರೆ ಆದರೆಂದರೆ ನಿಸರ್ಗದ ಒಂದು ಭಾಗವೇ ಕಣ್ಮರೆ ಆದಂತೆ. ‘ಮಿತ್ರ ಹರೀಶ್ ಭಟ್ ಇನ್ನಿಲ್ಲ’ ಎಂದು ಶ್ರೀನಿವಾಸ್ ಅಣ್ಣ ಆ ದಿನ ಗದ್ಗದಿತರಾಗಿ, ತಡೆ-ತಡೆದು ಹೇಳುತ್ತಿದ್ದಾಗ ಒಂದು ಸೊಂಪಾದ ಅಶ್ವತ್ಥ ವೃಕ್ಷವೊಂದು ನೋಡನೋಡುತ್ತ ಕಣ್ಮರೆ ಆದಂತೆ; ಒಂದು ಸೊಗಸಾದ ತಿಳಿನೀಲ ಸರೋವರವೊಂದು ಕಣ್ಣೆದುರೇ ಇಂಗಿ ಹೋದಂತೆ ಮನಸ್ಸಿಗೆಲ್ಲ ಖಿನ್ನತೆ ಆವರಿಸಿತು. ಹೊಳಪುಗಣ್ಣಿನ, ಉದ್ದ ಕೂದಲಿನ, ನಿರಂತರ ನಗುಮುಖದ ಆ ಬಿಂಬ ಮಾತ್ರ ದಿನದ ಎಲ್ಲ ಅನಿವಾರ್ಯ ಕೆಲಸಗಳ ನಡುವೆಯೂ ಮತ್ತೆ ಮತ್ತೆ ಮೂಡಿ ಬರತೊಡಗಿತ್ತು.

ಹರೀಶ್ ಭಟ್ಟರನ್ನು ಪ್ರಕೃತಿಯಿಂದ ಪ್ರತ್ಯೇಕಿಸಿ ಕಲ್ಪಿಸಿಕೊಳ್ಳುವುದು ಸಾಧ್ಯವೇ ಇಲ್ಲ. ಗೆದ್ದಲು ಹುತ್ತದ ಪಕ್ಕ ಮಂಡಿಯೂರಿ ಕೂತು ಮಕ್ಕಳಿಗೆ ಇರುವೆಗಳ ಸಾಲುಗಳನ್ನು ತೋರಿಸುತ್ತ ವಿವರಿಸುತ್ತಿರುವ ಹರೀಶ್ ಭಟ್; ‘ಅದೋ ನೋಡಿ, ಇಂಡಿಯನ್ ರೋಲರ್! ಅದು ನಮ್ಮ ರಾಜ್ಯ ಪಕ್ಷಿ- ಕನ್ನಡದ ಹೆಸರು ನೀಲಕಂಠ’ ಎನ್ನುತ್ತ ನೀಳ ಕೈಗಳನ್ನು ಎತ್ತಿ ತೋರಿಸುವ ಹರೀಶ್ ಭಟ್. ಅದೇ ವೇಳೆಗೆ, ಅಲ್ಲೇ ಪಕ್ಕದಲ್ಲಿ ಬಾಗಿ ನಿಂತು ಚೀಲವನ್ನು ತಡಕಾಡುತ್ತಿರುವ ಹುಡುಗನ ಹೆಗಲ ಮೇಲೆ ಕೈ ಹಾಕಿ, ‘ಯಾಕೋ ಬೈನಾಕ್ಯುಲರ್ ಹುಡುಕ್ತಾ ಇದೀಯ? ಬರಿಗಣ್ಣಲ್ಲೇ ಕಾಣುತ್ತದಲ್ಲೋ ಇಂಡಿಯನ್ ರೋಲರ್! ನೋಡು ಅದು ಹ್ಯಾಗೆ ಹಾರಾಡ್ತಾ ಹಾರಾಡ್ತಾನೇ ಮಗುಚಿಕೊಳ್ಳುತ್ತದೆ. ಅದಕ್ಕೇ ರೋಲರ್ ಪಕ್ಷಿ ಅನ್ನೋದು. ರಿಪಬ್ಲಿಕ್ ಡೇ ಪರೇಡ್‌ನಲ್ಲಿ ಫೈಟರ್ ಜೆಟ್‌ಗಳು ಆಕಾಶದಲ್ಲೇ ಪಲ್ಟಿ ಹೊಡೆಯೋದನ್ನು ನೋಡಿದ್ದೀರಲ್ಲ? ಈ ಪಕ್ಷಿಯನ್ನು ನೋಡಿಯೇ ಅಂಥ ವಿಮಾನದ ನಿರ್ಮಾಣ ಮಾಡಿದ್ದಾರೆ. ಎನ್ನುತ್ತ ಎಲ್ಲರನ್ನೂ ಅವಾಕ್‌ಗೊಳಿಸುವ ಹರೀಶ್ ಭಟ್. ಎಲ್ಲರೂ ಆಕಾಶದತ್ತ ಕಣ್ಣು ಕೀಲಿಸಿದ್ದಾಗ, ಕಾಲಿನ ಬುಡದ ಮಣ್ಣಿನಲ್ಲಿ ಪಳಪಳ ಹೊಳೆಯುತ್ತ ಬಿದ್ದಿರುವ ಯಾವುದೋ ಕೀಟದ ಬಣ್ಣದ ರೆಕ್ಕೆಯನ್ನು ಮೇಲಕ್ಕೆತ್ತಿ, ‘ಇದನ್ನು ನೋಡಿ, ಫ್ಲೋರೊಸೆಂಟ್ ಕಲರ್! ಹೋಳಿ ಹಬ್ಬದಲ್ಲಿ ಮೈಗೆಲ್ಲ ಇಂಥ ಮಿನುಗುವ ಬಣ್ಣವನ್ನು ಹಚ್ಚಿಕೊಂಡು ಕುಣಿಯುವವರನ್ನು ನೋಡಿದ್ದೀರಿ ತಾನೆ? ನೇಚರ್ ಡಿಡ್ ಇಟ್ ಮಿಲಿಯನ್ಸ್ ಆಫ್ ಇಯರ್ಸ್ ಬಿಫೋರ್” ಎಂದು ವಿವರಿಸುವ ಹರೀಶ್ ಭಟ್.

ಪ್ರಕೃತಿ ಮತ್ತು ಮನುಷ್ಯರ ಸಂಬಂಧವನ್ನು ಇನ್ನಷ್ಟು ಗಾಢಗೊಳಿಸಬೇಕೆಂದು ಈ ವರ್ಷದ ಪರಿಸರ ದಿನದ ಸಂದರ್ಭದಲ್ಲಿ ಇಡೀ ೨೦೧೭ನೇ ಇಸವಿ ಪೂರ್ತಿ ನಿಸರ್ಗದೊಂದಿಗೆ ಮರುಜೋಡಣೆ ಎಂಬ ವಿಶೇಷ ಕಾರ್ಯಕ್ರಮವಾಗಿ ಆಚರಿಸಬೇಕೆಂದು ವಿಶ್ವಸಂಸ್ಥೆ ಕರೆಕೊಟ್ಟಿದೆ. ನಗರವಾಸಿಗಳಾಗಿ ನಾವೆಲ್ಲ ದಿನದಿನಕ್ಕೆ ಪ್ರಕೃತಿಯಿಂದ ದೂರ ಆಗುತ್ತಿದ್ದೇವೆ; ಹಳ್ಳಿಯ ಮಕ್ಕಳಿಗೂ ಇಂಗ್ಲಿಷ್ ಶಿಕ್ಷಣ ಕೊಡುವ ಧಾವಂತದಲ್ಲಿ ಅವರಿಗೂ ನಿಸರ್ಗ ಸಂಬಂಧ ಸಿಗದ ಹಾಗೆ ಮಾಡುತ್ತಿದ್ದೇವೆ. ದೊಡ್ಡವರನ್ನು ಬಿಡಿ, ಮಕ್ಕಳಿಗಾದರೂ ನಿಸರ್ಗದ ನಿಗೂಢಗಳನ್ನು ಚೋದಕ ವೈಚಿತ್ರ್ಯಗಳನ್ನು ತಿಳಿಸಬೇಕು ಎಂದು ಹೊರಟಾಗ ನಮಗೆ ಮೊದಲು ನೆನಪಾಗುತ್ತಿದ್ದ ಹೆಸರೇ ಹರೀಶ್ ಭಟ್. ಬೆಂಗಳೂರಿನಲ್ಲಿ ನಿಸರ್ಗ ವಿಜ್ಞಾನಿಗಳ ಸಂಖ್ಯೆ ದೊಡ್ಡದಿದೆ ನಿಜ. ಪಕ್ಷಿತಜ್ಞರು, ಇರುವೆ ತಜ್ಞರು, ಗಿಡಮರ ತಜ್ಞರು, ಜಲತಜ್ಞರು, ಬಾವಲಿತಜ್ಞರು.. ಹೀಗೆ ನಾನಾ ಕ್ಯಾಟಗರಿಯ ಪರಿಣತರು ಇದ್ದಾರೆ. ಆದರೆ ಗುಡ್ಡ, ಕೊಳ್ಳ, ಪೊದೆ, ಗುಹೆಗಳಲ್ಲಿ ಮಕ್ಕಳನ್ನು ಕರೆದೊಯ್ದು ಅವರಿಗೆಲ್ಲ ಮುದ ನೀಡುವಂತೆ ಸಮಗ್ರ ಜೀವಲೋಕದ ರಸವತ್ತಾದ ವಿವರಣೆ ಕೊಡಬಲ್ಲ ಒಬ್ಬನೇ ಒಬ್ಬ ವ್ಯಕ್ತಿ ಎಂದರೆ ಇವರೇ.

ಅನಿವಾರ್ಯವಾಗಿ ನಗರದಲ್ಲೇ ಉಳಿಯಬೇಕಾದ ನಮ್ಮಂಥವರಿಗೆ ಹರೀಶ್ ಭಟ್ ಕಣ್ಣು-ಕಿವಿ ಆಗಿದ್ದರು; ನಿಸರ್ಗದ ನಡುವಣ ವಾಕಿಂಗ್-ಟಾಕಿಂಗ್ ವಿಶ್ವಕೋಶ ಎನಿಸಿದ್ದ ಅವರು ಯಾವ ದಿನ ಯಾವ ಕಾಡಿನಲ್ಲಿ ಸುತ್ತುತ್ತಿರುತ್ತಿದ್ದರೊ ಯಾವಾಗ ಯಾವ ದೇಶದ ಯಾವ ಕಾನನದಲ್ಲಿರುತ್ತಿದ್ದರೊ ಅಂತೂ ಎಂದೇ ಯಾವುದೇ ಪ್ರಶ್ನೆ ಕೇಳಿದರೂ ಮಿಂಚಿನಂತೆ ಉತ್ತರ ಬರುತ್ತಿತ್ತು. ‘… ಇಲ್ಲ, ಕೇರಳದಲ್ಲೂ ಕಸ್ತೂರಿ ರಂಗನ್ ವರದಿಗೆ ವಿರೋಧ ಬಂದಿದೆ’; ‘…ರಾಕ್ ಪೀಜನ್ ಅಂದ್ರೆ ಅದೇರೀ, ನಮ್ಮಲ್ಲಿ ಕಾಣೋ ಬೂದು ಪಾರಿವಾಳಗಳೇ.. ಅವು ಕಾಂಕ್ರೀಟ್ ಪೀಜನ್ ಆಗಿದಾವೆ ಅಷ್ಟೆ’; ‘… ಹೌದು ಬ್ಲೈಂಡ್ ಡಾಲ್ಫಿನ್‌ಗಳು ಗಂಗಾನದಿಯಲ್ಲಿ ಮಾತ್ರ ಇರೋದು. ಅವುಗಳ ಬಗ್ಗೆ ನಾವು ಬ್ಲೈಂಡ್ ಆಗಿದ್ದೇವೆ ಹಹ್ಹಾ..’,

ಹರೀಶ್ ನೆನಪಾದಾಗಲೆಲ್ಲ ಅವರ ಹಹ್ಹಾ ನಗುವಿನ ಅಲೆಗಳು, ತುಂಟನ್ನು ಸೂಸುವ ಬಟ್ಟಲುಗಣ್ಣು, ಯಕ್ಷಗಾನದ ವೇಷ ಕಟ್ಟಲು ಸಜ್ಜಾದಂತಿರುವ ಉದ್ದುದ್ದ ಕೂದಲು ಕಣ್ಣಿಗೆ ಕಟ್ಟುತ್ತವೆ. ಇಮೇಲ್ ಕಳಿಸಿದರೆ ಈಗಲೂ ತುರ್ತು ಉತ್ತರ ಅವರಿಂದ ಬಂದೀತೆಂದು ನಿರಿಕ್ಷಿಸುವಂತಾಗುತ್ತದೆ.
ನಿಸರ್ಗ ಮತ್ತು ಮನುಷ್ಯರ ನಡುವಣ ಪ್ರಮುಖ ಕೊಂಡಿಯೊಂದು ಕಳಚಿದಂತೆ ಭಾಸವಾಗುತ್ತದೆ.

 

1 Response to ಹರಿತ್ ಮತ್ತು ಹರೀಶ್: ಕಳಚಿಕೊಂಡ ಹಸುರು ಕೊಂಡಿ

  1. Srinidhi

    ಹರೀಶ್ ಭಟ್ ಅವರ ಕುರಿತು ಪೂರ್ಣಪ್ರಮತಿ ಬಳಗದಿಂದ ಹಿಂದೆಯೂ ಕೇಳುತ್ತಿದ್ದೆ, ಆನಂದಿನಿಯಲ್ಲಿ ಈಗಲೂ ಓದಿದೆ. ಅವರ ಅಗಲಿಕೆ ದುಃಖದ ಸಂಗತಿ. ನನಗೆ ಅವರನ್ನು ಭೇಟಿಮಾಡಲು, ಪರಿಚಯ ಮಾಡಿಕೊಳ್ಳಲು ಆಗಲೇ ಇಲ್ಲ ಎನ್ನುವುದೂ.

Leave a Reply

Notice Board

Pūrṇapramati is recruiting teachers

Pūrṇapramati is recruiting dedicated research oriented teachers for 1 to 10 grades and pre-primary Montessori.

 

Registration is open for the next academic year

Purnapramati opens its registration for the next academic year: November 2017 and June 2018-19. Applications are being issued. Kindly help spread the word to interested parents.

Socialize & Share

Follow us on different social networking website and share it