Indumati, Teacher, Purnapramati
ನಮ್ಮ ಶಾಲೆಯಲ್ಲಿ ‘ಜೀವೋ ಜೀವಸ್ಯ ಜೀವನಮ್’ ಎಂಬ ಸಂವತ್ಸರ ಸೂತ್ರವನ್ನು ಕಲಿಯುತ್ತಿದ್ದಾಗ ಭಾಗೀರಥಿ ಜಯಂತಿಯಂದು ಮಕ್ಕಳನ್ನು ಪರಿಸರ ಅಧ್ಯಯನಕ್ಕೆಂದು ಯಪ್ಪಲ್ಲರೆಡ್ಡಿಯವರ ಜೊತೆ ೨೦೧೪ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಜೀವವೈವಿದ್ಯ ಉದ್ಯಾನಕ್ಕೆ ಕರೆದುಕೊಂಡು ಹೋಗಿದ್ದೆವು. ಅಲ್ಲಿ ಶ್ರೀ ಹರೀಶ್ ಭಟ್ಟರ ಪರಿಚಯ ನಮಗಾಯಿತು. ಮಕ್ಕಳನ್ನು ಉದ್ದೇಶಿಸಿ ಒಂದೆರಡು ಮಾತನಾಡಿ ಎಂದು ಕೇಳಿಕೊಂಡೆವು. ಅವರು ಕೂಡಲೆ ಒಪ್ಪಿಕೊಂಡು ಮಕ್ಕಳ ಹತ್ತಿರ ಬರುತ್ತಿರಲು, ಅವರ ಕಣ್ಣಿಗೆ ಕಂಡ ಒಂದು ಸಣ್ಣ ಮಿಡತೆ ತೆಗೆದುಕೊಂಡು ಮಕ್ಕಳಿಗೆ ತೋರಿಸಿ ಅದರೆ ವಿವರಗಳನ್ನು ಕೊಟ್ಟರು. ಮಿಡತೆಯನ್ನು ಕೆಳಗೆ ಬಿಡುತ್ತಿದ್ದಂತೆ, ಒಂದು ಕಪ್ಪೆಯನ್ನು ಹಿಡಿದುಕೊಂಡು ಅದರ ವಿಶೇಷತೆಗಳನ್ನು ಹೇಳಲಾರಂಭಿಸಿದರು. ಅಷ್ಟರಲ್ಲಿ ವಟ ವಟ ಅನ್ನುತ್ತಿದ್ದ ನಮ್ಮ ಮಕ್ಕಳು ಗಪ್ ಚುಪ್ ಆದರು. ಹರೀಶ್ ಭಟ್ಟರ ಮಾಯಾಜಾಲಕ್ಕೆ ಬಿದ್ದರು. ಕಪ್ಪೆಯು ನಂತರ ಜೇಡ, ಇರುವೆ……ಹೀಗೆ ಕೈಗೆ ಸಿಕ್ಕ ಯಾವ ಹುಳು, ಪಕ್ಷಿ, ಚಿಟ್ಟೆ ಅಥವಾ ಮರ, ಗಿಡ ಇರಬಹುದು ಅದರ ಬಗ್ಗೆ ಎಷ್ಟು ಆಳವಾದ ಜ್ಞಾನ ಇತ್ತೆಂದರೆ ನಮ್ಮನ್ನೆಲ್ಲ ಅವರು ಮಂತ್ರ ಮುಗ್ದರನ್ನಾಗಿ ಮಾಡಿದರು.
ಹೀಗೆ ಪರಿಚಯವಾದ ನಂತರ ಅವರು ನಮ್ಮ ಪೂರ್ಣಪ್ರಮತಿಯ ಪರಿವಾರದವರಲ್ಲಿ ಒಬ್ಬರಾಗಿಬಿಟ್ಟರು. ಅವರು ಶಾಲೆಗೆ ಬಂದರೆ ಬೆಲ್ಲವನ್ನು ಇರುವೆಗಳು ಮುತ್ತುವಂತೆ ಮಕ್ಕಳು ಅವರನ್ನು ಮುತ್ತಿಬಿಡುತ್ತಿದ್ದರು. ತಾವು ನೋಡಿದ ಹುಳು, ಪಕ್ಷಿ ಮುಂತಾದವುಗಳ ಬಗ್ಗೆ ಪ್ರಶ್ನೆ ಕೇಳುತ್ತಿದ್ದರು. ಮಕ್ಕಳಲ್ಲಿ ಅವರಿಗೆ ಗೊತ್ತಿಲ್ಲದಂತೆ ಸೂಕ್ಷ್ಮವಾಗಿ ಗಮನಿಸುವ, ಪ್ರಕೃತಿಗೆ ಹತ್ತಿರವಾಗುವ ಕಲೆಯನ್ನು ಬೆಳೆಸಿದರು. ಅವರು ವಾರಕ್ಕೊಮ್ಮೆ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ಸೃಷ್ಟಿಯ ಆರಂಭದಿಂದ ವಿಷಯಗಳನ್ನು ತೆಗೆದುಕೊಂಡು ಪಾಠ ಮಾಡುತ್ತಿದ್ದರು. Big bang theory ಸೃಷ್ಟಿಯ ಹಂತಗಳು, ಪಕ್ಷಿಗಳ ಪ್ರಾಣಿಗಳಲ್ಲಿನ ಮಾರ್ಪಾಡುಗಳನ್ನು ಬಹಳ ಸರಳ ರೀತಿಯಲ್ಲಿ ಚಿಕ್ಕ ಮಕ್ಕಳಿಗೂ (೫-೬ನೇ ತರಗತಿ) ಅರ್ಥವಾಗುವಂತೆ ಪಾಠಮಾಡುತ್ತಿದ್ದರು. ಒಬ್ಬ ವಿದ್ಯಾರ್ಥಿಯ ಮಾತುಗಳಲ್ಲೇ ಹೇಳಬೇಕೆಂದರೆ, ‘ನನಗೆ ಯಾವುದೇ ಪಾಠವಾದರೂ ಒಂದು ಸಲಕೇಳಿದರೆ ಅರ್ಥವಾಗುವುದಿಲ್ಲ. ನಾಲ್ಕಾರು ಬಾರಿ ಓದಬೇಕು. ಆದರೆ ಹರೀಶ್ ಅಣ್ಣನ ಪಾಠ ಒಂದು ಸಲ ಕೇಳಿದರೆ ಸಾಕು ನನಗೆ ಪೂರ್ಣವಾಗಿ ಅರ್ಥವಾಗಿಬಿಡುತ್ತದೆ’. ದೊಡ್ಡ ತರಗತಿಗಳ ಮಕ್ಕಳಿಗೆ ಸಂಶೋಧನೆಯ ವಿಧಾನಗಳ ಪಾಠ. ಸಂಶೋಧನೆ ಎಂದರೇನು, ಸಮಸ್ಯೆಯನ್ನು ಗುರುತಿಸುವುದು ಹೇಗೆ, ವೈಜ್ಞಾನಿಕವಾಗಿ ಪ್ರಯೋಗಗಳ ಮೂಲಕ ಪರಿಹಾರ ಹುಡುಕುವುದು…..ಹೀಗೆ ಚಿಕ್ಕ ವಯಸ್ಸಿನಲ್ಲೇ ವಿಜ್ಞಾನದಲ್ಲಿ ಬೆಳೆಯುವ ಕನಸ್ಸನ್ನು ಕಾಣುವಂತೆ ಮಾಡುತ್ತಿದ್ದರು.
ಮಕ್ಕಳನ್ನು ಹುರಿದುಂಬಿಸಿ, ಚಿಟ್ಟೆ, ಇರುವೆ, ಪಕ್ಷಿ ಹೀಗೆ ಹತ್ತಾರು ವಿಷಯಗಳ ಮೇಲೆ ಲೇಖನಗಳನ್ನು ಬರೆಯಿಸಿ, ಅದನ್ನೆಲ್ಲ ಒಟ್ಟುಗೂಡಿಸಿ ಒಂದು ಪುಸ್ತಕವನ್ನೆ(Our book)ಹೊರತಂದರು. ಸದಾ ಹಸನ್ಮುಖಿ ಮಕ್ಕಳಿಗೆ ಪಾಠ ಮಾಡುವಾಗ ಎಷ್ಟೋ ಸಲ ತಾಳ್ಮೆಯನ್ನು ಕಳೆದುಕೊಳ್ಳುವ ಸಂದರ್ಭ ಬಂದರೂ ತಾಳ್ಮೆಯನ್ನು ಕಳೆದುಕೊಳ್ಳದೆ, ಮಾತಿನಲ್ಲಿಯೇ ಮಕ್ಕಳು ತಮ್ಮ ತಪ್ಪನ್ನು ಅರಿತುಕೊಳ್ಳುವಂತೆ ಮಾಡುತ್ತಿದ್ದರು. ಪುಸ್ತಕಗಳಲ್ಲಿ ಇನ್ನೂ ಪ್ರಕಟವಾಗಿರದ ತಾವು ಕಾಡಿನಲ್ಲಿ ನಡೆಸಿದ ಅಧ್ಯಯನದ ನೂತನ ವಿಷಯಗಳನ್ನೂ ಮಕ್ಕಳಿಗೆ ಹೇಳುತ್ತಿದ್ದರು. ಪಾಠವಾದ ನಂತರ ಅವರಿಗೆ ಟೀ ಮಾಡಿಕೊಟ್ಟು, ಅವರ ಜೊತೆ ಮಾತನಾಡುತ್ತ ಟೀ ಸವಿದ ಸಮಯವನ್ನು ನಾನು ಮರೆಯಲಾರೆ.
ಶಾಲೆಯ ಉತ್ಸವಗಳಲ್ಲಿ ಮಗಳು ಹಂಸ, ಪತ್ನಿ ಶ್ರೀವಳ್ಳಿಯವರ ಜೊತೆ ಪಾಲ್ಗೊಳ್ಳುತ್ತಿದ್ದರು. ಪೂರ್ಣಪ್ರಮತಿ ಅವರ ಕುಟುಂಬವೇ ಆಗಿತ್ತು. ಪೂರ್ಣಪ್ರಮತಿಯ ವಿಚಾರಸಂಕಿರಣಗಳಲ್ಲಿ ಅವರ ಪಾತ್ರ ದೊಡ್ಡದು. ಕೇವಲ ನಮ್ಮ ಶಾಲೆ ಅಷ್ಟೆ ಅಲ್ಲದೆ, ನಗರದ ಅನೇಕ ಶಾಲೆಗಳಿಗೆ ಭೇಟಿಕೊಡುತ್ತಿದ್ದರು. ನಮ್ಮ ರಾಜ್ಯದ ಅನೇಕ ಶಾಲೆಗಳಲ್ಲಿ ಮಕ್ಕಳಿಗೆ, ಶಿಕ್ಷಕರಿಗೆ ವಿಜ್ಞಾನದ ಕಾರ್ಯಾಗಾರಗಳನ್ನು ನಡೆಸುತ್ತಿದ್ದರು.
ನಗರದಲ್ಲಿ ಓದುವ ಮಕ್ಕಳಿಗೆ ಪರಿಸರದ ಮೇಲೆ ಕಾಳಜಿ, ಒಲವು ಮೂಡಲು “Eyes on Nature” ಎಂಬ ಕಾರ್ಯಕ್ರಮವನ್ನು ಐ.ಐ.ಎಸ್.ಸಿನಲ್ಲಿ ೨೦೧೫ರಲ್ಲಿ ಪ್ರಾರಂಭ ಮಾಡಿದರು. ಇದರ ಮೂಲಕ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಐ.ಐ.ಎಸ್.ಸಿಯ ಪರಿಚಯ ಮಾಡಿಸಿದರು. ಅಲ್ಲಿರುವ ವಿಜ್ಞಾನಿಗಳಿಗೆ ಮತ್ತು ಶಾಲೆಗಳಿಗೆ ಒಂದು ಸೇತುವೆಯಾಗಿ ನಿಂತರು.
“Eyes on Nature” ಕಾರ್ಯಕ್ರಮದಲ್ಲಿ ಮಕ್ಕಳು ಶಾಲೆಯ ಹತ್ತಿರದ ಉದ್ಯಾನವನ್ನು, ಒಂದು ಕೆರೆಯನ್ನು ಆಯ್ಕೆಕೊಂಡು ಅಲ್ಲಿಯ ಪಕ್ಷಿ, ಚಿಟ್ಟೆ, ಮರಗಳ ಅಧ್ಯಯನ ಮಾಡಬೇಕಾಯಿತು. ಮಕ್ಕಳಿಗೆ ಇದರಿಂದ ಕಲಿಕೆ ಎಷ್ಟಾಯಿತೆಂದರೆ ಒಬ್ಬ ಪೋಷಕರು ಹೇಳಿದಂತೆ ನನ್ನ ಮಗಳು ಎಲ್ಲಿಗೆ ಹೋದರು ಚಿಟ್ಟೆ ಹಿಂದೆ ಓಡುತ್ತಾಳೆ, ಪಕ್ಷಿಯನ್ನು ಗುರುತಿಸುತ್ತಾಳೆ, ಮರವನ್ನು ಗಮನಿಸುತ್ತಾಳೆ. ಈಗಿನ ಆಧುನಿಕ ಜಗತ್ತಿನಲ್ಲಿ ಮಕ್ಕಳು ಮನೆಯ ಹೊರಗೆ ಹೋಗಲು ಹಿಂಜರಿಯುತ್ತಾರೆ, ಮೊಬೈಲ್, ಲಾಪ್ ಟಾಪ್ ಇದ್ದರೆ ಸಾಕು ಅವರು ತಮ್ಮ ಎಲ್ಲ ಸಮಯವನ್ನು ಅದರಲ್ಲೇ ಕಳೆಯುತ್ತಾರೆ. ಹರೀಶ್ ಭಟ್ಟರ “Eyes on Nature” ಯೋಜನೆ ಮಕ್ಕಳಿಗೆ ನಿಜಕ್ಕೂ ಪ್ರಕೃತಿಯ ಕನಸು ಕಾಣುವಂತೆ ಮಾಡಿತು, ಇದೊಂದು ವರವೇ ಆಯಿತು.
೨೦೧೫, ೨೦೧೬ ರಲ್ಲಿ ಎರಡು ವರ್ಷಗಳ ಕಾಲ ಈ ಕಾರ್ಯಕ್ರಮ ಐ.ಐ.ಎಸ್.ಸಿಯಲ್ಲಿ ನಡೆಯಿತು. ಈ ವರ್ಷ ಐ.ಐ.ಎಸ್.ಸಿ ಮತ್ತು ಅದಮ್ಯ ಚೇತನ ಒಟ್ಟಾಗಿ ಸೇರಿ ಎನ್.ಎಸ್.ಐ.ಪಿನ್ನು ಆಯೋಜಿಸಿದರು. ಈ ಕಾರ್ಯಕ್ರಮಕ್ಕೆ ಸುಮಾರು ೨೦೦೦ ಮಕ್ಕಳು ಪ್ರವೇಶ ಪರೀಕ್ಷೆಯನ್ನು ಬರೆದಿದ್ದರು. ಅದನ್ನು ಇವರು ಒಂದು ವಾರ ಕಾಲ ಮೌಲ್ಯಮಾಪನ ಮಾಡಿ ೧೫ ಶಾಲೆಯ ೧೫೦ ಮಕ್ಕಳನ್ನು ಆಯ್ಕೆ ಮಾಡಿದರು. ಮಕ್ಕಳ ಅಧ್ಯಯನ ಚೆನ್ನಾಗಿ ನಡೆಯುತ್ತಿತ್ತು. Whatsapp ನಲ್ಲಿ ಮಕ್ಕಳು ತಮ್ಮ ಸಂದೇಹಗಳನ್ನು ಹರೀಶ್ ಅವರಿಗೆ ಕಳುಹಿಸುತ್ತಿದ್ದರು. ರಾತ್ರಿ ೧೨ ಘಂಟೆಗೆ ಪ್ರಶ್ನೆ ಕೇಳಿದರೂ ಎರಡೇ ನಿಮಿಷದಲ್ಲಿ ಉತ್ತರ ಸಿಗುತ್ತಿತು. ಇಂತಹ ಬದ್ಧತೆ ಇರುವ ವ್ಯಕ್ತಿ ಬಹಳ ವಿರಳ. ಎನ್.ಎಸ್.ಐ.ಪಿ ಯನ್ನು ಅವರು ರಾಶ್ಟ್ರಮಟ್ಟದಲ್ಲಿ ಎಲ್ಲಾ ಶಾಲೆಗಳಲ್ಲಿ ಆಯೋಜಿಸುವ ಕನಸನ್ನು ಕಂಡಿದ್ದರು. ಹಠಾತ್ತಾಗಿ ನವೆಂಬರ್ ೪ ರಂದು ನಮ್ಮನ್ನು ಅಗಲಿ ಮಾಯವಾಗಿಬಿಟ್ಟರು. ನಮ್ಮೆಲ್ಲರಿಗೂ ಒಂದು ದೊಡ್ಡ ಆಘಾತವೇ ಆಯಿತು. ನಮ್ಮ ಮಕ್ಕಳು ಇವರ ಸಾವಿನ ವಿಷಯವನ್ನು ಕೇಳಿ ಕಣ್ಣೀರು ಸುರಿಸಿದರು. ಆದರೆ ಎಲ್ಲವೂ ಕ್ಷಣಾರ್ಧದಲ್ಲಿ ನಡೆದೇ ಹೋಯಿತು. ಈಗ ವಾಸ್ತವಕ್ಕೆ ಬರಲೇ ಬೇಕಾಗಿದೆ. ಅವರ ಕನಸುಗಳನ್ನು ನನಸು ಮಾಡುವ ಮೂಲಕ ಅವರ ಋಣವನ್ನು ತೀರುಸುವ ಪ್ರಯತ್ನಮಾಡಬೇಕಿದೆ. ಪೂರ್ಣಪ್ರಮತಿ ಇದಕ್ಕೆ ಸದಾ ಬದ್ಧವಾಗಿದೆ. ಆಸಕ್ತರೂ ಕೈ ಜೋಡಿಸಬಹುದು.