– ಲತಾ
(ಅಧ್ಯಾಪಕರು)
ಪೂರ್ಣಪ್ರಮತಿಯಲ್ಲಿ ಕಲಿಕೆ ನಿರಂತರವಾಗಿರಬೇಕೆಂದು ನಾನೇ ಹಲವು ಬಾರಿ ಲೇಖನಗಳಲ್ಲಿ ಬರೆಯುತ್ತಿದ್ದೆ. ಅದರ ಇನ್ನೊಂದು ಮುಖ ಉತ್ಸವದ ತಯಾರಿ ಹಂತದಲ್ಲಿ ಕಂಡುಬಂದಿತು. ಕುವೆಂಪು ಕಲಾಮಂದಿರ ಹೊರಾಂಗಣದ ಅಲಂಕಾರವನ್ನು ನನಗೆ ವಹಿಸಲಾಗಿತ್ತು. ಈ ಜವಾಬ್ದಾರಿ ಸಿಕ್ಕ ಕೂಡಲೆ ಒಂದೊಂದೇ ಕನಸು ಕಾಣಲು ಪ್ರಾರಂಭಿಸಿದೆ. ಉತ್ಸವ ದಿನ ಕಲಾಮಂದಿರ ಹೇಗಿರಬೇಕೆಂಬ ಒಂದೊಂದು ಚಿತ್ರವೂ ಕಣ್ಣ ಮುಂದೆ ಬಂದು ಹೋಯಿತು. ಪೂರ್ಣಪ್ರಮತಿಯ ವಿಶ್ವರೂಪ ದರ್ಶನ ಮಾಡಿಸಬೇಕೆಂಬ ಹಂಬಲ ನನ್ನದಾಗಿತ್ತು. ಪೂರ್ಣ ೧೫ ದಿನಗಳ ತಯಾರಿ ಇದಕ್ಕಾಗಿ ನಡೆಯಿತು. ಉತ್ಸವದ ದಿನ ೯.೦೦ ಕ್ಕೆ ಕಾರ್ಯಕ್ರಮ ಪ್ರಾರಂಭವಾಗಬೇಕಾಗಿತ್ತು. ಕೊನೆಯ ಹಂತದ ತಯಾರಿಗಾಗಿ ಬೆಳಗ್ಗೆ ೬.೩೦ಕ್ಕೆ ಕಲಾಮಂದಿರ ಬಳಿ ಸೇರಿದೆವು. ಮುಗಿದದ್ದು ೯.೦೦ ಕ್ಕೆ. ಇಷ್ಟಾದರೂ ತೋರಣ ಕಟ್ಟುವವರು ಇನ್ನೂ ಬಂದಿರಲಿಲ್ಲ. ಅದು ೯.೦೦ ರ ನಂತರ ಆಯಿತು. ಕೊನೆಗೆ ೯.೧೫ ಕ್ಕೆ ಒಂದು ನೆಮ್ಮದಿಯ ಭಾವ ಮೂಡಿತು. ವಿಶ್ವರೂಪ ದರ್ಶನ ಅಲ್ಲದಿದ್ದರೂ ಆಭಾಸವಾಗದಂತೆ ತಯಾರಾಗಿದೆ ಎಂಬ ನೆಮ್ಮದಿ ಅದಾಗಿತ್ತು.
ಮೊದಲು ಹೇಳಿದಂತೆ ೧೫ ದಿನಗಳ ತಯಾರಿಯಲ್ಲಿ ಕಲಿತದ್ದು ಹೆಚ್ಚು, ಅರಿತದ್ದು ಹೆಚ್ಚು. ಮಕ್ಕಳ ಕಡೆ ಹೆಚ್ಚು ಗಮನ ಕೊಡಲು ಆಗಲಿಲ್ಲ. ಮಕ್ಕಳು ‘ನೀವೇಕೆ ನಮಗೆ ಹೇಳಿಕೊಡುತ್ತಿಲ್ಲ’ ಎಂದು ಹಿಂದೆ-ಮುಂದೆ ಬಂದು ಕೇಳುತ್ತಿದ್ದರು. ‘ಉತ್ಸವದ ನಂತರ ಸಿಗುತ್ತೇನೆ’ ಎಂದು ಹೇಳಿ ಹೊರಟುಹೋಗುತ್ತಿದ್ದೆ. ನಿಜಕ್ಕೂ ಆ ದಿನಗಳಲ್ಲಿ ಮಕ್ಕಳನ್ನು ಬಹಳ Miss ಮಾಡಿಕೊಂಡೆ. ಮಕ್ಕಳು ಎಲ್ಲವನ್ನೂ ಆಶ್ಚರ್ಯದಿಂದ ನೋಡುತ್ತಿದ್ದರು.
ಎರಡು ವಾರಗಳ ಕಾಲ ಶಾಲೆ ಕಾರ್ಖಾನೆಯಾಗಿ ಮಾರ್ಪಟ್ಟಿತ್ತು. ಮೀನಾ ಅಕ್ಕ ಅವರ ಸಾರಥ್ಯದಲ್ಲಿ ಉತ್ಸವದ ತಯಾರಿ ಭರದಿಂದ ನಡೆಯಿತು. ಕಸದಿಂದ ರಸ ಮಾಡುವ ಅವರ ಅದ್ಭುತ ಪ್ರತಿಭೆಗೆ ನಾನು ಮಾರು ಹೋದೆ. ಯಾವುದೇ ಪದಾರ್ಥದಲ್ಲೂ ಅವರೂ ಏನನ್ನೋ ಮಾಡುತ್ತಾರೆ. ಬಾಲಣ್ಣನಿಗೆ ಸನ್ನಿವೇಶಗಳನ್ನು ನೋಡುತ್ತಿದ್ದಂತೆ Photo frame ಕಣ್ಮುಂದೆ ಬರುವಂತೆ ಮೀನಾ ಅಕ್ಕ ಅವರಿಗೆ ಎಲ್ಲಾ ವ್ಯರ್ಥ ಪದಾರ್ಥಗಳಲ್ಲೂ ಸುಂದರ ಕಲೆ ಕಂಡುಬರುತ್ತದೆ. ಈ ಕಲೆಯನ್ನು ಎಲ್ಲರೂ ಕಲಿಯಲೇ ಬೇಕು.
‘ಸ್ವವಿಹಿತ ವೃತ್ಯಾ ಭಕ್ತ್ಯಾ ಭಗವದಾರಧನಮೇವ ಪರಮೋ ಧರ್ಮಃ’ ಎಂಬ ಧ್ಯೇಯ ವಾಕ್ಯವನ್ನು ಸಾಕಾರಗೊಳಿಸುವುದು ಹೇಗೆಂದು ಬಹಳ ಚಿಂತಿಸಿದ್ದಾಯಿತು. ಕೊನೆಗೆ ಬೇರೆ ಬೇರೆ ವೃತ್ತಿಗಳವರನ್ನು ಚಿತ್ರದ ಮೂಲಕ ತಂದು ನಿಲ್ಲಿಸುವುದೆಂದು ತೀರ್ಮನಿಸಿ ಚಿತ್ರಗಳನ್ನು ಬರೆದು, ಬಣ್ಣ ಹಚ್ಚಿ, ಚೌಕಟ್ಟಿಗೆ ಇಟ್ಟು ನಿಲ್ಲಿಸಲಾಯಿತು. ಇದು ಹೊರಾಂಗಣದ ಪ್ರಮುಖ ಕೇಂದ್ರಬಿಂದುವಾಯಿತು. ವಿಷ್ಣುಶಾಸ್ತ್ರಿ ಎಂಬ ೬ನೇ ತರಗತಿಯ ಹುಡುಗ ಅಷ್ಟೂ ಚಿತ್ರಗಳನ್ನು ಬಿಡಿಸಿದ್ದ. ಅವನ ಕೈಯ ಜಾದುವನ್ನು ನಾವೆಲ್ಲರೂ ಉತ್ಸವದಲ್ಲಿ ನೋಡಿದ್ದೇವೆ.
ಇನ್ನು ಇದುವರೆಗೆ ಶಾಲೆಯು ಮಾಡಿರುವ, ಪಾಲ್ಗೊಂಡಿರುವ ಸನ್ನಿವೇಶಗಳ ಚಿತ್ರಗಳನ್ನು ಪೂರ್ಣಪ್ರಮತಿ ಪ್ರಕೃತಿ, ಅಧ್ಯಾತ್ಮ, ಸಂಸ್ಕೃತಿ ಎಂದು ಮೂರು ಭಾಗ ಮಾಡಲಾಗಿತ್ತು. ಅವುಗಳ ಸರಣಿಯನ್ನೂ ನಾವೆಲ್ಲರೂ ಕಂಡಿದ್ದೇವೆ. ಪೂರ್ಣಪ್ರಮತಿಯ ಹುಟ್ಟು-ಬೆಳವಣಿಗೆ, ಧ್ಯೇಯವಾಕ್ಯಗಳನ್ನು ಮೊದಲಿಗೆ ಪ್ರದರ್ಶಿಸಿ ನಂತರ ಅವುಗಳ ಸಾಕ್ಷಾತ್ಕಾರವನ್ನು ತೋರಿಸಬೇಕೆಂಬ ಹಂಬಲದಿಂದ ಅದೇ ರೀತಿಯಲ್ಲಿ ಎಲ್ಲವನ್ನೂ ಜೋಡಿಸಲಾಗಿತ್ತು. ಇದು ಶ್ರೀನಿವಾಸಣ್ಣನವರ ಕಲ್ಪನೆಯಂತೆ ಮೂಡಿಬರದಿದ್ದರೂ ಆ ದಿಕ್ಕಿನಲ್ಲಿ ಒಂದು ಪ್ರಯತ್ನವಾಯಿತು.
ಐದೂ ವರ್ಷಗಳ ಸಂವತ್ಸರ ಸೂತ್ರವನ್ನು ಒಂದೇ ಚಿತ್ರದಲ್ಲಿ ತರುವುದು ಕಷ್ಟಸಾಧ್ಯವಾಗಿತ್ತು. ಸ್ಮಿತಾ ಅವರಿಗೆ ಎಲ್ಲ ವರ್ಷದ ವಿಷಯವನ್ನು ವಿವರಿಸಿ ಸುಮ್ಮನಾಗಿಬಿಟ್ಟೆ. ಅವರು ಹಲವಾರು ಬಾರಿ ಚಿತ್ರವನ್ನು ಮಾಡಿ ಎಲ್ಲರ ಅಭಿಪ್ರಾಯಗಳನ್ನು ಸಂಗ್ರಹಿಸಿ ಕೊನೆಗೆ ೨/೦೨/೨೦೧೮ ರಂದು ತಯಾರಾಗಿ ಬಂದು. ಭರ್ತಿ ಒಂದು ತಿಂಗಳ ಪ್ರಯತ್ನ ಇದರ ಹಿಂದೆ ಇದೆ. ಎಷ್ಟು ಬಾರಿ ವಿಮರ್ಶೆ ಹೇಳಿದರೂ ಬೇಸರವಿಲ್ಲದೆ ಮಾಡಿದ ಸ್ಮಿತಾ ಅಕ್ಕ ಅವರಿಗೆ ಧನ್ಯವಾದ ಹೇಳಲೇಬೇಕು. ಮನೆಯಿಂದ ಮಾಡುವುದು ಸೂಕ್ತವೆಂದು ಹೇಳಿದರೂ ಶಾಲೆಯಲ್ಲಿದ್ದ ಸಂಭ್ರಮವನ್ನು ಕಳೆದುಕೊಳ್ಳಲು ಬಯಸದೆ ಪುಟ್ಟ ಮಗುವಿನಂತೆ ಅವರು ಶಾಲೆಯಲ್ಲೇ ತಮ್ಮ ಕೆಲಸ ಮುಗಿಸಿದರು. ಇದೊಂದು ಮರೆಯಲಾಗದ ಅನುಭವ.
ಭಕ್ತಿಯ ಬಗ್ಗೆ ನುಡಿಗಳನ್ನು ಬರೆಯಬೇಕೆಂದಾಗ ಗುಜರಿ ಅಂಗಡಿಯಿಂದ ತಗಡನ್ನು ತರಲು ಹೋದಾಗ ಒಂದು ಹೊಸ ಅನುಭವ. ತಗಡು ಅದೆಲ್ಲೋ ತಳದಲ್ಲಿ ಸೇರಿಕೊಂಡಿತ್ತು. ಅವರು ‘ಇಲ್ಲ, ತೆಗೆಯಲು ಆಗೊಲ್ಲ’ ಎಂದು ಹೇಳಿದರು. ಆಗ ನಾನು ಮತ್ತು ರಾಮಣ್ಣ ಅದನ್ನು ಎಳೆದು, ತೂಕ ಮಾಡಿಸಿ ತಂದೆವು. ೧೦೦ ರೂಪಾಯಿಗೆ ದೊಡ್ಡ ತಗಡಿನ ರೋಲ್ ಸಿಕ್ಕಿತು.
ಹೀಗೆ ಹೇಳುತ್ತಿದ್ದರೆ ಹರಟೆ ಮುಗಿಯುವುದೇ ಇಲ್ಲ. ನಮ್ಮ ಶಾಲೆಯಲ್ಲಿ ಉತ್ಸವವೆಂದರೆ ಕಲಿಕೆಯ ಉತ್ಸವ, ಸಂಬಂಧಗಳ ಉತ್ಸವ. ಅದು ಚಿರಾಯುವಾಗಲೆಂದು ಹಾರೈಸುತ್ತಾ ಮುಂದಿನ ಉತ್ಸವವನ್ನು ಎದುರುನೋಡುತ್ತಿದ್ದೇನೆ.