‘ಇದೊಂದು ಆಘಾತಕಾರಿ ಸುದ್ದಿ: ‘ಸುಡಾನ್’ ಹೆಸರಿನ ಬಿಳಿಘೇಂಡಾ ಕಳೆದ ವಾರ ಕೆನ್ಯಾ ದೇಶದ ಸಂರಕ್ಷಿತ ಅರಣ್ಯದಲ್ಲಿ ಪ್ರಾಣಬಿಟ್ಟಿತು. ಘೇಂಡಾ ಜಾತಿಯ ಮೃಗಗಳಲ್ಲಿ ‘ಉತ್ತರದ ಬಿಳಿಘೇಂಡಾ’ ತಳಿಯ ಕೊಟ್ಟ ಕೊನೆಯ ಗಂಡು ಪ್ರಾಣಿ ಇದಾಗಿತ್ತು. ಇನ್ನೆರಡು ಹೆಣ್ಣು ಘೇಂಡಾಗಳಿವೆ. ಸುಡಾನಿನ ಮಗಳು ನಾಜಿನ್ ಮತ್ತು ನಾಜಿನ್ ಮಗಳು ಫಾತು. ಇನ್ನು ಅವುಗಳಿಂದ ಬಿಳಿ ಘೇಂಡಾ ಮರಿಗಳು ಜನಿಸುವ ಸಂಭವವಿಲ್ಲ. ಏಕೆಂದರೆ ಗಂಡುಗಳೇ ಉಳಿದಿಲ್ಲವಲ್ಲ.
ಸುಡಾನ್ 35 ವಯಸ್ಸಿನದಾಗಿತ್ತು. ಮುದಿಯಾಗಿತ್ತು. ವೃದ್ಧಾಪ್ಯದ ವಿವಿಧ ಕಾಯಿಲೆಗಳಿಂದ ಅಶಕ್ತವಾಗಿತ್ತು. ಕಾಲಿಗೆ ಹುಣ್ಣಾಗಿ ನರಳುತ್ತಿತ್ತು. ಅದರ ಸಂಕಟವನ್ನು ನೋಡಲಾರದೆ, ಪಶುವೈದ್ಯರೇ ಚುಚ್ಚುಮದ್ದಿನ ಮೂಲಕ ಸುಖಮರಣವನ್ನು ದಯಪಾಲಿಸಿದರು. ಅನೇಕ ವರ್ಷಗಳ ಹಿಂದೆಯೇ ಅದರ ವೀರ್ಯಾಣುಗಳನ್ನು ತೆಗೆದಿರಿಸಿ ಸುರಕ್ಷಿತ ಇಡಲಾಗಿದೆ ನಿಜ. ಆದರೆ ಉಳಿದಿರುವ ಹೆಣ್ಣುಗಳೆಂದರೆ ಸುಡಾನಿನ ಮಗಳು, ಮೊಮ್ಮಗಳು. ಅವಕ್ಕೆ ಕೃತಕ ಗರ್ಭಧಾರಣೆ ಮಾಡುವಂತಿಲ್ಲ. ‘ದಕ್ಷಿಣದ ಬಿಳಿ ಘೇಂಡಾ’ ಎಂಬ ಬೇರೆ ಪ್ರಭೇದದ ಯಾವುದಾದರೂ ಹೆಣ್ಣಿನ ಮೂಲಕ ಸುಡಾನಿನ ಸಂತಾನ ವೃದ್ಧಿಸಲು ಸಾಧ್ಯವೊ ನೋಡಬೇಕು.
ಘೇಂಡಾಮೃಗಗಳಲ್ಲಿ (ರೈನೊಸಿರೊಸ್ -ಅಂದರೆ ಮೂಗಿನ ಕೋಡು) ಎಮ್ಮೆಯ ಬಣ್ಣದ್ದೇ ಆಗಿರುತ್ತವೆ. ಆಫ್ರಿಕಾ ಮತ್ತು ಸುಮಾತ್ರಾ ದ್ವೀಪದ ಘೇಂಡಾಗಳಿಗೆ ಎರಡು ಕೊಂಬುಗಳಿರುತ್ತವೆ; ಭಾರತದ ಮತ್ತು ಜಾವಾದ ಘೇಂಡಾಗಳಿಗೆ ಒಂದೇ ಕೊಂಬು. ಭಾರೀ ಗಾತ್ರದ ಹತ್ತು ಕ್ವಿಂಟಾಲ್ ತೂಕದ ಪ್ರಾಣಿಗಳು. ಆದರೆ ತುಂಬ ಸಭ್ಯ ಪ್ರಾಣಿ. ಯಾರಮೇಲೂ ಏರಿ ಹೋಗುವುದಿಲ್ಲ. ನಾವೇ ಅವುಗಳ ಬೆನ್ನು ಏರಿ ಸವಾರಿ ಮಾಡಬಹುದು. ಆಫ್ರಿಕಾದ ಕೆಲವು ಘೇಂಡಾಗಳಿಗೆ ಅಗಲವಾದ ಬಾಯಿ ಇರುತ್ತದೆ. ಅವಕ್ಕೆ ಆಫ್ರಿಕನ್ ಭಾಷೆಯಲ್ಲಿ ವೇಯಿಟ್ ಎನ್ನುತ್ತಾರೆ. ಅದೇ ಇಂಗ್ಲಿಷ್ ಭಾಷೆಗೆ ಬರುವಾಗ ವ್ಹೈಟ್ ಆಗಿ ಬಿಳಿಘೇಂಡಾ ಎನ್ನಿಸಿಕೊಂಡಿದೆ. ಅದು ಬಿಳಿ ಅಲ್ಲ, ಬೂದು ಅಷ್ಟೆ. ಎಮ್ಮೆ ಕೋಣಗಳ ಹಾಗೇ ಕಪ್ಪು ಅಥವಾ ಬೂದು ಬಣ್ಣದವು.
ಕೇವಲ 20-30 ವರ್ಷಗಳ ಹಿಂದೆ ನಾಲ್ಕಾರು ಸಾವಿರದಷ್ಟಿದ್ದ ‘ಉತ್ತರದ ಬಿಳಿಘೇಂಡಾ’ಗಳ ಸಂತತಿ ಇಷ್ಟು ಕ್ಷಿಪ್ರವಾಗಿ ಕಮ್ಮಿ ಆಗಲು ಯಾವ ರೋಗರುಜಿನ ಪ್ರಕೃತಿ ವಿಕೋಪ ಕಾರಣವಲ್ಲ. ಮನುಷ್ಯನ ಮೂಢ ನಂಬಿಕೆಗಳೇ ಕಾರಣ. ಘೇಂಡಾ ಕೊಂಬನ್ನು ತೇಯ್ದು ನೆಕ್ಕಿದರೆ ಪೌರುಷ ಬರುತ್ತದೆ ಎಂಬ ನಂಬಿಕೆ ವಿಯೆಟ್ನಾಂ, ಕಾಂಬೋಡಿಯಾ, ಮತ್ತಿತರ ಪೂರ್ವ ಏಷ್ಯದ ಕೆಲವು ಪ್ರದೇಶಗಳಲ್ಲಿ ಇದೆ. ಜೊತೆಗೆ ಮಂತ್ರಮಾಟಗಳಿಗೂ ಅದನ್ನು ಬಳಸುತ್ತಾರೆ. ಮನೆಯಲ್ಲಿ ‘ಗಂಡಾಮೃಗದ ಕೋಡು’ ಇದ್ದರೆ ಅದು ಆಢ್ಯತೆ, ಪೌರುಷ, ಶ್ರೀಮಂತಿಕೆಯ ಪ್ರತೀಕವೆಂದು ಭಾವಿಸಲಾಗುತ್ತದೆ. ಘೇಂಡಾಗಳನ್ನು ಕೊಲ್ಲದಂತೆ ಕಾನೂನು ಅದೆಷ್ಟೇ ಬಿಗಿಯಾಗಿದ್ದರೂ ಕಳ್ಳ ಸಾಗಣೆದಾರರು ತಮ್ಮ ಜೀವವನ್ನಾದರೂ ಪಣಕ್ಕಿಟ್ಟು ಈ ಸಭ್ಯಪ್ರಾಣಿಗೆ ಗುಂಡಿಟ್ಟು ಕೊಂದು ಕೊಂಬನ್ನು ಕಿತ್ತು ಸಾಗಿಸುತ್ತಾರೆ. ಅದಕ್ಕೆ ಚಿನ್ನಕ್ಕಿಂತ ಹೆಚ್ಚು ಬೆಲೆ ತೆತ್ತಾದರೂ ಮೂಢರು ಖರೀದಿ ಮಾಡುತ್ತಾರೆ.
ಘೇಂಡಾ ಕೊಂಬುಗಳಲ್ಲಿ ನಿಜಕ್ಕೂ ಅಂಥ ಔಷಧೀಯ ಗುಣ ಇದೆಯೆ ಎಂದು ವಿಜ್ಞಾನಿಗಳು ಅನೇಕ ಬಾರಿ ಪರೀಕ್ಷೆ ಮಾಡಿದ್ದಾರೆ. ಅಂಥ ಏನೂ ಅವರಿಗೆ ಕಂಡುಬಂದಿಲ್ಲ. ಎತ್ತಿನ ಕೋಡು, ಎಮ್ಮೆಯ ಗೊರಸು, ನಮ್ಮ ಉಗುರು, ಕೂದಲು, ಜಿಂಕೆಯ ಕೊಂಬು ಎಲ್ಲವುಗಳಲ್ಲಿ ಕೆರಟೊನಿನ್ ಎಂಬ ನಾರಿನ ಅಂಶ ಇದ್ದಂತೇ ಘೇಂಡಾ ಕೋಡಿನಲ್ಲೂ ಅದೇ ನಿರುಪಯುಕ್ತ ಪದಾರ್ಥ ಇದೆ. ಬೇರೆ ಏನೂ ಇಲ್ಲ. ಆದರೆ ಜನರ ಮನಸ್ಸಿನಲ್ಲಿ ಬೇರೂರಿರುವ ಇಂಥ ರೂಢನಂಬಿಕೆಯನ್ನು ಕಿತ್ತು ಹಾಕುವುದು ಹೇಗೆಂಬುದು ವಿಜ್ಞಾನಕ್ಕೆ ಗೊತ್ತಿಲ್ಲ. ಭೂಮಿಯ ಮೇಲಿನ ಎರಡನೆಯ ದೈತ್ಯಜೀವಿಯ ಸಂತಾನವನ್ನೇ ಈ ನಂಬಿಕೆ ಬಲಿತೆಗೆದುಕೊಂಡಿದೆ. ಹುಲ್ಲು, ಗಿಡಗಂಟಿ, ಕಳೆಸಸ್ಯಗಳನ್ನು ತಿಂದು ಕಾಡಿನ ಜೀವಲೋಕಕ್ಕೆ ಪೋಷಕಾಂಶವನ್ನೂ ನೀಡುತ್ತ ತನ್ನ ಪಾಡಿಗೆ ಸಭ್ಯ ಬದುಕು ನಡೆಸುತ್ತಿದ್ದ ಜೀವಿಯನ್ನು ನಿರ್ವಂಶ ಮಾಡಿದೆ.
ಹಾರಲಾಗದ ಡೋಡೋ ಎಂಬ ಪಕ್ಷಿಯನ್ನು ಬಡಿಗೆಯಿಂದ ಬಡಿದೇ ಸಾಯಿಸಿ ನಿರ್ವಂಶ ಮಾಡಿದ ಮನುಷ್ಯ ಆನಂತರ ಬಂದೂಕು, ಸಿಡಿಮದ್ದು, ವಿದ್ಯುತ್ ಕರೆಂಟು, ಕೆಮಿಕಲ್ ವಿಷಗಳನ್ನು ಬಳಸಿ ಎಷ್ಟೆಲ್ಲ ಬಗೆಯ ಜೀವಜಂತುಗಳ ಸಂತಾನವನ್ನು ಮುಗಿಸಿದ್ದಾನೆ. ಕೆಲವಷ್ಟನ್ನು ತೆವಲಿಗೆ, ಇನ್ನು ಕೆಲವನ್ನು ಆಹಾರಕ್ಕೆ, ಪೈರು ರಕ್ಷಣೆಗೆ, ಮತ್ತೆ ಕೆಲವನ್ನು ಮೂಢನಂಬಿಕೆಗೆ ಬಲಿಯಾಗಿಸಿದ್ದಾನೆ. ನಮ್ಮ ಹಳ್ಳಿಗಳಲ್ಲಿ, ಅಷ್ಟೇಕೆ ನಗರಗಳಲ್ಲೂ ಅನೇಕ ಬಗೆಯ ಮೂಢನಂಬಿಕೆಗಳಿವೆ. ಊಸರವಳ್ಳಿ, ಓತಿಕ್ಯಾತಗಳನ್ನು ಒಂದು ಧರ್ಮದವರು ಕಂಡಲ್ಲಿ ಕಲ್ಲು ಬೀಸಿ ಕೊಲ್ಲುತ್ತಾರೆ. ನಿರುಪದ್ರವಿ ಹಾಸುಂಬೆ ಹಾವನ್ನು ಬಡಿದು ಕೊಲ್ಲುತ್ತಾರೆ (ಹಸುರು ಬಣ್ಣದ ಈ ವಿಷರಹಿತ ಹಾವು ಮನುಷ್ಯರ ಕಣ್ಣನ್ನು ನುಂಗಿ ಹಾಕುತ್ತದೆ ಎಂಬ ಮೂಢ ನಂಬಿಕೆ ನಮ್ಮ ಆನಂದವನದ ಅಕ್ಕಪಕ್ಕದ ಹಳ್ಳಿಗಳಲ್ಲೂ ಪ್ರಚಲಿತದಲ್ಲಿದೆ). ಗೂಬೆಗಳು ಅಪಶಕುನವೆಂದು ಭಾವಿಸಿ ಅದಕ್ಕೆ ಕಲ್ಲೆಸೆಯುತ್ತಾರೆ.
ಅಂಥವರ ನಡುವೆ ವನ್ಯರಕ್ಷಣಾ ತಜ್ಞರು ಏನೆಲ್ಲ ಶ್ರಮವಹಿಸಿ ಜೀವಸಂಕುಲಗಳ ಉಳಿವಿಗೆ ಶ್ರಮಿಸುತ್ತಿದ್ದಾರೆ. ಸಂತಸದ ಸಂಗತಿ ಏನೆಂದರೆ ಅಂಥವರ ಸಂಖ್ಯೆ ಹೆಚ್ಚುತ್ತಿದೆ. ಸರಕಾರದ ಮೇಲೆ ಒತ್ತಡ ತಂದು ಹುಲಿ, ರಣಹದ್ದು, ಇರುವೆಭಕ್ಷಕ ಪ್ಯಾಂಗೊಲಿನ್, ಮಂಗಟ್ಟೆ ಪಕ್ಷಿ, ಕೃಷ್ಣಮೃಗಗಳಂಥ ಜೀವಿಗಳ ರಕ್ಷಣೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಅದಕ್ಕೆ ಶಾಭಾಶ್ ಹೇಳೋಣ. ಪೌರುಷವೃದ್ಧಿಗಾಗಿ ಮುಗ್ಧ ಪ್ರಾಣಿಗಳ ಜೀವ ತೆಗೆಯುವ ಬದಲು ಜೀವಿಗಳನ್ನು ಉಳಿಸಲು ತೋರುವ ಪೌರುಷಕ್ಕೆ ಜೈ ಎನ್ನೋಣ. ಆದರೆ ಚಿಂತೆಯ ಸಂಗತಿ ಏನು ಗೊತ್ತೆ? ಬಿಳಿಘೇಂಡಾದಂಥ ದೈತ್ಯ ಜೀವಿಯೇ ನಿರ್ವಂಶವಾಯಿತು ಎಂದರೆ, ಯಾರಿಗೂ ಸುಲಭಕ್ಕೆ ಕಾಣದಂತೆ ಕಾಡಿನಲ್ಲಿ, ಮರಳುಗಾಡಿನಲ್ಲಿ, ಕೆರೆ-ನದಿ-ಜಲಧಿಯಲ್ಲಿ ಕೊನೆಯುಸಿರು ಹಿಡಿದು ಬದುಕುತ್ತಿರುವ ಜೀವಿಗಳು ಇನ್ನೆಷ್ಟಿವೆಯೊ? ಮನುಷ್ಯನ ಕರಾಳ ನೆರಳು ಅಲ್ಲೆಲ್ಲ ಬೀಳುತ್ತಿದೆ. ಅವುಗಳನ್ನು ಗುರುತಿಸಿ, ರಕ್ಷಿಸುವ ಬಹುದೊಡ್ಡ ಹೊಣೆ ನಮ್ಮೆಲ್ಲರ ಹೆಗಲ ಮೇಲಿದೆ.
ನಾಳಿನ ಜಗತ್ತಿಗಾಗಿ ಎಂಜಿನಿಯರ್ ಗಳನ್ನು, ಡಾಕ್ಟರ್ ಗಳನ್ನು, ವಕೀಲರನ್ನು, ಕಲಾವಿದರನ್ನು, ವಾಸ್ತುಶಿಲ್ಪಿಗಳನ್ನು, ಸಂಗೀತಗಾರರನ್ನು, ವಿಜ್ಞಾನಿಗಳನ್ನು, ಅರ್ಥತಜ್ಞರನ್ನು, ರಕ್ಷಣಾ ಅಧಿಕಾರಿಗಳನ್ನು, ರಾಜಕಾರಣಿಗಳನ್ನು, ಪೈಲಟ್ ಗಳನ್ನು, ಇನ್ಸೂರನ್ಸ್ ಪರಿಣತರನ್ನು ರೂಪಿಸುವ ಶಿಕ್ಷಣ ಸಂಸ್ಥೆಗಳು ನಿಸರ್ಗಕ್ಕೆ ಜೀವವಿಮೆ ಮಾಡಬಲ್ಲ ತಜ್ಞರನ್ನೂ ರೂಪಿಸಬೇಕಾಗಿದೆ.
ನಾಗೇಶ ಹೆಗಡೆ