Kanakadaasa Jayanti – 2013

ಕನಕದಾಸ ಜಯಂತಿ
ದಿನಾಂಕ: ೨೦/೧೧/೨೦೧೩
ಸ್ಥಳ: ಪೂರ್ಣಪ್ರಮತಿ ಪ್ರಾಥಮಿಕ ಶಾಲೆ, ಬೆಂಗಳೂರು

ಸಂತಕವಿಯೊಬ್ಬರ ಜನ್ಮದಿನವನ್ನು ಸ್ಮರಿಸುವುದರ ಮೂಲಕ ಮಕ್ಕಳಲ್ಲಿ ಸಮಾಜದ ಸಾಮರಸ್ಯದ ಬಗ್ಗೆ ಜಾಗೃತಿ ಮೂಡಿಸಲು ದಿನಾಂಕ ೨೦/೧೧/೨೦೧೩ ರಂದು (ಕಾರ್ತಿಕಮಾಸ,ಕೃಷ್ಣಪಕ್ಷ, ತೃತೀಯ) ಕನಕದಾಸ ಜಯಂತಿಯನ್ನು ಮೊದಲ ಬಾರಿಗೆ ಆಚರಿಸಲಾಯಿತು. ಕನಕದಾಸರ ಕೃತಿಗಳು, ಹಾಡುಗಳು ಪರಿಚಯವಿದ್ದರೂ, ಅವರ ಜೀವನವನ್ನೂ, ಸಮಾಜಮುಖಿ ಕಾರ್ಯವನ್ನೂ ಪರಿಚಯಿಸುವುದಕ್ಕಾಗಿ ಈ ದಿನವನ್ನು ಮೀಸಲಿಡಲಾಗಿತ್ತು. ಅಂದು ಬೆಳಗ್ಗೆ ೮.೪೫ಕ್ಕೆ ಕಾರ್ಯಕ್ರಮವು ಕನಕದಾಸರದ್ದೇ ಕೀರ್ತನೆಯೊಂದಿಗೆ ಪ್ರಾರಂಭವಾಯಿತು. ಅತಿಥಿಗಳಾಗಿ ಲಕ್ವಳ್ಳಿ ಮಂಜುನಾಥ್ ಅವರು ಆಗಮಿಸಿದ್ದರು. ಇವರು ವೃತ್ತಿಯಿಂದ ವಕೀಲರು ಮತ್ತು ಕನಕ ಅಧ್ಯಯನ ಪೀಠದ ಸದಸ್ಯರೂ ಆಗಿದ್ದಾರೆ. ಇವರೊಂದಿಗೆ ನಮ್ಮವರೇ ಆದ ಸತ್ಯನಾರಾಯಣಾಚಾರ್ಯರು ಆಗಮಿಸಿದ್ದರು. ದೀಪ ಬೆಳಗಿಸಿ ಕಾರ್ಯಕ್ರಮವು ಆರಂಭಿಸಿದೆವು.

ಈ ದಿನದ ವಿಶೇಷವೆಂದರೆ ಕನಕದಾಸರ ಹಲವು ಕೀರ್ತನೆಗಳನ್ನು ಅಭ್ಯಾಸ ಮಾಡಿ ಮಕ್ಕಳೆಲ್ಲರೂ ಅತಿಥಿಗಳ ಮುಂದೆ ಪ್ರಸ್ತುತ ಪಡಿಸಿದ್ದು. ಕನಕದಾಸರು ದೇವರನ್ನು ಕುರಿತು ಪದ್ಯಗಳನ್ನು ರಚಿಸಿ ಹಾಡು-ನೃತ್ಯಗಳ ಮೂಲಕ ಸಮಾಜದ ಜನರನ್ನು ಎಚ್ಚರಿಸದಂತೆ ನಮ್ಮ ಮಕ್ಕಳೂ ಅವರ ಹಾಡುಗಳನ್ನು ಹಾಡಿ, ನೃತ್ಯವನ್ನು ಮಾಡಿ ತಾವೂ ಜಾಗೃತಾಗಿರುವುದಾಗಿ ಸೂಚಸಿದರು. ದಶವತಾರಗಳನ್ನು ಸರಳ ಭಾಷೆಯಲ್ಲಿ ಹೇಳಿರುವ ದೇವಿ ನಮ್ಮ ದ್ಯಾವರು ಬಂದವ್ರೆ ಎಂಬ ಹಾಡನ್ನು ಮಕ್ಕಳು ಚೆನ್ನಾಗಿ ಅಭಿನಯಿಸಿ ತೋರಿಸಿದರು. ಕನಕದಾಸರ ಹುಟ್ಟೂರು, ಜೀವನವನ್ನು ಪರಿಚಯಿಸಲಾಯಿತು. ಪುಟ್ಟ ಮಕ್ಕಳು ರಾಮಾಯಣದ ಸನ್ನಿವೇಶವನ್ನು ಮಾಡಿ ತೋರಿಸಿದರು.

ಮಂಜುನಾಥ್ ಅವರು ಮಾತನಾಡುತ್ತಾ:
ಕನಕಜಯಂತಿಯನ್ನು ಭಕ್ತಿಯ ದಿನವೆಂದು ಆಚರಿಸುತ್ತೇವೆ. ಬೇರೆ ಬೇರೆ ಕಡೆ ಕನಕದಾಸ ಜಯಂತಿಯ ಆಚರಿಸುತ್ತಾರೆ. ಆದರೆ ಪೂರ್ಣಪ್ರಮತಿಯಲ್ಲಿ ಕನಕದಾಸ ಜಯಂತಿ ಆಚರಿಸುತ್ತಾರೆ ಎಂದು ಕೇಳಿ ಆಶ್ಚರ್ಯವಾಯಿತು. ಅದಕ್ಕೆ ಬೆಳಗಿನಿಂದ ನಿಮ್ಮೊಂದಿಗೆ ಇರಲು ಬಂದೆ. ನೀವೆಲ್ಲ ಹಾಡನ್ನು ಹೇಳಿದಿರಿ, ನರ್ತನ ಮಾಡಿದಿರಿ. ಕನಕದಾಸರು ಸಾಮಾನ್ಯ ಕುಟುಂಬದಲ್ಲಿ ಬಂದವರು. ಭಕ್ತಿಯಿಂದ ದೇವರನ್ನು ಒಲಿಸಿಕೊಳ್ಳುವುದೇ ಎಲ್ಲರ ಉದ್ದೇಶ. ಇದನ್ನು ಸರಳ ಹಾಡುಗಳಲ್ಲಿ ಎಲ್ಲರಿಗೂ ತಿಳಿಸಿದ್ದು ಕನಕದಾಸರು. ಅವರು ದೈಹಿಕವಾಗಿ ಮರಣಹೊಂದಿ ಬಹಳ ದಿನಗಳಾಗಿದ್ದರೂ ಆದಿಕೇಶವನನ್ನು ಒಲಿಸಿಕೊಳ್ಳಲು ಅವರು ನಡೆದಿರುವ ಹಾದಿ ನಮಗೂ ಅವಶ್ಯಕ ಎಂಬ ಕಾರಣಕ್ಕೆ ಅವನ್ನು ಸ್ಮರಿಸಿಕೊಳ್ಳುತ್ತೇವೆ. ನಿಮ್ಮೊಂದಿಗೆ ವಿದ್ಯಾರ್ಥಿಯಾಗಿ ನಾನು ಕಲಿತೆ. ’ಭಕ್ತಿಯಿಂದ ಪೂಜೆ ಮಾಡುವುದು, ತಪ್ಪಿನ ಹಾದಿಯಿಂದ ರಕ್ಷಿಸು ಎಂದು ದೇವರನ್ನು ಬೇಡುವುದು’ ನಮ್ಮ ದಾರಿಯಾಗಬೇಕು. ತಪ್ಪು ಮಾಡಿದಾಗ ನಿಮ್ಮ ಶಿಕ್ಷಕರು ತಿದ್ದುವಂತೆ ಕನಕದಾಸರು ದೇವರು ತನ್ನನ್ನು ತಿದ್ದಬೇಕೆಂದು ಹಾಡಿನ ಮೂಲಕ ಕೇಳುತ್ತಾರೆ. ಧ್ಯಾನ ಮಾಡುವ ಬುದ್ಧಿಯನ್ನು ಕೊಡೆಂದು ಬೇಡಿಕೊಳ್ಳುತ್ತಾರೆ. ಆ ಭಕ್ತಿಯ ಮಾರ್ಗವನ್ನು ತಿಳಿಯಲು ಮತ್ತು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಕನಕದಾಸರ ಹಾಡುಗಳನ್ನು ನಾವು ಕಲಿಯಬೇಕು ಮತ್ತು ಅರ್ಥಮಾಡಿಕೊಳ್ಳಬೇಕು. ನೀವು ಈ ಪ್ರಯತ್ನ ಮಾಡುತ್ತಾ ಇಂದು ಕನಕದಾಸ ಜಯಂತಿಯನ್ನು ಆಚರಿಸುತ್ತಿದ್ದೀರಿ. ನಿಮ್ಮ ಪ್ರಯತ್ನ ಯಶಸ್ವಿಯಾಗಲಿ. ಪುಸ್ತಕದಲ್ಲಿರುವುದಷ್ಟೇ ಅಲ್ಲದೆ ಬೇರೆ ಅನೇಕ ವಿಚಾರಗಳನ್ನು ನಿಮ್ಮ ಶಾಲೆಯಲ್ಲಿ ಕಲಿಸುತ್ತಿದ್ದಾರೆ. ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ ಎಂಬ ಕಿವಿಮಾತನ್ನು ಮಕ್ಕಳಿಗೆ ಹೇಳಿದರು.

ನಂತರ ಸತ್ಯನಾರಾಯಣಾಚಾರ್ಯರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು. ಕನಕ ದಾಸರ ಕೀರ್ತನೆಯೊಂದರ ಸಾಲನ್ನು ಸರಳವಾಗಿ ಮಕ್ಕಳಿಗೆ ಅರ್ಥಮಾಡಿಸಿದರು. ಇವರ ಮಾತಿನ ಸಾರಾಂಶ ಹೀಗಿದೆ: ಸತ್ಯವನ್ನು ಹೇಳಲು ಧೈರ್ಯ ಬೇಕು. ಜಯಂತಿ ಎಂದರೆ ಹುಟ್ಟಿದ ಹಬ್ಬ. ನೀವೆಲ್ಲ ನಿಮ್ಮ ಹುಟ್ಟಿದ ಹಬ್ಬವನ್ನು ಆಚರಿಸಲು ದೀಪವನ್ನು ಹಚ್ಚುತ್ತೀರಿ. ನಮ್ಮ ನಡುವೆ ಇಲ್ಲದ ಹಿರಿಯರ ಹುಟ್ಟಿದ ಹಬ್ಬಕ್ಕಾಗಿ ಶ್ರಾದ್ಧ ಮಾಡುತ್ತೇವೆ. ಜಯಂತಿ ಎಂದರೆ ಇನ್ನೂ ಬದುಕುರುವವರಿಗೆ ಮಾಡುವುದು. ಅಂದರೆ ನಾವು ಇಂದು ಕನಕಜಯಂತಿ ಮಾಡುತ್ತಿದ್ದೇವೆ. ಕನಕದಾಸರು ಹಾಡುಗಳ ಮೂಲಕ ಭಕ್ತಿಯ ಮೂಲಕ ನಮ್ಮೊಳಗೆ ಇದ್ದಾರೆ. ಶರೀರದಿಂದ ಅಲ್ಲದೆ ತತ್ವವಾಗಿ ನಮ್ಮೊಳಗೆ ಇದ್ದಾರೆ. ಒಂದು ಕಾಲದಲ್ಲಿ ಭಕ್ತಿ ಎಂದರೆ ಇಷ್ಟುದ್ದ ಗಡ್ಡ ಬಿಟ್ಟು, ಕಾಡಿನಲ್ಲಿ ತಪಸ್ಸು ಮಾಡುವ, ಕಚ್ಚೆ ಹಾಕಿದವರಿಗೆ ಮಾತ್ರ ಮೀಸಲು ಎಂಬ ಅಭಿಪ್ರಾಯವಿತ್ತು. ಉಳಿದವರು ಕೆಲಸದಲ್ಲಿ ಮಾತ್ರ ಇರಬೇಕು ಎಂಬ ಭಾವನೆ ಇತ್ತು. ಆದರೆ ಕನಕ ದಾಸರು ಬಂದು ’ಭಕ್ತಿ ಎಂಬುದು ಯಾವುದೋ ಒಂದು ಗುಂಪಿನದಲ್ಲ. ಭಕ್ತಿ ಎಂಬುದು ಎಲ್ಲರ ಸ್ವತ್ತು’ ಎಂದು ಜನರಲ್ಲಿ ಜಾಗೃತಿ ಮೂಡಿಸಿದರು. ’ನಾವು ಗಾಯತ್ರಿ ಜಪ ಮಾಡುತ್ತೇವೆ, ಯಜ್ಞೋಪವೀತ ಹಾಕಿದ್ದೇವೆ, ನಾವು ಮಾತ್ರ ಭಕ್ತಿ ಮಾಡಬೇಕು’ ಎಂದು ನಿಮ್ಮ ಮನಸ್ಸಿಲ್ಲಿದ್ದರೆ ತೆಗೆದುಹಾಕಿ. ಅದಕ್ಕೇ ಕನಕದಾಸ ಜಯಂತಿ ಮಾಡುವುದು. ಪ್ರತಿಯೊಬ್ಬರು ದೇವಸ್ಥಾನದಲ್ಲಿ ಕೂತು ಪೂಜೆ ಮಾಡುವುದಾದರೆ ಕೃಷಿ ಮಾಡುವವರಾರು? ನಾವು ತಿನ್ನುವುದು ಏನನ್ನು? ಲೋಕದಲ್ಲಿ ಎಲ್ಲ ತರಹದ ಜನ ಇದ್ದರೆ ಮಾತ್ರ ಸಮಾಜ ಸರಿಯಾಗಿ ನಡೆಯುವುದು. ಪೂಜೆ, ಅನುಷ್ಠಾನ ಮಾಡುವಾಗ ಶುದ್ಧವಾಗಿರಬೇಕು. ಬಿ.ಟಿ.ಎಸ್ ಬಸ್‌ನಲ್ಲಿ ಹೋಗುವಾಗ ಎಲ್ಲರೊಂದಿಗೆ ನಾವು ಒಂದಾಗಿ ಇರಬೇಕು. ಮಡಿ ಮೈಲಿಗೆ ಮನೆಯ ಪೂಜೆಯ ಸಂದರ್ಭದಲ್ಲಿ ಮಾತ್ರ ಎಂಬುದನ್ನು ಗಮನಿಸಿ ನಾವು ಅಂತಃಕರಣದಿಂದ ಒಪ್ಪಿಕೊಳ್ಳುವ ವಿಷಯ ಏನೆಂದರೆ, ಸಮಾಜದಲ್ಲಿ ಯಾವುದೇ ಕಾರಣದಿಂದ ಜಾತಿಭೇದ, ಮತಭೇದ ಅನ್ನುವ ಕೀಳು ಭಾವನೆಗಳನ್ನು ಉಳಿಸಿಕೊಳ್ಳುವುದಿಲ್ಲ. ಆ ರೀತಿ ತಪ್ಪು ಮಾಡುವ ವ್ಯಕ್ತಿಗಳನ್ನು ದೂಷಿಸುತ್ತೇವೆ. ಜಾತಿಮತ ಭೇದವನ್ನು ಕಿತ್ತೊಗೆಯಬೇಕು ಎಂಬ ದೀಕ್ಷೆಯನ್ನು ಹೊಂದಿದ್ದೇವೆ ಎಂದು ಪ್ರತಿಜ್ಞೆ ಮಾಡಿದರೆ ಕನಕದಾಸರು ನಗುತ್ತಿರುತ್ತಾರೆ.
ಹಸುವಿನ ಮಾಂಸದೊಳು ಉತ್ಪತ್ತಿ ಕ್ಷೀರವು,
ವಸುಧೆಯೊಳು ಭೂ ಸುರರು ಉಣಲಿಲ್ಲವೇ?
ಹಸುವಿನ ಮಾಂಸದಿಂದ ಹಾಲು ಉತ್ಪತ್ತಿಯಾದರೂ ಭೂಸುರರೆಂದು ಕರೆಯಲ್ಪಡುವ ಬ್ರಾಹ್ಮಣರು ಕುಡಿದರಲ್ಲ?! ಎಂದು ಕನಕದಾಸರು ಪದ್ಯದ ಮೂಲಕ ಕೇಳುತ್ತಾರೆ. ಹಿಂದೆ ಕೆಲವು ಬ್ರಾಹ್ಮಣರು ಮಾಂಸ ತಿನ್ನುವವರು ಎಂದು ದೂರ’ ಎಂದು ಭೇದವನ್ನು ತೋರಿಸುತ್ತಿದ್ದರು. ದೇವತಾನುಷ್ಠಾನ ಮಾಡುವವರು ತಿನ್ನಬಾರದು ಎಂದು ಹೇಳಿದ್ದಾರೆ. ಯಾರೂ ತಿನ್ನಬಾರದು ಎಂದಲ್ಲ. ಅದನ್ನು ಒತ್ತಿ ಹೇಳಿದ್ದು ಕನಕದಾಸರು. ಕೈಗಳಲ್ಲಿ ೩೬, ಕಾಲುಗಳಲ್ಲಿ ೨೬, ಭುಜಗಳಲ್ಲಿ ೪, ಸೊಂಟದಲ್ಲಿ ೨ ಹೀಗೆ ೬೮ ಕೀಲುಗಳ ದೇಹಕ್ಕೆ ನಾವು ಅತಿಥಿಗಳು ಮಾತ್ರ ಎಂದು ಕನಕದಾಸರ ಒಂದು ಪದ್ಯವನ್ನು ವಿವರಿಸಿದರು. ಈ ಕನಕದಾಸ ಜಯಂತಿಯ ಆಚರಣೆಯು ಸಮಾಜಪರವಾದ ಮಕ್ಕಳನ್ನು ಕೊಡಲಿ ಎಂದು ಹಾರೈಸುತ್ತಾ ವಿರಮಿಸಿದರು.

ಅತಿಥಿಗಳಿಗೆ ಧನ್ಯವಾದಗಳನ್ನು ಹೇಳಿ ಕಾರ್ಯಕ್ರಮಕ್ಕೆ ತೆರೆಯನ್ನು ಹಾಕಲಾಯಿತು. ಸಭೆಯಲ್ಲಿ ಹಾಡಿದ ದೇವಿ ನಮ್ಮ ದ್ಯಾವರು ಬಂದವ್ರೆ, ಕುರುಬರು ನಾವು, ಈಶ ನಿನ್ನ ಚರಣ ಭಜನೆ ಮುಂದಾದ ಹಾಡುಗಳು ಕಿವಿಯಲ್ಲಿ ಗುಯ್ ಗುಡುತ್ತಿದ್ದವು. ಕನಕದಾಸರು ನಮ್ಮ ಭಕ್ತಿಯ ತರಂಗಗಳಲ್ಲಿ ಜೀವಂತವಲ್ಲವೆ?!

For more photos Click Here

Leave a Reply

Notice Board

pūrṇapramati is recruiting teachers

pūrṇapramati is recruiting dedicated research oriented teachers for 1 to 10 grades and pre-primary Montessori.

 

Registration is open for the next academic year

Purnapramati opens its registration for the next academic year: November 2017 and June 2018-19. Applications are being issued. Kindly help spread the word to interested parents.

Socialize & Share

Follow us on different social networking website and share it