ಕೆ.ಎಸ್. ನವೀನ್
ಸಂಗ್ರಹಾಲಯ ನಿರ್ವಾಹಕ, “ವಿಶ್ವರೂಪ”
ಪೂರ್ಣಪ್ರಮತಿ ಬೋಧನಾತ್ಮಕ ಸಂಗ್ರಹಾಲಯ
ಆನಂದವನ, ಮಾಗಡಿ.
ಶಾಂತಿಗೆ ಪರ್ಯಾಯ ಹೆಸರೇ ಪಾರಿವಾಳ, ಅದರಲ್ಲಿಯೂ ಬಿಳಿ ಬಣ್ಣದ ಪಾರಿವಾಳ. ಸಮಾರಂಭಗಳಲ್ಲಿ ಬಿಳಿಪಾರಿವಾಳಗಳನ್ನು ಹಾರಿಬಿಡುವುದು ಶಾಂತಿಯ ಸಂಕೇತ ಎಂದೇ ತಿಳಿಯಲಾಗಿದೆ. ಪ್ರಾಚೀನ ಕಾಲದಲ್ಲಿ ಇವು ಬಹಳ ಮುಖ್ಯವಾದ ಸಂದೇಶವಾಹಕಗಳಾಗಿಯೂ ಕೆಲಸ ಮಾಡುತ್ತಿದ್ದವು. ಗುಪ್ತ ಸಂದೇಶಗಳ ರವಾನೆಯಲ್ಲಿ ಇವುಗಳದ್ದು ಬಹಳ ವಿಶ್ವಾಸಾರ್ಹವಾದ ಪಾತ್ರವಾಗಿತ್ತು. ಸೇನೆಯಲ್ಲಿಯೂ ಇವನ್ನು ಸಂದೇಶವಾಹಕವಾಗಿ ಬಳಸಲಾಗುತ್ತಿತ್ತು. ಲಕ್ಷಾಂತರ ಜನ ಸೈನಿಕರ ಪ್ರಾಣವನ್ನು ಈ ಸಂದೇಶವಾಹಿ ಪಾರಿವಾಳಗಳು ಉಳಿಸಿವೆ. ಒಂದು ಮತ್ತು ಎರಡನೇ ಪ್ರಪಂಚ ಯುದ್ಧದಲ್ಲಿ ಹತ್ತು ಲಕ್ಷ ಪಾರಿವಾಳಗಳನ್ನು ಬಳಸಿಕೊಳ್ಳಲಾಗಿತ್ತೆಂದು ಯುದ್ಧದ ಇತಿಹಾಸಕಾರರು ದಾಖಲಿಸಿದ್ದಾರೆ. ಹಾಗೆಯೇ, ಅನೇಕ ಪಾರಿವಾಳಗಳಿಗೆ ಅವುಗಳ ಸೇವೆಗಾಗಿ ಶೌರ್ಯ ಪ್ರಶಸ್ತಿಗಳನ್ನು ನೀಡಲಾಗಿದೆ. ಭಾರತವೂ ಇದಕ್ಕೆ ಹೊರತಲ್ಲ. ಒಡಿಸ್ಸಾದಲ್ಲಿ ಪಾರಿವಾಳಗಳನ್ನು ಅಂಚೆ ಸಂದೇಶಕ್ಕಾಗಿ ಬಳಸುವುದನ್ನು ನಿಲ್ಲಿಸಿದ್ದು 2002ರಲ್ಲಿ ಎಂದರೆ ಅವುಗಳ ಸೇವೆಯ ವ್ಯಾಪ್ತಿಯನ್ನು ಊಹಿಸಬಹುದು.
ಪಾರಿವಾಳಗಳ ಉಲ್ಲೇಖ ಭಾರತೀಯ ಸಾಹಿತ್ಯದಲ್ಲಿ ಅನೇಕ ಕಡೆ ಬರುತ್ತದೆ. ಪಾರಿವಾಳಗಳ ಗುಂಪು ಒಟ್ಟಿಗೆ ಹಾರಿದರೆ ಹೋಮದ ಧೂಮ ಎದ್ದಂತೆ ಕಾಣುತ್ತದೆ ಎಂಬ ಉಲ್ಲೇಖವನ್ನು ಏರ್ ವೈಸ್ ಮಾರ್ಷಲ್ ವಿಶ್ವ ಮೋಹನ್ ತಿವಾರಿ ತಮ್ಮ ಜಾಯ್ ಆಫ್ ಬರ್ಡ್ ವಾಚಿಂಗ್ ಪುಸ್ತಕದಲ್ಲಿ ಬರೆದಿದ್ದಾರೆ. ಈ ಪಾರಿವಾಳಕ್ಕೊಂದು ವಿಶೇಷತೆಯಿದೆ ಅದೇ ಮಾನವ ಪಳಗಿಸಿದ ಮೊತ್ತಮೊದಲ ಹಕ್ಕಿ ಎಂಬುದು!
ದಕ್ಷಿಣ ಏಷ್ಯಾದಲ್ಲಿ 37 ಪ್ರಭೇಧದ ಪಾರಿವಾಳಗಳು ಕಂಡುಬರುತ್ತವೆ. ಜಗತ್ತಿನಲ್ಲಿ ಒಟ್ಟು 308 ಬಗೆಯ ಪಾರಿವಾಳಗಳನ್ನು ಗುರುತಿಸಿದ್ದಾರೆ ಭಾರತದ ಉಪಖಂಡದಲ್ಲಿ 30 ಬಗೆಯ ಪಾರಿವಾಳಗಳಿವೆ. ಕರ್ನಾಟಕದಲ್ಲಿ 14 ಪ್ರಭೇಧದ ಪಾರಿವಾಳಗಳಿವೆ. ನಮ್ಮ ಆನಂದವನದಲ್ಲಿಯೇ ನಾಲ್ಕು ಪ್ರಭೇಧದ ಪಾರಿವಾಳಗಳನ್ನು ಕಾಣಬಹುದು. (ಮುಂದಿನಬಾರಿ ಬಂದಾಗ ಗಮನಿಸಿ, ಅಥವಾ ಇದಕ್ಕಾಗಿಯೇ ಬನ್ನಿ). ಕನ್ನಡದಲ್ಲಿ ಇವಕ್ಕೆ ಅನೇಕ ಹೆಸರುಗಳಿವೆ. ಪಾರಿವಾಳ, ಚೋರೆ, ಗುಮ್ಮಾಡಲು, ಬೆಳವ, ಕಪೋತ, ಮುನಿಯಾಡಲು ಹೀಗೆ. ಈ ನಾಮ ವೈವಿಧ್ಯವನ್ನು ಸೂಕ್ತವಾಗಿ ಬೇರೆ ಬೇರೆ ಪ್ರಭೇಧದ ಪಾರಿವಾಳಗಳನ್ನು ಗುರುತಿಸಲು ಬಳಸಲಾಗುತ್ತದೆ. (ಹೀಗೆ ಹೆಸರುಗಳನ್ನು ಸ್ಥಿರೀಕರಿಸುವುದರಲ್ಲಿ ಕೆಲಸ ಮಾಡಿದ ಡಾ ಹರೀಶ್ ಭಟ್ ಇಂದು ನಮ್ಮೊಂದಿಗಿಲ್ಲ ಎಂಬುದು ತುಂಬ ನೋವಿನ ಸಂಗತಿ. ಆದರೆ, ಅವರು ಡಾ ಎಸ್ ವಿ ನರಸಿಂಹನ್ ಅವರೊಂದಿಗೆ ಸಿದ್ಧಪಡಿಸಿದ ಪಟ್ಟಿಯನ್ನು ಇಂದು ರಾಜ್ಯಾದ್ಯಂತ ಬಳಸಲಾಗುತ್ತಿದೆ. ಪೂರ್ಣಪ್ರಮತಿಯ ಎನ್ವಿಸ್ನಲ್ಲಿ ಪಟ್ಟಿ ಲಭ್ಯವಿದೆ. ವಿದ್ಯಾರ್ಥಿಗಳು ಇದರ ಪ್ರಯೋಜನಪಡೆಯಲು ಕೋರಲಾಗಿದೆ).
ಈ ಪಾರಿವಾಳಗಳ ಕತೆಗೆ ಒಂದು ದುರಂತದ ಅಧ್ಯಾಯವಿದೆ. ಅದೇ ಪ್ಯಾಸೆಂಜರ್ ಪಿಜನ್ಗಳ ನಾಮಾವಶೇಷ. ಇದೊಂದು ಅತಿನೋವಿನ ಸಂಗತಿ. ಒಂದು ಕಾಲದಲ್ಲಿ ಇವು ಆಕಾಶದಲ್ಲಿ ಹಾರುತ್ತಿದ್ದರೆ ಸೂರ್ಯ ಬೆಳಕೇ ಭೂಮಿಯನ್ನು ತಲುಪುತ್ತಿರಲಿಲ್ಲ! ಅಷ್ಟು ಸಂಖ್ಯೆಯಲ್ಲಿ ಇವು ಇದ್ದವು. ಮಾನವ ಇವನ್ನು ಬೇಟೆಯಾಡಲು ತೊಡಗಿದ. ಬೇಟೆಯಾಡುವುದು ಕಷ್ಟವೇನು ಆಗಿರಲಿಲ್ಲ. ಅವು ಹಾರುತ್ತಿರುವಾಗ ಬಂದೂಕನ್ನು ಆಕಾಶದ ಕಡೆಗೆ ತಿರುಗಿಸಿ ನಿರಂತರವಾಗಿ ಗುಂಡು ಹಾರಿಸಿದರೆ ಸಾಕಿತ್ತು. ಮಳೆ ಬಂದಂತೆ ಪಾರಿವಾಳಗಳ ಕಳೇಬರಗಳು ಭುವಿಗೆ ಬೀಳುತ್ತಿದ್ದವು. ಕೊನೆಗೂ ಇವುಗಳ ವಂಶ ನಿರ್ವಂಶವಾಯಿತು. ಇದು ನಮಗೆ ಅನೇಕ ಪಾಠಗಳನ್ನು ಕಲಿಸಬೇಕು.
ನಾವು ಸಾಮಾನ್ಯವಾಗಿ ಎಲ್ಲೆಲ್ಲೂ ಕಾಣುವ ಪಾರಿವಾಳವನ್ನು ನೀಲಿ ಬಂಡೆ ಪಾರಿವಾಳ (Blue rock pigeon, Columbia livia) ಎಂದು ಕರೆಯುತ್ತಾರೆ. ಒಂದು ಕಾಲದಲ್ಲಿ ಇದು ಕರ್ನಾಟಕದಲ್ಲಿ ಇಂದಿನಷ್ಟಿರಲಿಲ್ಲ. ಆದರೆ ಗುಬ್ಬಚ್ಚಿಗಳು ಸಾಕಷ್ಟಿತ್ತು. ಮುಂಬೈ ಜನ ನಿಮ್ಮಲ್ಲಿ ಎಷ್ಟೋಂದು ಗುಬ್ಬಚ್ಚಿಗಳಿವೆ ಎನ್ನುತ್ತಿದ್ದರು. ನಾವು ನಿಮ್ಮಲ್ಲಿ ಎಷ್ಟೋಂದು ಪಾರಿವಾಳಗಳಿವೆ ಎಂದು ಆಶ್ಚರ್ಯವನ್ನು ಸೂಚಿಸುತ್ತಿದ್ದೆವು. ಆದರೆ ಇಂದು ಈ ಪಾರಿವಾಳಗಳ ಸಂಖ್ಯೆ ತೀವ್ರವಾಗಿ ಹೆಚ್ಚಿದೆ. ಕೇವಲ ಭಾರತದಲ್ಲಿ ಅಲ್ಲ; ಜಗತ್ತಿನಾದ್ಯಂತ. ಇದರಿಂದ ಅನೇಕ ತೊಂದರೆಗಳು ಉಂಟಾಗುತ್ತಿವೆ. ಇವನ್ನು ಹಾರುವ ಇಲಿಗಳು (ರೆಕ್ಕೆಯಿರುವ ಇಲಿಗಳು) ಎಂದೇ ಕರೆಯಲಾಗುತ್ತಿದೆ. ಅಂದರೆ ಮೂಷಿಕಗಳು ಹೇಗೆ ನಾಮ್ಮ ದವಸ ಧಾನ್ಯವನ್ನು ನಾಶ ಮಾಡುತ್ತವೆಯೋ ಹಾಗೆ ಇವುಗಳಿಂದಲೂ ತೊಂದರೆ ಎಂದರ್ಥ.
ಈ ಪಾರಿವಾಳಗಳ ಸಂಖ್ಯೆ ಹೀಗೇಕೆ ಮಿತಿಮೀರಿ ಬೆಳೆಯಿತು ಎಂಬುದನ್ನು ಪರಿಶೀಲಿಸಿದಾಗ ದೊರೆತ ಉತ್ತರ: ಜನರು ಇವುಗಳಿಗೆ ಅತಿಹೆಚ್ಚು ಆಹಾರ ಹಾಕುತ್ತಿರುವುದು ಎಂಬುದು! ಇದು ಕೇವಲ ಬೆಂಗಳೂರಿನಲ್ಲಿ ಮಾತ್ರವಲ್ಲ ಜಗತ್ತಿನಾದ್ಯಂತ ಇದೇ ಸಮಸ್ಯೆ. ವಾರ್ಷಿಕ ಹತ್ತಾರು ಟನ್ ಆಹಾರ ಧಾನ್ಯಗಳನ್ನು ಪಾರಿವಾಳಗಳಿಗಾಗಿ ಹಾಕುವ ಸಾವಿರಾರು ಜನರಿದ್ದಾರೆ! ಬೆಂಗಳೂರಿನಲ್ಲಿಯೇ ಪಾರಿವಾಳಗಳಿಗೆ ಟನ್ನುಗಟ್ಟಲೆ ಕಾಳುಹಾಕುವ ಹತ್ತಾರು ಸಂಸ್ಥೆಗಳಿವೆ!
ಈಗ ಇದರಿಂದ ಉಂಟಾಗುವ ತೊಂದರೆಗಳನ್ನು ನೋಡೋಣ. ಯಥೇಚ್ಛ ಆಹಾರ ಲಭ್ಯತೆಯಿಂದಾಗಿ ಹಕ್ಕಿಗಳು ಅತಿಹೆಚ್ಚು ಪ್ರಮಾಣದಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ಇದು ಎಲ್ಲ ಹಕ್ಕಿಗಳ ಲಕ್ಷಣ. ಆಹಾರದ ಕೊರತೆಯಿದ್ದಲ್ಲಿ ಸಂತಾನೋತ್ಪತ್ತಿ ಕಡಿಮೆಯಾಗುತ್ತದೆ. ಈಗ ಪಾರಿವಾಳಗಳಿಗೆ ಯಥೇಚ್ಛ ಆಹಾರ ದೊರೆಯುವುದರಿಂದ ಇವುಗಳ ಸಂತಾನೋತ್ಪತ್ತಿಯೂ ಹೆಚ್ಚಾಗುತ್ತದೆ. ಇವುಗಳ ದೇಹದ ಮೇಲೆ ಬೆಳೆಯುವ ಉಣ್ಣಿಗಳಿಂದಾಗಿ ರೋಗಗಳು ಹರಡುತ್ತವೆ. ಇದಕ್ಕೆ ಮೊದಲ ಬಲಿಯಾಗುವುದೇ ಪಾರಿವಾಳಗಳು. ರೋಗ ಈ ಹಕ್ಕಿಗಳಿಂದ ಇತರ ಹಕ್ಕಿಗಳಿಗೆ ಕೊನೆಗೆ ಮಾನವನಿಗೂ ಹರಡುತ್ತದೆ. ಶ್ವಾಶಕೋಶಕ್ಕೆ ತಗಲುವ ವಿಶೇಷ ಸೋಂಕುರೋಗ ಸಿಟ್ಟೊಕೋಸಿಸ್ನ ನೂರಕ್ಕು ಹೆಚ್ಚು ಪ್ರಕರಣಗಳು ಪ್ರತಿವರ್ಷ ನ್ಯೂಸೌತ್ವೇಲ್ಸ್ನಲ್ಲಿ ಪತ್ತೆಯಾಗುತ್ತದೆ ಎಂದು ಅಲ್ಲಿನ ತಜ್ಞರು ಕಂಡುಕೊಂಡಿದ್ದಾರೆ. ಇಂತಹವು ಜಗತ್ತಿನ ಅನೇಕ ಕಡೆ ಆರಂಭವಾಗಿದೆ. ರೋಗಾಣುಗಳು ಹಕ್ಕಿಗಳ ದೇಹದ ಸ್ರವಿಕೆ ಮತ್ತು ಮಲದಿಂದ ಹರಡುತ್ತದೆ. ಮತ್ತೊಂದು ವೈಧ್ಯರ ತಂಡ ಪಾರಿವಾಳಗಳ ಪುಕ್ಕ ಮತ್ತು ಮಲದಲ್ಲಿರುವ ಪ್ರೊಟೀನುಗಳು ಅಲರ್ಜಿ ಉಂಟು ಮಾಡುವುದನ್ನು ಪತ್ತೆ ಹಚ್ಚಿದ್ದಾರೆ. ಈ ಅಲರ್ಜಿಯು ಮಾನವರಲ್ಲಿ ಉಬ್ಬಸವನ್ನು ಉಂಟುಮಾಡುತ್ತದೆ. ಎದೇಹದ ರೋಗತಡೆಯುವ ಶಕ್ತಿ ಕಡಿಮೆಯಿರುವವರಲ್ಲಿ ಒಂದು ವಿಶೇಷ ಬಗೆಯ ಸೋಂಕನ್ನು ಪಾರಿವಾಳಗಳು ಉಂಟು ಮಾಡುತ್ತವೆ. ಪಾರಿವಾಳಗಳ ಮಲದಲ್ಲಿನ ರಾಸಾಯನಿಕ ಅಂಶಗಳಿಂದ ಪ್ರತಿಮೆಗಳು ಕಳೆಗುಂದುವುದು ಮಾತ್ರವಲ್ಲ ನಿಧಾನವಾಗಿ ದುರ್ಬಲವೂ ಆಗುತ್ತವೆ.
ಮೇಲೆ ಹೇಳಿದವು ನೇರ ಪರಿಣಾಮವಾದರೆ, ಪರೋಕ್ಷವಾದ ಅನೇಕ ದುಷ್ಪರಿಣಾಮಗಳು ಪಾರಿವಾಳಗಳಿಂದಾಗಿ ಉಂಟಾಗುತ್ತವೆ. ಇವುಗಳಿಗಾಗಿ ಹಾಕಲಾಗುವ ಅಗಾಧ ಪ್ರಮಾಣದ ಆಹಾರದಲ್ಲಿ ಇರುವೆ, ಕಾಗೆಗಳು ಮತ್ತು ಮೂಷಿಕಗಳು ಬಹುದೊಡ್ಡ ಪಾಲನ್ನು ಪಡೆಯುತ್ತವೆ ಮತ್ತು ಸಂಖ್ಯೆಯನ್ನು ತೀವ್ರವಾಗಿ ಹೆಚ್ಚಿಸಿಕೊಳ್ಳುತ್ತವೆ. ಹೀಗೆ ಹೆಚ್ಚಾದ ಇರುವೆ ಮತ್ತು ಕಾಗೆಗಳು ಇತರ ಹಕ್ಕಿಗಳ ಮೊಟ್ಟೆ, ಮರಿಗಳನ್ನು ನಾಶ ಮಾಡುತ್ತವೆ. ಇದರಿಂದಾಗಿ ನಗರದಲ್ಲಿನ ಆರು ಹಕ್ಕಿ ಪ್ರಭೇಧಗಳು ತೊಂದರೆಗೀಡಾಗಿರುವುದನ್ನು ಕಂಡುಕೊಳ್ಳಲಾಗಿದೆ. ಅನೇಕ ಬಾರಿ ಗೂಡಿಗೆ ಇರುವೆಗಳು ನುಗ್ಗಿದಾಗ ಪೋಷಕ ಹಕ್ಕಿಗಳು ಗೂಡನ್ನು ತ್ಯಜಿಸುವುದು ಸಾಮಾನ್ಯ. ಕಾವು/ಪೋಷಣೆಯಿಲ್ಲದ ಮೊಟ್ಟೆ ಮರಿಗಳು ನಾಶವಾಗುತ್ತವೆ. ಕಾಗೆಗಳು ಇತರ ಹಕ್ಕಿಗಳ ಮೊಟ್ಟೆ ಮರಿಗಳನ್ನು ತಿನ್ನುವುದು ತಿಳಿದಿರುವ ವಿಷಯವೇ. ಇದರಿಂದಾಗಿಯೂ ಇತರ ಪ್ರಭೇಧಗಳ ಹಕ್ಕಿಗಳ ಸಂಖ್ಯೆ ಕಡಿಮೆಯಾಗಿ ಪರಿಸರದ ಅಸಮತೋಲನಕ್ಕೆ ಕಾರಣವಾಗುತ್ತದೆ. ಹಾಗೆಯೇ, ಮೂಷಿಕಗಳು ಬಿಲಗಳನ್ನು ತೋಡಿ ಇಡೀ ಪ್ರದೇಶದಲ್ಲಿ ಬಿಲಗಳ ಒಂದು ದೊಡ್ಡ ಜಾಲವನ್ನೇ ನಿರ್ಮಿಸುತ್ತವೆ. ಬಿಲಗಳಿಂದಾಗಿ ನೆಲ ಸಡಿಲವಾಗಿ ಮರಗಳಿಗೆ ಆಸರೆ ತಪ್ಪಿ ಮರಗಳು ಉರುಳುತ್ತವೆ. ಗಿಡಮರಗಳಿಗೆ ಪೋಷಕಾಂಶಗಳ ತಲುಪುವಿಕೆಯೂ ತೊಂದರೆಗೀಡಾಗುತ್ತದೆ. ಆನೇಕ ಮೂಷಿಕಗಳು ಬಿಲದ ಬಳಿಯ ಮರಗಳ ಬೇರನ್ನು ಜಗಿಯುವುದರಿಂದಲೂ ಮರಗಳು ದುರ್ಬಲವಾಗುತ್ತದೆ. ಈ ಎಲ್ಲ ದುಷ್ಪರಿಣಾಮಗಳನ್ನು ಬೆಂಗಳೂರಿನ ಕಬ್ಬನ್ಪಾರ್ಕಿನಲ್ಲಿ ಅಧ್ಯಯನ ಮಾಡಿ ತಿಳಿಯಲಾಗಿದೆ. ಇದು ಜಾಗತಿಕ ಪ್ರಕ್ರಿಯೆ ಸಹ.
ಪರಿಹಾರ ಏನು?
ಪಾರಿವಾಳಗಳ ಸಂಖ್ಯೆಯನ್ನು ನಿಯಂತ್ರಿಸುವುದೇ ಪರಿಹಾರ. ಆದರೆ, ಹೇಗೆಂಬುದೇ ಪ್ರಶ್ನೆ! ವನ್ಯಜೀವಿ ವಿಜ್ಞಾನದಲ್ಲಿ ತೊಂದರೆ ಮಾಡುವ ಪ್ರಭೇಧದ ಪ್ರಾಣಿಗಳನ್ನು ಕೊಲ್ಲುವುದು ಸಂರಕ್ಷಣೆಯ ಒಂದು ವಿಧಾನವೇ. ಆದರೆ, ಇಲ್ಲಿ ಅದನ್ನು ಬಳಸಲಾಗದು. ಪಾರಿವಾಳಗಳನ್ನು ಕೊಲ್ಲುವುದರಿಂದ ಅವುಗಳ ಸಂಖ್ಯೆಯನ್ನು ನಿಯಂತ್ರಿಸಲಾಗುವುದಿಲ್ಲ. ಇದರ ಬದಲಾಗಿ ಇವುಗಳಿಗೆ ಮಾನವ ಆಹಾರ ಹಾಕುವುದನ್ನು ನಿಲ್ಲಿಸಬೇಕು. ಪಾರಿವಾಳಗಳು ತಮ್ಮ ಆಹಾರವನ್ನು ತಾವು ಹುಡುಕಿಕೊಳ್ಳಬಲ್ಲವು. ಆದ್ದರಿಂದ ಜನ ಆಹಾರ ಹಾಕುವುದನ್ನು ನಿಲ್ಲಿಸಿದಲ್ಲಿ, ಇವುಗಳಿಗೆ ಪುಕ್ಕಟೆ ದೊರೆಯುವ ಆಹಾರದ ಸರಬರಾಜು ತಪ್ಪಿ ಇವುಗಳ ಸಂತಾನೋತ್ಪತ್ತಿ ತಂತಾನೆ ಕಡಿಮೆಯಾಗುತ್ತದೆ. ಪಿಡುಗೂ ತಪ್ಪುತ್ತದೆ. ಇತರ ಹಕ್ಕಿಗಳ ಸಂಖ್ಯೆ ಚೇತರಿಕೆಯಾಗುತ್ತದೆ.
ಕೆಲವು ದೇಶಗಳಲ್ಲಿ ಪಾರಿವಾಳಗಳಿಗೆ ಕಾಳು ಹಾಕುವುದನ್ನು ಸಾಮಾಜಿಕ ಅಸಭ್ಯ ನಡವಳಿಕೆಗಳ ಪಟ್ಟಿಯಲ್ಲಿ ಸೇರಿಸಲಾಗಿದ್ದು, ಆ ಅಪರಾಧಕ್ಕೆ ದೊಡ್ಡ ದಂಡ ಅಥವಾ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ. ಬೆಂಗಳೂರಿನಲ್ಲಿಯೂ ರಾಜ್ಯ ಉಚ್ಚ ನ್ಯಾಯಾಲಯದ ಒಳಗೆ ಪಾರಿವಾಳಗಳಿಗೆ ಕಾಳುಗಳನ್ನು ಹಾಕುವುದನ್ನು ನಿಷೇಧಿಸಲಾಗಿದೆ.
ನಮ್ಮ ಸುಂದರ ಪರಿಸರ, ಇತರ ಎಲ್ಲ ಹಕ್ಕಿಗಳು ಉಳಿಯಬೇಕೆಂದರೆ ನಾವು ಪಾರಿವಾಳಗಳಿಗೆ ಆಹಾರ ಹಾಕುವುದನ್ನು ನಿಲ್ಲಿಸಬೇಕು. ಹಾಗೆ ಮಾಡೋಣ, ಕಾಳು ಹಾಕುವವರಿಗೆ ಇದನ್ನು ವಿವರಿಸಿ ದಯವಿಟ್ಟು ಹಾಕಬೇಡಿ ಎಂದು ವಿನಂತಿ ಮಾಡಿಕೊಳ್ಳೋಣ.
[ಈ ಲೇಖನಕ್ಕೆ ಆಧಾರಗಳಲ್ಲೊಂದು ನಮ್ಮವರೆ ಆದ ಡಾ ಎ ಎನ್ ಎಲ್ಲಪ್ಪ ರೆಡ್ಡಿಯವರ ಅಧ್ಯಯನ. ಆ ಅಧ್ಯಯನದಲ್ಲಿ ಭಾಗಿಯಾಗಿದ್ದವರು ದಿ|| ಡಾ ಹರೀಶ್ ಭಟ್. NLFBW vol 52(6), 2012]