Nagesh Hegde
Ecologist
ಸುತ್ತ ಒಂದರ್ಧ ಕಿಲೊಮೀಟರ್ವರೆಗೂ ಪರಿಮಳವನ್ನು ಬೀರುವ ಮಲೆನಾಡಿನ ಆಲೆಮನೆ ಎಂದರೆ ಎಲ್ಲವೂ ವೃತ್ತಾಕಾರ. ಗಾಣದ ಸುತ್ತ ನೊಗಹೊತ್ತ ಕೋಣಗಳು ವೃತ್ತಾಕಾರ ಸುತ್ತುವುದು, ಗಾಣವಂತೂ ವೃತ್ತಾಕಾರವೇ. ಅದರಿಂದ ಜಿನುಗುವ ರಸವನ್ನು ಹಿಡಿದಿಡುವ ಡ್ರಮ್ ಕೂಡ ವೃತ್ತಾಕಾರ. ಆ ಸಿಹಿರಸವನ್ನು ಕುದಿಸುವ ಕೊಪ್ಪರಿಗೆಯೂ ವೃತ್ತಾಕಾರ. ಕುದಿಯುವ ರಸದಿಂದ ಕಸಕಡ್ಡಿಗಳನ್ನು ತೆಗೆಯುವ ಊದ್ದನ್ನ ಸೌಟೂ ವೃತ್ತಾಕಾರ. ಬೆಲ್ಲವನ್ನು ತುಂಬುವ ಕೊಡಗಳಂತೂ ವೃತ್ತಾಕಾರ. ಆ ನೊರೆಬೆಲ್ಲವನ್ನು ಅತಿಥಿಗಳಿಗೆ ನೀಡುವುದೂ ವೃತ್ತಾಕಾರದ ಮುತ್ತುಗದ ಎಲೆಗಳಲ್ಲೇ.
ಆಲೆಮನೆಯ ಸುತ್ತಲಿನ ಅಗೋಚರ ವಿದ್ಯಮಾನಗಳೂ ವೃತ್ತಾಕಾರವಾಗಿಯೇ ಇರುತ್ತವೆ. ಕಬ್ಬಿನ ಗದ್ದೆಯಿಂದ ಸವರಿ ತಂದ ಎಲೆಗಳು ಮೇವಿನ ರೂಪದಲ್ಲಿ ಕೋಣನ ಜಠರಗಳಿಗೆ ಹೋಗಿ, ಅವುಗಳಿಂದ ಹೊರಬರುವ ಸೆಗಣಿ ಮತ್ತೆ ಕಬ್ಬಿನ ಗದ್ದೆಗೇ ಸೇರುವುದು; ರಸ ತೆಗೆದ ಜಲ್ಲೆಗಳು ಒಣಗಿ, ಆಲೆ ಒಲೆಯಲ್ಲಿ ಉರಿದು ಬೂದಿಯಾಗಿ ಮತ್ತೆ ಹೊಲಕ್ಕೆ ಸೇರುವುದು -ಅದೂ ವೃತ್ತಾಕಾರ. ಇನ್ನು ವರ್ಷದಿಂದ ವರ್ಷಕ್ಕೆ ಅದೇ ಡಿಸೆಂಬರ್-ಜನವರಿಯಲ್ಲಿ ಆಲೆಮನೆ ನಡೆಯುವುದು; ಕಬ್ಬು, ಕಬ್ಬಿನ ರಸ, ನೊರೆಬೆಲ್ಲವನ್ನು ಸವಿದು ಹೋದ ಅತಿಥಿಗಳು ಅದನ್ನು ನೆನಪಿನಲ್ಲಿಟ್ಟುಕೊಂಡು ಬೇರೆ ಏನೇನೋ ಕಾರಣಗಳಿಂದ ಆಲೆಮನೆ ಯಜಮಾನನ ಕುಟುಂಬವನ್ನು ತಮ್ಮಲ್ಲಿಗೂ ಕರೆದು ಉಪಚರಿಸುವುದೂ ಒಂದು ರೀತಿಯಲ್ಲಿ ವೃತ್ತಾಕಾರದ ಚಲನೆಯನ್ನೇ ನೆನಪಿಸುತ್ತದೆ.
ಅದೇ ಕಬ್ಬು ಕಾರ್ಖಾನೆಗೆ ಹೋಗಿ ಸಕ್ಕರೆ ಆಗುವಾಗ ಏನೇನಾಗುತ್ತದೆ ನೋಡಿ: ಆಲೆಮನೆಯ ಪರಿಮಳದ ಬದಲು ದುರ್ನಾತ. ಆಲೆಮನೆ ನಡೆಸುವವರು ನಿಮ್ಮನ್ನು ಆದರದಿಂದ ಕರೆದು ಉಪಚರಿಸಿ, ಕಬ್ಬಿನ ರಸವನ್ನು ಕುಡಿಯಲು ಕೊಟ್ಟರೆ, ಸಕ್ಕರೆ ಕಾರ್ಖಾನೆಯ ಕಾವಲುಗಾರರು ನೀವೇಕೆ ಬಂದಿರೆಂದು ಗದರಿಸಿ, ಒಳಪ್ರವೇಶಕ್ಕೆ ಏನೆಲ್ಲ ನಿರ್ಬಂಧ ವಿಧಿಸುತ್ತಾರೆ. ಒಳಗೊ ಅಪಾರ ಗದ್ದಲ, ಗಬ್ಬು ನಾತ. ನೀವು ಎಲ್ಲಾದರೂ ಏನಾದರೂ ಮುಟ್ಟಿಬಿಟ್ಟೀರೆಂದು ವಾಚ್ಮ್ಯಾನ್ ನೋಡುತ್ತಿರುತ್ತಾರೆ. ಕಬ್ಬನ್ನು ಅರೆಯುವ ಯಂತ್ರಗಳಿಂದ ಕೊಳವೆ ಮೂಲಕ ಕರೀಹೊಗೆ ಆಕಾಶಕ್ಕೆ. ಕಬ್ಬಿನ ರಸಕ್ಕೆ ಕೆಮಿಕಲ್ ಸೇರಿಸಿ ಕುದಿಸಿ ಹೊರಬಂದ ತ್ಯಾಜ್ಯಗಳು ನೀರಿಗೆ ಸೇರಿ ಅದೆಷ್ಟೊ ಕಿಲೊಮೀಟರ್ವರೆಗೆ ದುರ್ನಾತ. ಅಂತರ್ಜಲಕ್ಕೂ ಕೊಳೆದ್ರವ್ಯಗಳು ಸೇರಿ ಕೊಳವೆ ಬಾವಿಯ ನೀರೂ ಕಂದು. ಕೆಲವೆಡೆ ದುರ್ವಾಸನೆ. ಕಬ್ಬನ್ನು ಅರೆಯಲು ಬೇಕಾದ ಡೀಸೆಲ್ ಅಥವಾ ವಿದ್ಯುತ್ ಶಕ್ತಿಯೂ ದೂರದ ಯಾವುದೋ ಸಾಕಷ್ಟು ವಿಪ್ಲವಗಳನ್ನು ಸೃಷ್ಟಿ ಮಾಡಿಯೇ ಬಂದಿರುತ್ತದೆ. ಕಾರ್ಖಾನೆಯಿಂದ ಹೊರಬರುವ ಕಾಕಂಬಿ ಅಲ್ಲೇ ಸಮೀಪದ ಬ್ರೂವರಿಗೆ ಹೋಗಿ ಮದ್ಯವಾಗಿ ಬಾಟಲಿಯಲ್ಲಿ ನಗರಕ್ಕೆ ಬಂದು ಎಲ್ಲೆಲ್ಲೋ ಹೋಗಿ ಏನೆಲ್ಲ ವಿಪ್ಲವಗಳಿಗೆ ಕಾರಣವಾಗುತ್ತದೆ.
ಕಾರ್ಖಾನೆಯಿಂದ ಹೊರಬಿದ್ದ ಮೋಹಕ ಬಿಳಿಪುಡಿಯೂ ಹಾಗೇ ಎಲ್ಲೆಲ್ಲೋ ಸುತ್ತಿ, ಎಷ್ಟೊಂದು ಬಗೆಯಲ್ಲಿ ರೂಪಾಂತರಗೊಂಡು, ಮಿಠಾಯಿ, ಜೂಸ್, ಪೆಪ್ಪರ್ಮಿಂಟ್, ಬೇಕರಿ ಪದಾರ್ಥಗಳಲ್ಲಿ ಸೇರಿ ದೇಶದ ಎಲ್ಲರನ್ನೂ ಸಿಹಿಯಲ್ಲಿ ಮಿಂದೇಳಿಸುತ್ತ ಅನೇಕರಿಗೆ ಸಕ್ಕರೆ ಕಾಯಿಲೆ ಉಂಟುಮಾಡಿ, ಇನ್ಸೂಲಿನ್ ಚುಚ್ಚುಮದ್ದು ಹಾಕಿಸಿಕೊಳ್ಳುವಂತೆ ಅಥವಾ ಆಸ್ಪತ್ರೆಗಳಿಗೆ ಎಡತಾಕುವಂತೆ ಮಾಡುತ್ತದೆ. ಡಯಾಬಿಟೀಸ್ ರೋಗಿಗಳಲ್ಲಿ ಕೆಲವು ನತದೃಷ್ಟರು ಗ್ಯಾಂಗ್ರಿನ್ ರೋಗಕ್ಕೊ, ಕಿಡ್ನಿ ವೈಫಲ್ಯಕ್ಕೊ ತುತ್ತಾಗಿ ಕಂತು ಕಂತುಗಳಲ್ಲಿ ಅವಸಾನ ಹೊಂದುತ್ತಾರೆ. ಜಗತ್ತಿನಲ್ಲಿ ನಮ್ಮ ದೇಶಗಳಲ್ಲಿರುವಷ್ಟು ಸಕ್ಕರೆ ರೋಗಿಗಳು ಬೇರೆ ಯಾವ ದೇಶದಲ್ಲೂ ಇಲ್ಲ.
ಸಾಂಪ್ರದಾಯಿಕ ಬೆಲ್ಲ ತಯಾರಿಕೆ ಎಂದರೆ ಅದು ನಿಸರ್ಗ ನಿಯಮಗಳಿಗೆ ತಕ್ಕಂತೆ ಸುಸ್ಥಿರವಾದ ವೃತ್ತಾಕಾರದ ವಿದ್ಯಮಾನವಾಗಿತ್ತು. ಅದು ಆರೋಗ್ಯಪೂರ್ಣ ಚಟುವಟಿಕೆಯಾಗಿತ್ತು. ಕಬ್ಬಿನ ಗದ್ದೆಗಳಲ್ಲಿ ಬೆವರಿಳಿಸಿ ದುಡಿಯುವ ಶ್ರಮಿಕರಿಗೆ ವರ್ಷವಿಡೀ ಬೆಲ್ಲದ ಪಾನಕ ಸಿಗುತ್ತಿತ್ತು. ಬೆಲ್ಲದಿಂದ ಲಭಿಸುವ ಶಕ್ತಿಯೆಲ್ಲ ಶ್ರಮದ ದುಡಿಮೆಗೆ, ಹೆಚ್ಚಿನ ಪಾಲು ನಿಸರ್ಗ ಸಂವರ್ಧನೆಗೇ ಬಳಕೆಯಾಗುತ್ತಿತ್ತು. ಈಗ ಅಂಥ ಸಂಪ್ರದಾಯಗಳು ಒಂದೊಂದಾಗಿ ನಮ್ಮ ಕೈಬಿಟ್ಟು ಹೋಗುತ್ತಿವೆ. ಹೊಲಕ್ಕೆ ಟ್ರ್ಯಾಕ್ಟರ್, ರಸಗೊಬ್ಬರ, ಗಾಣಕ್ಕೆ ಡೀಸೆಲ್ ಯಂತ್ರ, ಬೆಲ್ಲವನ್ನು ಬಿಳಿ ಮಾಡುವ ಗಂಧಕದ ಪುಡಿ ಎಲ್ಲ ಬಂದಿವೆ. ಮನೆಯಲ್ಲಿ ಬೆಲ್ಲದ ಪಾನಕದ ಬದಲು ಸಕ್ಕರೆ ಪೇಯ, ಡೇರಿ ಹಾಲು ಬಂದಿದೆ. ಬೆಲ್ಲದ ಹೋಳಿಗೆ ಮಾಡಲು ಕಣಕದ ಮಿಶ್ರಣಕ್ಕೆ ರುಬ್ಬುಗುಂಡಿನ ಬದಲು ಮಿಕ್ಸಿ ಬಂದಿದೆ. ಸಕ್ಕರೆ ಹೋಳಿಗೆ ಹೆಚ್ಚು ಜನಪ್ರಿಯ ಆಗಿದೆ. ಸಕ್ಕರೆ ಕಾಯಿಲೆ ಹಳ್ಳಿಗಳಿಗೂ ಬಂದಿದೆ.
ಹುಟ್ಟು, ಸಾವು, ಮರುಹುಟ್ಟು ಎಂಬ ಚಕ್ರೀಯ ವಿದ್ಯಮಾನ ಈಗ ನಿಸರ್ಗದ ಮಡಿಲಿನಿಂದ ದಾಟಿ ಆಸ್ಪತ್ರೆಗಳಲ್ಲಿ ನಡೆಯುವ ವ್ಯವಹಾರಗಳಾಗಿವೆ.
March 22nd, 2018 at 8:54 am
Nija Maanyare.. Vruttavannu bittu bahala doora bandubittiddeve naavella.. Poornadinda horabandaagide.. apoornateya arivu sanna sanna minukaagi tappu hejje ittaddannu nenapisutide.. matte poornadedege saago prayatna shuru maadidare maatra soukhya.. idu artha maadisodu hege anta prashne?