ದೇವಲೋಕದ ಹೂವನ್ನು ಅರಸಿ ಹೊರಟ ಚಿಟ್ಟೆ

 

– ಶ್ರೀವಲ್ಲಿ (ಹರೀಶ್ ಭಟ್ಟರ ಶ್ರೀಮತಿ)

 

        ೨೦೦೩, ಅಕ್ಟೋಬರ್ ೩ ರಂದು ಉಡುಪಿಯಲ್ಲಿ ನನ್ನ ಜೀವನದ ಒಂದು ಹೊಸ ಅಧ್ಯಾಯ ಆರಂಭವಾಯಿತು. ಒಂದು ನಡೆದಾಡುವ ವಿಶ್ವಕೋಶವನ್ನು ನಾನು ಮದುವೆಯಾಗಿದ್ದೆ ಎಂದು ನಂತರ ತಿಳಿಯಿತು. ಇವರ ಭೇಟಿಯಾದ ನಂತರ ನಾನು ಎಂದೂ ಗೂಗಲ್ ಸರ್ಚ್ ಮಾಡಿದ್ದೇ ಇಲ್ಲ. ಮನೆಯಲ್ಲಿ ಇದೇ ಕುರ್ಚಿಯ ಮೇಲೆ ಕುಳಿತು ಅವರು ಆಡಿದ ಮಾತುಗಳೆಲ್ಲಾ ನೆನಪಾಗುತ್ತಿದೆ. ಇದ್ದಕ್ಕಿದ್ದಂತೆ ಮಾಯವಾಗಿ ಬಿಟ್ಟರು. ಇನ್ನು ಮುಂದು ಅದು ಕೇವಲ ಪ್ರತಿಧ್ವನಿ ಮಾತ್ರ…

        ನಮ್ಮ ಮದುವೆಯಾಗುವ ವೇಳೆಗೆ ಅವರ ತಂದೆ ಇರಲಿಲ್ಲ. ತಾಯಿಯೇ ಅವರ ವಿದ್ಯಾಭ್ಯಾಸ, ಬೆಳೆವಣಿಗೆಯ ಜವಾಬ್ದಾರಿ ಹೊತ್ತವರಾಗಿದ್ದರು. ಮದುವೆಯಾದ ಕೆಲವೇ ದಿನಗಳಲ್ಲಿ ತಾಯಿಯೂ ಹೋಗಿಬಿಟ್ಟರು. ೧೯೭೮, ಆಗಸ್ಟ್ ೨೮ ರಂದು ಉಡುಪಿಯ ಉದ್ಯಾವರದಲ್ಲಿ ಇವರು ಹುಟ್ಟಿದರು. ನಂತರ ಬಳ್ಳಾರಿಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಆಮೇಲೆ ಉಡುಪಿ, ಮಂಗಳೂರಿನಲ್ಲಿ ಉನ್ನತ ವಿದ್ಯಾಭ್ಯಾಸವನ್ನು ಮುಂದುವರೆಸಿದರಂತೆ. ಎಂ.ಎಸ್.ಸಿ ಮಾಡುವ ಹಂತದಲ್ಲೆ ಐ.ಐ.ಎಸ್.ಸಿ ಯ ಒಂದು ಯೋಜನೆಯಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತೆಂದು ಹೇಳುತ್ತಿದ್ದರು. ಆಮೇಲೆ ಬೆಂಗಳೂರಿನಲ್ಲಿ ನಮ್ಮ ತಂದೆ-ತಾಯಿಯರ ಜೊತೆಗೇ ವಾಸ ಪ್ರಾರಂಭವಾಯಿತು. ಅವರ ಅಪ್ಪನ ಕೆಲವು ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅಪ್ಪನೊಂದಿಗೆ ಜಾತ್ರೆಗೆ ಹೋಗುವುದೆಂದರೆ ಅವರಿಗೆ ಇಷ್ಟವಂತೆ. ಜಾತ್ರೆಯಲ್ಲಿ ನೋಡಿ ಬಂದದ್ದನ್ನೆಲ್ಲಾ ಚಿತ್ರ ಬಿಡಿಸಿ ಇಡುತ್ತಿದ್ದರಂತೆ. ಹೀಗೆ ಚಿತ್ರ ಬರೆಯುವ ಕಲೆ ಮೊದಲೇ ಇತ್ತು, ವಿಜ್ಞಾನದ ಹುಚ್ಚು ನಂತರ ಸೇರಿಕೊಂಡಿತು.

        ದೇವರ ಪೂಜೆಯನ್ನು ಪ್ರತಿದಿನ ಶ್ರದ್ಧೆಯಿಂದ ಮಾಡುತ್ತಿದ್ದರು. ಕೇವಲ ಬಾಯಿಮಾತಿಗಲ್ಲದೆ ದೀರ್ಘವಾಗಿ, ತಿಳಿದು ಮಾಡುತ್ತಿದ್ದರು. ಯಾವುದೇ ಹಬ್ಬ ಬಂದರೂ ಅದನ್ನು ಅದ್ದೂರಿಯಾಗೇ ಆಚರಿಸಬೇಕೆಂಬುದು ಅವರ ಆಸೆಯಾಗಿತ್ತು. ಅದರ ಹಿನ್ನಲೆ ತಿಳಿದು, ಆಳವಾದ ಅಧ್ಯಯನ ಮಾಡಿ, ಎಲ್ಲರನ್ನೂ ಕಲೆಹಾಕಿಕೊಂಡು ಅದರಲ್ಲಿ ಎಲ್ಲರಿಗೂ ಒಂದು ಮಹತ್ವದ ಪಾತ್ರ ಸಿಗುವಂತೆ ಮಾಡಿ ವಿಜೃಂಭಣೆಯಿಂದ ಆಚರಣೆ ಮಾಡುವುದು ಇವರ ಅಭ್ಯಾಸವಾಗಿತ್ತು. ಅಕ್ಕ-ಪಕ್ಕದ ಮನೆಯವರಿಗೆ ಹಬ್ಬವೆಂದರೆ ನಮ್ಮ ಮನೆಯ ಹಬ್ಬವೆ ಎನ್ನುವಂತಾಗಿತ್ತು. ಮಾಡುವ ಕೆಲಸದಲ್ಲಿ ಪರಿಪೂರ್ಣತೆ ಇರಬೇಕೆಂಬುದು ಅವರ ಪ್ರಯತ್ನ.

        ಹಳೆಯ ಕಾಲದ ಪದಾರ್ಥಗಳೆಂದರೆ ಅವರಿಗೆ ಬಹಳ ಪ್ರೀತಿ. ಹಳೆಯ ಕಾಲದ ಶ್ಯಾವಿಗೆ ಒರಳು, ಚೆನ್ನಮಣೆ, ದೂರವಾಣಿಗಳನ್ನೆಲ್ಲ ತಂದಿಟ್ಟಿದ್ದಾರೆ. ಆ ದೂರವಾಣಿಗೆ ಜೀವ ಕೊಡುವ ಸಲುವಾಗಿ ದೂರವಾಣಿ ಸಂಪರ್ಕ ಪಡೆಯುವಂತಾಯಿತು. ಆಕಸ್ಮಿಕವೆಂಬಂತೆ ಇದರ ಸಂಖ್ಯೆ ಅವರ ಮೊಬೈಲ್ ಸಂಖ್ಯೆಯ ಕೊನೆಯ ನಾಲ್ಕು ಸಂಖ್ಯೆಗಳನ್ನೇ ಹೋಲುತ್ತವೆ. ನನ್ನ ತಮ್ಮ ನಂದ ಕಿಶೋರ್ ಹೇಳುವಂತೆ ತಂದೆಯ ನಂತರ ಅವರ ಸ್ಥಾನವನ್ನು ತುಂಬಬಲ್ಲವರು ಭಾವ ಮಾತ್ರ ಆಗಿದ್ದರು. ಇವರೊಬ್ಬ ನಗುಮೊಗದ, ಚೈತನ್ಯ ಚಿಲುಮೆ. ತಾವಿರುವ ಸುತ್ತಲಿನವರಲ್ಲಿ ಜೀವ ತುಂಬುತ್ತಿದ್ದರು. ಲವಲವಿಕೆಯಿಂದ ಎಲ್ಲರೊಂದಿಗೆ ಮಾತನಾಡುತ್ತಿದ್ದರು. ಆದರೆ ಈಗ ಆ ಆಸರೆ ತಪ್ಪಿದೆ…

         ಹಂಸಾ ಇವರ ಪ್ರಪಂಚವಾಗಿದ್ದಳು. ಇವಳಿಗಾಗಿ ಏನೆಲ್ಲಾ ಮಾಡುತ್ತಿದ್ದರೆಂದರೆ, ಮಗಳಿಗೆ ಸ್ನಾನ ಮಾಡಿಸಿ, ಅಲಂಕಾರ ಮಾಡುತ್ತಿದ್ದರು, ಕೈಗೆ ಮೆಹಂದಿ ಹಾಕುತ್ತಿದ್ದರು, ಕೃಷ್ಣಾಷ್ಟಮಿ ಬಂದರೆ ಕೃಷ್ಣ ವೇಷ ತೊಡಿಸುತ್ತಿದ್ದರು. ಮಗಳ ಹುಟ್ಟಿದ ಹಬ್ಬವಂತೂ ನಿಜಕ್ಕೂ ಹಬ್ಬವೇ ಆಗುವಂತೆ ಆಚರಿಸುತ್ತಿದ್ದರು. ಪ್ರತಿ ವರ್ಷದ ಹಬ್ಬಕ್ಕೂ ಒಂದೊಂದು ವಿಷಯವನ್ನು ಇಟ್ಟುಕೊಂಡು, ಸೃಜನಾತ್ಮಕವಾಗಿ ಯೋಜಿಸುತ್ತಿದ್ದರು. ಪ್ರೇಕ್ಷಕರಾಗಿ ಬಂದವರೂ ಪೂರ್ಣಪ್ರಮಾಣದಲ್ಲಿ ತೊಡಗಿ, ಆನಂದಿಸಿ, ಮತ್ತೆ ಮತ್ತೆ ನೆನಪಿಸಿಕೊಳ್ಳುವ ಕಾರ್ಯಕ್ರಮ ಅದಾಗಿರುತ್ತಿತ್ತು. ಅವಳ ಲಾಲನೆ-ಪಾಲನೆ ಅವರೇ ನೋಡಿಕೊಳ್ಳುತ್ತಿದ್ದರು. ಮಗಳನ್ನು ಪ್ರಧಾನಮಂತ್ರಿ ಮಾಡುವ ಕನಸ್ಸನ್ನು ಆಗಾಗ ಹೇಳುತ್ತಿದ್ದರು. ಮಗಳು ಅಪ್ಪನಂತೆ ಧೈರ್ಯವಂತೆ. ಮೂರು ದಿನಗಳ ಹಿಂದೆಯಷ್ಟೇ ಸಿಕ್ಕಿದ್ದ ಹಾವಿನ ಪೊರೆಯನ್ನು ಕೈಯಲ್ಲಿ ತಂದು ತೋರಿಸಿದಳು, ಮನೆಯಲ್ಲೇ ಇಟ್ಟುಕೊಂಡಿದ್ದಾಳೆ.

         ಇತ್ತೀಚೆಗಷ್ಟೆ ಪ್ರಶಸ್ತಿಗಳನ್ನು ಇಡಲು ಕಪಾಟುಗಳನ್ನು ಮಾಡಿಸಲಾಯಿತು. ಬಡಗಿಯು ಇಷ್ಟೆಲ್ಲ ಯಾಕೆ ಮಾಡುಸುತ್ತಿದ್ದೀರಿ, ಜಾಗ ಸಾಲದೆ ಎಂದು ಕೇಳಿದ್ದರು. ಆದರೆ ಅಷ್ಟೂ ಜಾಗ ತುಂಬಿ ಜೋಡಿಸದೆ ಇರುವ ಪ್ರಶಸ್ತಿಗಳು ಇನ್ನೂ ಒಳಗೇ ಸೇರಿವೆ. ಅರಣ್ಯ ಮಿತ್ರ, ಉತ್ತಮ ವಿಜ್ಞಾನ ಸಂವಾದಕ, ಹುಸೇನ್ ಮೆಮೋರಿಯಲ್ ಪ್ರಶಸ್ತಿ ಇತ್ಯಾದಿ ಪ್ರಶಸ್ತಿಗಳು ಬಂದಿವೆ. ಇಂಗ್ಲಿಷ್, ಹಿಂದಿ, ತುಳು, ಕನ್ನಡ, ತೆಲುಗು ಭಾಷೆಗಳಲ್ಲಿ ಸುಲಲಿತವಾಗಿ ಸಂವಾದಿಸಬಲ್ಲವರಾಗಿದ್ದರು. ಯಾವುದೆ ಭಾಷಣ, ವಿಷಯವಾದರೂ ಹೋಗಿ ಬಂದ ನಂತರ ಎಲ್ಲವನ್ನೂ ನನಗೆ ಮತ್ತು ಹಂಸಾಳಿಗೆ ತೋರಿಸಿ ವಿವರಿಸುತ್ತಿದ್ದರು.

       ಪಶ್ಚಿಮಘಟ್ಟಗಳಲ್ಲಿ ಮಾಧವ್ ಗಾಡ್ಗಿಲ್ ಅವರೊಂದಿಗೆ ಸುಮಾರ ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಐದು ವರ್ಷಗಳ ಕಾಲ ಇವರ ಸತತ ಪರಿಶ್ರಮದ ಫಲವಾಗಿ ‘ಪಕ್ಷಿ ಪ್ರಪಂಚ’ ಎಂಬ ಪುಸ್ತಕ ಬಿಡುಗಡೆಯಾಯಿತು. ಈ ಪುಸ್ತಕ ಕೇವಲ ವೈಜ್ಞಾನಿಕ, ಭೌಗೋಳಿಕ ವಿಷಯಗಳಲ್ಲದೆ, ಪ್ರಕೃತಿಗೆ ಸಂಬಂಧಪಟ್ಟ ಕವಿತೆಗಳನ್ನೂ ಪ್ರಾಸಂಗಿಕವಾಗಿ ಹೊತ್ತಿದೆ. ಆ ಪುಸ್ತಕದಲ್ಲಿ ಬಂದ ಪ್ರತಿಯೊಂದು ಕವಿತೆಯನ್ನು ಅವರೇ ಆಯ್ಕೆ ಮಾಡಿ, ಅದನ್ನು ರಚಿಸಿದ ಕವಿಗಳನ್ನು ಖುದ್ದಾಗಿ ಸಂಪರ್ಕಿಸಿ ಅವರಿಂದ ಅನುಮತಿಯನ್ನು ಪಡೆದು, ವಿಶಿಷ್ಟ ಛಾಯಾಚಿತ್ರಗಳನ್ನು ಸಂಗ್ರಹಿಸಿ, ಅವರ ಹೆಸರು ಸಹಿತವಾಗಿ ಪ್ರಕಟಿಸಿದ್ದಾರೆ. ಈ ಕೃತಿ ನಿಜಕ್ಕೂ ಅವರ ತಪಸ್ಸಿಗೆ, ಸಹೃದಯತೆಗೆ ಕನ್ನಡಿಯಾಗಿದೆ. ಆ ಸಂದರ್ಭದಲ್ಲಿ ಪಲಿಮಾರು ಮಠದ ಸ್ವಾಮಿಗಳು ಆಶೀರ್ವದಿಸಿ ಮಾಡಿದ ಸಹಿ ಮತ್ತು ಗೌರವವಾಗಿ ಕೊಟ್ಟ ೧೦೦ ರೂ.ಗಳನ್ನು ಪುಸ್ತಕದಲ್ಲಿ ಹಾಗೆಯೇ ಸಂರಕ್ಷಿಸಿಕೊಂಡಿದ್ದಾರೆ. ಪುಸ್ತಕದಲ್ಲಿ ಮಕ್ಕಳು ನವಿಲು ಗರಿ ಬಚ್ಚಿಟ್ಟುಕೊಂಡಂತೆ…..

         ಉಪನಿಷತ್ತು, ಪುರಾಣಗಳಲ್ಲಿ ಔಷಧಿ ಸಸ್ಯಗಳಿಗೆ, ಪ್ರಾಣಿ-ಪಕ್ಷಿಗಳಿಗೆ ಸಿಗುವ ಉಲ್ಲೇಖಗಳನ್ನು ಹುಡುಕಿ ಪುಸ್ತಕ ಮಾಡಬೇಕೆಂಬುದು ಅವರ ಕನಸಾಗಿತ್ತು. ಅದಮ್ಯ ಚೇತನ ಶಾಲೆ, ಇತ್ಯಾದಿ ಶಾಲೆಗಳನ್ನು ಹಲವಾರು ವೈಜ್ಞಾನಿಕ ಯೋಜನೆಗಳಲ್ಲಿ ಜೋಡಿಸಿ, ಸರಕಾರದ ಮಾನ್ಯತೆ ಸಿಗುವಂತೆ ಮಾಡುವಲ್ಲಿ ಬಹಳ ಶ್ರಮವಹಿಸುತ್ತಿದ್ದರು.

         ಅಪ್ಪ ಇಲ್ಲವಾದ ಸುದ್ದಿಯನ್ನು ಕೇಳಿ ನನಗೆ ಹಂಸಾ ತಾನೇ ಧೈರ್ಯ ಹೇಳಿ ‘ಅಪ್ಪ ಅಮೇರಿಕಾಕ್ಕೆ ಹೋಗಿದ್ದಾರೆ ಎಂದು ತಿಳಿದುಕೊಳ್ಳೋಣ, ಅಳಬೇಡ’ ಎಂದು ಹೇಳಿದಳು. ಆಗಾಗ್ಗೆ ಸಂಶೋಧನೆಯ ಕಾರಣದಿಂದ ಮನೆಯಿಂದ ದೂರವಿರುತ್ತಿದ್ದರಿಂದ ಅವರು ಇಲ್ಲದ ಸ್ಥಿತಿಯಲ್ಲೂ ಹೇಗೆ ಬದುಕಬೇಕೆಂಬ ತರಬೇತಿಯನ್ನೂ ನಮಗೆ ಕೊಟ್ಟಿದ್ದಾರೆ. ಮಗಳ ಕಲಿಕೆಗೆ ನಾನೇನು ತಲೆಕೆಡಿಸಿಳ್ಳುವ ಅಗತ್ಯವಿಲ್ಲವೆಂದು ಆರಾಮವಾಗಿದ್ದೆ. ಈಗ ಯಾರು ಆ ಹೊಣೆ ಹೊರಬೇಕು? ದೇವಲೋಕದ ಹೂವನ್ನು ಅರಸಿ ಹೊರಟ ಈ ಚಿಟ್ಟೆಯನ್ನು ಹಿಡಿಯಲು ಆಗದು, ಆದರೆ ಬದುಕಿರುವ ಚಿಟ್ಟೆಗಳಿಗೆ ಜೀವ ತುಂಬುವ ಕೆಲಸ ಮಾಡವ ಧೈರ್ಯ ಮಾಡಬೇಕಷ್ಟೆ. ಅವರ ನೆನಪಿನಲ್ಲಿ ಮುಂದುವರೆಯುವುದೊಂದೆ ನಮ್ಮ ಪಾಲಿಗಿದೆ.

Leave a Reply

Notice Board

Pūrṇapramati is recruiting teachers

Pūrṇapramati is recruiting dedicated research oriented teachers for 1 to 10 grades and pre-primary Montessori.

 

Registration is open for the next academic year

Purnapramati opens its registration for the next academic year: November 2017 and June 2018-19. Applications are being issued. Kindly help spread the word to interested parents.

Socialize & Share

Follow us on different social networking website and share it