Retired Forester
ಡಾ.ಹರೀಶ್ ಭಟ್ಟರು ಒಬ್ಬ ಯುವ ವಿಜ್ಞಾನಿ. ಇವರು ಬೇರೆ ವಿಜ್ಞಾನಿಗಳ ಹಾಗೆ ಜೀವಿ-ಜೀವಿಗಳನ್ನು ನೋಡಿದವರಲ್ಲ. ಪಕ್ಷಿ ಅಧ್ಯಯನ ಮಾಡಿದರು. ಅಲ್ಲದೆ ಪಕ್ಷಿ-ಮರ-ಕೀಟ-ಹಣ್ಣು-ಹೂವುಗಳ ನಡುವಿನ ಕೊಂಡಿ, ಸಂಬಂಧಗಳನ್ನು ಗುರುತಿಸಿದರು. ಇವೆಲ್ಲ ಒಂದನ್ನೊಂದು ಬಿಟ್ಟು ಬಾಳಲಾರದ ಸಂಬಂಧಿಕರು. ಕೆಲವು ಪಕ್ಷಿಗಳು ಮಕರಂಧವನ್ನು, ಕೆಲವು ಅಕ್ಕಿ ಮುಂತಾದ ಧಾನ್ಯವನ್ನು, ಕೆಲವು ಕೀಟವನ್ನು ಅವಲಂಬಿಸಿ ಬಾಳುವಂತಹವು. ಆದರೆ ಅವುಗಳಿಗೆ ಒಂದು ವಿಶೇಷ ಪ್ರಜ್ಞೆ ಇದೆ. ಪಕ್ಷಿಗಳು ಹೆಚ್ಚು ಕಾಲ ತಮ್ಮ ಮರಿಗಳನ್ನು ಸಾಕುವಂತಿಲ್ಲ. ಸ್ವತಂತ್ರವಾಗಿ ಬಾಳಲು ಬಿಡಬೇಕು. ರೆಕ್ಕೆ ಬಲಿಯಬೇಕು, ಕೊಕ್ಕು ಬಲಿಯಬೇಕು, ಕಾಲು ಸುಭದ್ರವಾಗಬೇಕು. ಇಷ್ಟೆಲ್ಲಾ ಆದ ನಂತರ ಗೂಡಿನಲ್ಲಿ ಇಟ್ಟುಕೊಳ್ಳುವುದಿಲ್ಲ. ಆದರೆ ಇವೆಲ್ಲಾ ಬೆಳೆಯಲು ಪ್ರಮುಖವಾಗಿ ಡಿ.ಎನ್.ಎ ಗೆ ಪ್ರೋಟೀನ್ ನ ಅಗತ್ಯ ಹೆಚ್ಚು ಇರುತ್ತದೆ. ಒಂದೊಂದು ಪಕ್ಷಿಯಲ್ಲೂ ಒಂದೊಂದು ವಿಶಿಷ್ಟ ಬೆಳವಣಿಗೆಯ ಕ್ರಮ ಇರುತ್ತದೆ. ಈ ಗುಟ್ಟನ್ನು ಸ್ವಲ್ಪ ಮಟ್ಟಿಗೆ ಹರೀಶ್ ಭಟ್ ಅವರು ತಿಳಿದಿದ್ದರು. ನನ್ನ ಬಳಿ ಚರ್ಚೆ ಮಾಡುತ್ತಿದ್ದರು. ಆಳವಾಗಿ ಅಧ್ಯಯನ ಮಾಡುತ್ತಿದ್ದರು. ಅಷ್ಟೆ ಅಲ್ಲ ಅದನ್ನು ಮಕ್ಕಳಿಗೆ, ಇತರರಲ್ಲಿ ಹಂಚಿಕೊಳ್ಳುತ್ತಿದ್ದರು.
ದೊಡ್ಡ ದೊಡ್ಡ ಹುದ್ದೆ, ವಿಜ್ಞಾನಿಗಳೊಡನೆ ಸಂಪರ್ಕ ಮಾಡಿದ ನಂತರ ಮಕ್ಕಳಿಗೆ ಪಾಠ ಮಾಡುವುದೆಂದರೆ ಹೆಚ್ಚು ಮಂದಿ ಮುಂದುವರೆಯುವುದಿಲ್ಲ. ಆದರೆ ಹರೀಶ್ ಭಟ್ ಅವರು ಮಕ್ಕಳಿಗೆ ತಾವು ಅಧ್ಯಯನ ಮಾಡಿದ ವಿಷಯಗಳನ್ನು ಕಲಿಸುತ್ತಿದ್ದರು. ಮಕ್ಕಳ ಮಟ್ಟಕ್ಕೆ ಇಳಿದು ಅರ್ಥಮಾಡಿಸುವುದು ಸುಲಭದ ವಿಷಯವಲ್ಲ. ಇದರಲ್ಲೊಂದು ಸೊಗಸಿದೆ. ತುಂಬಾ ಅನುಭವಸ್ಥರು, ಚೆನ್ನಾಗಿ ತಿಳಿದವರು ಚಿಕ್ಕ ಮಕ್ಕಳಿಗೆ ವಿಷಯವನ್ನು ತಲುಪಿಸುವಾಗ ಸರಳವಾಗಿ ಕಲಿಸುವಾಗ ಒಂದು ವಿಶೇಷತೆ, ಸೊಗಸು ಇರುತ್ತದೆ. ಅದನ್ನು ನಾನು ಹರೀಷ್ ಭಟ್ ಅವರಲ್ಲಿ ಕಂಡಿದ್ದೇನೆ. ಇದರಿಂದ ಮುಂದಿನ ಪೀಳಿಗೆಗೆ ವಿಜ್ಞಾನದ ಬಗ್ಗೆ ಆಸಕ್ತಿ, ವಿಜ್ಞಾನಿಗಳ ಬಗ್ಗೆ ಗೌರವ, ತಾವೂ ಅಧ್ಯಯನ ಮಾಡುವ ಹಂಬಲ ಎಳೆಯ ವಯಸ್ಸಿನಲ್ಲೇ ಬಿತ್ತಿದಂತಾಗುವುದು. ಆದರೆ ದುರದೃಷ್ಟವಶಾತ್ ಅವರಿಂದು ನಮ್ಮೊಂದಿಗಿಲ್ಲ. ಸಮಾಜಕ್ಕೆ ಇಂತಹವರ ಅಗತ್ಯವಿದೆ. ನಾನು ಕಂಡ ಅಪರೂಪದ ಯುವ ವಿಜ್ಞಾನಿ ಇವರು.