“ನಾರಾಯಣಿ…ಹಲವು ಮಕ್ಕಳ ತಾಯಿಯಾದ ಶತಾವರಿ ಒಂದು ಮಹಾ ಆಭರಣವಿದ್ದಂತೆ. ಪರಿಪೂರ್ಣ ಔಷಧಿಯಾಗಿ ಬಳಕೆಯಾಗುತ್ತದೆ. ಹೃದಯದ ತೊಂದರೆ, ಮೂತ್ರಪಿಂಡದಲ್ಲಿ ಕಲ್ಲು ಇದ್ದಾಗ, ಮೆದುಳನ್ನು ಚುರುಕುಗೊಳಿಸಲು, ಬೆಳವಣಿಗೆಗೆ ಬೇಕಾಗುವ ಜೀವಸತ್ವಗಳು ಇದರಲ್ಲಿ ಯಥೇಚ್ಛವಾಗಿದೆ. ಇದರ ಬಗ್ಗೆ ಸಂಹಿತೆಗಳಲ್ಲಿ ಉಲ್ಲೇಖವಿದೆಯಂತೆ. ನಾನೂ ಓದಿಲ್ಲ. ಸಪ್ತರ್ಷಿಗಳಲ್ಲಿ ಅತ್ರೇಯ ಮಹರ್ಷಿ ಹೇಗೆ ಶ್ರೇಷ್ಠರೋ ಹಾಗೆಯೇ ಇದು ಔಷಧಿಗಳಲ್ಲಿ ಶ್ರೇಷ್ಠ? ಎಂದು ವೈದ್ಯರು ಮುಂದುವರಿಸಿದರು. ಇದ್ದಕ್ಕಿದ್ದಂತೆ ಏನೋ ನೆನಪಾದವರಂತೆ ?ಹಾ.. ನಮ್ಮ ಅಜ್ಜ ಹೇಳುತ್ತಿದ್ದರು. ಕಾಕೋಲಿ, ಕ್ಷೀರಕಾಕೋಲಿ ಎಂದು ಎರಡು ಗಿಡಮೂಲಿಕೆಗಳು ಕೇವಲ ಹಿಮಾಲದಲ್ಲಿ ಮಾತ್ರ ಸಿಗುತ್ತಿತ್ತಂತೆ. ಕಾಲಕಳೆದಂತೆ ಅದು ಸಿಗದೆ ಹೋಯಿತು. ಅದಕ್ಕೆ ಪರ್ಯಾಯವಾಗಿ ಈಗ ಶತಾವರಿಯನ್ನು ಬಳಸುತ್ತಾರೆ. ಅವರು ಹೇಳುವಂತೆ ಶತಾವರಿಗೆ ಬಹುಪತ್ರಿಕಾ, ಊರ್ಧ್ವಕಂಠಕ, ಶತಪದಿ ಎಂದೂ ಹೇಳುತ್ತಿದ್ದರಂತೆ. ಇದು ಮೇಧಾಗ್ನಿವರ್ಧಕವಂತೆ. ಅಪಸ್ಮಾರ ಕಾಯಿಲೆ, ಕೆಲವು ಸ್ವರಭೇದದ ಸಮಸ್ಯೆಗೆ, ಮೂತ್ರಕ್ಕೆ ಸಂಬಂಧಪಟ್ಟ ಸಮಸ್ಯೆಗೆ ಇದು ರಾಮಬಾಣವಿದ್ದಂತೆ. ಆಡು ಭಾಷೆಯಲ್ಲಿ ಇದನ್ನು ಸೀತೆಚವರಿ, ಮಜ್ಜಿಗೆ ಗಡ್ಡೆ ಎಂದೂ ಕರೆಯುವುದುಂಟು”. ಹೀಗೆ ಅಜ್ಜನ ಕೆಲವು ಮಾತುಗಳನ್ನೂ ವೈದ್ಯರು ನೆನಪಿಸಿಕೊಂಡು ಹೇಳತೊಡಗಿದರು. ಹಳೆಬೇರು ಹೊಸಚಿಗುರು ಸೇರಿ ಮರವು ಸೊಗಸು ಎಂಬಂತೆ ತಲೆಮಾರುಗಳ ಮೇಳನ ಈ ಚರ್ಚೆಯಲ್ಲಿ ನಡೆಯುತ್ತಿತ್ತು. ಅಷ್ಟು ಹೊತ್ತಿಗೆ ಮತ್ತೊಬ್ಬ ರೋಗಿಯು ವೈದ್ಯರನ್ನು ಹುಡುಕಿಕೊಂಡು ಬಂದರು. ಕೂಡಲು ವೈದ್ಯರು ಅವನತ್ತ ಗಮನ ಕೊಡಲು ಪ್ರಾರಂಭಿಸಿದರು. ನಾಳೆ ಮುಂದುವರೆಸುವಷ್ಟು ತಾಳ್ಮೆ ನೀಲಾಳಿಗೆ ಇರಲಿಲ್ಲ. ಹಾಗಾಗಿ ಸಂಜೆ ಬೇಗ ಊಟ ಮುಗಿಸಿಕೊಂಡು ಬರುವುದಾಗಿ ಹೇಳಿ ಹೊರಟಳು.
ದಾರಿಯಲ್ಲಿ ಸುಬ್ಬಿಯ ಮನೆಗೆ ಹೋಗಿ ಧೈರ್ಯ ಹೇಳಿದಳು. “ನೀನೇನು ಹೆದರಬೇಡ. ಪ್ರಕೃತಿ ಮಾತೆ ತಾನೇ ತಾಯಿಯಾಗಿ ನಿನ್ನ ಮಕ್ಕಳನ್ನು ಸಾಕಲು ಇದ್ದಾಳೆ. ಶತಾವರಿ ಎಂಬ ಗೆಡ್ಡೆ ಎದೆಯಹಾಲನ್ನು ಹೆಚ್ಚಿಸುವುದಂತೆ. ನೀನು ನೆಮ್ಮದಿಯಾಗಿರು, ನಾನು ನಾಳೆ ಬರುವಾಗ ನಿನಗೆ ಅದರ ಚೂರ್ಣವನ್ನು ಮಾಡಿಸಿಕೊಂಡು ತರುತ್ತೇನೆ” ಎಂದು ಭರವಸೆ ಕೊಟ್ಟು ಮನೆಗೆ ಬಂದಳು. ನಡೆದುದನ್ನೆಲ್ಲ ಮಾವನೊಟ್ಟಿಗೆ ಹೇಳುತ್ತಿದ್ದಳು. ಅಷ್ಟರಲ್ಲಿ ಗಂಡನೂ ಮನೆಗೆ ಬಂದನು. ಊಟ ಮಾಡುತ್ತಾ ಇವರ ನಡುವೆ ಇದೇ ಚರ್ಚೆ ನಡೆಯಿತು. ನೀಲಾಳ ತಣಿಯದ ಕುತೂಹಲ ಎಲ್ಲರನ್ನೂ ಆವರಿಸಿಕೊಂಡಿತ್ತು. ಸಂಜೆ ಬೇಗನೆ ಮನೆಕೆಲಸವನ್ನೆಲ್ಲ ಮುಗಿಸಿ, ಹಸುಗಳಿಗೆ ಮೇವು ಹಾಕಿ, ನೀರಿಟ್ಟು ಅತ್ತೆಗೆ ಹೇಳಿ ವೈದ್ಯರ ಮನೆಗೆ ಹೊರಟಳು. ಈ ಬಾರಿ ಅವಳ ಪತಿರಾಯನೂ ಒಟ್ಟಿಗೆ ಬರುವುದಾಗಿ ಹೇಳಿ ಹೊರಟನು. ಇಬ್ಬರು ವೈದ್ಯರ ಮನೆ ಸೇರಿದರು. ಅವರು ತಮ್ಮ ಕೆಲಸವೆಲ್ಲ ಮುಗಿಸಿ ಜಗಲಿಯ ಮೇಲೆ ಯಾವುದೋ ಚೂರ್ಣ ಮಾಡುತ್ತಾ ಕುಳಿತಿದ್ದರು. ನೀಲಾಳನ್ನು ಕಂಡ ಕೂಡಲೆ ಬೆಳಗ್ಗೆಯಿಂದ ತಲೆಯಲ್ಲಿ ಓಡುತ್ತಿದ್ದ ವಿಷಯವನ್ನೆಲ್ಲ ಹೇಳಬೇಕೆನಿಸಿತು. ಮತ್ತೆ ತಮ್ಮ ಹಳೆಯ ಗ್ರಂಥಗಳನ್ನು ತೆಗೆದರು. ಈ ಬಾರಿ ಎಲ್ಲರೂ ಗಂಭೀರವಾಗಿ ಚರ್ಚೆಯಲ್ಲಿ ತೊಡಗಿದರು.
“ಪರಿಸರದಲ್ಲಿ ಕೆಲವು ರಾಸಾಯನಿಕಗಳು ಇರುತ್ತವೆ. ನಮ್ಮ ದೇಹದ ಪೋಷಣೆಗೆ ಕೆಲವು ಪೂರಕವೂ ಹೌದು, ಕೆಲವು ಮಾರಕವೂ ಹೌದು. ಆದರೆ ಎಲ್ಲಾ ರಾಸಾಯನಿಕಗಳನ್ನು ದೇಹವು ನೇರವಾಗಿ ಸ್ವೀಕರಿಸುವುದೂ ಇಲ್ಲ, ಜೀರ್ಣಿಸಿಕೊಂಡು ಬೇಕಾದ ಅಂಶವನ್ನು ಪಡೆಯುವುದೂ ಇಲ್ಲ. ಅದಕ್ಕೆ ಒಂದು ಪ್ರಕ್ರಿಯೆ ಇದೆ. ಆಧುನಿಕ ವೈದ್ಯ ಪದ್ಧತಿಯಲ್ಲಿ ದೇಹದ ಅಂಗಗಳನ್ನು ಪ್ರತ್ಯೇಕ ಮಾಡಿ ನೋಡಲಾಗುವುದು. ಆದರೆ ಪ್ರಾಚೀನ ಪದ್ಧತಿಯಲ್ಲಿ ಮನುಷ್ಯನ ಸಮಗ್ರ ದೇಹಪ್ರಕೃತಿಯನ್ನು ಗಮನಿಸಿ ಔಷಧೋಪಚಾರ ಮಾಡುತ್ತಿದ್ದರು” ಎಂದು ವೈದ್ಯರು ಮುಂದುವರೆಯುತ್ತಿದ್ದರು. ಅಷ್ಟರಲ್ಲಿ ನೀಲಾಳಿಗೆ ಅವಳ ಗಂಡ ಹೇಳುತ್ತಿದ್ದ ಕೆಲವು ಪಾಠಗಳು ನೆನಪಾಯಿತು. ದೇಹದಲ್ಲಿ ಕ್ಯಾಲ್ಸಿಯಮ್, ಪೊಟಾಷಿಯಂ, ಸೆಲೆನಿಯಮ್ ಇತ್ಯಾದಿ ಇದೆ ಎಂದು. ಅವರು ಓದುವಾಗ ಕಾಲೇಜಿನಲ್ಲಿ ಬರೆಸಿದ್ದು. ಆ ಪುಸ್ತಕವನ್ನು ತಾನು ಜೋಪಾನವಾಗಿ ಎತ್ತಿಟ್ಟುಕೊಂಡಿದ್ದಳು. ಕೂಡಲೆ ಅವರಿಬ್ಬರಿಗೂ ಹೇಳಿ ಮನೆಗೆ ಓಡಿದಳು. ಅಟ್ಟದ ಮೇಲಿದ್ದ ಪೆಟ್ಟಿಗೆಯನ್ನು ತೆಗೆದು ಅದರಲ್ಲಿದ್ದ ಪುಸ್ತಕವನ್ನು ಹಿಡಿದು ಮತ್ತೆ ಬಂದಳು. ಇದು ವೈದ್ಯರಿಗೂ ಹೊಸದಾಗಿತ್ತು. ನೀಲಾಳ ಗಂಡ ತಾನೇ ಮರೆತುಹೋಗಿದ್ದ.
ಮನುಷ್ಯನ ದೇಹಕ್ಕೆ ಯಾವ ರಾಸಾಯನಿಕ ಎಷ್ಟು ಪ್ರಮಾಣದಲ್ಲಿ ಬೇಕು ಎಂಬ ನಕ್ಷೆ ಅದಾಗಿತ್ತು. ಇದನ್ನು ವಿವರಿಸುತ್ತಿದ್ದಂತೆ ವೈದ್ಯರು ಹೇಳುತ್ತಿರುವ ವಿಷಯವೂ ತಾಳೆಯಾಗುತ್ತಿತ್ತು. ಪ್ರಕೃತಿಯಲ್ಲಿನ ರಾಸಾಯನಿಕಗಳನ್ನು ನೇರವಾಗಿ ಮನುಷ್ಯ ಸ್ವೀಕರಿಸಲಾರ. ಆದ್ದರಿಂದ ಮಾತ್ರೆ/ಗುಳಿಗೆಗಳಲ್ಲಿ ಅಗತ್ಯವಿರುವ ಪ್ರಮಾಣದಲ್ಲಿ ಬೆರೆಸಿ ನೀಡಲಾಗಿರುತ್ತದೆ. ಆದ್ದರಿಂದಲೇ ‘ಹೀಗೆ ತೆಗೆದುಕೊಳ್ಳಬೇಕು, ಇಷ್ಟೇ ತೆಗೆದುಕೊಳ್ಳಬೇಕು’ ಎಂಬ ನಿಯಮಾವಳಿಗಳನ್ನು ಹಾಕಿರುತ್ತಾರೆ. ಅಂತೆಯೇ ವೈದ್ಯರು ಹೇಳಿದಂತೆ ಶತಾವರಿಯಲ್ಲಿ ಸಿದ್ಧ ಔಷಧ ಅಡಗಿದೆ. ಯಾವ ಪ್ರಮಾಣದಲ್ಲಿ ಬೇಕೋ ಅದನ್ನು ಪ್ರಕೃತಿಯೇ ಸಿದ್ಧಪಡಿಸಿ ಇಡುತ್ತದೆ. ಅದನ್ನು ಚೂರ್ಣಮಾಡಿ ಎಷ್ಟು ತೆಗೆದುಕೊಳ್ಳಬೇಕು, ಯಾವ ಸಮಯದಲ್ಲಿ ತೆಗೆದುಕೊಳ್ಳಬೇಕೆಂದು ವೈದ್ಯರ ಸಲಹೆ ಪಡೆದರೆ ಸಾಕು ಎಂದು ಚರ್ಚೆ ಮುಂದುವರೆಯಿತು. ಇದರ ಬಗ್ಗೆ ಇನ್ನಷ್ಟು ವೈಜ್ಞಾನಿಕ ವಿಷಯಗಳನ್ನು ತಿಳಿದರೆ ಮಾತ್ರ ಸೂಕ್ತವೆಂದು ತಿಳಿದು ಮೂವರು ಮಾತನಾಡಿಕೊಂಡು ನಗರದಲ್ಲಿರುವ ವೈದ್ಯರನ್ನು ಭೇಟಿ ಮಾಡುವುದಾಗಿ ತೀರ್ಮಾನಿಸಿಕೊಂಡರು. ಹಳ್ಳಿಗಳಲ್ಲಿ ಕೇವಲ ಹುಟ್ಟಿದ್ದು, ಸತ್ತಿದ್ದು ಮಾತ್ರ ಚರ್ಚೆಯಾಗುತ್ತದೆ ಎಂದಿಲ್ಲ…ಇಂತಹ ಕುತೂಹಲದ ಚರ್ಚೆಗಳೂ ನಡೆಯುತ್ತವೆ !! ಎಂದು ತಮ್ಮನ್ನು ತಾವೇ ಸಮರ್ಥಿಸಿಕೊಂಡು ಗುರುವಾರ ಪೇಟೆಯಲ್ಲಿರುವ ವೆಂಕಟಸ್ವಾಮಿ ಅವರನ್ನು ಭೇಟಿ ಮಾಡುವುದಾಗಿ ತೀರ್ಮಾನಿಸಿದರು. ವೆಂಕಟಸ್ವಾಮಿ ಇದೇ ಮೂರಿನಲ್ಲಿ ಹುಟ್ಟಿ ಬೆಳೆದು ಇದೀಗ ಆಧುನಿಕ ವೈದ್ಯಕೀಯ ಕಲಿತು ನಗರದ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ನೀಲಾಳಿಗೆ ಗುರುವಾರ ಎಂದು ಬಂದೀತೋ ಎಂಬ ಆತುರ..
ಅಂತೂ ಗುರುವಾರ ಬಂದಿತು. ವೈದ್ಯರು, ನೀಲಾ ಮತ್ತು ಅವಳ ಗಂಡ ವೆಂಕಟಸ್ವಾಮಿ ಅವರಿಗೆ ಮೊದಲೇ ಬರುವುದಾಗಿ ತಿಳಿಸಿದ್ದರಿಂದ ಹೊರಟರು. ಆಲ್ಲಿಆರೋಗ್ಯಕೇಂದ್ರಕ್ಕೆ ಭೇಟಿ ಕೊಟ್ಟರೆ ಆಶ್ಚರ್ಯವೇ ಕಾದಿತ್ತು. ಇವರು ಮೊನ್ನೆಯಷ್ಟೇ ಏನನ್ನು ಚರ್ಚಿಸಿದ್ದರೋ ಅದನ್ನು ಒಂದು ನಕ್ಷೆಯಲ್ಲಿ ಚಿತ್ರಿಸಲಾಗಿತ್ತು. ಪರಿಸರದಲ್ಲಿ ಯಾವ ರಾಸಾಯನಿಕ ಎಷ್ಟು ಪ್ರಮಾಣದಲ್ಲಿ ಮಾನವನ ದೇಹಕ್ಕೆ ಬೇಕು ಎಂದು ತುಲನಾತ್ಮಕವಾಗಿ ನೋಡುವ ನಕ್ಷೆ ಅದಾಗಿತ್ತು.
ಇದನ್ನು ನೋಡಿ ವೈದ್ಯರು ‘ಅಬ್ಬ…ಆಧುನಿಕ ವೈದ್ಯಕೀಯ ಎಷ್ಟು ಮುಂದುವರೆದಿದೆ” ಎಂದು ಆಶ್ಚರ್ಯ ಪಟ್ಟರು. ವೆಂಕಟಸ್ವಾಮಿ ಅವರನ್ನು ಭೇಟಿ ಮಾಡಿ ಇನ್ನೂ ಹೆಚ್ಚಗೆ ತಿಳಿಯಬೇಕು ಎನಿಸಿತು. ಅವರೂ ಬಂದಿದ್ದ ರೋಗಿಗಳಿಗೆಲ್ಲ ಔಷಧೋಪಚಾರ ಮಾಡಿ ನಂತರ ಬಿಡುವಾಗಿ ಇವರೊಡನೆ ಚರ್ಚೆಗೆ ಕುಳಿತರು.’ ನೀವು ಕರೆ ಮಾಡಿ ಹೇಳಿದ ನಂತರ ನಾನು ಹಲವು ಪುಸ್ತಕಗಳಲ್ಲಿ ಇದೇ ಅಂಶವನ್ನು ಗಮನಿಸುತ್ತಿದ್ದೆ. ನೀವು ಹೇಳಿದ ಶತಾವರಿಯನ್ನು ನಮ್ಮಲ್ಲೂ ಒಂದೆರದು ಕಡೆ ಉಲ್ಲೇಖಿಸಿದ್ದಾರೆ. ಈ ಶತಾವರಿಯಲ್ಲಿ ದೊಡ್ಡಪ್ರಮಾಣದಲ್ಲಿ ಕ್ಯಾಲ್ಸಿಯಂ, ಫಾಸ್ಪರಸ್, ಮ್ಯಾಂಗನೀಸ್, ಸೋಡಿಯಂ, ಪೊಟಾಷಿಯಂ, ಕ್ಲೋರಿನ್, ಸಲ್ಫರ್ ಇದೆ, ಅಲ್ಲದೆ ಸ್ವಲ್ಪ ಪ್ರಮಾಣದಲ್ಲಿ ಐರನ್, ಕಾಪರ್, ಮ್ಯಾಂಗನೀಸ್, ಐಯೋಡಿನ್, ಜಿಂಕ್, ಸೆಲೆನಿಯಂ ಇದೆಯಂತೆ. ನಿಮಗೆ ಈಗ ನಾನು ಹೇಳಿದ ರಾಸಾಯನಿಕಗಳ ಮಹತ್ವ ಹೇಳುತ್ತೇನೆ. ಈ ನಕ್ಷೆಯನ್ನು ಗಮನಿಸಿ –
– ಹೀಗೆ ಅನೇಕ ಮೂಲಗಳಿಂದ ನಮ್ಮ ದೇಹಕ್ಕೆ ಅಗತ್ಯವಾಗಿರುವ ಅಂಶಗಳನ್ನು ಪಡೆಯಬೇಕು. ಕೆಲವೊಂದು ಗುಳಿಗೆಗಳ ಮೂಲಕ, ಆಹಾರದ ಮೂಲಕ, ಗಾಳಿಯ ಮೂಲಕ, ನೀರಿನ ಮೂಲಕ. ಇದೆಲ್ಲವೂ ಶತಾವರಿಯಲ್ಲಿ ಸಿಗುವುದು” ಎಂದರು ವೆಂಕಟಸ್ವಾಮಿಗಳು. ಇದನ್ನು ಕೇಳಿತ್ತಿದ್ದಂತೆ ನಾಟಿವೈದ್ಯರಿಗೆ ಇದ್ದಕ್ಕಿದ್ದಂತೆ ಆನಂದವೋ ಆನಂದವಾಯಿತು “ಅರೆ ಪ್ರಾಣಿಗಳ ಸೌಭಾಗ್ಯವೇನು? ಜಾಣ್ಮೆ ಏನು? ಭೂಮಿಯಲ್ಲಿ ಸಹಜವಾಗೇ ಸಿಗುವ ಈ ಶತಾವರಿಯನ್ನು ತಿಂದು ದೇಹಕ್ಕೆ ಏನು ಬೇಕೋ ಅದನ್ನು ಕಾಲಾಂತರದಿಂದ ಪಡೆಯುತ್ತಿವೆ. ಪ್ರಾಣಿಗಳು ತಮ್ಮ ಮರಿಗಳಿಗೆ ಹಾಲುಣಿಸಲು ಪ್ರಕೃತಿಯೇ ಔಷಧಿಯನ್ನು ತಯಾರಿಸಿದೆ” ಎಂದು ಹೇಳಿದರು. ಅಲ್ಲಿ ಸೇರಿದ್ದ ನಾಲ್ವರಿಗೂ ಏನೋ ಹೊಸತನ್ನು ಕಲಿತ, ಅರಿತ ಖುಷಿ ಸಿಕ್ಕಿತು. ದೇಹಕ್ಕೆ ಬೇಕಾದ ರಾಸಾಯನಿಕಗಳೆಲ್ಲ ಸಮೃದ್ಧವಾಗಿ ಇರುವ ಆಹಾರ ಪದಾರ್ಥಗಳ ಪಟ್ಟಿಯನ್ನು ವೆಂಕಟಸ್ವಾಮಿ ಅವರಿಂದ ಪಡೆಯುವುದನ್ನು ನೀಲಾ ಮರೆಯಲಿಲ್ಲ. ಅವಳ ತಲೆಗೆ ಇನ್ನೂ ಹಲವಾರು ಕುತೂಹಲದ ಬೀಜಗಳು ಬಂದು ಬಿದ್ದವು. ಇಷ್ಟು ಜ್ಞಾನದ ಸಂಪತ್ತಿನೊಂದಿಗೆ ಎಲ್ಲರೂ ಮತ್ತೆ ಊರಿಗೆ ಮರಳಿದರು. ಭೂಮಿಯಲ್ಲಿ ಬಿತ್ತಿದ ಬೀಜವೊಂದು ಹೇಗೆ ಸಂಪತ್ತೋ ಹಾಗೆ ನೀಲಾಳ ತಲೆಯಲ್ಲಿ ಹೊಕ್ಕ ಆಲೋಚನೆಗಳು…ಅದಕ್ಕೆ ಅವಳದ್ದು ತಣಿಯದ ಕುತೂಹಲ….