ಧಾರ್ಮಿಕ ಹಾಗೂ ಸುಸಂಸ್ಕೃತ ಜೀವನಕ್ಕಾಗಿ, ಶಾಂತಿ ಸಮೃದ್ಧಿಯ ಬಾಳ್ವೆಗಾಗಿ ನಾವು ನಮ್ಮ ಮಕ್ಕಳ ಜೀವನವನ್ನು ರೂಪಿಸಬೇಕಾಗಿದೆ. ಧರ್ಮದ ನೆಲೆಯಲ್ಲಿ ಶಿಕ್ಷಣ ಸಿಕ್ಕಾಗ ವಿದ್ಯಾರ್ಥಿ ಉತ್ತಮ ಚಿಂತಕನಾಗುತ್ತಾನೆ. ಶಿಕ್ಷಣದ ಮುಖೇನ ಸಮೃದ್ಧ ಜೀವನಕ್ಕೆ ಪೂರಕವಾದ ನಂಬಿಕೆಗಳನ್ನು ಬಲಪಡಿಸಿಕೊಳ್ಳುತ್ತಾನೆ. ಆದರೆ -“ಪ್ರಾಚೀನ ಋಷಿಮುನಿಗಳ ಚಿಂತನೆಯೆಲ್ಲವೂ ಅಪ್ರಬುದ್ಧ, ನಮ್ಮ ಹಿರಿಯರೆಲ್ಲಾ ಮೂಢ ನಂಬಿಕೆಗಳ ದಾಸರು” ಎನ್ನುವ ಸ್ಥಿತಿ ಇಂದು ನಿರ್ಮಾಣವಾಗಿದೆ. ಆಂಗ್ಲ ಮಾಧ್ಯಮದ ಶಿಕ್ಷಣ ಪದ್ಧತಿಯನ್ನು ಒಪ್ಪಿಕೊಳ್ಳಬೇಕಾದ ಸಾಮಾಜಿಕ, ಕೌಟಂಬಿಕ ಒತ್ತಡ ಎಲ್ಲೆಲ್ಲೂ ಹರಡಿದೆ. ಜ್ಞಾನವೆನ್ನುವುದು ಸ್ಪರ್ಧೆಗೆ ಮೀಸಲಾಗಿದೆ. ಮಕ್ಕಳು ಕಲಿಕೆಯ ಆತುರದಲ್ಲಿ ಜೀವನದ ಮೌಲ್ಯಗಳ ಚಿಂತನೆಗಳಿಗಿಂತಲೂ ತೋರಿಕೆಯ ಬದುಕಿನ ದಾಸರಾಗುತ್ತಿದ್ದಾರೆ. ನಾನು ಪೂರ್ಣಪ್ರಮತಿಗೆ ಈ ವರ್ಷವಷ್ಟೇ ಸೇರಿಕೊಂಡೆ. ಇಲ್ಲಿನ ನನ್ನ ಕೆಲವು ಅನಿಸಿಕೆಗಳನ್ನು ಹೇಳಬಯಸುತ್ತೇನೆ.
ನಾನು ನನ್ನ ಅಧ್ಯಾಪಕ ವೃತ್ತಿಯಲ್ಲಿ ಅನೇಕ ಶಾಲೆ, ಕಾಲೇಜುಗಳಲ್ಲಿ, ಅನೇಕ ರೀತಿಯ ಬೋಧನಾಕ್ರಮವನ್ನು ಕಂಡಿದ್ದೇನೆ. ಎಲ್ಲಾ ಬೋಧನಾಕ್ರಮಗಳು ಮನುಷ್ಯನ ಮೂಲ ಚಿಂತನೆಗೆ ಎಲ್ಲಿಯೂ ಅವಕಾಶವಿಲ್ಲದಂತೆ ಸಾಮಾಜಿಕ ಬದುಕಿಗೆ ಮಾತ್ರ ಸೀಮಿತವಾಗಿಯೇ ಇದೆ. ಮಕ್ಕಳಲ್ಲಿ ಏಳುವ ಸಾವಿರಾರು ಪ್ರಶ್ನೆಗಳಿಗೆ ಪ್ರತಿ ಹಂತದಲ್ಲೂ ಗಮನಿಸುವ ಹಲವಾರು ಗೊಂದಲಗಳಿಗೆ ಉತ್ತರ ಸಿಗದೆ ಮಕ್ಕಳಿಗೆ ಪ್ರಶ್ನೆಗಳು ಪ್ರಶ್ನೆಯಾಗೇ ಉಳಿದುಹೋಗುತ್ತಿವೆ. ಮಕ್ಕಳು ಹಿಂದಿನವರ ಆಚಾರವಿಚಾರಗಳು ಆಧಾರವಿಲ್ಲದ್ದು ಎನ್ನುವ ನಿಟ್ಟಿನಲ್ಲಿ ಯೋಚಿಸುವಂತಾಗುತ್ತಿದೆ. ಆಧುನಿಕ ಪಠ್ಯ ಕ್ರಮದಲ್ಲಿ ತಮ್ಮ ಮಾತೃಭಾಷೆಯನ್ನು ಪಕ್ಕಕ್ಕಿಟ್ಟು ಆಂಗ್ಲಭಾಷೆಯನ್ನು ಕಷ್ಟಪಟ್ಟಾದರೂ ಕಲಿಯಲೇಬೇಕೆಂಬ ಒತ್ತಡದಲ್ಲಿ ಮಕ್ಕಳ ಮನೋವಿಕಾಸದಲ್ಲಿ ಮುಕ್ತತೆ ಮರೆಯಾಗುತ್ತಿದೆ. ಒಂದು ರೀತಿಯ ಬಂಧನವೆಂಬಂತೆ ಕಲಿಕೆಯ ಬೆಳವಣಿಗೆಯಾಗುತ್ತಿದೆ. ಉದ್ಯೋಗಕ್ಕಾಗಿ ವಿದ್ಯೆ ಎಂಬುದು ಎಲ್ಲೆಡೆಯಲ್ಲೂ ರುಜುವಾಗುತ್ತಿದೆ. ಜ್ಞಾನ, ವಿದ್ಯೆ -ಇವುಗಳ ನಿಜವಾದ ಅರ್ಥವೇ ಅಳಿಸಿಹೋಗುತ್ತಿದೆ. ಮನಸ್ಸಿನಲ್ಲಿ ಇಂಥ ನೂರಾರು ಆಲೋಚನೆಗಳು ವಿದ್ಯಾವಂತರನ್ನು ಕಾಡಿದರೂ ಪ್ರವಾಹ ಬಂದ ದಿಕ್ಕಿಗೇ ನೀರು ನುಗ್ಗುವಂತೆ ಇಂದಿನ ವಿದ್ಯಾವಂತ ಯುವ ಪೀಳಿಗೆಯೂ ಅತ್ತಕಡೆ ನುಗ್ಗುತ್ತಿದೆ. ಇಂದಿನ ದಿನಗಳಲ್ಲಿ ಶಾಲೆ ಎಂಬುದು ಒಂದು ಉತ್ತಮ ವ್ಯಾಪಾರದ ಅಂಗವಾಗಿ ದಿಢೀರನೆ ಹಣ ಗಳಿಸಬಹುದಂಥ ಮಾರ್ಗವಾಗಿದೆ. ಹಣವಿದ್ದವರೆಲ್ಲಾ ವಿದ್ಯಾಸಂಸ್ಥೆಗಳನ್ನು ತೆರೆಯುತ್ತಿದ್ದಾರೆ. ತಮಗಿಷ್ಟ ಬಂದ ರೀತಿಯಲ್ಲಿ ವ್ಯಾಪಾರದ ಕುಶಲತೆಗಳನ್ನು ಅದರಲ್ಲಿ ಅಳವಡಿಸಿಕೊಂಡು ಮಕ್ಕಳನ್ನು ದಾಳವಾಗಿ ಬಳಸಿಕೊಂಡು ಹಣ ಸಂಪಾದನೆಯ ಹುಚ್ಚು ಭರದಲ್ಲಿ ಸಾಗುತ್ತಿದ್ದಾರೆ. ಇದರಿಂದ ನಮ್ಮ ದೇಶದ ಮುಂದಿನ ಜನಾಂಗದ ಪರಿಸ್ಥಿತಿ ಎಲ್ಲಿ ಹೋಗಿ ಮುಟ್ಟುತ್ತದೆ ಎನ್ನುವ ಕಿಂಚಿತ್ತೂ ಪ್ರಜ್ಞೆ ಇಲ್ಲದಂತೆ ನಾಯಿಕೊಡೆಗಳಂತೆ ಎಲ್ಲೆಲ್ಲೂ ಶಾಲೆಗಳು ತಲೆ ಎತ್ತುತ್ತಿದೆ.
ಇಂಥಹ ಒಂದು ವಿಷಮ ಪರಿಸ್ಥಿತಿಯಲ್ಲಿ ಚಿಂತನ ಶೀಲ ಕೆಲವು ಯುವಕರು ಒಂದುಗೂಡಿ ಮಕ್ಕಳ ಸರ್ವತೋಮುಖ ಬೆಳವಣಿಗೆಯತ್ತ ಸಾಗಲು ಚಿಂತನೆ ನಡೆಸಿದ್ದಾರೆ. ಅಂತಹ ಚಿಂತನಶೀಲರ ಸಮ್ಮಿಲನವೇ ಪೂರ್ಣಪ್ರಮತಿ. ಇದು ಪೂರ್ವಜರ ಪರಂಪರೆಯ ಬೀಜಗಳನ್ನು ಮಕ್ಕಳಲ್ಲಿ ಬಿತ್ತುವ ಸಾಹಸದ ಕಾರ್ಯ ಕೈಗೊಂಡಿದೆ. ನಮ್ಮ ಮಹಾಗ್ರಂಥಗಳಾದ ರಾಮಾಯಣ, ಮಹಾಭಾರತ, ಭಾಗವತಗಳ ಮುಖೇನ ಪಾಠ ಮಾಡುವ, ಜ್ಞಾನಾರ್ಜನೆಗೆ ಸಹಾಯಕವಾಗುವ ವಿವಿಧ ನೂತನ ಶೈಲಿಗಳನ್ನು ಬೋಧನಾಕ್ರಮದಲ್ಲಿ ಅಳವಡಿಸಿ ಯೋಜಿಸಿದೆ. ಮೂಲ ಧಾರ್ಮಿಕ ತತ್ವಗಳು ಮಹಾಗ್ರಂಥಗಳಲ್ಲಿ ಸಂಸ್ಕೃತದಲ್ಲಿರುವುದರಿಂದ ಮಕ್ಕಳು ಮೂಲದಿಂದಲೇ ಅದರ ಜ್ಞಾನವನ್ನು ಪಡೆಯಬೇಕೆಂಬ ಹಂಬಲ ಹಾಗೂ ಆ ನಿಟ್ಟಿನಲ್ಲಿ ಮಕ್ಕಳಿಗೆ ಮೂರು-ನಾಲ್ಕು ವಯಸ್ಸಿನಿಂದಲೇ ಸಂಸ್ಕೃತ ಪಾಠದ ಅಧ್ಯಯನ ಪ್ರಾರಂಭಿಸಿದೆ. ಉನ್ನತ ಮಟ್ಟದ ಹುದ್ದೆಗಳಲ್ಲಿದ್ದರೂ ತತ್ವಜ್ಞಾನಿಗಳ ಒಡನಾಟದಲ್ಲಿ ನಿರಂತರವಾಗಿ ಸಮಾಲೋಚಿಸಿ ಈ ಯುವಕರ ತಂಡ ಮಕ್ಕಳ ಮುಂದಿನ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಲು ಪಾರಂಪರಿಕ ಹಾಗೂ ಆಧುನಿಕ ಸಂಘಟಿತ ವಿದ್ಯಾ ಪಠ್ಯಕ್ರಮದ ಅಳವಡಿಕೆಗೆ ಹೆಚ್ಚಿನ ಆದ್ಯತೆ ನೀಡಿದೆ. ಪೂರ್ಣಪ್ರಮತಿ ತಮ್ಮ ಪೂರ್ವಜರ ಗುರುಕುಲದ ಪದ್ಧತಿಯಲ್ಲಿನ ಅನೇಕ ವಿಧಿವಿಧಾನಗಳಲ್ಲಿ ಸತ್ಯತೆಯ ಶೋಧ ನಡೆಸಿ ಅದರ ತಿರುಳನ್ನು ವಿದ್ಯಾರ್ಥಿಗಳಿಗೆ ತಿಳಿಸಲು ಹಾಗೂ ಬೆಳೆಸಲು ಶ್ರಮವಹಿಸಿದೆ. ಈ ಸಂಸ್ಥೆಯ ಎಲ್ಲಾ ಚಿಂತಕರ ದೃಷ್ಟಿಯೂ ಪರಂಪರೆಯ ಬೀಜದ ಸಂರಕ್ಷಣೆಯ ಕಡೆಗೆ ನೆಟ್ಟಿರುವುದರಿಂದ ಎಲ್ಲರ ಗುರಿಯೂ ಒಂದೇ ಆಗಿ ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ವಿಷಯಗಳಲ್ಲಿ ಸಂಬಂಧಿಸಿದ ಪರಿಣಿತರ ಸಲಹೆ ಪಡೆದು ಅದನ್ನು ಕಾರ್ಯರೂಪಕ್ಕೆ ತರುವುದು ಈ ಶಾಲೆಯ ವಿಶೇಷತೆಯಾಗಿದೆ.
ಇನ್ನು ಇಲ್ಲಿನ ವಿದ್ಯಾರ್ಥಿಗಳ ಕಲಿಕೆಯ ಕ್ರಮದ ಬಗ್ಗೆ ತಿಳಿಸಲು ಹೋದರೆ, ಇಲ್ಲಿ ಮಕ್ಕಳು ತಮ್ಮ ಮನೆಯಲ್ಲಿ ತಮ್ಮೊಂದಿಗಿನವರೊಂದಿಗೆ ಸ್ವಚ್ಛಂದ ವಾತಾವರಣದಲ್ಲಿ ಸುಂದರವಾಗಿ ಅರಳುತ್ತಿರುವ ಪುಷ್ಪಗಳೆಂದೆನಿಸುತ್ತಾರೆ. ಮನಸ್ಸಿನಲ್ಲಿ ಹೊಳೆವ ವಿಚಾರಗಳನ್ನು ನಿರ್ಭೀತಿಯಿಂದ ಅಕ್ಕಂದಿರೊಂದಿಗೆ ವಿಮರ್ಶಿಸುತ್ತಾರೆ. [ಇಲ್ಲಿ ಅಧ್ಯಾಪಕರನ್ನು ಅಕ್ಕ,ಅಣ್ಣ, ಎಂದು ಸಂಭೋಧಿಸಲಾಗುತ್ತದೆ.] ಒಂದು ರೀತಿಯ ಆತ್ಮೀಯತೆ ಇಲ್ಲಿ ಮನೆ ಮಾಡಿದೆ. ಮಕ್ಕಳ ಎಲ್ಲಾ ರೀತಿಯ ಪ್ರತಿಭೆಗೂ ಇಲ್ಲಿ ಪ್ರೋತ್ಸಾಹವಿದೆ. ಮಕ್ಕಳು ತಮ್ಮ ಅಭಿರುಚಿಗೆ ತಕ್ಕಂತೆ ಪಠ್ಯೇತರ ಕ್ರಮವನ್ನು ಆರಿಸಿಕೊಂಡಿದ್ದಾರೆ. ಒಂದೇ ಸೂರಿನಡಿಯಲ್ಲಿ ಮಕ್ಕಳು ವೀಣೆ, ಮೃದಂಗ, ತಬಲ, ಕಲೆ, ಹೀಗೆ ತಮ್ಮ ಆಸಕ್ತ ವಲಯದಲ್ಲಿ ಪರಿಣಿತರಿಂದ ಐಚ್ಚಿಕ ತರಬೇತಿ ಪಡೆಯುತ್ತಿದ್ದಾರೆ.
ಈ ಶಾಲೆಯಲ್ಲಿ ನಾನು ಹೆಚ್ಚು ಗಮನಿಸಿದ್ದೆಂದರೆ ಯಾವುದೇ ಯೋಜನೆ ರೂಪಿಸಿದರೂ ಅದರ ಆಳವನ್ನು ಹೊಕ್ಕು ಅದರ ಪೂರ್ಣ ಪ್ರಯೋಜನ ಮಕ್ಕಳಿಗೆ ಅತೀ ದೀರ್ಘಕಾಲದವರೆಗೂ ದೊರೆಯುವಂತಾಗಬೇಕು ಎಂಬ ದೂರದೃಷ್ಟಿಯ ಚಿಂತನೆ. ಹಾಗಾಗಿ ಯಾವುದನ್ನೇ ಕೈಗೆತ್ತಿಕೊಂಡರೂ ಅದು ಸಂಪೂರ್ಣವಾಗಿ ಉತ್ತಮ ರೀತಿಯಲ್ಲಿ ಯೋಜಿತವಾಗಿ ಸರಿಯಾಗಿ ಕ್ರಮದಲ್ಲಿ ರೂಪುಗೊಳ್ಳುತ್ತಿದೆ. ಪ್ರತಿಯೊಂದು ಪ್ರಯೋಗವನ್ನು ಕಾರ್ಯರೂಪಕ್ಕೆ ತರುವ ಮುನ್ನ ಅದರ ಸಾಧ್ಯತೆ ಭಾದ್ಯತೆಗಳನ್ನು ಚಿಂತನೆ ನಡೆಸಿ ನಂತರ ಕಾರ್ಯರೂಪಕ್ಕೆ ತರುವುದು ಸಂಸ್ಥೆಯ ಚಿಂತಕರ ದಿಟ್ಟ ನಿಲುವನ್ನು ಸೃಷ್ಠೀಕರಿಸುತ್ತದೆ.
ಇಲ್ಲಿ ಮಕ್ಕಳನ್ನು ಯಾವ ರೀತಿಯಲ್ಲೂ ವಿಭಾಗಿಸದೆ, ನಿಧಾನವಾಗಿ ಕಲಿಯುವ ಮಕ್ಕಳಿಗೆ ನಿಧಾನವಾಗಿ, ವೇಗದಲ್ಲಿ ಗ್ರಹಿಸುವ ಮಕ್ಕಳಿಗೆ ಅಷ್ಟೇ ತೀವ್ರಗತಿಯಲ್ಲಿ ಬೋಧಿಸುವ ಕ್ರಮ ವಿಶಿಷ್ಟವಾಗಿದೆ. ಮಕ್ಕಳು ಯಾವ ಸ್ಪರ್ಧೆಗೂ ಒಳಪಡದಿರುವುದರಿಂದ ಮಕ್ಕಳ ಮನಸ್ಸಿನಲ್ಲಿ ಕೀಳರಿಮೆ ಅಥವಾ ಮೇಲರಿಮೆಯ ಭಾವ ಹುಟ್ಟುವಲ್ಲಿ ಆಸ್ಪದವೇ ಇಲ್ಲದಂತಾಗಿದೆ. ಇದರಿಂದಾಗಿ ಮಕ್ಕಳು ಮನೆಯಲ್ಲಿ ಹಿರಿಯರು ಕಿರಿಯರಿಗೆ ಸಹಾಯ ಮಾಡುವಂತೆ ಮಕ್ಕಳು ತಮ್ಮೊಂದಿಗಿನ ಸಹಪಾಠಿಗಳಿಗೆ ತಾವೇ ಸಹಾಯ ಮಾಡುತ್ತಾ ಕಲಿಕೆಯ ಶ್ರೇಷ್ಠತೆಯನ್ನು ಮೆರೆಯುತ್ತಿದ್ದಾರೆ. ಇದು ಮಕ್ಕಳ ಕಲಿಕೆಗೆ ಮಾತ್ರ ಸೀಮಿತವಾಗದೆ ಮಕ್ಕಳ ಮಾನಸಿಕ ಬೆಳವಣಿಗೆಯಲ್ಲಿ ಹೆಚ್ಚಿನ ಪರಿಣಾಮ ಬೀರುತ್ತಿದೆ. ಮಕ್ಕಳು ಒಬ್ಬರನ್ನೊಬ್ಬರು ಸಂಪೂರ್ಣ ಅರ್ಥಮಾಡಿಕೊಳ್ಳಬಲ್ಲವರಾಗಿದ್ದಾರೆ. ಇದರಿಂದಾಗಿ ಇಲ್ಲಿ ಮಕ್ಕಳಿಗೆ ಅಧ್ಯಾಪಕರು ಮಾರ್ಗದರ್ಶಕರೇ ಹೊರತು ಆದೇಶ ಕೊಡುವವರಲ್ಲ ಎನ್ನುವ ಭಾವ ಎತ್ತಿ ಕಾಣುತ್ತದೆ. ಇದು ವಿದ್ಯಾರ್ಥಿಗಳನ್ನು ಹೆಚ್ಚು ಸ್ವತಂತ್ರವಾಗಿ ಬೆಳೆಸುತ್ತಿದೆ. ಮಾನಸಿಕ ಧೃಡತೆಯನ್ನು ಹೆಚ್ಚಿಸುತ್ತಿದೆ.
ಶಾಲಾ ಚಟುವಟಿಕೆಗಳಲ್ಲಿ ಮುಖ್ಯವಾಗಿ ಆಚರಿಸುವ ಹಬ್ಬಗಳೆಂದರೆ ಭಾಗೀರಥಿ ಜಯಂತಿ, ಸೀತಾ ಜಯಂತಿ, ವಾಮನ ಜಯಂತಿ ಇತ್ಯಾದಿ. ಈ ಹಬ್ಬಗಳೂ ಕೂಡ ನಮ್ಮ ಪೂರ್ವಿಕರ ಸಂದೇಶವನ್ನು ಸಾರುವಂಥದ್ದಾಗಿದೆ. ಈ ಹಬ್ಬಗಳು ಪ್ರಕೃತಿ ಮಾತೆಗೆ ಆದ್ಯತೆ ನೀಡುತ್ತವೆ. ಶಾಲೆಯು ಹೊರ ಆಡಂಬರಕ್ಕೆ ಒಂದಿಷ್ಟೂ ಆದ್ಯತೆ ನೀಡದಿರುವುದು ಇಲ್ಲಿ ಗಮನಾರ್ಹ ಎಂದೇ ಹೇಳಬಹುದು. ಆಧುನಿಕ, ಸುಸಜ್ಜಿತ ಪೀಠೋಪಕರಣಗಳು ಈ ಶಾಲೆಯಲ್ಲಿ ಕಂಡು ಬರುವುದಿಲ್ಲ. ಮಕ್ಕಳು ಉತ್ತಮ ಅಭ್ಯಾಸವೆಂಬಂತೆ ಚಾಪೆ ಹಾಸಿ ಚಾಪೆ ಮೇಲೆ ಇಟ್ಟುಕೊಂಡು ಬರೆಯಲು ಓದಲು ಅನುಕೂಲವಾಗುವಂತೆ ಕೆಳಗೇ ಕೂಡುತ್ತಾರೆ. ಬಳಕೆಗೆ ಎಷ್ಟು ಅಗತ್ಯವೋ ಅಷ್ಟು ತಾಂತ್ರಿಕ ಉಪಕರಣಗಳ ವ್ಯವಸ್ಥೆಯಿದೆ. ಪುಸ್ತಕ ಭಂಡಾರವಂತೂ ಹೇರಳವಾಗಿದೆ. ಮಕ್ಕಳು ತಮ್ಮ ಬಿಡುವಿನ ವೇಳೆಯಲ್ಲಿ ಬೇಕಾದ ಪುಸ್ತಕ ತೆಗೆದು ಓದುವ ಸ್ವಾತಂತ್ರ್ಯವಿದೆ.
ಎಲ್ಲಕ್ಕಿಂತ ನನ್ನ ಮನಸ್ಸಿಗೆ ಮುದ ನೀಡಿದ ಸಂಗತಿಯೆಂದರೆ ಬೆಳಗಿನ ಪ್ರಾರ್ಥನೆ, ಶಾಲೆಯ ಶಿರೋಮಣಿಯು ಎಲ್ಲೆಡೆ ದೀಪ ಹಚ್ಚುತ್ತಾಳೆ. ಮಕ್ಕಳು ಸಾಲಾಗಿ ಕುಳಿತು ಪ್ರತಿದಿನವೂ ಭಗವದ್ಗೀತೆಯ ಎರಡು ಅಧ್ಯಾಯಗಳನ್ನು ಪಾರಾಯಣ ಮಾಡುತ್ತಾರೆ. ನಂತರದಲ್ಲಿ ಪಂಚಾಂಗ ಶ್ರವಣವಾಗುತ್ತದೆ. ಅದಾದ ನಂತರ ಸಂಸ್ಕೃತ ಪಂಡಿತರಿಂದ ಹತ್ತು ನಿಮಿಷಗಳ ಕಾಲ ಭಗವದ್ಗೀತೆಯ ತತ್ವಚಿಂತನೆ ನಡೆಯುತ್ತದೆ. ನಂತರದಲ್ಲಿ ನಿತ್ಯದ ಪ್ರಾರ್ಥನೆ ಹಾಗೂ ರಾಷ್ಟ್ರಗೀತೆ, ಮುಂಜಾನೆಯಲ್ಲಿ ಚದುರಿದ ಮನಸ್ಸು ಭಗವಂತನ ಪ್ರಾರ್ಥನೆಯಿಂದ ಸಮಸ್ಥಿತಿಗೆ ಬಂದು ನಿಂತು ಮಕ್ಕಳು ಕಲಿಕೆಗೆ ಮಾನಸಿಕ ತಯಾರಿ ನಡೆಸುವ ಈ ಬಗೆ ನಿಜಕ್ಕೂ ನನಗೆ ಬಹಳ ಇಷ್ಟವಾಯಿತು. ಪಾರಾಯಣಕ್ಕೆ ಮಕ್ಕಳ ಬಳಿ ಯಾವ ಪುಸ್ತಕವೂ ಇಲ್ಲದೆ ಭಗವದ್ಗೀತೆಯ ಹದಿನೆಂಟು ಅಧ್ಯಾಯಗಳು ಮಕ್ಕಳಿಗೆ ನಾಲಿಗೆ ತುದಿಯಲ್ಲಿ ಸರಾಗವಾಗಿ ಹರಿಯುವ ವೈಖರಿ ನನ್ನಲ್ಲಿ ಅಚ್ಚರಿಮೂಡಿಸಿತು. ಇಂದಿನ ಶಾಲಾವ್ಯವಸ್ಥೆಯಲ್ಲಿ ಈ ಪೂರ್ಣಪ್ರಮತಿ ಒಂದು ಅನರ್ಘ್ಯ ರತ್ನ ಎನ್ನಿಸಿತು. ಇಷ್ಟೇ ಅಲ್ಲದೇ ಮಕ್ಕಳ ಊಟದ ವೇಳೆಯಲ್ಲೂ ಸಂಸ್ಕೃತ ಅಧ್ಯಾಪಕರು ತತ್ವಚಿಂತನೆ ನಡೆಸುತ್ತಾರೆ.
ಬೆಳೆಯುವ ಮಕ್ಕಳ ಮನಸ್ಸು ನಿರಂತರವಾಗಿ ಇಂಥ ಚಿಂತನೆಯಲ್ಲಿ ತೊಡಗಿದಾಗ ಮಕ್ಕಳಲ್ಲಿ ಸರಿ ತಪ್ಪುಗಳ ವಿವೇಚನಾ ಶಕ್ತಿ ವೃದ್ಧಿಸುತ್ತದೆ. ಪ್ರಬುದ್ಧತೆ ಬೆಳೆಯುತ್ತದೆ. ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಹೆಚ್ಚು ಸಮರ್ಥರಾಗುತ್ತಾರೆ. ಆಂತರಿಕ ಬಲವರ್ಧನೆಯಾಗುತ್ತದೆ. ಪೂರ್ಣ ಪ್ರಮತಿಯ ಮಕ್ಕಳು ಇತರೆ ಮಕ್ಕಳಿಗಿಂತಲೂ ಭಿನ್ನ ಎಂಬುದನ್ನು ನಾನು ಮನಗಂಡೆ. ಮಕ್ಕಳು ತಮ್ಮ ಮಾತಿನಲ್ಲಿ ನಡೆಯಲ್ಲಿ ಮತ್ತೊಬ್ಬರಿಗೆ ನೋವಾಗದಂತೆ ನಡೆದುಕೊಳ್ಳುವುದನ್ನೂ ಗಮನಿಸಿದೆ. ಇಂಥ ಸೂಕ್ಷ್ಮ ವಿಚಾರಗಳು ಇಷ್ಟು ಚಿಕ್ಕ ವಯಸ್ಸಿನಲ್ಲೇ ಸ್ವಾಭಾವಿಕವಾಗಿ ಕಲಿಯುವ ವಾತಾವರಣ ಪೂರ್ಣಪ್ರಮತಿಯ ಮೌಲ್ಯಾಧಾರಿತ ಬೋಧನೆಗೆ ಸಾಕ್ಷಿಯಾಗಿದೆ. ಇಂಥ ಹಲವು ಉದಾಹರಣೆಗಳನ್ನು ನಾನು ಪ್ರತಿನಿತ್ಯವೂ ಮಕ್ಕಳಲ್ಲಿ ಗಮನಿಸುತ್ತಿರುವೆ. ಇತರ ಶಾಲೆಗಳಲ್ಲಿ ಮಕ್ಕಳ ನಡವಳಿಕೆಗಳು ಸ್ವಾರ್ಥಕ್ಕೆ ಹೆಚ್ಚು ಸೀಮಿತವಾಗಿದ್ದು ಪ್ರೋತ್ಸಾಹವೂ, ಅದಕ್ಕೇ ಹೆಚ್ಚಾಗಿರುವಂಥಹುದು. ಆದರೆ ಇಲ್ಲಿ ಮಕ್ಕಳು ಮನೆಯಲ್ಲಿ ಬೆಳೆಯುವ ಹಾಗೆ ಒಗ್ಗಟ್ಟಿನಲ್ಲಿ ಎಲ್ಲರೊಡಗೂಡಿ ಬೆಳೆಯುತ್ತಿದ್ದಾರೆ ಎಂಬುದು ಸತ್ಯ ಎಂದು ಹೇಳಬಲ್ಲೆ. ಮಕ್ಕಳ ಮನಸ್ಸಿಗೆ ನೋವಾಗದಂತೆ ನಡೆದುಕೊಳ್ಳುವ ಶಿಕ್ಷಕ ವರ್ಗದವರ ಸಂಸ್ಕಾರವೂ ಇದಕ್ಕೆ ಪೂರಕವಾಗಿದೆ. ಒಟ್ಟಿನಲ್ಲಿ ಪೂರ್ಣಪ್ರಮತಿ ಮಕ್ಕಳ ಬೆಳವಣಿಗೆಯಲ್ಲಿ ಅತ್ಯಂತ ಮುಖ್ಯವಾದ ಮೌಲ್ಯಾಧಾರಿತ ಆಂತರಿಕ ಶಕ್ತಿಯ ಬೆಳವಣಿಗೆಗೆ ಭದ್ರ ಬುನಾದಿ ಹಾಕುತ್ತಿದೆ.
ಇಂತಹ ಒಂದು ಉತ್ಕೃಷ್ಟ ಪರಿಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಪೂರ್ಣಪ್ರಮತಿಯ ಪೋಷಕರು ಅತೀ ಹೆಚ್ಚಿನ ಪಾತ್ರ ವಹಿಸುತ್ತಾರೆ. ಪೋಷಕರೂ ಹೆಚ್ಚು ಸಂಸ್ಕಾರವಂತರಾಗಿರುವುದರಿಂದಲೇ ಪೂರ್ಣಪ್ರಮತಿ ಇಂಥ ನಿಟ್ಟಿನಲ್ಲಿ ಧೃಡವಾಗಿ ಹೆಜ್ಜೆ ಇಡುವಲ್ಲಿ ಸಹಕಾರಿಯಾಗಿದೆ. ಪೂರ್ಣಪ್ರಮತಿಯ ನೂರಾರು ಯೋಜನೆಗಳು ಹೀಗೆಯೇ ಸಾಕಾರಗೊಳ್ಳಬೇಕು. ಈ ದೃಷ್ಟಿಯಿಂದಲೇ ಪೂರ್ಣಪ್ರಮತಿ ಆಸಕ್ತ ಅಧ್ಯಾಪಕರನ್ನು ಸದಾ ತನ್ನೆಡೆಗೆ ಆಹ್ವಾನಿಸುತ್ತಲೇ ಇರುತ್ತದೆ. ಇಂಥ ಪೂರ್ಣಪ್ರಮತಿ ಮೌಲ್ಯಗಳ ನೀರೆರೆದು ಬಿತ್ತಿದ ಬೀಜ ಹೆಮ್ಮರವಾಗಿ ಬೆಳೆದು ಸಂಪದ್ಭರಿತವಾಗಬೇಕು ಎನ್ನುವುದೇ ನನ್ನ ಆಶಯ.
ಅಖಿಲಾ ವಾಸು
ಪ್ರೌಢಶಾಲಾ ಅಧ್ಯಾಪಕಿ