Rock Climbing & Rappling

ಪರಿಪೂರ್ಣ ಕಲಿಕೆಯ ತಾಣವಾದ ನಮ್ಮ ಪೂರ್ಣಪ್ರಮತಿ ಶಾಲೆಯಲ್ಲಿ ಈ ಬಾರಿ ಮಕ್ಕಳಿಗೆ ಹೊಸತೊಂದು ವಿದ್ಯೆಯ ಕಲಿಕೆಗೆ ವೇದಿಕೆ ಸಜ್ಜುಗೊಳಿಸಲಾಗಿತ್ತು. 4 ಮತ್ತು 5ನೇ ತರಗತಿಯ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಭಾಗದಲ್ಲಿ “Up You Go” ಎಂಬ  rock climbing ಮತ್ತು rapplingನ ವಿಷಯದಲ್ಲಿ ಒಂದು ಪಠ್ಯಭಾಗವಿರುವುದರಿಂದ, ಅದರ ಪ್ರಾಯೋಗಿಕ ಅನುಭವವೂ ಮಕ್ಕಳಿಗೆ ಆಗಬೇಕೆಂಬ ಉದ್ದೇಶದಿಂದ, ದಿನಾಂಕ 17-11-2012ರಂದು ಕನಕಪುರದ ಬಳಿಯಲ್ಲಿರುವ ತುರುಹಳ್ಳಿ ಎಂಬಲ್ಲಿಗೆ ಮಕ್ಕಳನ್ನು ಕರೆದುಕೊಂಡು ಹೋಗಲಾಗಿತ್ತು.ಬೆಂಗಳೂರಿಂದ ಹೆಚ್ಚು ದೂರವಲ್ಲದ ತುರುಹಳ್ಳಿಯಲ್ಲಿ ಒಂದು ಸುಂದರವಾದ ಬೆಟ್ಟ, ಅಲ್ಲಿ ದೊಡ್ಡ ದೊಡ್ಡ ಬಂಡೆಗಳು ಅಷ್ಟೇ ಅಲ್ಲದೆ ಸುಂದರವಾದ ಕಾಡು. ಇಷ್ಟು ಸಾಕಾಗಿತ್ತು, ಮಕ್ಕಳಿಗೆ ಉತ್ಸಾಹದಿಂದ ಕುಣಿದಾಡಲು.


ನಾವು ಮಕ್ಕಳು ಮತ್ತು ಅಧ್ಯಾಪಕರು ಒಟ್ಟು 30ಮಂದಿ ಬೆಳಗ್ಗೆ 6.30ಕ್ಕೆ ಹೊರಟು ತುರುಹಳ್ಳಿಗೆ ಹೋದೆವು. ಅಲ್ಲಿ ನಮಗೆ ಬಂಡೆ ಹತ್ತುವ ಮತ್ತು ಇಳಿಯುವುದರ ತರಬೇತಿ ನೀಡುವ ಸಲುವಾಗಿ ಪರ್ವತಾರೋಹಣದಲ್ಲಿ ನಿಪುಣರಾದ 6ಮಂದಿಯ ಒಂದು ತಂಡ ಸಜ್ಜಾಗಿತ್ತು. ಆ ತಂಡದ ಹೆಸರು “ಡ್ರ್ಯಾಕೊ”. ಅಲ್ಲಿ ಬೆಳಗ್ಗಿನ ಉಪಹಾರವನ್ನು ಮುಗಿಸಿದ ಮೇಲೆ ಮಕ್ಕಳನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಲಾಯಿತು. ಒಂದು ಗುಂಪಿಗೆ Rock climbingನ  ತರಬೇತಿ, ಹಾಗೂ ಇನ್ನೊಂದು ಗುಂಪಿಗೆ ಪ್ರಕೃತಿವೀಕ್ಷಣೆಯ (Nature Walk) ವ್ಯವಸ್ಥೆ ಮಾಡಲಾಗಿತ್ತು. ನಮಗೆ ತರಬೇತಿ ನೀಡಲು ಬಂದವರಲ್ಲಿ ಸಂದೀಪ್ ಎಂಬವರು Rock climbingನ ಬಗ್ಗೆ ಮಕ್ಕಳ ಒಂದು ಗುಂಪಿಗೆ ವಿವರಣೆ ನೀಡಿದರು. ಹತ್ತುವಾಗ ಏನೇನು ತೊಂದರೆಯಾಗಬಹುದು? ಅನುಸರಿಸಬೇಕಾದ ನಿಯಮಗಳೇನು? ಯಾವರೀತಿಯ ಉಡುಗೆ ತೊಡಬೇಕು? ಪಾದರಕ್ಷೆಗಳು ಯಾವರೀತಿ ಇರಬೇಕು? ಎಂಬ ಎಲ್ಲಾ ವಿಷಯಗಳ ಬಗ್ಗೆ ಮಕ್ಕಳಿಗೆ ಯಾವುದೇ ಪ್ರಶ್ನೆಗಳು ಉಳಿಯದಂತೆ ವಿವರಿಸಿದರು. ಇನ್ನೊಂದು ತಂಡವನ್ನು ಮುನಿ ಮತ್ತು ರೋಹನ್ ಎಂಬವರು ಪ್ರಕೃತಿವೀಕ್ಷಣೆಗಾಗಿ ಕಾಡಿನ ಮಧ್ಯೆ ಕರೆದುಕೊಂಡು ಹೋದರು.

ಅಲ್ಲಿ ಇರುವ ಒಂದೊಂದು ಬಂಡೆಗೂ ಒಂದೊಂದು ಹೆಸರಿಡಲಾಗಿತ್ತು. ಯಾರು ಮೊದಲ ಬಾರಿಗೆ ಒಂದು ಬಂಡೆಯನ್ನು ಹತ್ತುತ್ತಾರೋ ಅವರೇ ಆ ಬಂಡೆಗೆ ನಾಮಕರಣ ಮಾಡುತ್ತಾರೆ. ಈ ಎಲ್ಲಾ ವಿಷಯಗಳನ್ನು ಸಂದೀಪ್ ಅವರು ಮಕ್ಕಳಿಗೆ ತಿಳಿಸಿ, “ನರ್ಸರಿ” ಎಂಬ ಹೆಸರಿನ ಬಂಡೆಯನ್ನು ಹತ್ತಲು ಕಲಿಸಿದರು. ಪ್ರತಿಯೊಬ್ಬರಿಗೂ ಸುರಕ್ಷತೆಯ ದೃಷ್ಟಿಯಿಂದ ಸೊಂಟಕ್ಕೆ ಹಗ್ಗ ಕಟ್ಟಿ ನರ್ಸರಿ ಬಂಡೆಯನ್ನು ಹತ್ತಲು ಕಲಿಸಲಾಯಿತು. ಎಲ್ಲಾ ಮಕ್ಕಳೂ ಬಹಳ ಉತ್ಸಾಹದಿಂದ ಬಂಡೆಯನ್ನು ಹತ್ತಿದರು. ಅತ್ತ ಪ್ರಕೃತಿವೀಕ್ಷಣೆಗಾಗಿ ಹೋದ ಮಕ್ಕಳು ಆ ಕಾಡಿನ ಮಧ್ಯೆ ಸಂಚರಿಸುತ್ತಾ ಮುನಿರಾಜು ಅವರಿಂದ ಅನೇಕ ಮಾಹಿತಿಗಳನ್ನು ಪಡೆದುಕೊಂಡರು. ಕಾಡಿನಲ್ಲಿ ಇರುವ ಔಷಧೀಯ ಸಸ್ಯಗಳು, ಕಾಡು ಹೂಗಳು, ಅನೇಕ ಪಶು-ಪಕ್ಷಿಗಳು, ಕಾಡು ಹಂದಿಗಳು ಮಲಗುವ ಜಾಗ ಇನ್ನೂ ಅನೇಕ ಕುತೂಹಲಕಾರಿ ವಿಷಯಗಳನ್ನು ಮಕ್ಕಳು ಈ ಪ್ರಕೃತಿವೀಕ್ಷಣೆಯಿಂದ ತಿಳಿದುಕೊಂಡರು.

ನಂತರ ಪ್ರಕೃತಿವೀಕ್ಷಣೆ ಮುಗಿಸಿ ಬಂದ ಮಕ್ಕಳು ಬಂಡೆ ಹತ್ತಲು ಉತ್ಸುಕರಾಗಿದ್ದರು. ನರ್ಸರಿ ಬಂಡೆಯನ್ನು ಅದಾಗಲೇ ಹತ್ತಿ ಏನೋ ಕಲಿತ ಉತ್ಸಾಹದಲ್ಲಿದ್ದ ಮಕ್ಕಳು, ಪ್ರಕೃತಿವೀಕ್ಷಣೆಗಾಗಿ ಹೊರಟರು. ಮಕ್ಕಳ ಹುಮ್ಮಸ್ಸನ್ನು ಕಂಡ ಅಧ್ಯಾಪಕರು ತಮಗಾದ ಆಯಾಸವನ್ನು ಮರೆತು ಅವರೊಡನೆ ಹೊರಟರು. ಹೀಗೆ ಮಕ್ಕಳ ಎರಡೂ ತಂಡಗಳು ಪ್ರಕೃತಿವೀಕ್ಷಣೆ ಮತ್ತು ನರ್ಸರಿ ಬಂಡೆ ಹತ್ತುವುದನ್ನು ಬಹಳ ಉತ್ಸಾಹದಿಂದ ಮುಗಿಸಿದ ಮೇಲೆ ನಮ್ಮ ತರಬೇತುದಾರರಾದ ಸಂದೀಪ್‌ರವರು ಮಕ್ಕಳಿಗೆ ಇನ್ನೊಂದು ಬಂಡೆಯನ್ನು ಹತ್ತುವಂತೆ ತಿಳಿಸಿದರು. ಆ ಬಂಡೆಯ ಹೆಸರು “ಪಿ.ಹೆಚ್.ಡಿ. ಬಂಡೆ”. ಆ ಬಂಡೆಯನ್ನು ಸೊಂಟಕ್ಕೆ ಹಗ್ಗ ಕಟ್ಟಿಕೊಳ್ಳದೆ, ಕೇವಲ ನಮ್ಮ ಕೈಗಳ ಸಹಾಯದಿಂದ ಹತ್ತಬೇಕಿತ್ತು. ಇದು ಮಕ್ಕಳಿಗೆ ಕಷ್ಟವಾಗಬಹುದೆಂದು ನಾವು ಭಾವಿಸಿದೆವು. ಆದರೆ ಅದಾಗಲೇ ಒಂದು ಬಂಡೆ ಹತ್ತಿ ಅನುಭವ ಪಡೆದಿದ್ದ ಮಕ್ಕಳು ಈ ಬಂಡೆಯನ್ನೂ ಬಹು ಸುಲಭವಾಗಿ ಹತ್ತಿದರು. ಕೆಲವು ಅಧ್ಯಾಪಕರೂ ಹತ್ತುವ ಪ್ರಯತ್ನ ಮಾಡಿದರು. ನಂತರ ಎಲ್ಲರೂ ಮಧ್ಯಾಹ್ನದ ಭೋಜನ ಮುಗಿಸಿದೆವು.

ಭೊಜನ ಮುಗಿದ ಮೆಲೆ ಇನ್ನೊಂದು ರೋಚಕವಾದ ಬಂಡೆ ಇಳಿಯುವ (rappling) ಕಾರ್ಯಕ್ರಮ. ಸೊಂಟಕ್ಕೆ ಹಗ್ಗ ಕಟ್ಟಿ ಸುಮಾರು ೪೦ಅಡಿಗಳಷ್ಟು ಎತ್ತರದ ಬಂಡೆಯನ್ನು ಇಳಿಯುವುದನ್ನು ನಮಗೆ ಕಲಿಸಲು ಡ್ರ್ಯಾಕೊ ತಂಡ ಎಲ್ಲಾ ಸಿದ್ಧತೆಗಳನ್ನೂ ಮಾಡಿದ್ದರು. ಮೇಲಿಂದ ಕೆಳಗೆ ಹಗ್ಗವನ್ನು ಬಿಡುತ್ತಾ ಇಳಿಯುವುದು ಬಹುಸುಲಭ ಎಂದು ಭಾವಿಸಿದ್ದ ನಮಗೆ, ಬಂಡೆ ಹತ್ತಿ ಮೇಲಿಂದ ಕೆಳಗೆ ನೋಡುವಾಗಲೇ ಭಯ ಪ್ರಾರಂಭವಾಗಿತ್ತು. ಮೊದಲಿಗೆ ಒಂದೆರಡು ಮಕ್ಕಳು ಭಯ ಪಟ್ಟುಕೊಂಡರಾದರೂ, ನಂತರ ಎಲ್ಲರೂ ನಿರ್ಭಯರಾಗಿ ಇಳಿದರು. ನಿಜವಾದ ಧೈರ್ಯವೋ ಅಥವಾ  ಮಕ್ಕಳೇ ಅಷ್ಟೊಂದು ಸಲೀಸಾಗಿ ಇಳಿದ ಮೇಲೆ ನಾವು ಹೆದರಿದರೆ ನಾಚಿಕೆಗೀಡಾಗಬೇಕಾಗುತ್ತದೆ ಎಂಬ ಭಾವನೆಯೋ ಗೊತ್ತಿಲ್ಲ ನಾವೂ ಕೂಡ ಬಂಡೆ ಇಳಿಯುವ ಕಾರ್ಯಕ್ರಮ ಮುಗಿಸಿ, ಎಲ್ಲರೂ ಏನೋ ಸಾಧಿಸಿದ ಭಾವನೆಯಲ್ಲಿದ್ದೆವು.

ಕೊನೆಯಲ್ಲಿ ನಮಗೆ ಈ ಎಲ್ಲಾ ತರಬೇತಿ ನೀಡಿದ ಡ್ರ್ಯಾಕೋ ತಂಡೆಕ್ಕೆ ಎಲ್ಲಾ ಮಕ್ಕಳು ಸೇರಿ ಧನ್ಯವಾದ ಹೇಳಿದರು. ನಮ್ಮ ಮಕ್ಕಳಲ್ಲಿದ್ದ ಉತ್ಸಾಹ, ಧೈರ್ಯ, ಹುಮ್ಮಸ್ಸನ್ನು ಕಂಡ ಅವರೂ ಬಹಳ ಖುಷಿಪಟ್ಟರು, ಮತ್ತೊಮ್ಮೆ ಬರುವಂತೆ ತಿಳಿಸಿದರು. ಸುಮಾರು 3.30 ಘಂಟೆಯ  ಹೊತ್ತಿಗೆ ನಾವೆಲ್ಲಾ ಅಲ್ಲಿಂದ ಹಿಂತಿರುಗಿ ಶಾಲೆಗೆ ಬಂದೆವು. ಒಟ್ಟಿನಲ್ಲಿ ಮಕ್ಕಳ ಪಾಠದ ನೆಪದಿಂದ ಎಲ್ಲರಿಗೂ ಬಂಡೆ ಹತ್ತುವ ಮತ್ತು ಇಳಿಯುವ ಹೊಸ ಅನುಭವದ ಸವಿಯನ್ನು ಸವಿಯುವಂತಾಯಿತು.

For more photos click here

Leave a Reply

Notice Board

pūrṇapramati is recruiting teachers

pūrṇapramati is recruiting dedicated research oriented teachers for 1 to 10 grades and pre-primary Montessori.

 

Registration is open for the next academic year

Purnapramati opens its registration for the next academic year: November 2017 and June 2018-19. Applications are being issued. Kindly help spread the word to interested parents.

Socialize & Share

Follow us on different social networking website and share it