ಏಪ್ರಿಲ್ ನ ಸಂಚಿಕೆ ತಾಂತ್ರಿಕ ಕಾರಣಗಳಿಂದಾಗಿ ಈಗ ಹೊರಬರುತ್ತಿದೆ. ಆನಂದಿನಿಗೆ ಇಷ್ಟು ದಿನ ಅಜ್ಞಾತವಾಸ.
ಈ ಮಧ್ಯದ ಅನೇಕ ವಿಷಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕಿದೆ.
ಏಪ್ರಿಲ್ ನಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಪೂರ್ಣಪ್ರಮತಿಯ ಪ್ರಥಮ ತಂಡದ ಹತ್ತು ಮಕ್ಕಳು ತೆಗೆದುಕೊಂಡಿದ್ದು ಶೇಕಡ ನೂರು ಶ್ರೇಷ್ಠದರ್ಜೆಯ ( distinction) ತೇರ್ಗಡೆಯ ಫಲಿತಾಂಶ ಬಂದಿದೆ. ಏಳು ಮಕ್ಕಳು ಶೇಕಡ ೯೦ - ೯೭ರ ಅಂಕ ಗಳನ್ನು ಪಡೆದಿದ್ದಾರೆ. ಹತ್ತಾರು ಪಠ್ಯೇತರ ಚಟುವಟಿಕೆಗಳನ್ನು ನಡೆಸುತ್ತ, ಪಾಠಕ್ರಮದಲ್ಲೂ ಹೊಸ ಪ್ರಯೋಗಗಳನ್ನು ಮಾಡುತ್ತ ಅದರ ಹಿನ್ನೆಲೆಯಲ್ಲಿ ಪುಸ್ತಕದ ಬದನೇಕಾಯಿಯಾಗದೆಯೂ ಇಷ್ಟೆಲ್ಲಾ ಅಂಕಗಳನ್ನು ಪಡೆಯಬಹುದು ಎನ್ನುವ ನಮ್ಮ ಯೋಜನೆ ಸಫಲವಾಗಿದೆ. ಇದು ಒಂದು ರೀತಿಯಲ್ಲಿ ಇತರರಿಗೂ ಮಾದರಿಯಾಗಬಹುದೇನೊ!
೨೦೧೮ ಜೂನ್ ನಲ್ಲಿ ಪೂರ್ಣಪ್ರಮತಿ ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿದೆ. ಎರಡೂವರೆ ವರ್ಷದಿಂದ ಹನ್ನೊಂದು ವರ್ಷದ ವರೆಗೆ (೬ನೆಯ ತರಗತಿ) ಮಾಟೆಸ್ಸೊರಿ ಪದ್ಧತಿ, ನಂತರದ ತರಗತಿಗಳಲ್ಲಿ ರಾಜ್ಯಪಠ್ಯಕ್ರಮ ಪದ್ಢತಿ ಹಾಗೂ ಮಾಗಡಿ ರಸ್ತೆಯ ಆನಂದವನ ಗುರುಕುಲಗಳು ಯಶಸ್ವಿಯಾಗಿ ನಡೆಯುತ್ತಿವೆ. ಇದಕ್ಕೆ ನಿಮ್ಮೆಲ್ಲರ ಆಶೀರ್ವಾದ, ಪ್ರೋತ್ಸಾಹಗಳೇ ಕಾರಣ.
ನಮ್ಮ ಮಾರ್ಗದರ್ಶಕ ಗುರುಗಳಲ್ಲಿ ಒಬ್ಬರಾದ ಶ್ರೀ ಜ್ಞಾನಸ್ವರೂಪ ಸಾನಂದ ಸ್ವಾಮೀಜಿಯವರು ಹರಿದ್ವಾರದಲ್ಲಿ ಗಂಗೆಯ ನಿರಂತರತೆ, ಅವಿರಲತೆಯ ಬಗೆಗೆ ನಿರ್ಣಾಯಕ ಫಲಿತಾಂಶಕ್ಕಾಗಿ ತಮ್ಮ ಜೀವವನ್ನೇ ಪಣವಾಗಿಟ್ಟು ಆಮರಣಾಂತ ಉಪವಾಸದ ತಪಸ್ಸು ಪ್ರಾರಂಭಿಸಿದ್ದಾರೆ. ಈಹೊತ್ತಿಗೆ ಉಪವಾಸ ಪ್ರಾರಂಭವಾಗಿ ೬೭ ದಿನಗಳು ಸಂದಿವೆ. ಆನಂದವನದ ಮಕ್ಕಳು ಶ್ರೀನಿವಾಸ್ ಅವರ ನೇತೃತ್ವದಲ್ಲಿ ದೆಹಲಿ ಹಾಗೂ ಹರಿದ್ವಾರಕ್ಕೆ ಹೋಗಿ ಅವರೊಡನೆ ತಾವೂ ಗಂಗಾ ತಪಸ್ಸಿನಲ್ಲಿ ಪಾಲ್ಗೊಂಡು ಹಿಂದಿರುಗಿದ್ದಾರೆ.
ಈ ಹಿನ್ನೆಲೆಯಲ್ಲಿ, ಬನ್ನಿ,ಈ ಸಂಚಿಕೆಯನ್ನು ಓದೋಣ.
ಶಶಿರೇಖಾ ಮಣೂರ್,
ಸಂಪಾದಕರು.