ಅನಂತಶಯನ, ಸಂಸ್ಕೃತ ಅಧ್ಯಾಪಕರು
ಸಂಸ್ಕೃತ ಹೇಗೆ ವಿಶ್ವಭಾಷೆ ಆಗಿತ್ತು ಎಂದು ಹಿಂದಿನ ಲೇಖನದಲ್ಲಿ ನೋಡಿದ್ದೇವು. ಈ ಬಾರಿ ಒಬ್ಬ ಕವಿಗೆ ಶ್ಲೋಕ ಹೇಗೆ ಸ್ಫುರಿಸಿತು ಎಂದು ನೋಡೋಣ.
ಕನ್ನಡ ಆಡು ಭಾಷೆ ಆದರೂ ಎಲ್ಲರೂ ಕವಿಗಳಾಗಲು ಸಾಧ್ಯವಿಲ್ಲ. ಭಾವಕ್ಕೆ ತಕ್ಕ ಪದ ಸಂದರ್ಭಕ್ಕೆ ತಕ್ಕಂತೆ ಬಂದು ಲಯಬದ್ಧವಾಗಿ ಪದಗಳ ಸಾಲಿನಲ್ಲಿ ಸೇರಿದರೆ ಅದು ಕವಿತೆ ಆಗುತ್ತದೆ. ಅದನ್ನು ಸೇರಿಸಿದವ ಕವಿ ಆಗುತ್ತಾನೆ. ಪ್ರಾಚೀನ ಭಾರತದಲ್ಲಿ ಎಲ್ಲರೂ ಸಂಸ್ಕೃತ ಮಾತನಾಡುತ್ತಿದ್ದರೂ ಕೆಲವರನ್ನು ಮಾತ್ರ ಕವಿಗಳೆಂದು ಗುರುತಿಸಿದ್ದರು. ಅಂತಹ ಪ್ರಸಿದ್ಧ ಕವಿಗಳಲ್ಲಿ ಭಾರವಿ ಒಬ್ಬ ಕವಿ.
ಭಾರವಿ ಅಭಿಜಾತ ಕವಿ. ಬಾಲದಲ್ಲೇ ಅನವದ್ಯಪದ್ಯಗಳನ್ನು ರಚಿಸಿ ಎಲ್ಲರಿಂದಲೂ ಮನ್ನಣೆ ಮಡೆದಿದ್ದ. ಅವನ ವಾಕ್ಯರಚನಾಕೌಶಲಕ್ಕೆ ಹಿರಿಯ ತಲೆಗಳೂ ತಲೆ ಬಾಗಿದ್ದವು. ತನ್ನ ಮಗ ಒಳ್ಳೆಯ ಕವಿಯಾಗಿದ್ದಾನೆ ಎಂಬ ಸಂತೃಪ್ತಿ ತಾಯಿಗೆ ಮೊದಲಿನಿಂದಲೂ ಇತ್ತು. ಯಾರು ಎಷ್ಟೇ ಗೌರವಿಸಿದರೂ, ಮುದ್ದಿಸಿದರೂ ಭಾರವಿಯ ಅಪ್ಪ ಮಾತ್ರ ಮೌನಿಯಾಗಿಯೇ ಇದ್ದ. ಯಾವ ಶ್ಲೋಕಗಳಿಗೆ ಬೇರೆ ಕವಿಗಳೂ ಕೂಡ ಬಹಳ ಚೆನ್ನಾಗಿದೆ ಎಂದು ಪ್ರಶಂಸಿಸಿದ್ದರೂ ಆ ಶ್ಲೋಕಗಳಿಗೆ ಅವನ ಅಪ್ಪ ಚೆನ್ನಾಗೇನೋ ಇದೆ. ಆದರೆ ಸಾಲದು ಎನ್ನುತ್ತಿದ್ದ. ಭಾರವಿಗೆ ಎಲ್ಲರಿಂದ ಮನ್ನಣೆ ಸಿಕ್ಕರೂ ತನ್ನ ಅಪ್ಪ ತನ್ನನ್ನು ಕವಿಯೆಂದು ಗುರುತಿಸಿಲ್ಲ ಎನ್ನುವ ಬೇಸರವಿತ್ತು. ಅಪ್ಪನನಿಂದ ಪ್ರಶಂಸೆ ಪಡೆಯಲು ಮಗ ಅನೇಕ ಸುಂದರ ಪದ್ಯಗಳನ್ನು ರಚಿಸಿ ತೋರಿಸುತ್ತಿದ್ದರೂ ಅಪ್ಪನ ಉತ್ತರ ಮಾತ್ರ ಎಂದಿನಂತೆಯೇ ಇರುತ್ತಿತ್ತು.
ಕೊನೆಗೊಮ್ಮೆ ಭಾರವಿಗೆ ಹೀಗೆ ಅನಿಸಿತು – ಲೋಕವೇ ಮೆಚ್ಚುವಂತಹ ಶ್ಲೋಕಗಳನ್ನು ರಚಿಸಿದರೂ ಅಪ್ಪನಿಗೆ ಮಾತ್ರ ಸಂತೋಷವಿಲ್ಲ. ಪ್ರಾಯ: ನನ್ನ ಏಳಿಗೆ ಅಪ್ಪನಿಗೆ ಸಹಿಸಲು ಆಗುತ್ತಿಲ್ಲ. ಮಗನ ಬಗ್ಗೆನೇ ಅಸೂಯೆ ತುಂಬಿಕೊಂಡಿದ್ದಾನೆ ಅಪ್ಪ. ಹೀಗೆ ಆಲೋಚಿಸಿದ ಭಾರವಿಗೆ ಅಪ್ಪನನ್ನು ಕೊಲ್ಲುವಷ್ಟು ಕೋಪ ಬಂದಿತ್ತು. ಆ ದಿನ ಕೋಣೆಯಲ್ಲಿ ತನ್ನ ತಂದೆ ಮತ್ತು ತಾಯಿ ಮಾತನಾಡುತ್ತಿರುವುದನ್ನು ಕೇಳಿಸಿಕೊಂಡ.
ತಾಯಿ – ಅಲ್ಲ ರಿ! ನಮ್ಮ ಮಗನನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ನೀವು ಮಾತ್ರ ಏನೂ ಹೇಳುತ್ತಿಲ್ಲ. ಅವನಿಗೆ ಈ ವಿಷಯದಲ್ಲಿ ಬಹಳ ಕೊರಗಿದೆ
ತಂದೆ – ಭಾರವಿ ಚಿಕ್ಕವನಾಗಿದ್ದಾಗ ಒಂದು ಶ್ಲೋಕವನ್ನು ರಚಿಸಿ ತೋರಿಸಿದ್ದ. ಆಗಲೇ ಅವನಲ್ಲಿರುವ ಕವಿತಾಶಕ್ತಿಯನ್ನು ಕಂಡು ಬಹಳ ಆನಂದವಾಗಿತ್ತು. ನಾನೇನಾದರು ಅಂದೇ ಅವನನ್ನು ಹೊಗಳಿದ್ದರೇ ಈ ಮಟ್ಟಿಗೆ ಅವನು ಬೆಳೆಯುತ್ತಿರಲಿಲ್ಲ. ಹೊಗಳಿಕೆ ಏಳಿಗೆಯನ್ನು ನಿಲ್ಲಿಸುತ್ತದೆ. ನನ್ನ ತೃಪ್ತಿ ಪಡಿಸಲು ಅವನು ಪಟ್ಟ ಪ್ರಯತ್ನ ಈಗ ಅವನಿಗೆ ಉಪಯೋಗವಾಗಿದೆ. ಈಗ ದೊಡ್ದ ಕವಿಯಾಗಿ ಬೆಳೆದಿದ್ದಾನೆ. ಅವನು ರಚಿಸಿದ ಪ್ರತಿ ಪದ್ಯವೂ ನನಗೆ ಎಲ್ಲಿಲ್ಲದ ಆನಂದವನ್ನು ನೀಡಿವೆ. ಅವನ ಏಳಿಗೆಗಾಗಿ ಅವನಿಗೆ ಹೇಳಲಿಲ್ಲ ಅಷ್ಟೇ
ಭಾರವಿಗೆ ಈ ಸಂಭಾಷಣೆ ಕೇಳಿ ಕಣ್ಣಂಚಲ್ಲಿ ನೀರು ಹನಿದು ಹೃದಯದ ಭಾವ ಒಂದು ಶ್ಲೋಕವಾಗಿ ಹೊರ ಬಂತು.
ಸಹಸಾ ವಿದಧೀತ ನ ಕ್ರಿಯಾಮ್ ಅವಿವೇಕ: ಪರಮಾಪದಾಂ ಪದಮ್ |
ವೃಣುತೇ ಹಿ ವಿಮೃಶ್ಯ ಕಾರಿಣಂ ಗುಣಲುಬ್ಧಾ: ಸ್ವಯಮೇವ ಸಂಪದ: ||
(ತಿಳಿಯದೆ ಕೂಡಲೆ ಕ್ರಿಯೆಯನ್ನು ಮಾಡಬಾರದು. ಇಂತಹ ಅವಿವೇಕ ದೊಡ್ಡ ಆಪತ್ತಿನ ದಾರಿ. ತಿಳಿದು ಮಾಡುವವನನ್ನು ಸಂಪತ್ತುಗಳು ತಾವಾಗಿಯೇ ಆರಿಸಿಕೊಂಡು ಬರುತ್ತವೆ.)
ತನ್ನ ತಂದೆಯನ್ನು ತಪ್ಪಾಗಿ ತಿಳಿದಿದ್ದಕ್ಕೆ ತಂದೆಯ ಬಳಿ ಕ್ಷಮೆ ಯಾಚಿಸುತ್ತಾನೆ. ಮುಂದೆ ಕಿರಾತಾರ್ಜುನೀಯ ಎಂಬ ಮಹಾಕಾವ್ಯವನ್ನು ರಚಿಸಿ ಇಂದಿಗೂ ಕವಿಗಳ ಪ್ರೀತಿಗೆ ಪಾತ್ರನಾಗಿದ್ದಾನೆ.
ಮುಂದಿನ ಸಂಚಿಕೆಯಲ್ಲಿ – ವೈದಿಕ ಸಾಹಿತ್ಯದ ಕೆಲವು ಸುಭಾಷಿತಗಳು
May 22nd, 2018 at 7:40 am
Tumba manohara lekhana. Shri Anantannanige abhivandanegalu.
Samskruta kavigala bagge ondu kiru naataka ee baariya Mahotsavadalli yeke maadabaaradu?