ಬಿತ್ತಿದ ಕನಸು- (ಭಾಗ – ೧)
Friday, December 15th, 2017– ಕೃಷ್ಣರಾಜ ಭಟ್ (ಅಧ್ಯಾಪಕರು, ಪಿ.ಇ.ಎಸ್ ಕಾಲೇಜು) ಹರೀಶಣ್ಣ ಈ ಪದ ವ್ಯಕ್ತಿಪರಿಚಯ ಇದ್ದವರಿಗೆ ಕಿವಿಯಿಂದಿಳಿದು ನೇರ ಹೃದಯಕ್ಕೆ ತಟ್ಟುತ್ತದೆ. ಅವರಲ್ಲಿ ಮೇಧಾವಿತನದೊಂದಿಗಿದ್ದ ನಿರಹಂಕಾರ ಸರಳತೆ ಎಳೆಯ ಮನಸ್ಸಿಗೂ ಆಪ್ತತೆಯನ್ನು ಮೂಡಿಸುತ್ತಿತ್ತು. ನಡೆದಾಡುವ ಗೂಗಲ್ ಆಗಿ, ಆದರೆ ಗೂಗಲ್‌ನಂತೆ ಈ ಅರ್ಥದಲ್ಲೋ ಆ ಅರ್ಥದಲ್ಲೋ! ಎಂದು ಮರಳಿ ಪ್ರಶ್ನಿಸದೆ ನಿಸ್ಸಂದೇಹವಾದ ಉತ್ತರಗಳನಿತ್ತು ತಣಿಸುತ್ತಿದ್ದ ಪರಿಗೆ ವಿದ್ವಾಂಸರೂ ಗಾಬರಿ ಬೀಳುತ್ತಿದ್ದರು. ಈಗೇನು ಹೇಳಿದರೂ ಅತಿಶಯವೆನಿಸೀತು. ಆದರೆ ಜೊತೆಗಿದ್ದ ಎಲ್ಲರ ಅನುಭವವೂ ಇದೇ ಆಗಿದೆ ಎಂಬುದು ಅಷ್ಟೆ ದಿಟ. ನನಗೆ ಅವರು ಕೊಟ್ಟ ಕೆಲವೇ ದಿನಗಳ ಸಂಬಂಧ ನನ್ನ ಬದುಕಿನುದ್ದಕ್ಕೂ ಚಿಂತಿಸುವಂತೆ ಮಾಡಿದೆ. ಹಳೆಬೇರು ಹೊಸ ಚಿಗುರುಗಳ ಬಗ್ಗೆ ಅವರಿಗಿದ್ದ ಕಲ್ಪನೆ ಹೇಳಿ ಮುಗಿಸಲಾಗದಷ್ಟು. ಪ್ರಾಚೀನರ ತಿಳುವಳಿಕೆಯೊಳಗೆ ಇಳಿದು ನೋಡುವ ಬಗ್ಗೆ ಅವರಿಗಿದ್ದ ಕಳಕಳಿ ಅನುಕರಣೀಯ. ವಿಜ್ಞಾನದ ಹೊಸ ಸಂಗತಿಗಳನ್ನು ಜೋಡಿಸಿಕೊಂಡು ಮಕ್ಕಳಿಗೆ ತಿಳಿಹೇಳುತ್ತಿದ್ದ ಅವರ ಅಧ್ಯಾಪಕ ಗುಣ ಮರೆಯಲಾಗದ್ದು. ಪ್ರಕೃತಿಯ ಪ್ರತಿಯೊಂದು ಪ್ರಾಣಿ-ಪಕ್ಷಿ-ಕ್ರಿಮಿ-ಕೀಟ-ಗಿಡ-ಮರ ಬಗೆಗೆ ಅವರಿಗಿದ್ದ ಸುಳಿವು ಸೂಕ್ಷ್ಮ ಬೇರೆಯವರಲ್ಲಿ ನೋಡಲು ಸಿಗದ್ದು. ಮಣ್ಣಿನ ಗುಣ, ನೀರಿನ ಸೆಲೆ, ಧಾನ್ಯ ಮತ್ತು ಹಸಿರು ತರಕಾರಿಗಳ ವೈವಿಧ್ಯ ಅವುಗಳ ಔಷಧೀಯ ಮಹತ್ವ ಹೀಗೆ ಎಲ್ಲವನ್ನೂ ಬೆಟ್ಟವನ್ನು ಹತ್ತುತ್ತಲ್ಲೋ, ಇಳಿಯುತ್ತಲೋ ಹೇಳುತ್ತಿದ್ದರೆ ಕೇಳುಗನಿಗೆ ರಸದೌತಣ. ಕುಮಾರಪರ್ವತವನ್ನು ಅದಕ್ಕಿಂತ ಹಿಮ್ದೆ ಮೂರು ಬಾರಿ ಏರಿದ್ದರೂ ಪ್ರಕೃತಿಯ ಅಚ್ಚರಿಯ ಗುಟ್ಟು ಎದೆಗೆ ಬಿದ್ದಿರಲಿಲ್ಲ. ಹರೀಶಣ್ಣ ಜೊತೆಗೆ ಹಾಕಿದ ಅಷ್ಟೂ ಹೆಜ್ಜೆಗಳು ಪ್ರಕೃತಿಯ ಪಾಠವನ್ನೇ ಮಾಡಿದವು. ಅಧ್ಯಾತ್ಮದ ಕೊಂಡಿಗಳನ್ನು ನೆನಪಿಸಿದವು. ಪ್ರಕೃತಿಯ ಪ್ರತಿಯೊಂದಕ್ಕೂ ಕಾಣದಿರುವ ಹೊಂದಾಣಿಕೆಗಳು ಅಣ್ಣನ ಕಣ್ಣುಗಳಲ್ಲಿ ಪ್ರತಿಫಲಿಸಿದ್ದವು. ಹತ್ತಾರು ಬಗೆಯ ಜೇಡಗಳು, ಅವುಗಳ ಗೂಡಿನ ವೈವಿಧ್ಯವನ್ನು ತೋರಿಸಿ ಅರಿವು ಮೂಡಿಸಿದರು. ದೇವರ ಸೃಷ್ಟಿಯ ವೈಚಿತ್ರ್ಯದ ಪರಿಚಯ ಕೇಳಿದ ಶೌನಕರಿಗೆ ಅಂಗಿರಸರ ಉತ್ತರ ಯಥಾ ಊರ್ಣನಾಭಿಃ ಸೃಜತೇ ಗೃಹ್ಣತೇ ಚ – ಜೇಡದ ನಡೆಯಂತೆ ಎಂದು ಉರ್ಣನಾಭಿ – ಹೊಕ್ಕುಳಲ್ಲಿ ನೂಲು ಹೊತ್ತ ಜೀವಿ ನೂಲನ್ನು ಗೂಡು ಕಟ್ಟಲು ಹೊರಕ್ಕೆಸೆಯುತ್ತದೆ. ಕೆಲಸ ಮುಗಿದೊಡನೆ ಒಳಕ್ಕೆ ಸೆಳೆದು ಕೊಳ್ಳುತ್ತದೆ, ಮತ್ತೆ ಬೆಕಾದಾಗ ಗೂಡು ಕಟ್ಟುತ್ತದೆ. ಮತ್ತೆ ನುಂಗುತ್ತದೆ. ಅಂತೆಯೆ ಪ್ರಪಂಚ ಎಂಬ ಬಲೆಯನ್ನು ಸೃಷ್ಟಿಸುತ್ತಾನೆ. ಕಾಲ ಮುಗಿದೊಡನೆ ಹೊಕ್ಕಳಲ್ಲೆ ತುಂಬಿಕೊಳ್ಳುತ್ತಾನೆ. ಅದನ್ನು ಆಹಾರವಾಗಿ ನೊಣೆಯುವವನಲ್ಲ. ಏಕೆಂದರೆ ಆಪ್ತಕಾಮಸ್ಯ ಕಾ ಸ್ಪೃಹಾ. ಎಲ್ಲ ಪೂರೈಸಿಕೊಂಡವನಿಗೆ ಬಯಕೆಗಳೇನು, ಬಲೆಯಲ್ಲಿ ಜೇಡ ಎಂತು ಸಿಲುಕದೋ ಅಂತೆಯೇ ಈ ತ್ರಿಗುಣಗಳ ಬಲೆಯಲ್ಲಿ ದೇವರು ಸಿಲುಕಲಾರ. ಊರ್ಣವನ್ನು ನಾಭಿಯಲ್ಲೇ ಹೊತ್ತಿರುತ್ತದೆ. ಅದು ಹೇಗೆ ಜೀರ್ಣವಾಗದೋ – ಅಂತೆಯೇ ಜಗತ್ತು ದೇವರ ಹಸಿವನ್ನು ತಣಿಸುವ ವಸ್ತುವಲ್ಲ ಎಂಬುದು ಪದದಿಂದಲೇ ತಿಳಿಯುವ ಸಂಗತಿ ಎಂದು ಮಾತನಾಡುತ್ತಿದ್ದೆವು. ಇಂತಹ ಸಂಗತಿಗಳನ್ನು ಬಹಳ ಚರ್ಚಿಸಿದೆವು. ಋಷಿಗಳು ಪ್ರಕೃತಿಯ ಉದಾಹರಣೆಗಳನ್ನಿತ್ತು ಅರ್ಥೈಸುವ ಪರಿಗೆ ಅವರದ್ದು ತೆರೆದ ದಣಿವಿಲ್ಲದ ಕಿವಿಯಾಗಿದ್ದವು. ಇದನ್ನೆಲ್ಲ ಒಂದೆಡೆ ಸಂಗ್ರಹಿಸಿ ತುಲನಾತ್ಮಕ ಅಧ್ಯಯನ ನಡೆಸೋಣ ಎಂದು ದೊಡ್ಡ ಕನಸು ಕಟ್ಟಿದ್ದರು. ನಾನು ಅವರಿಂದ ಬಹಳ ಉಪಕೃತ. ಅವರ ಕನಸಿನ ಬೀಜಕ್ಕೆ ನೀರೆರೆಯುವ ನಾನು ಈಗ ಜೀವಜಲವಿಲ್ಲದ ಪಾಳು ಬಾವಿಯಾಗಿರುವೆ. ಆದರೂ ಆ ದಿಸೆಯಲ್ಲಿ ಜತನ ಗೈಯ್ಯುವೆ. ಅವರ ಜೊತೆ ಬಹಳ ಹೊತ್ತು ಕಳೆದ ಪೂರ್ಣಪ್ರಮತಿಯ ಮಕ್ಕಳೇ ಭಾಗ್ಯವಂತರು. ಇತ್ತೀಚಿನ ದಿನಗಳಲ್ಲಿ ಮಕ್ಕಳು ಶಿಕ್ಷಕರನ್ನು ಹಚ್ಚಿಕೊಳ್ಳುವುದು ಕಡಿಮೆ. ಅದಕ್ಕೆ ಅಪವಾದ ಹರೀಶಣ್ಣ. ಅವರ ಅಗಲಿಕೆಯ ಸುದ್ದಿ ಕಿವಿಗೆ ಬಿದ್ದ ಆ ಘಳಿಗೆ ನಾನು ಮಕ್ಕಳ ಜೊತೆಗಿದ್ದೆ. ಆ ಎಲ್ಲ ಮಕ್ಕಳ ಕಣ್ಣಂಚಿನಲ್ಲಿ ಜಿನುಗಿದ್ದ ನೀರು ನನ್ನ ಕಲಕಿತು. ಕೆಲವರು ಅತ್ತೆ ಬಿಟ್ಟರು. ಸತ್ಯ ಹೇಳಬೇಕೆಂದರೆ ನನಗಿನ್ನೂ ಚೇತರಿಕೆ ಉಂಟಾಗಿಲ್ಲ. ನನ್ನವರಿಗಿಂತ ಅವರು ಹೆಚ್ಚಿನವರಾಗಿದ್ದರು. ನನ್ನ ಗುಂಗಿಗೆ ಅವರ ಲಹರಿಗಿರಿ ಕೂಡಿಕೊಳ್ಳುತ್ತಿತ್ತು. ಅಣ್ಣ! ನೀವಿಲ್ಲದೆ ಈಗ ರಾಗ ಹೊಂದದ ಗೀಚಿದ ಗೀತವಾಗಿದ್ದೇನೆ. ಪದವಿಜ್ಞಾನ ಹೀಗೊಂದು ಶೀರ್ಷಿಕೆಯಲ್ಲಿ ಪದಗಳೊಳಗೆ ಪ್ರಾಚೀನರು ಅಡಗಿಸಿಟ್ಟ ವಿಜ್ಞಾನದ ಕೌತುಕಗಳನ್ನು, ವಸ್ತುವಿನ ಗುಣಧರ್ಮವನ್ನು ಪರಿಚಯಿಸುವ ಪ್ರಯತ್ನವೊಂದನ್ನು ಮಾಡಲು ಪ್ರಾರಂಭಿಸಿದ್ದೇನೆ. ಈ ಪ್ರಯತ್ನ ಹರೀಶಣ್ಣನ ನೆನಪಿಗಾಗಿ…ಇದು ಮುಗಿಯುವ ಸಾಹಸವಲ್ಲ. ಆದರೂ ಎಲ್ಲೋ ಒಂದೆಡೆ ಆರಂಭಗೊಳ್ಳುವ ಕ್ಷಣಕ್ಕೆ ಹರೀಶಣ್ಣ ನೆನಪಾಗಿದ್ದಾರೆ. (ಮುಂದಿನ ಸಂಚಿಕೆಯಲ್ಲಿ ಮುಂದುವರೆಯುವುದು)