Trip to Amruth Mahal Kaval

ಅಮೃತ ಮಹಲ್ ಕಾವಲ್‌ನಲ್ಲಿ ಗಾಂಧಿಜಯಂತಿಯ ಆಚರಣೆ

ದಿನಾಂಕ: 02.10.2013

ಸ್ಥಳ: ದೊಡ್ಡ ಉಳ್ಳಾರ್ತಿ ಗ್ರಾಮ, ಚಳ್ಳಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ

 

ನಮ್ಮ ಯಾತ್ರೆಯ ಹಿನ್ನಲೆ:

ಆಧುನಿಕತೆ, ನಾಗರಿಕತೆ ಮತ್ತು ವ್ಯವಹಾರದ ಉದ್ದೇಶಗಳಿಗೆ ಪ್ರಕೃತಿಯನ್ನು ಬಳಸಿಕೊಳ್ಳುವ ಮತ್ತು ನಿಧಾನವಾಗಿ ಬಲಿಕೊಡುವ ಮನುಷ್ಯನ ಅತಿಬುದ್ಧಿಗೆ ಮತ್ತೊಂದು ಉದಾಹರಣೆಯಾಗಿ ಅಮೃತ ಮಹಲ್ ಕಾವಲ್ ಇದೆ. ಇದೊಂದು ಹುಲ್ಲುಗಾವಲು. ಈ ಹುಲ್ಲುಗಾವಲು ಕೃಷ್ಣದೇವರಾಯನ ಕಾಲದಿಂದಲೂ ಅಮೃತ ಮಹಲ್ ಎಂಬ ವಿಶೇಷ ತಳಿಯ ಹಸುಗಳಿಗೆ ಮತ್ತು ಆಡು-ಕುರಿಗಳಿಗೆ ಆಹಾರ ಒದಗಿಸುವ ಹುಲ್ಲುಗಾವಲಾಗಿತ್ತು. ದೈತ್ಯಾಕಾರದ, ದಷ್ಟ-ಪುಷ್ಠವಾದ ಈ ಅಮೃತ ಮಹಲ್ ಹೋರಿಗಳನ್ನು ಟಿಪ್ಪುಸುಲ್ತಾನನು ಯುದ್ಧದಲ್ಲೂ ಬಳಸುತ್ತಿದ್ದನು.

ಈ ಕಾವಲ್‌ಅನ್ನು ಅವಲಂಬಿಸಿ ಹೈನುಗಾರಿಕೆ, ಕಂಬಳಿ ತಯಾರಿಕೆ ಹೀಗೆ ಸಾವಿರಾರು ಜನರಿಗೆ ಉದ್ಯೋಗ, ಜೀವನ ನಡೆಯುತ್ತಿತ್ತು. ಮೊದಲು 4 ಲಕ್ಷ ಎಕರೆ ಇದ್ದ ಹುಲ್ಲುಗಾವಲು ಈಗ 56 ಸಾವಿರ ಎಕರೆಯಾಗಿದೆ. ಸಾವಿರಾರು ಎಕರೆಗಳ ಈ ಭೂಮಿಯನ್ನು ಇತ್ತೀಚಿನ ದಿನಗಳಲ್ಲಿ ಅನೇಕ ಸಂಸ್ಥೆಗಳಿಗೆ ಬೇರೆ ಬೇರೆ ಉದ್ದೇಶಗಳಿಗೆ ನೀಡಲಾಗಿದ್ದು ಅಲ್ಲಿನ ಜನರ ಜೀವನವನ್ನು ಕಿತ್ತುಕೊಳ್ಳಲಾಗುತ್ತಿದೆ. ಅಂದು ಗಾಂಧೀಜಿ ಅವರು ಬಹಳ ಪ್ರಮುಖವಾಗಿ ಹೇಳಿದ್ದ ಗ್ರಾಮೋದ್ಯೋಗ ಯೋಜನೆಗಳು, ಮುಂದಾಲೋಚನೆಯಿಲ್ಲದ-ಯೋಜನಾಬದ್ಧ ನಡೆಗಳಿಲ್ಲದ ಇಂದಿನ ಸರಕಾರದ ಹುಚ್ಚುತನಕ್ಕೆ ಬಲಿಯಾಗುತ್ತಿದೆ. ಮಕ್ಕಳಿಗೆ ಇದನ್ನು ಪ್ರತ್ಯಕ್ಷವಾಗಿ ತೋರಿಸುವುದರ ಮೂಲಕ ಗಾಂಧಿ ಜಯಂತಿಯನ್ನು ಸಾರ್ಥಕಗೊಳಿಸುವುದು ನಮ್ಮ ಉದ್ದೇಶವಾಗಿತ್ತು. ಅದಕ್ಕಾಗಿ ಚಿತ್ರದುರ್ಗ ಜಿಲ್ಲೆಯ, ಚಳ್ಳಕೆರೆ ತಾಲ್ಲೂಕಿನ ದೊಡ್ಡಉಳ್ಳಾರ್ತಿಗೆ ನಮ್ಮ ಪಯಣ ಸಾಗಿತ್ತು.

ಬೆಂಗಳೂರಿನಿಂದ ಉಳ್ಳಾರ್ತಿಗೆ…

ಮಕ್ಕಳೆಲ್ಲ ಅಕ್ಟೋಬರ್ ೨ರಂದು ಬೆಳಗಿನ ಜಾವ ೪ ಗಂಟೆಗೇ ತಯಾರಾಗಿ ಶಾಲೆಯ ಬಳಿ ಸೇರಿದ್ದರು. ೪.೧೫ಕ್ಕೆ ನಮ್ಮ ಬಸ್ಸು ಪ್ರಯಾಣ ಆರಂಭಸಿತು. ಅಮೃತ ಮಹಲ್ ಕಾವಲ್‌ಬಗ್ಗೆ ಹೆಚ್ಚಿನ ಅರಿವನ್ನು ನೀಡಲು ಭಾರತೀಯ ವಿಜ್ಞಾನ ಸಂಸ್ಥೆಯಿಂದ ದುರ್ಗಾ ಮಾಧವ್ ಮಹಾಪಾತ್ರ ಎಂಬುವವರು ನಮ್ಮೊಂದಿಗೆ ಬಂದಿದ್ದರು. ಮಕ್ಕಳೆಲ್ಲಾ ಸಂಭ್ರಮದಿಂದ ಎಂದಿನಂತೆ ಉತ್ಸಾಹದ ಚಿಲುಮೆಗಳಾಗಿ ಶಾಲೆಯ ಪ್ರಾರ್ಥನೆ, ಹಾಡು, ದೇವರ ನಾಮಗಳನ್ನು ಹೇಳುತ್ತಾ ಸಾಗಿದರು. ಅರುಣೋದಯದ ಸೊಬಗನ್ನು, ಸೂರ್ಯೋದಯವನ್ನೂ ಕಂಡು ಖುಷಿಪಟ್ಟರು. ಸುಮಾರು 8.00 ಗಂಟೆಗೆ ಚಳ್ಳಕೆರೆ ಸಮೀಪದ ಲಕ್ಕನಾಳದ ಒಂದು ತೋಟದಲ್ಲಿ ಬೆಳಗಿನ ಉಪಾಹಾರಕ್ಕಾಗಿ ನಿಂತೆವು. ಅಲ್ಲಿಂದ ಮುಂದೆ 9.15 ಗಂಟೆಗೆ ದೊಡ್ಡಉಳ್ಳಾರ್ತಿಗೆ ತಲುಪಿದೆವು. ಅಮೃತ ಮಹಲ್ ಕಾವಲ್‌ನಲ್ಲಿ ಹೆಜ್ಜೆ ಹಾಕಲಾರಂಭಿಸಿದೆವು.

 

ಅಮೃತ ಮಹಲ್ ಕಾವಲ್‌ನಲ್ಲಿ…

ಇದೊಂದು ಹುಲ್ಲುಗಾವಲು. ಇಲ್ಲಿ ಸೆಪ್ರೆಸ್ ಜಾತಿಯ ತ್ರಿಕೋನಾಕಾರದ ಕಾಂಡವಿರುವ ಹುಲ್ಲು ಬೆಳೆಯುತ್ತದೆ. ಮತ್ತು ರಶ್ ಎಂದು ಕರೆಯುವ ಸಸ್ಯಗಳನ್ನು ಕಾಣಬಹುದು. ಮುಖ್ಯವಾಗಿ ಹುಲ್ಲುಗಾವಲು ಪ್ರದೇಶದಲ್ಲಿ ಮುಳ್ಳಿನ ಪೊದೆಗಳು, ಕಡಿಮೆ ಎತ್ತರದ ಮರಗಳು ಬೆಳೆದಿವೆ. ಹುಣಸೆ, ಬೇವಿನ ಮರಗಳು ಅಲ್ಲಲ್ಲಿ ಕಾಣಸಿಗುತ್ತವೆ. ಹುಲ್ಲುಗಳಲ್ಲಿ ಸುಮಾರು 300 ಜಾತಿಯ ಹುಲ್ಲುಗಳಿವೆ. ಹುಲ್ಲುಗಾವಲಿನಲ್ಲಿ ಬೆಳೆಯುವ ಮರಗಳು, ಹುಲ್ಲುಗಳು ಭೂಮಿಯಲ್ಲಿ ಹೆಚ್ಚು ಆಳಕ್ಕೆ ಬೇರನ್ನು ಹೊಂದಿರುವುದಿಲ್ಲ. ಮಾವಿನಮರದಂತೆ (ಭೂಮಿಯಲ್ಲಿ ಆಳವಾಗಿ ಬೇರನ್ನು ಹೊಂದಿರುವ ಮರಗಳಂತೆ) ಇವಕ್ಕೆ ಹೆಚ್ಚಿನ ಪೋಷಕಾಂಶಗಳು, ನೀರಿನ ಸೌಲಭ್ಯದ ಅಗತ್ಯವಿರುವುದಿಲ್ಲ. ಇವು ಭೂಮಿಯ ಮೇಲಿನ ಪದರವನ್ನೇ ಆಶ್ರಯಿಸಿ ಇರುತ್ತವೆ. ಮಳೆಯ ಪ್ರಮಾಣವೂ ಹುಲ್ಲುಗಾವಲಿನಲ್ಲಿ ಕಡಿಮೆ.

ಹುಲ್ಲುಗಾವಲಿನಲ್ಲಿ ಆಶ್ಚರ್ಯ ತರಿಸುವ ಬೇವಿನ ಮರವನ್ನು ನಾವು ನೋಡಿದೆವು. ಅದರ ಕಾಂಡದಿಂದ ಹಾಲಿನಂತೆ ಬಿಳಿಯಾದ ದ್ರವವು ಹೊರಸೂಸುತ್ತಿತ್ತು. ಮರಗಳಿಗೆ ಬೇಕಾದ ಪ್ರಾಥಮಿಕ ಪೋಷಕಾಂಶಗಳನ್ನು ಜೀರ್ಣಿಸಿಕೊಂಡ ನಂತರ ಆನುಷಂಗಿಕ ಪೋಷಕಾಂಶಗಳು ಹೆಚ್ಚಾಗಿ ಹೊರ ಬರುತ್ತಿರುವ ಸೋರಿಕೆ ಇದಾಗಿತ್ತು. ಇದು ಬಹಳ ಅಸಹಜ ಕ್ರಿಯೆಯಾಗಿದ್ದು, 5-6 ದಿನಗಳಿಂದ ಈ ಸೋರಿಕೆ ಉಂಟಾಗಿದೆ ಎಂದು ಸ್ಥಳೀಯರು ಹೇಳಿದರು. ಇಂತಹ ಸೋರಿಕೆಗಳಿಂದ ಮರದ ಮೇಲ್ಪದರವೂ ಹೊರ ಬರುವುದರಿಂದ ಸೋರಿಕೆ ನಿರಂತರವಾದರೆ ಹೊರ ಪದರವನ್ನೂ ಕಳೆದುಕೊಳ್ಳಬಹುದು. ಆದರೆ ಸೋರಿದ ದ್ರವವು ಭೂಮಿಯಲ್ಲಿ ಸೇರಿ ಅದೇ ಜಾತಿಯ ಮರಗಳು ಮತ್ತಷ್ಟು ಹುಟ್ಟಲು, ಅದೇ ಕುಲದ ರಕ್ಷಣೆಗಾಗಿಯೂ ಈ ಕ್ರಿಯೆ ಸಹಾಯಕವಾಗಬಹುದು. ಇದೊಂದು ರಕ್ಷಣಾತಂತ್ರ, ಮನುಷ್ಯರಿಗೆ ವಿಷವಾಗಬಹುದು.

ಸಾಮಾನ್ಯವಾಗಿ ಹುಲ್ಲುಗಾವಲಿನಲ್ಲಿ ಪಿಯಾಸಿ, ಸೈಪ್ರಸಿ ಎಂಬ ಎರಡು ಜಾತಿಯ ಹುಲ್ಲುಗಳಿರುತ್ತವೆ. ಸೈಪ್ರಸ್ ಹೊಂಡೋಫೋಲಿಯಾ (SH) ಇವು 1 ರಿಂದ 2 ಅಡಿ ಎತ್ತರದವರೆಗೆ ಬೆಳೆಯಬಲ್ಲವು. ಭಾರತದಲ್ಲಿ 60 ಜಾತಿಯ ಸೆಡ್ಜಸ್‌ಗಳಿವೆ. ಇವು ಭೂಮಿಯ ಮೇಲಿನ ಪದರದ ಪೋಷಕಾಂಶಗಳನ್ನು ಮಾತ್ರ ಬಳಸಿಕೊಳ್ಳುತ್ತವೆ. ಇವುಗಳು ಬಲೆಯಂಥಹ ಬೇರಿನಿಂದ ಬೆಳವಣಿಗೆಗೆ ಸಾಕಾಗುವಷ್ಟು ಪೋಷಕಾಂಶಗಳನ್ನು ಹಿಡಿದಿಟ್ಟುಕೊಳ್ಳುತ್ತವೆ. ಹುಲ್ಲುಗಳೂ ಕೂಡ ಮನುಷ್ಯರು ತಿನ್ನಲು ಸಾಧ್ಯವಾಗುವ ಹಣ್ಣುಗಳನ್ನು, ಹೂವುಗಳನ್ನು ಹೊಂದಿರುತ್ತವೆ. ಇವುಗಳು ಕಾರ್ಬೋಹೈಡ್ರೇಟ್‌ಗಳನ್ನು ಒಳಗೊಂಡ ಬೀಜಗಳನ್ನು ತಯಾರಿಸಬಲ್ಲವು. ಗಿರಿಜನರು, ಕಾಡುಜನರು ಇದರ ಸ್ಪಷ್ಟ ಅರಿವನ್ನು ಹೊಂದಿರುತ್ತಾರೆ. ನಾವು ಅಕ್ಕಿ ತಿನ್ನುವಂತೆ ಅವರು ಇದರ ಬೀಜಗಳನ್ನು ಬಳಸುತ್ತಾರೆ. ಎಷ್ಟೋ ಬಾರಿ ವ್ಯವಸಾಯ ಭೂಮಿಯ ಫಲವತ್ತತೆಯು ಅಕ್ಕ-ಪಕ್ಕದಲ್ಲಿರುವ ಇಂತಹ ಹುಲ್ಲುಗಾವಲಿನ ಬಳುವಳಿಯೂ ಆಗಿರುತ್ತದೆ.

ಬರಗಾಲದಲ್ಲಿ ಹಳ್ಳಿಗರಿಗೆ ಆಹಾರವಾಗಿದ್ದ ಕಾರೆ ಹಣ್ಣುಗಳನ್ನು ಅದರ ಗಿಡವನ್ನು ನೋಡಿದೆವು. ಬಾಯಿ ಇಲ್ಲದೆ ಇದ್ದರೂ ಕೇವಲ ಕಾಲುಗಳ ಉಜ್ಜುವಿಕೆಯಿಂದ ಶಬ್ದ  ಮಾಡುವ ಕ್ರಿಕೆಟ್ ಹುಳುಗಳನ್ನು ಕಂಡೆವು. ಗೂಸುಂಬೆ, ಬುಲ್‌ಬುಲ್ ಪಕ್ಷಿಗಳು ನಮಗೆ ಕಾಣಲು ಸಿಕ್ಕವು. ಮರವನ್ನು ಆಶ್ರಯಿಸಿ ಬೆಳೆಯುವ ನಂತರ ಮರದ ಸಾರವನ್ನೆಲ್ಲಾ ಹೀರಿ ತಾನೇ ಬಲಿಷ್ಠವಾಗುವ ಮಂಕಿ ಲಾಡರ್ ಅಥವಾ ಲಯಾನಸ್ ಎಂದು ಕರೆಯಲ್ಪಡುವ ಬಳ್ಳಿಯನ್ನು ನೋಡಿದೆವು. ಈ ಬಳ್ಳಿಗಳು ಎಲ್ಲಾ ಮರಗಳನ್ನು ಆಶ್ರಯಿಸುವುದಿಲ್ಲ. ಕೆಲವೊಂದು ಮರಗಳನ್ನು ಮಾತ್ರ ಹುಡುಕಿ ಅದಕ್ಕೆ ಹಬ್ಬುತ್ತವೆ. ಬಲೆಯಂತೆ ಒಂದು ಮರದಿಂದ ಒಂದು ಮರಕ್ಕೆ ಹಬ್ಬುತ್ತಾ ಮಂಗಗಳಿಗೆ ಒಂದೆಡೆಯಿಂದ ಒಂದೆಡೆ ಹೋಗಲು ಸಹಾಯಕವಾಗಿವೆ. ಇದನ್ನು ಮೂಳೆ ಚಿಕಿತ್ಸೆಗಾಗಿ ಬಳಸುವರು ಎಂಬುದು ನಮಗೆ ಹೊಸವಿಷಯವಾಗಿತ್ತು. ಕ್ಯಾಕ್ಟಸ್‌ನ ಎರಡು ಜಾತಿಯ ಗಿಡಗಳನ್ನು ಕಂಡೆವು. ಬಳೆಯಾಕಾರದಲ್ಲಿ ಮರದಲ್ಲಿ ಜೋತಾಡುತ್ತಿದ್ದ ಕಾಯಿಗಳನ್ನು ಕಂಡೆವು. ಅದನ್ನು ಮುರಿದಾಗ ಆಲ್ಕೊಲಾಯಿಡ್ ನಂತಹ ದ್ರವ ಹೊರಬರುತ್ತಿತ್ತು. ನೈಸರ್ಗಿಕ ವಿಷವಾಗಿ ಕೆಲಸಮಾಡುವ ನಮ್ಮ ಜೀರ್ಣಕ್ರಿಯೆಯನ್ನು ನಿಲ್ಲಿಸುವ ಗುಲಗಂಜಿಯನ್ನು ಹೆಕ್ಕಿ ತೆಗೆದೆವು. ದೊಡ್ಡ ಗಾತ್ರದ ಗ್ರಾಸ್ ಹಾಪರ್ ನೋಡಿ ಮಕ್ಕಳು ಆನಂದಿಸಿದರು.

ಸ್ಥಳೀಯರಾದ ಹನುಮಂತಪ್ಪನವರ ಮಾತಿನಲ್ಲಿ ಮೊದಲಿದ್ದ ಕಾವಲ್ ಮತ್ತು ಈಗಿರುವ ಕಾವಲ್…

ಇಲ್ಲಿ ಮೊದಲು ತುರುವುಗಟ್ಟಲೆ (300-400) ಹಸುಗಳಿರುತ್ತಿದ್ದರು. 8-9 ವರ್ಷಗಳಿಂದೀಚೆಗೆ ಎಲ್ಲಾ ಹೋಗಿಬಿಟ್ಟವು. ಫಾರಂ ಅಂತ ಮಾಡಿ ಮುಳ್ಳುತಂತಿ ಹಾಕಿಬಿಟ್ಟರು. ಕುರಿ ಫಾರಂ, ಗೋ ಶಾಲೆ ಅಂತ ಸ್ವಲ್ಪ ಜಾಗ ಮಾತ್ರ ಉಳಿಸಿಕೊಂಡಿದ್ದಾರೆ. ಬರಗಾಲದಲ್ಲಿ ಸರಕಾರವೇ ಹಸುಗಳಿಗೆ ಹುಲ್ಲು ಕೊಡುತ್ತಿತ್ತು. ಹಾಲನ್ನು ಅವರೇ ತೆಗೆದುಕೊಂಡು ಹೋಗುತ್ತಿದ್ದರು ಮತ್ತೆ ನಾವು ಪೇಟೆಗೆ ಹೋಗಿ ಮಾರಿ ಬರುತ್ತಿದ್ದೆವು. ಮೊದಲು ಬರಿ ಮರಗಳಿದ್ದವು. ದೊಡ್ಡ ಕಾಡಿತ್ತು. ಈಗ ಬಯಲಾಗಿ ಹೋಯ್ತು. ಸರಕಾರದವರು ಎಲ್ಲಾ ಕಡಿದುಕೊಂಡು ಬಿಟ್ಟರು. ಕಟ್ಟಿಗೆಗೆ, ರೈಲಿನ ಇದ್ದಿಲಿಗೆ ಮರಗಳನ್ನು ಕಡಿದುಕೊಂಡು ಮಾರಿಬಿಟ್ಟರು. ಹಂದಿ, ಜಿಂಕೆ, ಕೃಷ್ಣಮೃಗ, ನವಿಲು, ಮುಂತಾದ ಪ್ರಾಣಿಗಳು ಇರುತ್ತಿದ್ದವು. ನೀರೆ ಇಲ್ಲ ವ್ಯವಸಾಯಕ್ಕೆ, 120-150 ಅಡಿ ಕೊರೆದು ಬೋರ್ ಹಾಕಿ ನೀರಾವರಿ ಮಾಡಿಕೊಂಡು ವ್ಯವಸಾಯ ಮಾಡಬೇಕು. ಮೊನ್ನೆ ಮಳೆ ಬಂದುದ್ದರಿಂದ ನೀರು ಬಂತು.

 

ಸಿದ್ಧಪ್ಪ ಮತ್ತು ತಿಮ್ಮೇಶ ಅವರು ಕಂಡಿರುವ ಅಮೃತ ಮಹಲ್ ಕಾವಲ್

ಈಗ ಅಮೃತ ಮಹಲ್ ಕಾವಲ್ ಆಕಳು ಅಜ್ಜಾಂಪುರದಲ್ಲಿದೆ, ಇಲ್ಲಿ ಇಲ್ಲ. 300 ರಾಸುಗಳಿವೆ. ಅಮೃತ ಮಹಲ್ ಹೋರಿಗಳು ನೋಡಲು ಸುಂದರವಾಗಿರುತ್ತವೆ. ಅವು ಬಂಗಾರದಂತೆ, ಒಂದು ಹೋರಿ 1 ಲಕ್ಷ ಅಥವಾ 1.20 ಲಕ್ಷಕ್ಕೆ ಮಾರಾಟವಾಗುತ್ತದೆ. ಅಮೃತ ಮಹಲ್ ನೋಡೋಕೆ ಸುಂದರ. ಅಮೃತ ಮಹಲ್ ಆಕಳಿನ ಹಾಲು ಬಹಳ ಶಕ್ತಿ ಕೊಡತ್ತೆ. ದಿನಕ್ಕೆ 5-8 ಲೀಟರ್ ಹಾಲು ಕೊಡುತ್ತವೆ. ಮೇವು ಜಾಸ್ತಿ ಬೇಕು. ಪ್ರತಿದಿನ ಯಾರು ನೋಡಿಕೊಳ್ಳುತ್ತಾರೋ ಅವರೇ ಅದರ ಹತ್ತಿರ ಹೋಗಲು ಸಾಧ್ಯವಾಗುವುದು. ಹೊಸ ಮನುಷ್ಯರು ಹೋದರೆ ಬಿಡುವುದಿಲ್ಲ ಅವು, ಅಷ್ಟೆತ್ತರ ಇರುತ್ತವೆ. ನೋಡಿ ಬನ್ನಿ ಒಮ್ಮೆ. ಈಗ ಎಲ್ಲಾ ಬೇಲಿ ಹಾಕಿಬಿಟ್ಟರು ಅಮೃತ ಮಹಲ್ ಇಲ್ಲ, ರಾಮ್ ಬುಲೆಟ್ ಅಂತ ಕುರಿ ತಂದರು, ಅದು ಇಲ್ಲ, ಸಿಂಧಿ ಹಸು ತಂದರು. ಅದೂ ಇಲ್ಲ. ಈಗ ಯಾರು ಯಾರೋ ಕೊಂಡುಬಿಟ್ಟಿದ್ದಾರೆ. ಕಾಂಪೌಂಡ್ ಹಾಕ್ತಾ ಇದ್ದಾರೆ. ಒಬ್ಬ ರೈತ 100 ರಿಂದ 400 ಕುರಿಗಳವರೆಗೆ ಸಾಕಿಕೊಂಡಿರುತ್ತಾನೆ. ಈರುಳ್ಳಿ, ಸಜ್ಜೆ, ಶೇಂಗಾ, ತೊಗರಿ, ಅಲಸಂದಿ, ರಾಗಿ, ಭತ್ತಗಳನ್ನು ಬೆಳೆಯುತ್ತೇವೆ. ವರ್ಷಕ್ಕೆ 2 ಬೆಳೆ ಬೆಳೆಯುತ್ತೇವೆ.

ಕಂಬಳಿ ತಯಾರಿಕೆ

ಅಮೃತ ಮಹಲ್ ಕಾವಲ್‌ಅನ್ನು ಅವಲಂಬಿಸಿ ಅಲ್ಲಿನ ಸ್ಥಳೀಯರು ಜೀವನಕ್ಕೆ ನಂಬಿರುವ ಉದ್ಯೋಗ ಹೈನುಗಾರಿಕೆ ಮತ್ತು ಕಂಬಳಿ ತಯಾರಿಕೆ. ಇಲ್ಲಿನ ಕಂಬಳಿಗಳಿಗೆ ಒಳ್ಳೆಯ ಬೇಡಿಕೆ ಇದೆ. ಒಂದು ಕಂಬಳಿ ತಯಾರಿಕೆಗೆ ಕನಿಷ್ಠ 4 ದಿನಗಳಾದರೂ ಬೇಕು. ಇದರಲ್ಲಿ ವಿಶೇಷ ತಜ್ಞತೆಯನ್ನು ಹೊಂದಿರುವ ಇಲ್ಲಿನ ಜನ ವಾರಕ್ಕೆ 2-3 ಕಂಬಳಿಗಳನ್ನು ತಯಾರು ಮಾಡುತ್ತಾರೆ. ಒಂದು ಕಂಬಳಿ 800-1000 ರೂಪಾಯಿಗಳವರೆಗೆ ಮಾರಾಟವಾಗುತ್ತದೆ. ಕುರಿಯಿಂದ ತುಪ್ಪಳವನ್ನು ತಂದು ಯಂತ್ರಕ್ಕೆ ಕೊಟ್ಟು ಬಿಡಿ-ಬಿಡಿಯಾಗಿ ಹತ್ತಿಯನ್ನು ಸ್ವಚ್ಛಗೊಳಿಸುವಂತೆ ಸ್ವಚ್ಛಗೊಳಿಸಿ, ಚರಕದಿಂದ ನೂಲನ್ನು ತೆಗೆದು ಅದಕ್ಕೆ ಹುಣಸೆ ಬೀಜದ ಪುಡಿಯಿಂದ ತಯಾರಿಸಿದ ಗಂಜಿಯನ್ನು ಹಂಚಿ ಹದಗೊಳಿಸುತ್ತಾರೆ. ನಂತರ ಅದನ್ನು ಬಾಚಣಿಕೆಯಂತಹ ಸಾಧನದಿಂದ ಬಾಚಿ ನೂಲನ್ನು ನೇಯಲು ತಯಾರಿಟ್ಟುಕೊಳ್ಳುತ್ತಾರೆ. 9 ಕಂಬಿಗಳ ಒಂದು ಮರದ ಪಟ್ಟಿಯಲ್ಲಿ ಈ ನೂಲನ್ನು ಎಣಿಸಿಕೊಂಡು ಹಾಕುತ್ತಾರೆ. ಈ ಪ್ರಕ್ರಿಯೆಯಂತೂ ಎಂತಹವರನ್ನೂ ಆಶ್ಚರ್ಯಗೊಳಿಸುತ್ತದೆ. ಎಂತಹ ಅದ್ಭುತ ಕೈಚಳಕ!! ಒಂದು ಕಂಬಳಿಗೆ 380 ರಿಂದ 400 ಎಳೆಗಳು ಬೇಕಾಗುತ್ತವೆ. ಒಂದು ಕಡ್ಡಿಗೆ ಆ ದಾರವನ್ನು ವಿಶೇಷ ವಿಧಾನದಲ್ಲಿ ಸುತ್ತಿ ಇಟ್ಟುಕೊಳ್ಳುತ್ತಾರೆ. ಸೀರೆ ನೇಯುವಂತೆ ಕೈಮಗ್ಗದ ಮಾದರಿಯಲ್ಲಿ ತಮ್ಮದೇ ಸಾಧನಗಳಿಂದ ಹೆಣಿಗೆಯನ್ನು ಆರಂಭಿಸುತ್ತಾರೆ. ಹೆಣೆಯುತ್ತಾ ಹೋದಂತೆ ಅದು ಒಂದು ದೊಡ್ಡ ಮರದ ದಿಮ್ಮಿಗೆ ಸುತ್ತಿಕೊಳ್ಳುತ್ತಾ ಹೋಗುತ್ತದೆ. ಬೆಳಗಿನಿಂದ ಒಂದು ಹಳ್ಳದಂತಹ ತಗ್ಗುಪ್ರದೇಶದಲ್ಲಿ ನಿಂತು ಮನೆಯ ಯಜಮಾನ ಈ ಕಂಬಳಿಯನ್ನು ನೇಯುತ್ತಾ ಹೋಗುತ್ತಾನೆ. ಹೆಂಡತಿ ಚರಕದಿಂದ ನೂಲು ತೆಗೆಯುತ್ತಾಳೆ, ಮಕ್ಕಳು ಗಂಜಿ ಹಚ್ಚಿ ಚೊಕ್ಕ ಮಾಡುತ್ತಾರೆ. ಹೀಗೆ ಮನೆಮಂದಿ ಎಲ್ಲಾ ಒಂದೊಂದು ಕೆಲಸವನ್ನು ಮಾಡುತ್ತಾರೆ. ಅಲ್ಲದೆ ಒಂದೊಂದು ಸಾಧನದ ತಯಾರಿ ಒಂದೊಂದು ಜನರ ಗುಂಪು ಮಾಡುತ್ತದೆ. ಆದ್ದರಿಂದ ಎಲ್ಲರಿಗೂ ಇಲ್ಲಿ ಉದ್ಯೋಗವಿದೆ. ಒಂದು ಕಂಬಳಿ ತಯಾರಿಕೆಯು ಹಲವು ಹಂತಗಳಲ್ಲಿ ಎಷ್ಟೋ ಜನರಿಗೆ ಕೆಲಸ ನೀಡುತ್ತದೆ. ಆದರೆ ಈಗ ಇದಾವುದರ ಪರಿವೆಯೇ ಇಲ್ಲದೆ ಸರಕಾರ ಕಾವಲ್‌ಅನ್ನು ಶಾಶ್ವತವಾಗಿ ಮುಚ್ಚಿಬಿಡುವ ಯೋಚನೆಯಲ್ಲಿದೆ.

ಮುಂದೆ…

ಮಕ್ಕಳು ಈ ಪರಿಸರವನ್ನು ಬಹಳ ಕುತೂಹಲದಿಂದ ಗಮನಿಸಿದರು. ಕೋಳಿಗಳನ್ನು, ಕೋಳಿಯ ಮರಿಗಳನ್ನು ನೋಡಿ ಪ್ರಶ್ನಿಸಿದರು. ಒಂದು ಕೋಳಿಮೊಟ್ಟೆಯಿಂದ ಮರಿ ಹೊರ ಬರಲು 1 ತಿಂಗಳು ಕಾವು ಕೊಡಬೇಕು. ದೊಡ್ಡದಾಗಿ ಬೆಳೆಯಲು ಯಾವ ಖಾಯಿಲೆಯೂ ಬರದಿದ್ದರೆ 6-7 ತಿಂಗಳು ಬೇಕು. ಇವು 1.5-2 ವರ್ಷ ಬದುಕಿರುತ್ತವೆ ಎಂಬ ವಿಷಯವನ್ನು ಅರಿತರು. ಮೇಕೆ ಮರಿಗಳಿಗೆ ಹುಲ್ಲು ತಿನ್ನಿಸಿ ಖುಷಿಪಟ್ಟರು. ಅಲ್ಲಿಂದ ಮುಂದೆ ಊರಿನ ಸರಕಾರಿ ಶಾಲೆಯ ಆವರಣದಲ್ಲಿ ಹಿರಿಯರ ಮಾತುಗಳನ್ನು ಕೇಳಲು ಶಿಸ್ತಿನಿಂದ ಕೂತರು.

ಪಂಚಾಯತಿ ಸದಸ್ಯರು ಮಕ್ಕಳನ್ನು ಕುರಿತು ಆಡಿದ ಮಾತುಗಳು

ನಮ್ಮ ಪ್ರಾಂಶುಪಾಲರು ಪೂರ್ಣಪ್ರಮತಿಯ ಪರಿಚಯವನ್ನು ಚಳ್ಳಕೆರೆಯ ಜನರಿಗೆ ಮಾಡಿಕೊಟ್ಟರು. ಅಲ್ಲಿನ ಶಾಲೆಯ ಉಮೇಶ್ ಎಂಬುವರು ‘ಭಾರತೀಯ ಸೈನಿಕರೆ ವಂದನೆ’ ಎಂಬ ಹಾಡನ್ನು ಹಾಡಿದರು.

 

ಕರಿಯಣ್ಣ ಅವರು ಮಾತನ್ನಾರಂಭಿಸುತ್ತಾ…..

“ಗಾಂಧಿ ಜಯಂತಿಯ ದಿನ ನಿಮ್ಮನ್ನೆಲ್ಲ ಇಲ್ಲಿ ಕರೆದುಕೊಂಡು ಬಂದು ಒಳ್ಳೆಯ ಕೆಲಸ ಮಾಡಿದ್ದಾರೆ. ಹಳ್ಳಿ ಇದ್ದರೆ ಡೆಲ್ಲಿ. ಪಟ್ಟಣದಲ್ಲಿ ಏನೇ ಸಿಕ್ಕರೂ ಆಹಾರ ಮಾತ್ರ ಇಂಟರ್‌ನೆಟ್ ನಲ್ಲಿ ಬರುವುದಿಲ್ಲ. ರೈತರೇ ಬೆಳೆಯಬೇಕು. ವಿಜ್ಞಾನಿಗಳು ಬಾಂಬ್ ಹೇಗೆ ತಯಾರು ಮಾಡುವುದು ಅಂತ ಯೋಚಿಸುತ್ತಾರೆ ಬದಲಾಗಿ ಇಳುವರಿ ಹೆಚ್ಚಿಸುವುದರ ಬಗ್ಗೆ ಯೋಚಿಸಲಿ. ಆಹಾರದ ಗುಣಮಟ್ಟವನ್ನು ತರಲು ಚೀನಾದಂತೆ ನೈಸರ್ಗಿಕವಾಗಿ ಇಳುವರಿಯನ್ನು ಹೆಚ್ಚಿಸುವಂತೆ ದಾರಿ ಹುಡುಕಬೇಕು. ಈಗ ತಾನೆ ಅಮೃತ ಮಹಲ್ ಕಾವಲ್ ನೋಡಿ ಬಂದಿದ್ದೀರ, ಅಲ್ಲಿರುವ ಚಿಕ್ಕ ಗಿಡ, ಗಾಳಿ, ಕೋಗಿಲೆ ಗಾನ ಎಲ್ಲ ಒಂದನ್ನೊಂದು ಅವಲಂಬಿಸಿವೆ. ನಾವು ಹೀಗೆಲ್ಲ ವಿಚಾರ ಮಾಡಬೇಕು. ಶತಮಾನಗಳ ಕೆಳಗೆ ರಾಜರುಗಳು ಯೋಚನೆ ಮಾಡಿ ನಮ್ಮ ರಾಜ್ಯಕ್ಕೆ 4 ಲಕ್ಷ ಎಕರೆಯ ಕಾವಲ್ ಅನ್ನು ಕೊಟ್ಟು ಹೋದರು. ಸರಕಾರದವರು ಈಗ ಅದನ್ನೆಲ್ಲ ದೋಚಿ ಬರಿ 56 ಸಾವಿರ ಎಕರೆ ಇದೆ. ಈಗ ಆ ಜಾಗವನ್ನು ನಮಗ್ಯಾರಿಗೂ ತಿಳಿಯದಂತೆ ಬೇರೆ ಬೇರೆ ಕಂಪನಿಗಳಿಗೆ ಕೊಡುತ್ತಿದ್ದಾರೆ. ಹೀಗೆ ಮಾಡಿದರೆ ಕಾವಲನ್ನೇ ನಂಬಿಕೊಂಡು, ಕಾವಲಿನಿಂದಲೇ ಜೀವಿಸುತ್ತಿರುವ ನಾವು ಎಲ್ಲಿ ಹೋಗಬೇಕು. ಪಟ್ಟಣಕ್ಕೆ ಹೋಗಿ ನಿಮ್ಮಂತೆ ಬದುಕುವುದು ನಮಗೆ ಗೊತ್ತಿಲ್ಲ. ಇಲ್ಲಿ ಮಳೆ ಕಡಿಮೆ. 60-70 ವರ್ಷದಿಂದ ಇತಿಹಾಸವೂ ಬರಿ ಬರಗಾಲವನ್ನೇ ತೋರಿಸುವುದು. ಆದರೆ ಸ್ವಲ್ಪ ಮಳೆ ಬಂದರೆ ಹುಲ್ಲು ಬೆಳೆದುಕೊಳ್ಳುತ್ತವೆ. ಕುರಿ, ಮೇಕೆ, ದನಗಳು ಆ ಹುಲ್ಲನ್ನೇ ಮೇಯುತ್ತವೆ. ವಯಸ್ಸಾದವರೂ ಕಾವಲಿಗೆ ಹೋಗಿ ಕುರಿ, ಮೇಕೆ, ದನಗಳನ್ನು ಮೇಯಲು ಬಿಟ್ಟು ಕುಳಿತುಕೊಂಡರೆ ಸಾಕು, ಜೀವನ ನಡೆಯುತ್ತದೆ. ನಮ್ಮಿಂದ ಸೈನಿಕರಿಗೆ ಉತ್ತಮ ಕಂಬಳಿ ಹೋಗುತ್ತವೆ, ಬಾಣಂತಿಯರಿಗೆ ಇದೇ ಉಳ್ಳಾರ್ತಿ ಕಂಬಳಿ ಬೇಕು ಎನ್ನುತ್ತಾರೆ.

ಮಲೆನಾಡಿಗೆ ಹೋದರೆ ಇಷ್ಟೆತ್ತರದ ಹುಲ್ಲಿದೆ, ಆದರೆ ಅಮೃತ ಮಹಲ್ ಹಸುಗಳು ಆ ಹುಲ್ಲನ್ನು ತಿನ್ನುವುದಿಲ್ಲ. ಅವಕ್ಕೆ ಈ ಹುಲ್ಲೇ ಆಹಾರ. ನೀವೆಲ್ಲ ಭಾರತದ ಪ್ರಜೆಗಳು. ಸಂವಿಧಾನವಿದೆ, ಅರಣ್ಯ ಇಲಾಖೆ ಕಾಯ್ದೆ ಇದೆ, ರೈತರ ಪರವಾಗಿ ಕಾಯ್ದೆಗಳಿವೆ. ಪ್ರಾಣಿ-ಪಕ್ಷಿ-ಪರಿಸರಕ್ಕಿರುವ ಸಂಬಂಧ ಏನೆಂಬುದು ಎಲ್ಲರಿಗೂ ತಿಳಿದಿದೆ. ಆದರೆ ಸರಕಾರ ಸುಳ್ಳು ವರದಿಗಳನ್ನು ನೀಡಿ ನಮ್ಮ ಕಾವಲಿನ ಅದೆಷ್ಟೋ ಭಾಗವನ್ನು ನಮ್ಮಿಂದ ಕಿತ್ತುಕೊಂಡಿದೆ, ಈಗಲೂ ಕಿತ್ತುಕೊಳ್ಳುತ್ತಿದೆ. ಅದರ ವಿರುದ್ಧ ಮೊಕದ್ದಮೆ ಹಾಕಿದರೆ ಅದನ್ನು ಹೈಕೋರ್ಟ್ ತಳ್ಳಿಹಾಕಿದೆ. ಕೋರ್ಟಿನ ಸಮಯ ಹಾಳುಮಾಡಿದಿರಿ ಅಂತ ನಮಗೇ 70ಸಾವಿರ ದಂಡ ಹಾಕಿದ್ದಾರೆ. ಹೀಗೆ ಆದರೆ ಪ್ರಜಾಪ್ರಭುತ್ವಕ್ಕೆ ಬೆಲೆ ಇಲ್ಲವೆ? ಹಾಗಿದ್ದರೆ ಸಂವಿಧಾನವನ್ನೇ ಬದಲಿಸಬೇಕಿತ್ತು. ನಾವು ಮಾತನಾಡದೆ ಗುಳೆ ಹೋಗುತ್ತಿದ್ದೆವು. ಭೂಪಾಲ್ ಅನಿಲ ಸೋರಿಕೆ ಕೇಳಿದ್ದೀರ ನೀವು. ಎಷ್ಟೊ ಮಕ್ಕಳು ಇಂದಿಗೂ ಅಂಗವಿಕಲರಾಗಿ ಹುಟ್ಟುತ್ತಾರೆ. ಬೆಳೆ ಬೆಳೆಯುವುದಿಲ್ಲ ಅಲ್ಲಿ. ಜಪಾನ್‌ನ ಹಿರೋಶಿಮ-ನಾಗಾಸಾಕಿಯಲ್ಲಿ ಹಾಗೇ ಆಗಿದೆ. ಸಿರಿಯಾ ಹೇಗೆ ಹಾಳಾಯಿತು?! ಇಲ್ಲಿ ಕಂಪನಿಗಳು ಬಂದರೆ ನಮ್ಮ ಗತಿಯೂ ಹೀಗೇ ಆಗುತ್ತದೆ.

ನಾಗೇಶ್ ಹೆಗಡೆ ಅವರು ನಮ್ಮ ಚಳ್ಳಕೆರೆಯ ಬಗ್ಗೆಯೆ ಹಾರುವ ತಟ್ಟೆಯಲ್ಲಿ ಬೇವು-ಬೆಲ್ಲ ಅಂತ ಪುಸ್ತಕ ಬರೆದಿದ್ದಾರೆ. ಅವರು ನಮಗೆಲ್ಲ ಗುರುಗಳಿದ್ದಂತೆ. ಇಲ್ಲಿ ಅಣುವಿದ್ಯುತ್ ಸ್ಥಾವರವನ್ನು ತರಲು ಹೊರಟಿದ್ದಾರೆ. ಅದೇನಾದರೂ ಸೋರಿಕೆಯಾದರೆ ನಾವೆಲ್ಲಾ ಸಾಯುತ್ತೇವೆ. ಸರಕಾರವು ಈರೀತಿ ಮಾಡಿದರೆ ನಕ್ಸಲೈಟರು ಸೃಷ್ಟಿಯಾಗದೆ ಮತ್ತೇನು ಆಗಲು ಸಾಧ್ಯ? ಅವರಾರು ಹೆಬ್ಬೆಟ್ಟಿನವರಲ್ಲ! ನಿಮ್ಮಂತೆ ಓದಿದವರು. ತಮ್ಮ ಹಕ್ಕುಗಳಿಗಾಗಿ ಇಂದು ಉಗ್ರರೀತಿಯಿಂದ ಹೋರಾಡುತ್ತಿದ್ದಾರೆ. ಇದು ಬೇಕಾ ಸಮಾಜದಲ್ಲಿ?! ನಾವಾರು ಹೆದರುವುದಿಲ್ಲ. ಸಮಾಜಕ್ಕೆ ಇಲ್ಲಿನ ಜನರಿಗೆ ಒಳ್ಳೆಯದಾಗುವುದಕ್ಕೋಸ್ಕರ ಜೈಲಿಗೆ ಹೋಗಲೂ ಸಿದ್ಧ. ನಮ್ಮ ಕಾವಲ್ ಉಳಿಯಬೇಕು ಅಲ್ಲಿಯವರೆಗೆ ನಾವು ಹೋರಾಡುತ್ತೇವೆ. ಇಡೀ ನಮ್ಮ ಊರಿನ ಜನರೆಲ್ಲ ಒಗ್ಗಟ್ಟಾಗಿ ಹೋರಾಡಿ ಪ್ರಾಣ ಬೇಕಾದರೂ ಬಿಡುತ್ತೇವೆ, ಕಾವಲ್ ಬಿಡುವುದಿಲ್ಲ. ಇದೆಲ್ಲ ಸರಿಯಾಗಬೇಕಾದರೆ ನೀವೆಲ್ಲ ಬೆಳೆದು ದೊಡ್ಡ ವಿಚಾರವಂತರಾಗಬೇಕು. ನಾವೆಲ್ಲ ದಡ್ಡರಾಗಿದ್ದೇವೆ ನಮಗೆ ನಿಮ್ಮಂತೆ ಓದಿರಲಿಲ್ಲ ಆ ಅನುಕೂಲವಿರಲಿಲ್ಲ. ನೀವೆಲ್ಲ ವಿಚಾರವಂತರಾಗಿ, ಮುಂದೆ ನಮ್ಮ ದೇಶ ನಿಮ್ಮಿಂದ ಬದಲಾಗಬೇಕು. ಹೊರದೇಶದಿಂದ ಬಂದ ಕಂಪನಿಗಳೆಲ್ಲಾ ನಮ್ಮ ರೈತರ ಮುಂದೆ ಬದನೆಕಾಯಿ ಅಷ್ಟೆ. ರೈತ ಇಂದು ಸಾಲಗಾರನಾಗಿದ್ದಾನೆ, ವಿಷ ಕುಡಿದು ಸಾಯುತ್ತಾನೆ. ಇದು ಬೇಕಾ ನಮಗೆ?! ಅನ್ನದಾತ ಚೆನ್ನಾಗಿರಬೇಕು. ನೀವೀಗ ಸಣ್ಣ ಸಸಿಗಳಿದ್ದ ಹಾಗೆ, ಮುಂದೆ ನಿಮ್ಮ ಬೇರು, ಕೊಂಬೆ ದೊಡ್ಡದಾಗಿ ಬೆಳೆಯುತ್ತವೆ. ಪೂರ್ಣಪ್ರಮತಿ ಅಂತ ಹೆಸರು ಇದೆ ನಿಮ್ಮ ಶಾಲೆಗೆ ನೀವೆಲ್ಲ ಚೆನ್ನಾಗಿ ಕಲಿತು ಉತ್ತಮ ಪ್ರಜೆಗಳಾಗಿ ಬೆಳೆಯಿರಿ. ನನಗೆ ಕನ್ನಡ ವ್ಯಾಕರಣ ಸರಿಯಾಗಿ ಬರಲ್ಲ. ಏನಾದರೂ ತಪ್ಪು ಹೇಳಿದ್ದರೆ ಕ್ಷಮಿಸಿ.”

 

ಹನುಮಂತಪ್ಪ ಅವರಿಂದ ಮುಂದುವರೆದ ಮಾತು…

“ನೀವು ಕಂಬಳಿ ಹೇಗೆ ಮಾಡುತ್ತಾರೆ ಎಂದು ನೋಡಿದಿರಿ. ಅದಕ್ಕೆ ಕುರಿ ಬೇಕು, ಕುರಿ ಹುಲ್ಲು ತಿನ್ನಬೇಕು, ಅದಕ್ಕೆ ಹುಲ್ಲುಗಾವಲು ಬೇಕು. ನೀವು ಹಾಲು ಕುಡೀತಿರಿ ಅದಕ್ಕೆ ಹಸು ಬೇಕು. ಹಸುವಿಗೆ ಹುಲ್ಲು ಬೇಕು. ಅದೆಲ್ಲ ಹಳ್ಳಿಯಿಂದಲೇ ಬರಬೇಕು. ಆದರೆ ಸರಕಾರದವರು ಸ್ಥಳೀಯರಿಗೆ ಏನು ಮಾಡುತ್ತಾರೆಂದು ತಿಳಿಸದೆ ಇಲ್ಲಿನ ಜಾಗವನ್ನೆಲ್ಲ ಕಸಿದಿಕೊಂಡು ಬಿಟ್ಟರು. ಇಂದು ನಮ್ಮ ಚಳ್ಳಕೆರೆಯ ಉಳ್ಳಾರ್ತಿಯು ಯುದ್ಧ ಸಲಕರಣೆಗಳನ್ನು ಸಿದ್ಧಗೊಳಿಸುವ ಜಾಗವಾಗಿ ಗುರುತಿಸಿಕೊಂಡಿದೆ. ಅಭಿವೃದ್ಧಿ ಎಂದರೆ ಏನು?! ವಿಜ್ಞಾನ ಅಂದರೆ ಬರೀ ಬಾಂಬ್ ತಯಾರು ಮಾಡುವುದಲ್ಲ. ತಾರಾಪುರ, ರಾಮಗುಂಡಂ, ಕೊಳಮ್‌ಕೊಳಮ್, ನೈವೇಲಿ ಇಲ್ಲೆಲ್ಲಾ ತಯಾರಾದ ಆಯುಧಗಳನ್ನು ನಮ್ಮ ಫಾರಮ್‌ನಲ್ಲಿ ಸಂಗ್ರಹ ಮಾಡ್ತಾರಂತೆ. ಆ ಸ್ಟಾಕ್ ಪಾಯಿಂಟ್ ಸ್ವಲ್ಪ ಲೀಕ್ ಆದರೆ ಜಲ, ನೆಲ ಎಲ್ಲಾ ಹಾಳಾಗಿ ಹೋಗುತ್ತವೆ. ಭೂಮಿ ಬೇಕಾ? ಬಾಂಬ್ ಬೇಕಾ? ಒಬ್ಬರನ್ನು ಒಬ್ಬರು ದ್ವೇಷಿಸಿದರೆ ಯುದ್ಧ, ಪ್ರೀತಿಸಿದರೆ ಸ್ನೇಹ. ಸ್ನೇಹ ಬೇಕು. ನಾವು ಎಚ್ಚರ ತಪ್ಪಿದರೆ ಬೇರೆಯವರು ಆಕ್ರಮಿಸುತ್ತಾರೆ. ಇದರ ಎಚ್ಚರ ತರಲು ನಾವು ಹೋರಾಟ ಮಾಡುತ್ತಿದ್ದೇವೆ. ಏನೇ ಅಭಿವೃಧಿ ಮಾಡಿದರೂ ಆಹಾರ ಬೇಕೇ ಬೇಕಲ್ಲ. ನಾಗೇಶ್ ಹೆಗಡೆ ಅವರು ಹೇಳಿದ್ದಾರೆ ವಿಕರಣಪ್ರಕ್ರಿಯೆ ಜನರಿಂದ ಸುಮಾರು ೪೦ ಕಿಲೋ ಮೀಟರ್ ದೂರದಲ್ಲಿರಬೇಕು ಎಂದು. ನಮ್ಮ ಗೋಳು ಯಾರಿಗೂ ಮುಟ್ಟುತ್ತಿಲ್ಲ. ಫಾರಂಗಳನ್ನು ಯಾರಿಗೂ ಕೊಡಬೇಡಿ, ಕೊಡುವುದಾದರೆ ವ್ಯವಸಾಯಕ್ಕೆ ಕೊಡಿ ಎಂದು ಹೋರಾಟ ಮಾಡಿದರೆ ನಮಗೇ 70ಸಾವಿರ ದಂಡ ಹಾಕಿದ್ದಾರೆ. ಮಾನವ ಪೂರಕವಾದ ಅಭಿವೃದ್ಧಿ ಬೇಕು, ಮಾನವ ವಿರೋಧಿಯಾದ ಅಭಿವೃದ್ಧಿ ಯಾಕೆ ಬೇಕು?

 

ಚೆನ್ನೈನ ನ್ಯಾಷನಲ್ ಗ್ರೀನ್ ಟ್ರಿಮಿನಲ್ ಕೋರ್ಟ್ ನಮ್ಮ ಕೇಸಿಗೆ ತಡೆ ತಂದಿದೆ. ಕಿಸಾನ್ ಕೋರ್ಟಿಗೆ 1000 ಪುಟಗಳ ವರದಿ ಕೊಟ್ಟಿದ್ದೆವು. ಅದನ್ನು ಓದಿದರೆ ಇಲ್ಲಿನ ಪ್ರಾಣಿ ಸಂಕುಲ, ಸಸ್ಯ ಸಂಕುಲಗಳ ಅರಿವಾಗುತ್ತಿತ್ತು. ಆದರೆ ಕೋರ್ಟ್ ಓದುವ ತಾಳ್ಮೆ ತೋರಲಿಲ್ಲ. ನಿಮ್ಮ ಪ್ರಾಂಶುಪಾಲರು ಹೇಳಿದಂತೆ ಎಲ್ಲಾ ಪ್ರಾಣಿಗಳು, ಪಕ್ಷಿಗಳು, ಮಾನವರು ಪರಸ್ಪರ ಅವಲಂಬಿಸಿಕೊಂಡೇ ಬದುಕಬೇಕು. ಯಾರೂ 200 ಕಿ.ಮೀ.ದೂರದಿಂದ ಉಳ್ಳಾರ್ತಿಯನ್ನು ಆಯ್ಕೆ ಮಾಡಿಕೊಂಡು ಮಕ್ಕಳಿಗೆ ತೋರಿಸಲು ಕರೆದುಕೊಂಡು ಬರುವುದಿಲ್ಲ. ನಿಮ್ಮ ಶಾಲೆಯವರು ಬಂದಿದ್ದಾರೆ. ನಮಗೆ ಸಂತೋಷವಾಯಿತು. ನಾವು ಬೆಂಗಳೂರಿನಲ್ಲಿ ಒಂದು ಸಭೆ ಮಾಡ್ತೇವೆ. ನೀವು ಆಗ ಬನ್ನಿ, ನೀವು ನಮ್ಮೊಂದಿಗೆ ಕೈ ಜೋಡಿಸುತ್ತೀರೆಂದು ತಿಳಿಯುತ್ತೇವೆ. ನಾವು ನಿಮ್ಮ ಶಾಲೆಗೂ ಬರುತ್ತೇವೆ.”

ಮಕ್ಕಳೆಲ್ಲ ಇವರ  ಮಾತುಗಳನ್ನು ಕೇಳಿ ಅಮೃತ ಮಹಲ್ ಕಾವಲಿನ ಜನರ ನೈಜ ಪರಿಸ್ಥಿತಿಯನ್ನು ಅರಿತರು. ನಮ್ಮ ಮಕ್ಕಳು ಇನ್ನು ಮುಂದೆ ಪತ್ರಿಕೆಯಲ್ಲಿ ಕಾವಲಿನ ಸುದ್ದಿ ಬಂದರೆ ತಾವೇ ಪ್ರತಿಕ್ರಿಯೆ ನೀಡಲು ಸಮರ್ಥರಿರುತ್ತಾರೆ!! ನಂತರ ಮಕ್ಕಳು ಈ ಬಾನು ಈ ಚುಕ್ಕಿ  ವೈಷ್ಣವ ಜನತೋ ಹಾಡುಗಳನ್ನು ಹಾಡಿ ಈ ಕಾರ್ಯಕ್ರಮವನ್ನು ಮುಗಿಸಿದೆರು. ನಂತರ ಮೈದಾನದಲ್ಲಿ ಖೊ…ಖೊ ಆಟ ಆಡಿ ಮಕ್ಕಳು ಆನಂದಿಸಿದರು. ನಮ್ಮ ಮುಂದಿನ ಪಯಣ ಮತ್ತೆ ಲಕ್ಕನಾಳಕ್ಕೆ ಸಾಗಿತು.


For more pics click here

ಲಕ್ಕನಾಳದಲ್ಲಿ ದಿನದ ಕೊನೆಯ ಕಾರ್ಯಕ್ರಮ

ಲಕ್ಕನಾಳಕ್ಕೆ ಸುಮಾರು 4.00 ಗಂಟೆಯ ಸಮಯಕ್ಕೆ ಸೇರಿದೆವು. ಅಲ್ಲಿ ಫಲಹಾರ ಮಾಡಿ ಮೂಸಂಬಿ, ಸಪೋಟ, ದಾಳಿಂಬೆ ತೋಟವನ್ನು ನೋಡಿಬಂದೆವು. ಪಾನಕವನ್ನು ಕುಡಿದು ನಮಗಾಗಿ ಆಹಾರ ತಯಾರಿಸಿದವರಿಗೆ ವಂದನೆಗಳನ್ನು ತಿಳಿಸಿದೆವು. ನಮ್ಮೊಂದಿಗೆ ಹೆಜ್ಜೆ ಹಾಕಿದ್ದ ದುರ್ಗಾ ಮಾಧವ್ ಮಹಾಪಾತ್ರ ಅವರಿಗೆ ಅಲ್ಲಿ ಕಲಿತ ವಿಷಯಗಳನ್ನು ನೆನಪಿಸಿಕೊಳ್ಳುವುದರ ಮೂಲಕ ವಂದನೆ ಹೇಳಿದೆವು.

ಲಕ್ಕನಾಳದ ತೋಟದ ಮನೆಯ ಎದುರಿಗಿದ್ದ ಚಿಕ್ಕ ಗುಡ್ಡವನ್ನು ನೋಡಿ ಮಕ್ಕಳು ಆ ಗುಡ್ಡವನ್ನು ಹತ್ತೋಣ ಎಂದರು. ನಮ್ಮ ಪ್ರವಾಸದಿಂದ ಹಿಂದಿರುಗುವ ಸಮಯ ಮೀರಿದ್ದರೂ ಮಕ್ಕಳ ಆಸೆಯನ್ನು ನೆರವೇರಿಸುವ ಸಲುವಾಗಿ ಬೆಟ್ಟವನ್ನು ಏರಿಯೇ ಬಿಟ್ಟೆವು!! ಬೆಟ್ತದ ಮೇಲೇರಿದ ಮಕ್ಕಳು ಖುಷಿಯಿಂದ ಕುಣಿದು ಕುಪ್ಪಳಿಸಿದರು. ಮತ್ತೆ ಅಲ್ಲಿಂದ ಕೆಳಗಿಳಿದು 6.00 ಗಂಟೆಗೆ ಹೊರಟ ನಾವು ಬೆಂಗಳೂರಿನ ಹಾದಿ ಹಿಡಿದೆವು. 9.00 ಗಂಟೆಗೆ ಬೆಂಗಳೂರು ತಲುಪಿದೆವು. ಮಕ್ಕಳ ಪೋಷಕರು ತಮ್ಮ ಮಕ್ಕಳಿಗಾಗಿ ಕಾದು ನಿಂತಿದ್ದರು. ಮಕ್ಕಳು ತಾವು ಕಲಿತಿದ್ದನ್ನು, ನೋಡಿದ್ದನ್ನು ಪೋಷಕರಿಗೆ ತಿಳಿಸಲು ಕಾದು ಕುಳಿತಿದ್ದರು.ಅಲ್ಲಿಗೆ ನಮ್ಮ ಗಾಂಧಿಜಯಂತಿ ಸಾರ್ಥಕವಾದಂತಾಯಿತು.

1 Response to Trip to Amruth Mahal Kaval

  1. Ranganatha H.A

    Very good idea , well done. whether you could show Amruta Mahal to children please show to them. There are found in Go Shala now.

Leave a Reply

Notice Board

PU Program

Holiday List 2020-21

Pūrṇapramati

A Center for Integrated Learning
 

Calendar of Events -2020-21

List of holidays

 

Date

Day

Event

25-07-2020

Saturday

Naga Panchami

31-07-2020

Friday

Varalakshmi Vrata

04-08-2020

Tuesday

Rigveda Uakarma

12-08-2020

Wednesday

Krishna Janmashtami

21-08-2020

Friday

Gowri-Tritiya

22-08-2020

Saturday

Ganesha-Chaturthi

01-09-2020

Tuesday

Ananthapadmanabha Vrata

14-01-2021

Thursday

Makara Sankranti

11-03-2021

Thursday

Maha Shivaratri

13-04-2021

Tuesday

Ugadi

 

Long holidays
Date Event
17-10-2020 to 26-10-2020 Dasara Holidays
13-11-2020 to 16-11-2020 Deepavali Holidays
01-04-2021 to 24-05-2021 Summer Holidays
 
List of National Holidays
Date Day Event
15-08-2020 Saturday Independence Day
02-10-2020 Friday Gandhi Jayanti
01-11-2020 Sunday Kannada Rajyotsava
26-01-2021 Tuesday Republic Day
 
Parva Dina
Panchanga Event
Jyeshta- Shukla-Dashami Bhagirathi Jayanti(Water Day)
Ashada-Shukla-Purnima Gurupurnima(Teacher’s Day)
Shravana-Shukla-Purnima Hayagreeva Jayanti(Knowledge Day)
Bhadrapada-Shukla-Dwadashi Vamana Jayanti(Children’s Day)
Margasheersha-Shukla-Ekadashi Geetha Jayanti(Bhagavadgeetha Day)
Karthika-Shukla-Dwadashi Dhanwantri Jayanti(Doctor’s Day)
Karthika-Shukla-Chaturdashi Vanapuja(vanamahotsava)
Magha-Shukla-Navami Sankalpadina(Janmadina of Purnapramati)
Magha-Krishna-Ashtami Seetha Jayanti(Mother’s Day)
Note: 

(1) The celebration dates of Parvadina will be intimate later.

(2) Academic Fests (Kannada habba, English fest, etc.) dates will be informed based on the feasibility.

 

 

 

Pūrṇapramati is recruiting teachers

Pūrṇapramati is recruiting dedicated research-oriented teachers for Pre-Primary Montessori, Lower Elementary Montessori, Upper Elementary Montessori, HighSchool 7 to 10 grades, and Pre-University.

Registration is open for the next academic year

Purnapramati opens its registration for the next academic year (June 2020-21). Applications are being issued. Kindly help spread the word to interested parents.

Socialize & Share

Follow us on different social networking website.