ಆನಂದಿನಿ – ನವೆಂಬರ್ – ಮಾರ್ಚ್ 2019-2020
Tuesday, May 19th, 2020ಸಂವತ್ಸರ ಸೂತ್ರ-ಕಲಿಕೆ-ಹಂಚಿಕೆ ಸರಣಿ – 2 ಸಂಪಾದಕೀಯ ಆತ್ಮೀಯರೇ, ೨೦೧೯-೨೦ ನೇ ಸಾಲಿನ ಆನಂದಿನಿಯನ್ನು ನಿಮಗೆ ಒಪ್ಪಿಸುತ್ತಿದ್ದೇನೆ. ಈ ವರ್ಷ ನಮಗೆ ಒಂದು ಮೈಲಿಗಲ್ಲಿನ ವರ್ಷ. ೨೦೧೦ ಜೂನ್ ನಲ್ಲಿ ಪ್ರಾರಂಭವಾದ ಪೂರ್ಣಪ್ರಮತಿ ೧೦ನೇ ವರ್ಷಕ್ಕೆ ಕಾಲಿಟ್ಟಿದೆ. ಅದನ್ನು ವಿಶೇಷವಾಗಿ ಆಚರಿಸುವ ಯೋಜನೆ ವರ್ಷ ಪ್ರಾರಂಭದಲ್ಲಿ ರೂಪುಗೊಂಡಿದ್ದು ಬಹಳ ಮುಖ್ಯವಾಗಿ ಮೂರು ಮುಖಗಳ ಕಾರ್ಯಕ್ರಮ ಮೂಡಿಬಂತು. ಮೊದಲನೆಯದಾಗಿ ಪ್ರತಿ ವಿಷಯಗಳ “ಹಬ್ಬ”, ಎರಡನೆಯದಾಗಿ ರಾಮಾಯಣ ಸಮೀಕ್ಷೆ, ಮೂರನೆಯದಾಗಿ ಕಳೆದ ಹತ್ತುವರ್ಷಗಳ ಒಟ್ಟು ಸಂವತ್ಸರ ಸೂತ್ರಗಳ ಮುಂದುವರೆದ ನಿರೂಪಣೆ. ನಿಮಗೆ ಅರಿವಿರುವಂತೆ ಪೂರ್ಣಪ್ರಮತಿಯ ಯಾವುದೇ ಕಾರ್ಯಕ್ರಮವು ಕಲಿಕೆಯ ಹಿನ್ನಲೆಯಲ್ಲೇ ಅರಳುವಂಥದ್ದು. ಮತ್ತಷ್ಟು ಕಲಿಸುವಂಥದ್ದು. ಇವೇ ನಮ್ಮ ಪೂರ್ವಪ್ರಾಥಮಿಕ ಹಂತದಿಂದ ಹಿಡಿದು ೧೦ನೇ ತರಗತಿಯವರೆಗೆ ವಿದ್ಯಾರ್ಥಿಗಳು ಕಲಿತ ಎಲ್ಲಾ ವಿಷಯಗಳ ವಿವಿಧ ಆಯಾಮಗಳನ್ನು Subject fest ಗಳಲ್ಲಿ ಪ್ರಸ್ತುತಪಡಿಸಿದ್ದು. ಅವರ ಆಳವಾದ ಕಲಿಕೆಗೆ, ನಿರೂಪಣಾ ಸಾಮರ್ಥ್ಯ, ಕೌಶಲ್ಯಕ್ಕೆ ಸಾಕ್ಷಿಯಾಯಿತು. ಬಂದ ಅತಿಥಿಗಳು ಮನಃಪೂರ್ವಕ ಹರಸಿ ಆಶೀರ್ವದಿಸಿದ್ದು ಶಾಲೆಯ ಭಾಗ್ಯವಾಯಿತು. ವರ್ಷದುದ್ದಕ್ಕೂ ನಿರಂತರವಾಗಿ ನಡೆಯುವ, ತತ್ವಚಿಂತನಾ ತರಗತಿಗಳಲ್ಲಿ ವಿದ್ಯಾರ್ಥಿಗಳು ಕಲಿಯುವ ರಾಮಾಯಣದ ಸಮೀಕ್ಷೇ ಸೀತಾಜಯಂತಿಯಂದು ನಡೆಯಿತು. ಪ್ರತಿ ವಿದ್ಯಾರ್ಥಿ ಕಥಾನಿರೂಪಣೆ, ಪಾತ್ರ ಪರಿಚಯ, ವಿಷಯಾಧಾರಿತ ಪ್ರಶ್ನೋತ್ತರಗಳಲ್ಲಿ ನಿರರ್ಗಳವಾಗಿ ಭಾಗವಹಿಸಿ ಸೈ ಎನಿಸಿಕೊಂಡರು. ಭಾರತದ ಮಹಾಕಾವ್ಯಗಳ ವಿಷಯವಾದ ಪರಿಚಯ ನಮ್ಮ ಯುವ ಮನಸ್ಸುಗಳಿಗೆ ಆಗಿ, ಅವುಗಳ ತತ್ವ ಮಕ್ಕಳ ಮನದಾಳದಲ್ಲಿ ಬೇರೂರಿದವು. ನಮ್ಮ ಉದ್ದೇಶ ಸಫಲವಾಯಿತು. ಶಾಲೆಯ ಪ್ರಾರಂಭ ವರ್ಷಗಳಿಂದಲೂ ಶಾಲಾ ವಾರ್ಷಿಕ ಸೂತ್ರ ಬಂದಿದ್ದು, ವರ್ಷದುದ್ದಕ್ಕೂ ಅವುಗಳನ್ನು ಅನೇಕ ಮುಖಗಳಲ್ಲಿ ಅಧ್ಯಯನ ಮಾಡುವುದು, ಕ್ಷೇತ್ರ ಭೇಟಿ, ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸಂವಾದಗಳ ಮುಖಾಂತರ ಆ ಸೂತ್ರದ ವಿಶೇಷ ತಯಾರಿ ನಡೆಸಿ ವಾರ್ಷಿಕ ಉತ್ಸವದಲ್ಲಿ ವಿದ್ಯಾರ್ಥಿಗಳು ಅದನ್ನು ಪ್ರಸ್ತುತಪಡಿಸುವುದು ಶಾಲಾಪದ್ಧತಿ. ದಶವರ್ಷದ ಉತ್ಸವದ ಈ ಸಂದರ್ಭದಲ್ಲಿ ಕಳೆದ ಒಂಬತ್ತೂ ವರ್ಷದ ಸೂತ್ರಗಳ ಮರು ಪ್ರಸ್ತುತಿಯನ್ನು ಯೋಚಿಸಿ, ಅವುಗಳನ್ನು ಸಿದ್ಧ ಪಡಿಸಿದ್ದು ನಗರದ ವಸಂತಪುರದ “ವಸಂತ ವಲ್ಲಭರಾಯ ಸ್ವಾಮಿ” ದೇವಾಲಯದಲ್ಲಿ ಅಪೂರ್ವ ರೀತಿಯಲ್ಲಿ ಸಾರ್ವಜನಿಕರಿಗೆ ಪ್ರದರ್ಶಿಸುವುದು ನಮ್ಮ ಆಶಯವಾಗಿದ್ದು, ಕಾರಣಾಂತರಗಳಿಂದ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಮೊಟುಕುಮಾಡಬೇಕಾಯಿತು. ಈ ವರ್ಷ ಅನೇಕ ರೀತಿಯಲ್ಲಿ ಮರೆಯಲಾಗದಂಥದ್ದು ಪೂರ್ಣಪ್ರಮತಿಯ ಜೀವಸ್ವರೂಪರೂ, ನಮ್ಮ ಚಿರಸ್ಥಾಯಿ ನೆಲೆಯೂ ಆದ ಪೇಜಾವರ ಪೀಠಾಧೀಶರಾದ ಪೂಜ್ಯ ಶ್ರೀ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ಶ್ರೀಜ್ಞಾನಸ್ವರೂಪ ಸಾನಂದ ಸ್ವಾಮಿಜಿ (ಪೂರ್ವಾಶ್ರಮ ಪ್ರೊ.ಜಿ.ಡಿ. ಅಗರವಾಲ್) ಅವರೂ ನಮ್ಮನ್ನು ಅಗಲಿ ಪರಂಧಾಮವಂಗೈದ ವರ್ಷವಿದು. ಆ ಎರದು ಪೂಜ್ಯ ಚೇತನಗಳಿಗೆ ಪೂರ್ಣಪ್ರಮತಿ ಶಿರಬಾಗಿ ನಮಿಸುತ್ತದೆ. ಉಳಿದಂತೆ ಶಾಲೆಯು ’ನಿಸರ್ಗದೊಂದಿಗೆ ತಾದಾತ್ಮ್ಯ’ , ’ಸಹಜ ಬದುಕು’ ಗರಿಗೆದರಿ ಯುವ ಬ್ರಿಗೆಡ್ ನವರೊಂದಿಗೆ ವೃಷಭಾವತಿ ಪುನಶ್ಚೇತನ ಕಾರ್ಯಕ್ರಮದಲ್ಲಿ ಭಾಗಿಯಾಯಿತು. ಹೊಸಕೆರೆಹಳ್ಳಿ ಕೆರೆಯ ಸ್ವಚ್ಛತಾ ಕಾರ್ಯಕ್ರಮ, ಟಿ.ನರಸೀಪುರ ಸಂಗಮದ ಸ್ವಚ್ಛತಾ ಕಾರ್ಯಕ್ರಮ ಪೂರ್ಣಪ್ರಮತಿ ಸಂತೆ, ಕಸಮುಕ್ತ ಗಿರಿನಗರ ಪ್ರಾಯೋಜಕತೆ, ಪೋಷಕರಿಗೆ ಜ್ಞಾನಧಾರಾ (outreach program) ದ ’ಸಾಧಕರೊಂದಿಗೆ ಮಾತುಕತೆ’ ಯಶಸ್ವಿಯಾಗಿ ನಡೆದು ವರ್ಷವನ್ನು ಸಂಪನ್ನಗೊಳಿಸಿದವು. ನಿಮ್ಮಶಶಿರೇಖಾ ಮಣೂರುಪ್ರಾಂಶುಪಾಲರುಪೂರ್ಣಪ್ರಮತಿ. ಅಧ್ಯಯನ-ಅಧ್ಯಾಪನ ಜೀವೋ ಜೀವಸ್ಯ ಜೀವನಮ್– ಅನಂತಶಯನ ಶಿರಹಟ್ಟಿ (ಮಾಧ್ಯಮಿಕ ಹಾಗೂ ಪ್ರೌಢಶಾಲಾ ಅಧ್ಯಾಪಕರು) ಒಂದು ಜೀವ ಇನ್ನೊಂದು ಜೀವವನ್ನು ಆಶ್ರಯಿಸಿ ಇದೆ. ಇದು ಈ ವಾಕ್ಯದ ಅರ್ಥ. ಈ ವಾಕ್ಯ ಬರುವುದು ಭಾಗವತದಲ್ಲಿ. ಒಮ್ಮೆ ಅಲ್ಲಿ ಯಾವ ಪ್ರಸಂಗದಲ್ಲಿ ಬಂದಿದೆ ಎಂದು ನೋಡೋಣ. ಧರ್ಮರಾಜನಿಗೆ ನಾರದರ ಸಾಂತ್ವನ ಮಹಾಭಾರತದ ಯುದ್ಧ ಮುಗಿದು ಧರ್ಮರಾಜ ಮಹಾರಾಜನಾಗಿದ್ದಾನೆ. ಅವನ ಆಶ್ರಯದಲ್ಲಿ ಎಲ್ಲ ಮಕ್ಕಳನ್ನು ಕಳೆದುಕೊಂಡ ಧೃತರಾಷ್ಟ್ರ ಮತ್ತು ಗಾಂಧಾರಿ ಇರುತ್ತಾರೆ. ಆಗ ತೀರ್ಥಯಾತ್ರೆಗೆ ಹೋದ ವಿದುರ ಮರಳಿ ಹಸ್ತಿನಾವತಿಗೆ ಬರುತ್ತಾನೆ. ತನ್ನ ಅಣ್ಣನಾದ ಧೃತರಾಷ್ಟ್ರನಿಗೆ “ಪಾಂಡವರಿಗೆ ಮೋಸ ಮಾಡಿ ಈಗ ಅವರ ಆಶ್ರಯದಲ್ಲಿಯೇ ಇದ್ದು ಭೀಮ ಹಾಕಿದ ಅನ್ನವನ್ನು ತಿನ್ನುತ್ತಿರುವಿ. ಬದುಕುವ ಆಸೆ ಬಿಡು. ಪಾಂಡವರಿಗೆ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊ” ಎಂದಾಗ ಚಕ್ಷುಹೀನ ಪ್ರಜ್ಞಾಚಕ್ಷುವಾಗುತ್ತಾನೆ. ಧರ್ಮರಾಜನಿಗೆ ತಿಳಿಸದೇ ಧೃತರಾಷ್ಟ್ರ, ಗಾಂಧಾರಿ, ವಿದುರ ಮೂವರೂ ಅರಣ್ಯವನ್ನು ಪ್ರವೇಶಿಸುತ್ತಾರೆ. (ಮುಂದೆ ಧೃತರಾಷ್ಟ್ರ ಯೋಗಬಲದಿಂದ ತನ್ನ ದೇಹವನ್ನು ಕಾಳ್ಗಿಚ್ಚಿಗೆ ಅರ್ಪಣೆ ಮಾಡುತ್ತಾರೆ. ಪತಿಯ ದಾರಿ ಸತಿಯದೂ ಆಗುತ್ತದೆ.) ಅರಮನೆಯಲ್ಲಿ ತನ್ನ ಡೊಡ್ಡಪ್ಪನನ್ನು ಕಾಣದೆ ಧರ್ಮರಾಜ ಖಿನ್ನನಾಗಿರುತ್ತಾನೆ. ಆಗ ಅಲ್ಲಿಗೆ ನಾರದರು ಬರುತ್ತಾರೆ. ಅವರ ಬಳಿ ನೋವನ್ನು ಹೇಳಿಕೊಂಡಾಗ ನಾರದರು ಧರ್ಮರಾಜನಿಗೆ – “ ಈ ಜಗತ್ತು ಈಶ್ವರಾಧೀನ. ಅವನೆ ಎಲ್ಲರನ್ನು ಸೇರಿಸುವವನು ಮತ್ತು ವಿಯೋಗಿಸುವವನು. ನಿಮ್ಮ ದೊಡ್ಡಪ್ಪ ಮತ್ತು ದೊಡ್ಡಮ್ಮ ತಮ್ಮ ಗತಿಯನ್ನು ಹೊಂದುತ್ತಾರೆ. ನೀನು ಈ ಮಮತೆಯನ್ನು ಬಿಡು” ಎಂದು ಉಪದೇಶ ಮಾಡುತ್ತಾರೆ. ಆಗ ಬರುವ ಶ್ಲೋಕ ಇದು ಅಹಸ್ತಾನಿ ಸಹಸ್ತಾನಾಂ ಅಪದೋ ದ್ವಿಚತುಷ್ಪದಾಮ್ |ಅಣೂನಿ ತಾತ ಮಹತಾಂ ಜೀವೋ ಜೀವಸ್ಯ ಜೀವನಮ್ || ಭಾಗವತ ೧.೧೨.೪೭ | (ಕೈ ಇರುವ ಪ್ರಾಣಿಗಳಿಗೆ ಕೈ ಇರದ ಪ್ರಾಣಿಗಳು ಜೀವನ. ಕಾಲಿರದ ಜೀವಿಗಳು ಎರಡು-ನಾಲ್ಕು ಕಾಲಿನ ಜೀವಿಗಳಿಗೆ ಜೀವನ. ಸಣ್ಣದೆಲ್ಲ ದೊಡ್ಡವುಗಳಿಗೆ ಜೀವನ. ಪ್ರತಿ ಜೀವವೂ ಇನ್ನೊಂದು ಜೀವಕ್ಕೆ ಜೀವನ) ಈ ಶ್ಲೋಕದಲ್ಲಿ ಮೊದಲ ಮೂರು ಪಾದ ದುರ್ಬಲ ಸಬಲನ ಜೀವನ ಎನ್ನುವ ಅರ್ಥ ಕೊಟ್ಟರೂ ಕೊನೆಯ ಪಾದ ಪ್ರತಿ ಜೀವಿಯೂ ಇನ್ನೊಂದು ಜೀವಿಗೆ ಜೀವನ; ಎಲ್ಲ ಜೀವಿಗಳೂ ಪರಸ್ಪರ ಅವಲಂಬಿಸಿಕೊಂಡಿರುತ್ತಾರೆ ಎನ್ನುವ ಅರ್ಥವನ್ನು ಕೊಡುತ್ತದೆ. ಪೂರ್ಣಪ್ರಮತಿಯಲ್ಲಿ ಈ ವಿಷಯವನ್ನು ತಿಳಿಯಲು ಮಕ್ಕಳ ಜೊತೆ ಅಧ್ಯಾಪಕರೂ ಅಧ್ಯಯನ ಮಾಡಿದರು. ಅದರ ಕೆಲವು ವಿಷಯಗಳನ್ನು ಇಲ್ಲಿ ಹಂಚಿಕೊಳ್ಳುತ್ತೇನೆ. ಹುಲಿ-ಹುಲ್ಲು-ನೀರು ನೀರನ್ನು ಆಶ್ರಯಿಸಿ ಇಡೀ ಚರಾಚರ ಪ್ರಪಂಚವೇ ಇದೆ ಎನ್ನುವುದು ಸರ್ವವಿದಿತ. ಇಂತಹ ನೀರು ಉಳಿಯಲು ಹುಲಿ ಕಾರಣ. ನಮ್ಮ ಭೂಮಿಯ ಒಳಗೆ ನೀರು ಉಳಿಯಲು ಮರಗಿಡಗಳಂತೆ ಹುಲ್ಲು ಕೂಡ ಪ್ರಧಾನ ಪಾತ್ರ ವಹಿಸಿದೆ. ಹುಲ್ಲು ಇರುವ ಜಾಗದಲ್ಲಿ ಅಂತರ್ಜಲ ಸಮೃದ್ಧವಾಗಿರುತ್ತದೆ. ಆದರೆ ಹುಲ್ಲನ್ನು ತಿನ್ನಲು ಜಿಂಕೆಗಳಿವೆ. ಜಿಂಕೆಗಳು ಹೆಚ್ಚಿದಷ್ಟು ಹುಲ್ಲು ನಾಶವಾಗುತ್ತದೆ. ಹುಲ್ಲು ಇಲ್ಲದಿದ್ದರೆ ಅಂತರ್ಜಲ ಇಲ್ಲ. ಅದಿಲ್ಲದೆ ಹಳ್ಳ ಕೊಳ್ಳ ಕೆರೆಗಳೆಲ್ಲಿ? ಅವುಗಳಿಲ್ಲದೆ ನದಿಗಳೆಲ್ಲಿ? ಅದಕ್ಕಾಗಿ ಪ್ರಕೃತಿಯೇ ಒಂದು ವ್ಯವಸ್ಥೆ ಮಾಡಿಕೊಂಡಿದೆ. ಜಿಂಕೆಗಳ ಸಂಖ್ಯೆ ಬೆಳೆಯದಂತೆ ಜಿಂಕೆಗಳನ್ನು ತನ್ನ ಆಹಾರ ಮಾಡಿಕೊಂಡಿವೆ ಹುಲಿಗಳು. ಆಗ ಹುಲ್ಲಿನ ರಕ್ಷಣೆ ಆಗುತ್ತದೆ. ಆ ಮೂಲಕ ಹುಲ್ಲು ಹಿಡಿದಿರುವ ನೀರಿನ ರಕ್ಷಣೆ ಕೂಡ. ಹೀಗೆ ಜಿಂಕೆಗೆ ಹುಲ್ಲು ಜೀವನ. ಜಿಂಕೆ ಹುಲಿಗೆ ಜೀವನ. ಹುಲಿ ಹುಲ್ಲು ಮತ್ತು ನೀರಿಗೆ ಜೀವನ. ನೀರಂತೂ ಎಲ್ಲದಕ್ಕೂ ಜೀವನ. ಆದ್ದರಿಂದಲೇ ನೀರಿಗೆ ಸಂಸ್ಕೃತದಲ್ಲಿ ಜೀವನ ಎಂದು ಕೋಶಕಾರರು ಕರೆದರು; “ಪಯ: ಕೀಲಾಲಮಮೃತಂ ಜೀವನಂ ಭುವನಂ ವನಮ್” ಎಂದು. (ಎಲ್ಲ ಕಡೆ ನೀರಿಗೆ ಹುಲಿಯೇ ಜೀವನ ಎಂದಲ್ಲ. ಗುಡ್ಡಗಾಡುಗಳ ಕಡೆ ಹುಲಿಯೂ ಕಾರಣ ಎಂದು ಮಾತ್ರ ತಾತ್ಪರ್ಯ.) ಹುಲ್ಲು-ಜಿಂಕೆ-ಹುಲಿಗಳ ಈ ಆಹಾರ ಸರಪಳಿಯೂ ಜೀವೋ ಜೀವಸ್ಯ ಜೀವನಂ ಎನ್ನುವುದರ ಅರ್ಥ. ಹಕ್ಕಿ-ಮತ್ತು-ಮರ ನಮ್ಮ ಶಾಲೆಗೆ ಪರಿಸರ ತಜ್ಞರನೇಕರು ಮಾರ್ಗದರ್ಶಕರಿದ್ದಾರೆ. ಅವರಲ್ಲಿ ನಿವೃತ್ತ ಅರಣ್ಯಾಧಿಕಾರಿಗಳಾದ ಶ್ರೀ ಯಲ್ಲಪ ರೆಡ್ಡಿಯವರು ಹಾಗು ದಿ.ಶ್ರೀ ಹರೀಶ ಭಟ್ ಮಕ್ಕಳಿಗೆ ಅನೇಕ ವಿಷಯಗಳಲ್ಲಿ ದಾರಿದೀಪಗಳಾಗಿದ್ದಾರೆ. (ನಮ್ಮೆಲ್ಲರ ಅಚ್ಚುಮೆಚ್ಚಿನ ವಿಜ್ಞಾನಿ ಹರೀಶ ಭಟ್ ಈಗ ನಮ್ಮೊಡನೆ ಇಲ್ಲದಿರುವುದು ದು:ಖದ ವಿಚಾರ) ಮಕ್ಕಳನ್ನು ಕುಮಾರಪರ್ವತಕ್ಕೆ ಕರೆದುಕೊಂಡು ಹೋದಾಗ, ಜ್ಞಾನಭಾರತಿಯ ಆವರಣದ ಜೀವ ವೈವಿಧ್ಯ ಉದ್ಯಾನಕ್ಕೆ ಕರೆದುಕೊಂಡು ಹೋದಾಗೆಲ್ಲ ಹಕ್ಕಿ ಮತ್ತು ಮರಗಳ ಸಂಬಂಧದ ಬಗ್ಗೆ ಇವರಿಬ್ಬರು ಆಗಾಗ ಹೇಳುವವರು. ನಮಗೆಲ್ಲ ತಿಳಿದಿರುವಂತೆ ಹಕ್ಕಿಗಳಿಗೆಲ್ಲ ಮರಗಳು ಆಶ್ರಯ. ಹಕ್ಕಿಗಳು ಅಲ್ಲಿ ತಂಗುತ್ತವೆ, ಗೂಡು ಕಟ್ಟುತ್ತವೆ. ಅಲ್ಲಿನ ಹಣ್ಣನ್ನು ತಿಂದು ಜೀವಿಸುತ್ತವೆ. ಹಾಗೆಯೇ ಮರಗಳ ಹುಟ್ಟಿಗೆ ಹಕ್ಕಿಗಳೂ ಕಾರಣಗಳಾಗಿವೆ. ಮರದ ಹಣ್ಣನ್ನು ತಿಂದು ಹಕ್ಕಿಗಳು ಎಲ್ಲೆಲ್ಲೂ ವಲಸಿ ಹೋಗುತ್ತವೆ. ಎಲ್ಲೋ ದಾರಿಯಲ್ಲಿ ಕಾಡಿನಲ್ಲಿ ಹಿಕ್ಕಿ ಹಾಕುತ್ತವೆ. ಅದರಲ್ಲಿ ಮರದ ಬೀಜ ಇದ್ದು ಪ್ರಕೃತಿಯ ಅನುಕೂಲಕ್ಕೆ ತಕ್ಕಂತೆ ಬೀಜ ಮೊಳಕೆಯೊಡೆದು ಗಿಡವಾಗಿ ಮರವಾಗುತ್ತದೆ. ಮರದಿಂದ ಹಕ್ಕಿ ಬದುಕಿದರೆ ಮರದ ಹುಟ್ಟಿಗೆ ಹಕ್ಕಿ ಕಾರಣಾವಾಗಿದೆ. ಹೀಗೆಯೆ ಪ್ರಕೃತಿಯಲ್ಲಿ ಎಲ್ಲದಕ್ಕೂ ಒಂದೊಂದು ಪರಸ್ಪರ ಕೊಂಡಿ ಇದ್ದೇ ಇರುತ್ತದೆ. ಪ್ರಾಚೀನ ಸಾಹಿತ್ಯದಲ್ಲಿ ಜೀವೋ ಜೀವಸ್ಯ ಜೀವನಮ್ ಒಂದು ವಿಶಾಲವಾದ ಮರ. ಅಲ್ಲಿ ಸಹಸ್ರಾರು ಹಕ್ಕಿಗಳು ಆಶ್ರಯ ಪಡೆದಿವೆ. ಅನೇಕ ಪ್ರಾಣಿಗಳು ಇದರ ನೆರಳಲ್ಲಿ ಸುಖಿಸುತ್ತಿವೆ. ಪೊಟರೆಗಳು ಅನೇಕ ಹಕ್ಕಿ-ಕೀಟಗಳ ತಾಣವಾಗಿದೆ. ಬುಡದ ಸಮೀಪ ಬಿಲದಲ್ಲಂತೂ ಸಾವಿರಾರು ಮೂಷಿಕಗಳು. ಹೀಗೆ ಅನೇಕ ಪ್ರಾಣಿ-ಪಕ್ಷಿಗಳಿಗೆ ಆಶ್ರಯವಾಗಿ ಆ ಮರ ನಿಂತಿತ್ತು. ಒಮ್ಮೆ ಆ ಮರ ಇರುವ ಕಾಡಿಗೆ ಬೇಡರು ಬಂದರು. ಮರದ ನೆರಳಲ್ಲಿದ್ದ ಜಿಂಕೆಗೆ ಗುರಿಯಿಟ್ಟು ವಿಷದ ಬಾಣದ ಪ್ರಯೋಗ ಮಾಡಿದರು. ಗುರಿ ತಪ್ಪಿತು. ಬಾಣ ಮರಕ್ಕೆ ತಾಗಿತು. ನಿರಾಶರಾಗಿ ಬೇಡರು ಹಿಂದಿರುಗಿದರು. ವಿಷವನುಂಡ ಮರ ಕೆಲ ದಿನಗಳ ನಂತರ ಕ್ಷೀಣಿಸತೊಡಗಿತು. ಎಲೆಗಳೆಲ್ಲ ಉದುರಿದವು. ಮರ ಬೋಳಾಯಿತು. ಮರದಲ್ಲಿನ ಹಕ್ಕಿಗಳೆಲ್ಲ ಬೇರೆ ಮರದ ಆಶ್ರಯ ಪಡೆದವು. ಪ್ರಾಣಿಗಳು ನೆರಳಿಗಾಗಿ ಇನ್ನೊಂದು ಮರದ ಮೊರೆ ಹೊಕ್ಕವು. ಆದರೆ ಒಂದು ಗಿಳಿ ಮಾತ್ರ ಆ ಮರವನ್ನು ಬಿಡಲೇ ಇಲ್ಲ. “ನಾನು ಹುಟ್ಟಿದ್ದು ಈ ಮರದಲ್ಲಿ. ಬೆಳೆದದ್ದು ಇಲ್ಲಿ, ಆಡಿದ್ದು ಇಲ್ಲಿ, ಹಾಡನ್ನು, ಹಾರುವುದನ್ನು ಕಲಿತದ್ದು ಇಲ್ಲಿಯೇ. ಈಗ ಈ ಮರಕ್ಕೆ ಕಷ್ಟ ಬಂದಿದೆ. ನನ್ನ ಬದುಕಿಗೆ ಕಾರಣವಾದ ಈ ಮರದ ಇಂಥ ದು:ಸ್ಥಿತಿಯ ಸಮಯದಲ್ಲಿ ಈ ಮರವನ್ನು ನಾನು ಬಿಡೆನು” ಎಂದು ಹಠ ಹಿಡಿದು ಕುಳಿತುಬಿಟ್ಟಿದೆ. ಮಳೆ, ಗಾಳಿ, ಬಿಸಿಲಿನ ಪರಿವೆಯೆ ಇಲ್ಲದೆ ತನ್ನ ಆಶ್ರಯದಾತನ ಜೊತೆಗಾರನಾಗಿದೆ. ಇದನ್ನು ಕಂಡ ಇಂದ್ರ ಅಲ್ಲಿಗೆ ಮಾರು ವೇಷದಿಂದ ಬಂದು –“ಓ ವಿಹಗ ! ಈ ಕಾಡಿನಲ್ಲಿ ಅನೇಕ ಮರಗಳಿವೆ. ಅವುಗಳನ್ನೆಲ್ಲ ಬಿಟ್ಟು ಈ ಬೋಳು ಮರದಲ್ಲೇಕೆ ಜೀವ ತೇಯುತ್ತಿರುವೆ. ಬೆರೆಡೆ ಹೋಗಿ ಬದುಕಬಾರದೆ?” ಎಂದು ಕೇಳುತ್ತಾನೆ. ಗಿಳಿಯು ಆ ಮರದ ಬಗೆಗಿನ ತನ್ನ ಬಾಂಧವ್ಯ ಮತ್ತು ಭಾವನೆಗಳನ್ನು ಹೇಳಿ, “ನೀನು ಇಂದ್ರ, ಎಲ್ಲವನ್ನೂ ತಿಳಿದು ಹೀಗೆ ಏಕೆ ಕೇಳುವೆ?” ಎಂದು ಕೇಳುತ್ತದೆ. ಮಾರುವೇಷದಲ್ಲಿದ್ದರೂ ನನ್ನ ಕಂಡುಹಿಡಿದ ಹಕ್ಕಿಯ ಬಗ್ಗೆ ಇಂದ್ರನಿಗೆ ಸಂತೋಷವಾಗಿ ವರವನ್ನು ಕೇಳು ಎಂದು ಹೇಳುತ್ತಾನೆ. ಆಗ ಹಕ್ಕಿ “ನನ್ನಂತಹ ಅನೇಕ ಪ್ರಾಣಿ-ಪಕ್ಷಿಗಳಿಗೆ ಜೀವನವಾದ ಈ ಮರ ಬದುಕಲಿ, ಮೊದಲಿನಂತೆ ಆಗಲಿ” ಎಂದು ಕೇಳುತ್ತದೆ. ಇಂದ್ರ ಕರುಣಿಸುತ್ತಾನೆ. ಮರ ಮತ್ತೆ ಚಿಗಿದು, ಹಸಿರ ಸೀರೆನ್ನುಡುತ್ತದೆ. ಮತ್ತೆ ಎಲ್ಲ ಹಕ್ಕಿಗಳ ಪ್ರಾಣಿಗಳ ಆಶ್ರಯವಾಗುತ್ತದೆ. ಇದು ಮಹಾಭಾರದ ಒಂದು ಅಧ್ಯಾಯದಲ್ಲಿ ಬರುವ ಕಥೆ. ಹಕ್ಕಿಗೆ ಮರ ಆಶ್ರಯವಾಗಿತ್ತು. ಹಕ್ಕಿಯಿಂದ ಮರ ಮತ್ತೆ ಬದುಕಿತು. ಹೀಗೆಯೆ ಜೀವನದಲ್ಲಿ ಪರಸ್ಪರ ಸಹಾಯ ಮಾಡಿಕೊಂಡು ಹೊಂದಿಕೊಂಡಿರುವುದೇ ಜೀವೋ ಜೀವಸ್ಯ ಜೀವನಮ್. ಇಂತಹ ಕಥೆಗಳ ಆಗರ ಮಹಾಭಾರತ. ಗೀತೆಯ ಜಗಚ್ಚಕ್ರ ಒಂದನ್ನೊಂದು ಅವಲಂಬಿಸಿ ಈ ಜಗತ್ತು ಇದೆ ಎನ್ನುವುದನ್ನು ಗೀತಾಚಾರ್ಯ ಸ್ಪಷ್ಟವಾದ ಮಾತುಗಳಲ್ಲಿ ಹೇಳಿದ್ದಾನೆ.ಅನ್ನಾದ್ಭವಂತಿ ಭೂತಾನಿ ಪರ್ಜನ್ಯಾದನ್ನಸಂಭವ: | ಯಜ್ಞಾದ್ಭವತಿ ಪರ್ಜನ್ಯೋ ಯಜ್ಞ: ಕರ್ಮಸಮುದ್ಭವ: | ಕರ್ಮ ಬ್ರಹ್ಮೋದ್ಭವಂ ವಿದ್ಧಿ ಬ್ರಹ್ಮಾಕ್ಷರಸಮುದ್ಭವಮ್ || (ಗೀತೆ.೩.೪-೫) ಇಲ್ಲಿ ಭೂತಗಳು ಅಂದರೆ ಜೀವಿಗಳು ಎಂದರ್ಥ. ಜೀವಿಗಳು ಅನ್ನವನ್ನು ತಿಂದು ಬದುಕುತ್ತವೆ. ಆ ಅನ್ನ ಹುಟ್ಟುವುದು ಮಳೆಯಿಂದ. ಮಳೆ ಬರುವುದು