ಲತಾ.ಎಂ
(ಅಧ್ಯಾಪಕರು)
ಹಿನ್ನಲೆ
೨೦೧೭-೧೮ ನೇ ಶೈಕ್ಷಣಿಕ ವರ್ಷ ಪ್ರಾರಂಭಿಸುವ ವೇಳೆಗೆ ಪೂರ್ಣಪ್ರಮತಿ ಪ್ರಾರಂಭವಾಗಿ ಏಳು ವರ್ಷಗಳು ಕಳೆದಿದ್ದು, ಎಂಟನೆಯ ವರ್ಷಕ್ಕೆ ಕಾಲಿಟ್ಟಿದೆ. ಆಧುನಿಕ ವಿದ್ಯೆಗಳೊಂದಿಗೆ ಸಾಂಪ್ರದಾಯಿಕ ವಿದ್ಯೆಗಳನ್ನೂ ಒಂದೇ ವೇದಿಕೆಯಲ್ಲಿ ಕೊಡುವ ಆಲೋಚನೆಯೊಂದಿಗೆ ಪೂರ್ಣಪ್ರಮತಿ ಪ್ರಾರಂಭವಾಯಿತು. ಇದನ್ನು ಒಂದು ಶಾಲೆ ಎನ್ನುವುದಕ್ಕಿಂತ ಕಲಿಕೆಗೆ ಒಂದು ವೇದಿಕೆ ಎನ್ನಬಹುದು. ಏಕೆಂದರೆ ಇಲ್ಲಿ ಮಕ್ಕಳು ಮಾತ್ರವಲ್ಲ, ಅಧ್ಯಾಪಕರು-ಪೋಷಕರು-ಅತಿಥಿ-ಅಭ್ಯಾಗತರೂ ಎಲ್ಲರೂ ಕಲಿಯುತ್ತಾರೆ, ಕಲಿಸುತ್ತಾರೆ. ಪೂರ್ಣಪ್ರಮತಿಯ ಉದ್ದೇಶವೂ ಒಂದು ಶಾಲೆಯನ್ನು ಸ್ಥಾಪಿಸುವುದಲ್ಲ. ಬದಲಾಗಿ ಭಾರತೀಯ ಸಂಸ್ಕೃತಿಯನ್ನು ಉಳಿಸಲು ಕಂಕಣಬದ್ಧರಾಗಿ, ಪರಂಪರೆಯ ಮೂಲಗಳನ್ನು ರಕ್ಷಿಸುತ್ತಾ ತಮ್ಮ ಜೀವನವನ್ನು ಸಾರ್ಥಕಪಡಿಸಿಕೊಳ್ಳುವ ಒಂದು ಸಮುದಾಯವನ್ನು ಸಜ್ಜುಗೊಳಿಸುವುದು.
ಈ ಹಿನ್ನಲೆಯಲ್ಲಿ ಹೇಳಿಕೊಡುವ ಪ್ರತಿಯೊಂದು ವಿದ್ಯೆಗೂ ಒಂದು ಪ್ರಾಮುಖ್ಯತೆಯನ್ನು ಗುರುತಿಸಬಹುದಾಗಿದೆ. ಇಲ್ಲಿ ಅನೇಕ ಚಟುವಟಿಕೆಗಳು, ಭಾಷೆಗಳು, ಕ್ರೀಡೆ, ಕಲೆಗಳು, ವಿಜ್ಞಾನ, ಗಣಿತ ಮುಂತಾದ ಅನೇಕ ವಿದ್ಯೆಗಳನ್ನು ಕಲಿಸುವ ಪ್ರಯತ್ನ ಮಾಡಲಾಗುತ್ತಿದೆ. ಪ್ರತಿಯೊಂದು ವಿದ್ಯೆಗೂ-ವಿಷಯಕ್ಕೂ ಒಂದು ಮೌಲ್ಯವಿದೆ. ಆ ಮೌಲ್ಯವನ್ನು ತಿಳಿಯಪಡಿಸುವುದೇ ಅಧ್ಯಾಪಕರು ಮಾಡಬಹುದಾದ ಮಹತ್ತರವಾದ ಕೆಲಸ. ಕಲಿಯುವ ಮನಸ್ಸನ್ನು ಸಿದ್ಧಪಡಿಸಿ, ಕಲಿಯಲು ಬೇಕಾದ ವಿಷಯಗಳನ್ನು ಕಲೆ ಹಾಕಿ ಬಿಟ್ಟರೆ ಕಲಿಯುವ ಹೊಣೆ ಕಲಿಯುವವರದ್ದೇ ಎಂಬುದು ಪೂರ್ಣಪ್ರಮತಿಯ ಆಲೋಚನೆ. ಕಲಿಯುವ ಮನಸ್ಸನ್ನು ಹದಗೊಳಿಸುವ ಜವಾಬ್ದಾರಿ ಇರುವುದರಿಂದಲೇ ಅಧ್ಯಾಪಕರ ಪಾತ್ರವೂ ಮಹತ್ತರವಾದದ್ದು. ಕಲಿಯುವ ಹಂತಗಳನ್ನು ಗುರುತಿಸಿ, ಅದು ತಪ್ಪದಂತೆ ಪ್ರಕ್ರಿಯೆಗಳನ್ನು ಸೃಷ್ಟಿಸಿ, ಕಲಿಕಾ ಸಾಮಗ್ರಿಗಳನ್ನು ಸಿದ್ಧಪಡಿಸುವುದು ಅಧ್ಯಾಪಕರ ಪಾತ್ರ.
ಭಾಷೆಗೂ-ಸಂಸ್ಕೃತಿಗೂ ಅವಿನಾಭಾವ ಸಂಬಂಧವಿದೆ. ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಭಾಷೆಗೇ ಹೆಚ್ಚಿನ ಪಾತ್ರವಿರುವುದು. ಆದ್ದರಿಂದ ಮಕ್ಕಳ ಮನಸ್ಸನ್ನು, ಭಾವನೆಗಳನ್ನು ಮತ್ತು ಸಂಸ್ಕೃತಿಯನ್ನು ಬೆಸೆಯುವ ಕೊಂಡಿಯಾಗಿ ಸ್ಥಳೀಯಭಾಷೆಯಾದ ಕನ್ನಡವನ್ನು ಗುರುತಿಸಲಾಗಿದೆ. ಕನ್ನಡವನ್ನು ಇರುವ ಆರು ವಿಷಯಗಳಲ್ಲಿ ಒಂದು, ಎಂದು ಕಾಣುವ ಬದಲಿಗೆ ಭಾವನೆಯ ಅಭಿವ್ಯಕ್ತಿಗೆ ಸಾಧನವಾಗಿ, ಭಾಷಾಧ್ಯಯನದೊಂದಿಗೆ ಮೂಲ ಬೇರುಗಳ ಪರಿಚಯ, ಭಾಷೆಯೊಂದಿಗೆ ಬೆಸೆದುಕೊಂಡಿರುವ ತನ್ನತನದ ಅರಿವಿಗೆ ಸಹಾಯಕವಾಗುವಂತೆ ಕನ್ನಡ ಕಲಿಕೆ ಆಗಬೇಕೆಂಬುದು ಪೂರ್ಣಪ್ರಮತಿಯ ಉದ್ದೇಶ.
ಆಧುನಿಕತೆಯ ಸೆಳೆತಕ್ಕೆ ಸಿಲುಕಿ ಭಾಷೆಯ ಸೊಗಡನ್ನು ಗುರುತಿಸುವುದಿರಲಿ, ಭಾಷೆಯ ಬಳಕೆಯೇ ನಶಿಸಿಹೋಗುವಂತಾಗಿದೆ. ಆದರೆ ಭಾಷೆ ಉಳಿಯುವುದೇ ಬಳಕೆಯಿಂದ. ಸಮೃದ್ಧವಾದ ಭಾರತದ ಒಂದು ಮಹತ್ತರವಾದ ಗುರುತು ಅದರಲ್ಲಿದ್ದ ಅನೇಕ ಭಾಷೆಗಳು. ಆದರೆ ಇಂದು ಬಳಕೆಯಲ್ಲಿ ಇಲ್ಲದ ಕಾರಣಕ್ಕೋ, ಲಿಪಿ ಇಲ್ಲದ ಕಾರಣಕ್ಕೋ ಅನೇಕ ಭಾಷೆಗಳು ಸತ್ತುಹೋಗಿವೆ. ೨೦೦೦ ವರ್ಷಗಳ ಇತಿಹಾಸವಿರುವ ಕನ್ನಡಕ್ಕೆ ಅಂತಹ ಸ್ಥಿತಿ ಒದಗದಂತೆ ನೋಡಿಕೊಳ್ಳುವ ಸಾಹಸದಲ್ಲಿ ಪೂರ್ಣಪ್ರಮತಿಯ ಕನ್ನಡ ಕಲಿಕೆಯೂ ಒಂದು ಅಳಿಲು ಸೇವೆ.
ಈ ದೃಷ್ಟಿಯಿಂದಲೆ ಪೂರ್ಣಪ್ರಮತಿಯಲ್ಲಿ ಕನ್ನಡವನ್ನು ಪ್ರಥಮ ಭಾಷೆಯಾಗಿ ಹೇಳಿಕೊಡಲಾಗುವುದು. ಸಂಸ್ಕೃತ ಭಾಷೆಯಿಂದ ಬಹಳಷ್ಟು ಪ್ರಭಾವಗೊಂಡಿರುವ ಭಾಷೆ ಕನ್ನಡವಾದ್ದರಿಂದ ಶಾಸ್ತ್ರೀಯ ಗ್ರಂಥಗಳ ಅಧ್ಯಯನ ಮತ್ತು ಪ್ರಸ್ತುತಿಗೆ ಕನ್ನಡ ಭಾಷೆ ಹೆಚ್ಚು ಬಳಕೆಯಾಗುತ್ತದೆ ಮತ್ತು ಅಸಹಜವಲ್ಲವೆಂಬಂತೆ ಸಹಕರಿಸುತ್ತದೆ.
೨೦೧೭-೧೮ರ ಕನ್ನಡ ಹಬ್ಬದಲ್ಲಿ ಗಮನ ಕೊಡಲಾಗಿದ್ದ ಪ್ರಮುಖ ಅಂಶಗಳು:
• ಎಲ್ಲರಿಗೂ ಅವಕಾಶ ಸಿಗಬೇಕು.
• ಬಹುಮಾನದ ನಿರೀಕ್ಷೆ ಇಲ್ಲದೆ ಕಲಿಕೆಯೇ ಗುರಿಯಾಗಿರಬೇಕು. ಕಲಿಕೆಯನ್ನು ಆನಂದಿಸಬೇಕು.
• ಒಂದು ಹಬ್ಬದ ವಾತಾವರಣ ಸೃಷ್ಟಿಯಾಗಬೇಕು. ಅದು ಕಲಿಕೆಯ ಹಬ್ಬ. ಕನ್ನಡದ ಹಬ್ಬವಾಗಿರಬೇಕು.
• ಈ ಹಬ್ಬದಲ್ಲಿ ಹಿರಿಯ ಕವಿಗಳು, ಸಾಹಿತಿಗಳು ಮಕ್ಕಳ ಬರವಣಿಗೆ, ಚಟುವಟಿಕೆಗಳನ್ನು ಗಮನಿಸಿ ಅವರಿಗೆ ಇನ್ನೂ ಉತ್ತಮಪಡಿಸಿಕೊಳ್ಳುವ ಕಿವಿಮಾತನ್ನು ಕೊಡಬೇಕು, ಮಾರ್ಗದರ್ಶನ ಮಾಡಬೇಕು.
• ಬರವಣಿಗೆ, ಓದು ಇತ್ಯಾದಿ ಅತ್ಯಗತ್ಯ ಕೌಶಲಗಳಲ್ಲಿ ತಮ್ಮನ್ನು ತಾವೇ ಉತ್ತಮಪಡಿಸಿಕೊಳ್ಳಲು ಉತ್ತೇಜಿಸುವಂತೆ ಚಟುವಟಿಕೆಗಳನ್ನು ರಚಿಸಬೇಕು.
• ೩ ಹಂತಗಳಲ್ಲಿ ಆಯ್ಕೆ ಪ್ರಕ್ರಿಯೆಯು ಮುಂದುವರೆಯಬೇಕು. ಹಂತದಿಂದ ಹಂತಕ್ಕೆ ಮಕ್ಕಳ ಪ್ರಯತ್ನ ಉತ್ತಮವಾಗಿರಬೇಕು. ಆಯ್ಕೆ ಪ್ರಕ್ರಿಯೆ ನ್ಯಾಯಯುತವಾಗಿಯೂ ಮಕ್ಕಳಿಗೂ ಅರ್ಥವಾಗುವಂತೆಯೂ ಇರಬೇಕು.
• ನಂತರ ಮಕ್ಕಳಲ್ಲಿ ಉತ್ತಮಪಡಿಸಬೇಕಾದ ಅಂಶಗಳನ್ನು ಅಧ್ಯಾಪಕರು ನಿತ್ಯ ಕಲಿಕೆಯಲ್ಲಿ ಗಮನಕೊಡುವುದು.
ಸುಮಾರು ಒಂದು ತಿಂಗಳು ನಡೆದ ಕನ್ನಡ ಹಬ್ಬದ ಆಚರಣೆಯ ಸಮಾರೋಪ ಸಮಾರಂಭ ಅರ್ಥಪೂರ್ಣವಾಗಿ ನಡೆಯಿತು. ಮೊದಲೇ ಯೋಜಿಸಿದಂತೆ ಹಿರಿಯರ ವಿಭಾಗದ ಸಮಾರೋಪಕ್ಕೆ ಹೆಚ್.ಎಸ್.ವೆಂಕಟೇಶ್ ಮೂರ್ತಿಯವರು, ಮಧುಸೂದನ ಅವರು ಅತಿಥಿಗಳಾಗಿ ಬಂದಿದ್ದರು. ಮಕ್ಕಳ ಬರಹಗಳನ್ನು ಮೊದಲೇ ಅವರಿಗೆ ಓದಲು ನೀಡಲಾಗಿತ್ತು. ಅವರು ಸಮಾರೋಪದ ದಿನ ಅವುಗಳ ವಿಮರ್ಶೆಯನ್ನು ಮಕ್ಕಳೊಂದಿಗೆ ಹಂಚಿಕೊಂಡರು.
ಅಂತೆಯೇ ಪೂರ್ವಪ್ರಾಥಮಿಕ ಹಂತದ ಸಮಾರೋಪಕ್ಕೆ ಕಥೆಗಾರ ಸುಬ್ಬಣ್ಣ ಅವರು ಅತಿಥಿಗಳಾಗಿ ಬಂದಿದ್ದರು. ಪುಟ್ಟ ಮಕ್ಕಳು ಅವರ ಕಥೆಯನ್ನು ಕೇಳಿ ತಾವೇ ಸ್ವಪ್ರೇರಿತರಾಗಿ ’ಪ್ರತಿ ಕನ್ನಡ ಹಬ್ಬಕ್ಕೂ ನೀವೆ ಬನ್ನಿ’ ಎಂದು ಕೂಗುತ್ತಿದ್ದರು. ಇದೇ ಅವರ ಪ್ರಭಾವಕ್ಕೆ ಸಾಕ್ಷಿ ಎನಿಸುತ್ತದೆ. ವಿಶೇಷವೆಂಬಂತೆ ಮಕ್ಕಳ ಬರವಣಿಗೆಯಾದ ಕಥೆಗಳು ಮತ್ತು ಲಲಿತ ಪ್ರಬಂಧಗಳನ್ನು ಅತಿಥಿಗಳಿಗೆ ಪುಸ್ತಕ ರೂಪದಲ್ಲಿ ನೀಡಲಾಯಿತು. ಮಕ್ಕಳು ಇದರಿಂದ ಪ್ರೇರಿತರಾಗಿ ಪುಸ್ತಕ ಬರೆಯುವ ಕನಸ್ಸನ್ನು, ಕತೆಗಾರರಾಗುವ ಕನಸ್ಸನ್ನು, ಕವಿಗಳಾಗುವ ಕನಸ್ಸನ್ನು ಕಾಣುತ್ತಿದ್ದಾರೆ. ಸಾರ್ಥಕತೆ ಕ್ಷಣ ಇದಲ್ಲವೇ!!
ಯೋಜನೆಯ ಹಂತದಲ್ಲಿರುವ ಇನ್ನು ಕೆಲವು ಕನಸುಗಳು
ಪೂರ್ಣಪ್ರಮತಿಯಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸುವುದು ಒಂದು ಆಯಾಮವಾದರೆ ಪೂರ್ಣರ್ಪಮತಿಯನ್ನು ಕನ್ನಡ ಅಧ್ಯಯನ ಪೀಠವಾಗಿ ಬೆಳೆಸುವುದು ಒಂದು ಕನಸು. ಚಿಂತಕರ ಅನುಭವಗಳಿಗೆ, ಆಲೋಚನೆಗಳಿಗೆ ಒಂದು ವೇದಿಕೆಯನ್ನು, ಅವಕಾಶವನ್ನು ಸಿದ್ಧಪಡಿಸುವ ಒಂದು ಯೋಜನೆ ಇದೆ.
ಕನ್ನಡದಲ್ಲಿ ಉನ್ನತ ಅಧ್ಯಯನ ಮಾಡಲು, ಸೃಜನಾತ್ಮಕವಾಗಿ ಬೆಳೆಯಲು ಬಯಸುವವರಿಗೆ ಐಚ್ಛಿಕವಾಗಿ ಕನ್ನಡ ಪರೀಕ್ಷೆಗಳನ್ನು ತೆಗೆದುಕೊಳ್ಳುವ ವ್ಯವಸ್ಥೆಯನ್ನು ಸಿದ್ಧಪಡಿಸುವುದು. ಪೂರ್ಣಪ್ರಮತಿಯ ಆಶ್ರಯದಲ್ಲಿಯೇ ವಿವಿಧ ಹಂತಗಳಲ್ಲಿ ಪರೀಕ್ಷೆಗಳನ್ನು ಸಿದ್ಧಪಡಿಸುವುದು ಮತ್ತು ಅದಕ್ಕೆ ಸರ್ಕಾರದ ಮಾನ್ಯತೆ ಮಾಡಿಸುವುದು ಮುಂದಿನ ಯೋಜನೆಗಳಲ್ಲಿ ಇದೆ.
ಪೂರ್ಣಪ್ರಮತಿಯ ಚಿಂತನೆಗಳೊಂದಿಗೆ ಬೆಳೆದ ಮಕ್ಕಳು ತಮ್ಮ ಸ್ವಂತ ಬರವಣಿಗೆ, ಪುಸ್ತಕಗಳು, ವಿಮರ್ಶೆಗಳನ್ನು ಬರೆಯುವಂತೆ ಪ್ರೋತ್ಸಾಹಿಸಿ ಸ್ವಂತ ಪ್ರಕಟಣೆಗಳಿಗೆ ವೇದಿಕೆಯನ್ನು ತಯಾರು ಮಾಡುವ ಯೋಜನೆಯೂ ಇದೆ. ಇದಕ್ಕೆ ಎಲ್ಲರ ಸಹಕಾರವೇ ಬಂಡವಾಳ.