ಕೆ.ಎಸ್. ನವೀನ್
ಸಂಗ್ರಹಾಲಯ ನಿರ್ವಾಹಕ, "ವಿಶ್ವರೂಪ"
ಪೂರ್ಣಪ್ರಮತಿ ಬೋಧನಾತ್ಮಕ ಸಂಗ್ರಹಾಲಯ
ಆನಂದವನ, ಮಾಗಡಿ.
ಬೇಸಿಗೆ ಬಂದರೆ ವನ್ಯಜೀವಿ ಸಂರಕ್ಷಣೆಯಲ್ಲಿ ಆಸಕ್ತಿಯಿರುವವರಿಗೆ ಆಂತಕ ತರುವವ ವಿಷಯಗಳಲ್ಲಿ ಪ್ರಮುಖವಾದದ್ದು ಕಾಡ್ಗಿಚ್ಚು. ಪ್ರತೀ ವರ್ಷ ಈ ಕಾಡಿನ ಬೆಂಕಿಯಿಂದ ಸಾವಿರಾರು ಎಕರೆ ಕಾಡು ಭಸ್ಮವಾಗಿ ಹೋಗುತ್ತದೆ. ಈ ವರ್ಷ (2018) ಇನ್ನು ಮಾರ್ಚ್ ಮೊದಲರ್ಧದಲ್ಲಿದ್ದೇವೆ, ಆಗಲೇ ಸುಟ್ಟುಹೋಗಿರುವ ಕಾಡಿನ ಪ್ರಮಾಣ ಐದು ಸಾವಿರಕ್ಕೂ ಹೆಚ್ಚು! ಇದು ತುಂಬ ಕಳವಳಕಾರಿ ವಿಷಯ.
ಈ ಕಾಡ್ಗಿಚ್ಚು ಉಂಟಾಗುವುದು ಹೇಗೆ ಎಂಬ ಬಗ್ಗೆ ನಮ್ಮಲ್ಲಿ ಅನೇಕ ಕಲ್ಪನೆಗಳಿವೆ! ಜಿಂಕೆಗಳು ಜಗಳಾಡುವಾಗ ಕೋಡುಗಳು ಒಂದಕ್ಕೊಂದು ತಗುಲಿ ಬೆಂಕಿ ಹತ್ತಿಕೊಳ್ಳುತ್ತದೆ ಎಂಬುದು ಒಂದಾದರೆ ಇನ್ನೊಂದು ನಂಬಿಕೆ ಮರಗಳು ತಾಗಿ ಹೊತ್ತಿಕೊಳ್ಳುತ್ತದೆ ಎಂಬುದು, ಅದರಲ್ಲಿಯೂ ಬಿದುರು ಒಂದಕ್ಕೊಂದು ತಾಗಿ ಬೆಂಕಿ ಹತ್ತಿಕೊಳ್ಳುತ್ತದೆ ಎಂಬುದು ತುಂಬ ಜನಪ್ರಿಯವಾದ ನಂಬಿಕೆ. ಆದರೆ, ಕಾಡಿನ ಬೆಂಕಿ ಈ ಯಾವುದರಿಂದಲೂ ಉಂಟಾಗುವುದಿಲ್ಲ, ಭಾರತದಲ್ಲಿ ಉಂಟಾಗುವ ಎಲ್ಲ ಹೌದು, ಎಲ್ಲ ಕಾಡ್ಗಿಚ್ಚೂ ಮಾನವಕೃತ ಎಂದು ತುಂಬ ವಿಷಾದದಿಂದ ಗುರುತಿಸಬೇಕಾಗಿದೆ. ಈ ಕುರಿತಾಗಿ ಅನೇಕ ಅಧ್ಯಯನಗಳು ನಡೆದಿವೆ.
ಜನ ಕಾಡಿಗೆ ಬೆಂಕಿ ಏಕೆ ಹಾಕುತ್ತಾರೆ?
ಜನರು ಕಾಡಿಗೆ ಬೆಂಕಿ ಹಾಕಲು ಹತ್ತಾರು ಕಾರಣಗಳಿವೆ. ಬಿದಿರು ಮತ್ತಿತರ ಅರಣ್ಯ ಉತ್ಪನ್ನಗಳನ್ನು ಕಡಿದು ಸಾಗಿಸುವ ಲಾಬಿ ಈ ಕಾರ್ಯ ಮಾಡಿಸುತ್ತದೆ. ಅರಣ್ಯದಲ್ಲಿ ಬೇಟೆಯಾಡುವವರು ಪ್ರಾಣಿಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಓಡಿಸಲು ಕಾಡಿಗೆ ಬೆಂಕಿ ಕೊಡುತ್ತಾರೆ. ಅರಣ್ಯದಲ್ಲಿ ಬೇಸಾಯ ಮಾಡುವವರು ಒಂದು ಬೆಳೆ ಬಂದ ನಂತರ ಮತ್ತೆ ಬೆಳೆಯುವ ಮುನ್ನು ಬೆಂಕಿ ಹಾಕುತ್ತಾರೆ, ಇದು ಅರಣ್ಯದ ಬೇರೆ ಭಾಗಗಳಿಗೆ ದಾಟಿಕೊಳ್ಳುತ್ತದೆ. ಅರಣ್ಯದ ಉತ್ಪನ್ನಗಳನ್ನು ಸಂಗ್ರಹಿಸಲು ಬರುವ ಕೆಲವರು ನೆಲದಲ್ಲಿನ ಜಿಗ್ಗನ್ನು, ಹಾವು ಮುಂತಾದ ಸರಿಸೃಪಗಳನ್ನು ನಿವಾರಿಸಲು ಬೆಂಕಿ ಹಾಕುತ್ತಾರೆ, ಅದು ದೊಡ್ಡ ಕಾಡಿನ ಬೆಂಕಿಯಾಗಿ ಮಾರ್ಪಡುತ್ತದೆ. ಬೇಜವಾಬ್ದಾರಿ ಪ್ರವಾಸಿಗರ ಪಾಲು ಇದರಲ್ಲಿ ಕಡಿಮೆಯೇನಿಲ್ಲ! ಧೂಮಪಾನ ಮಾಡಿ ಎಸೆದ ಬೀಡಿ, ಸಿಗರೇಟುಗಳಿಂದ ಎಕರೆಗಟ್ಟಲೆ ಕಾಡು ನಾಶವಾಗಿದೆ. ಕಾಡಿಗೆ ಹೋಗುವುದರಿಂದಲೇ ವನ್ಯಸಂರಕ್ಷಣೆಯಾಗಿಬಿಡುತ್ತದೆ ಎಂಬ ಭ್ರಮೆಯಿಟ್ಟುಕೊಂಡು ಅಲ್ಲಿ ಹೋಗಿ ಅಡುಗೆ ಮಾಡಿಕೊಳ್ಳಲು ಹಚ್ಚಿದ ಬೆಂಕಿ ಆರಿಸದರೇ ಕಾಡೆ ಸುಟ್ಟುಹೋದ ಘಟನೆಗಳು ಸಾಕಷ್ಟಿವೆ. ಒಬ್ಬ ಪ್ರಾಮಾಣಿಕ ಅರಣ್ಯಾಧಿಕಾರಿಯ ವಿರುದ್ಧ ಸೇಡು ತೀರಿಸಿಕೊಳ್ಳುವ ಸುಲಭ ಮಾರ್ಗವೇ ಕಾಡಿಗೆ ಬೆಂಕಿ ಕೊಡುವುದು. ಯಾವುದೋ ವೈಮನಸ್ಯ ಕಾಡಿನ ಬೆಂಕಿಯಲ್ಲಿ ಕೊನೆಗೊಂಡಿರುವ ಅನೇಕ ಪ್ರಸಂಗಗಳಿವೆ. ಹಿಂದೆ ನಾಗರಹೊಳೆ ಕಾಡಿಗೆ ಜನನುಗ್ಗಿ ಪೆಟ್ರೋಲ್ ಸುರಿದು ಬೆಂಕಿ ಹಾಕಿದ್ದ ಘಟನೆ ನಮ್ಮ ಸಂರಕ್ಷಣಾ ಇತಿಹಾಸದಲ್ಲೊಂದು ದೊಡ್ಡ ಕಪ್ಪುಚುಕ್ಕೆ. ಇದೇ ರೀತಿಯಲ್ಲಿ ಭದ್ರಾ ಕಾಡಿಗೆ ಬೆಂಕಿ ಹಾಕಲಾಗಿತ್ತು. ಆಗ ಕಾಡು ದಿನಗಟ್ಟಲೆ ಹೊತ್ತಿ ಉರಿದಿತ್ತು. ಹತ್ತಾರು ವರ್ಷಗಳಾಗಿವೆ ಇವೆಲ್ಲ ಮುಗಿದು, ಆದರೆ, ಆ ಗಾಯಗಳನ್ನು ಇಂದಿಗೂ ಅಲ್ಲಿ ಕಾಣಬಹುದು.
ಕಾಡಿನ ಬೆಂಕಿಯ ದುಷ್ಪರಿಣಾಮಗಳು
ಕಾಡಿಗೆ ಬೆಂಕಿ ಯಾವ ಕಾರಣಕ್ಕಾದರೂ ಬೀಳಲಿ ನಷ್ಟ ಮಾತ್ರ ಅಪಾರ ಪ್ರಮಾಣದ್ದಾಗಿರುತ್ತದೆ. ನೆಲವಾಸಿ ಪ್ರಾಣಿಗಳು, ಕೀಟ, ತಪ್ಪಿಸಿಕೊಳ್ಳಲಾಗದ ಹಕ್ಕಿಗಳು ನೇರವಾಗಿ ಸುಟ್ಟುಹೋಗುತ್ತವೆ. ಜೀವಜಾಲದ ಒಂದು ಕೊಂಡಿಗೆ ದೊಡ್ಡ ಹೊಡತಬೀಳುತ್ತದೆ. ಹಾಗೆಯೇ ಆಹಾರ ಸರಪಳಿಗೂ ಸಹ ಧಕ್ಕೆಯಾಗುತ್ತದೆ. ಇನ್ನು ಅಲ್ಲಿನ ಫಲವತ್ತಾದ ಮಣ್ಣಿನ ಮೇಲ್ಪದರ ಬೆಂಕಿಯಿಂದ ನಾಶವಾಗುತ್ತದೆ. ಇನ್ನು ಜೈವಿಕ ವಿಘಟನೆಗೆ ಒಳಗಾಗಿ ಮಣ್ಣಿನಪೋಷಕಾಂಶವಾಗ ಬೇಕಿದ್ದ ಒಣಗಿ ಬಿದ್ದ, ಎಲೆ, ಕೊಂಬೆ ಇತ್ಯಾದಿ ಜೈವಿಕ ಪದಾರ್ಥಗಳು ಸುಟ್ಟು ವ್ಯರ್ಥವಾಗಿ ಹೋಗುತ್ತವೆ. ಕಾಡಿನ ಸಾವಯವ ಇಂಗಾಲಾಂಶ (ಆರ್ಗಾನಿಕ್ ಕಾರ್ಬನ್) ಕಡಿಮೆಯಾಗಲು ಕಾರಣವಾಗುತ್ತದೆ.
ಮೊದಲೇ ಬೇಸಿಗೆಯಲ್ಲಿ ನೀರು, ಆಹಾರಕ್ಕೆ ತೊಂದರೆಯಿರುತ್ತದೆ, ಇನ್ನು ಬೆಂಕಿಯಿಂದ ಸುಟ್ಟುಹೋದ ಬೇಸಿಗೆಯಲ್ಲಿ ಹಣ್ಣುಬಿಡುವ (ಉದಾ: ನೆಲ್ಲಿಕಾಯಿ) ಮರಗಳು ಮಂಗ, ಮುಸುವ, ಕರಡಿ, ಜಿಂಕೆಗಳು ಕೊನೆಗೆ ಆನೆಗಳಿಗೂ ಸಹ ಆಹಾರದ ಕೊರತೆಯನ್ನು ಉಂಟು ಮಾಡುತ್ತದೆ. ಅನೇಕ ಪ್ರಾಣಿಗಳು ಹಸಿವಿನಿಂದ ಸಾಯುತ್ತವೆ. ಬೇಸಿಗೆಯಲ್ಲಿ ಆಹಾರ ನೀರು ಕಡಿಮೆಯಾಗಿ ಪ್ರಾಣಿಗಳು ಸಾಯುವುದು ಪ್ರಕೃತಿಯ ಸಹಜ ಚಕ್ರವೇ ಆದರೆ, ಮಾನವನ ಹಸ್ತಕ್ಷೇಪವಿರದಿದ್ದಲ್ಲಿ ಕಾಡಿಗೆ ಬೆಂಕಿ ಬೀಳುವುದಿಲ್ಲ, ಬೇಸಿಗೆ ವನ್ಯಜೀವಿಗಳಿಗೆ ಇಷ್ಟು ಅಸಹನೀಯವಾಗುವುದಿಲ್ಲ. ಇದೊಂದು ತಪ್ಪಿಸಬಹುದಾದ ದುರಂತ. ಕೆಲವೇ ದಿನಗಳ ಹಿಂದೆ ನಾಗರಹೊಳೆ ಅರಣ್ಯದಲ್ಲಿ ಬಿದ್ದ ಬೆಂಕಿಯ ಪರಿಣಾಮಗಳನ್ನು ಪರಿಶೀಲಿಸಲು ಹೋಗಿದ್ದ ದಕ್ಷ ಅರಣ್ಯಾಧಿಕಾರಿ ಮಣಿಕಂಠನ್ ಆನೆ ದಾಳಿಗೆ ಬಲಿಯಾಗಿದ್ದು ದುರಾದೃಷ್ಟಕರ. ಕಾಡಿಗೆ ಬೆಂಕಿ ಹಾಕಿದವರೇ ಈ ಸಾವಿಗೆ ಪರೋಕ್ಷ ಕಾರಣವಲ್ಲವೆ?
ಕಾಡಿಗೆ ಹೀಗೆ ನಿರಂತರವಾಗಿ ಬೆಂಕಿ ಬೀಳುತ್ತಿದ್ದರೆ ಇದು ಪ್ರಕೃತಿ ನಿಧಾನವಾಗಿ ಅದಕ್ಕೆ ಸ್ಪಂದಿಸಿ ಬೇಗ ಬೆಂಕಿಹಿಡಿಯದ ಮರಜಾತಿಗಳು ಮಾತ್ರ ಹೆಚ್ಚು ಬೆಳೆಯುವಂತೆ ಮಾಡುತ್ತದೆ. ಉಳಿದ ಉಪಯೋಗಿ ಮರಗಳು ಹೋಗಿ ವನ್ಯಜೀವಿ-ಅರಣ್ಯ-ನೀರಿನ ಕೊಂಡಿ ಕಳಚಿಹೋಗಿ ಮಾನವ ಮತ್ತಷ್ಟು ಸಂಕಷ್ಟಗಳಿಗೆ ತುತ್ತಾಗುತ್ತಾನೆ. ಆ ಲಕ್ಷಣಗಳು ಈಗಾಗಲೇ ಕಂಡುಬರುತ್ತಿವೆ.
ಕಾಡಿನಿಂದ ಬಿದುರನ್ನು ಸಾಗಿಸುವ ಲಾಬಿ ಸಾಕಷ್ಟು ತೊಂದರೆ ಮಾಡಿತು. ಬೇಸಿಗೆಯಲ್ಲಿ ಬಿದಿರಿಗೆ ಬೆಂಕಿಹತ್ತಿಕೊಳ್ಳುವುದರಿಂದ ಅದನ್ನು ಕಡಿದು ಸಾಗಿಸಲಾಗುವುದು ಎಂಬ ಹಾಸ್ಯಾಸ್ಪದ ಹೇಳಿಕೆ ಬೇರೆ! ಈ ಲಾಬಿಯಿಂದಲೂ ಸಾಕಷ್ಟು ತೊಂದರೆ ಉಂಟಾಗಿದೆ. ಕೊಟ್ಯಂತರ ವರ್ಷಗಳಿಂದ ಬಿದುರು ಬೇಸಿಗೆಯಲ್ಲಿ ಹೊತ್ತುರಿಯದ್ದು ಈಗ ಏಕೆ ಹೊತ್ತಿ ಉರಿಯುತ್ತದೆ?! ಈ ವಾದಗಳನ್ನು ನ್ಯಾಯಾಲದ ಮೆಟ್ಟಿಲು ಹತ್ತಿ ಯಶಸ್ವಿಯಾಗಿ ಹತ್ತಿಕ್ಕಿದ್ದು ನಮ್ಮ ವನ್ಯಸಂರಕ್ಷಣಾಸಕ್ತರ ಸಾಹಸ. ಇಂದು ರಕ್ಷಿತಾರಣ್ಯಗಳಿಂದ ಅಕ್ಷರಶಃ ಒಂದು ಹುಲ್ಲುಕಡ್ಡಿಯನ್ನೂ ಹೊರತೆಗೆಯುವಂತಿಲ್ಲ ಎಂಬ ಆದೇಶವನ್ನು ಘನವೆತ್ತ ಸರ್ವೋಚ್ಚ ನ್ಯಾಯಾಲಯ ನೀಡಿದೆ.
ಈ ಸಂದರ್ಭದಲ್ಲಿ ಇನ್ನೊಂದು ವಿಷಯವನ್ನು ಹೇಳಲೇ ಬೇಕು. ಪಾಪ! ಬೇಸಿಗೆ! ಎಂದು ಕಾಡಿನಲ್ಲಿ ನೀರಿನಾರಸರೆಗಳನ್ನು ಸೃಷ್ಠಿ ಮಾಡುತ್ತಾರೆ. ಇದು ಖಂಡಿತವಾಗಿಯೂ ಆಗಬಾರದು. ಇಂತಹ ಹಸ್ತಕ್ಷೇಪಗಳು ಮೇಲ್ನೋಟಕ್ಕೆ ಎಷ್ಟು ಮಾನವೀಯವಾಗಿ ಕಂಡರೂ ಮೂಲತಃ ಯಾವುದೋ ಕೆಲ ಪ್ರಭೇಧಗಳನ್ನು ಮಾತ್ರ ಪೋಷಿಸಿ ಕಾಡಿನ ಅಸಮತೋಲನಕ್ಕೆ ಕಾರಣವಾಗುತ್ತದೆ. ಕಾಡನ್ನು ಹೇಗಿದೆಯೋ ಹಾಗೆ ಸಂರಕ್ಷಿಸುವುದು ಮಾತ್ರ ವೈಜ್ಞಾನಿಕ ಸಂರಕ್ಷಣೆ.
ಅಗ್ನಿ ಅನಾಹುತವಾಗದಿರಲೆಂದು ಅರಣ್ಯ ಇಲಾಖೆ ಸಾಕಷ್ಟು ಎಚ್ಚರಿಕೆಯನ್ನು ವಹಿಸುತ್ತದೆ. ಬೇಸಿಗೆಗೆ ಮೊದಲೇ ಸೂಕ್ಷ್ಮ ಜಾಗಗಳನ್ನು ಗುರುತಿಸಿ ಅಲ್ಲಿನ ಒಣಹುಲ್ಲು ಇತ್ಯಾದಿಗಳನ್ನು ತೆರವು ಮಾಡಿಬಿಡುತ್ತಾರೆ. ಕೆಲವು ಕಡೆ ಅವರೇ ಸುಟ್ಟುಹಾಕುತ್ತಾರೆ. ಇದರಿಂದಾಗಿ, ಅದರಾಚೆಗಿನ ಪ್ರದೇಶದಲ್ಲಿ ಬೆಂಕಿಬಿದ್ದರೆ ಅದು ಅಷ್ಟು ಸುಲಭವಾಗಿ ಕಾಡಿಗೆ ದಾಟಿಕೊಳ್ಳುವುದಿಲ್ಲ. ಈ ನಿಟ್ಟಿನಲ್ಲಿ ಜನರ, ಅದರಲ್ಲಿಯೂ ಕಾಡಿನ ಸುತ್ತ ವಾಸಿಸುವವರ ಬೆಂಬಲ ಬಹಳ ಮುಖ್ಯ.
ನಗರವಾಸಿಗಳಾಗಿ ಕಾಡಿನ "ಬಳಕೆದಾರರಾದ" ನಮಗೆ ಈ ಕುರಿತಾದ ಜವಾಬ್ದಾರಿ ಸಾಕಷ್ಟಿದೆ. ಮುಖ್ಯವಾಗಿ ಶಿಕ್ಷಣ, ಜಾಗೃತಿ ಮೂಡಿಸುವುದು ಅತ್ಯಗತ್ಯ. ಈ ಕುರಿತ ಅಧ್ಯಯನಗಳೂ ನಮ್ಮಲ್ಲಿ ಆಗಬೇಕಿವೆ. ಆ ದಿಕ್ಕಿನಲ್ಲಿ ನಡೆಯೋಣ.