Purnapramati Utsava 2013-14 Inaugural Day

ಪ್ರಾರಂಭೋತ್ಸವ
ದಿನಾಂಕ: ೧೯ನೇ ಡಿಸೆಂಬರ್, ೨೦೧೩
ಸ್ಥಳ:  ಕೆ.ಹೆಚ್.ಕಲಾಸೌಧ, ಹನುಮಂತನಗರ, ಬೆಂಗಳೂರು

೨೦೧೩-೧೪ನೇ ಶೈಕ್ಷಣಿಕ ಸಾಲಿನಲ್ಲಿ ಪೂರ್ಣಪ್ರಮತಿಯ ಕಲಿಕೆ ‘ಜೀವೋ ಜೀವಸ್ಯ ಜೀವನಮ್’ ಎಂಬ ವಿಷಯವನ್ನು ಆಧರಿಸಿತ್ತು. ನಿಸರ್ಗದಲ್ಲಿ ಸಹಜವಾಗಿಯೇ ಸಸ್ಯಗಳು, ಪ್ರಾಣಿಗಳು, ಪಕ್ಷಿಗಳು ಸಂಪೂರ್ಣ ವ್ಯವಸ್ಥೆ ಒಂದನ್ನೊಂದು ಅವಲಂಬಿಸಿ ಸಹಬಾಳ್ವೆ ನಡೆಸುತ್ತಿವೆ. ಈ ವ್ಯವಸ್ಥೆಯಲ್ಲಿ ಸ್ಪರ್ಧೆ ಇದ್ದರೂ ದ್ವೇಷವಿಲ್ಲ. ಬದುಕಿಗಾಗಿ ಹೋರಾಟವೇ ಹೊರತು ಯಾರನ್ನೋ ಕುರಿತ ಮತ್ಸರವಿಲ್ಲ.
ಈ ತತ್ವವನ್ನು ಕಲಿಯುವ ಪ್ರಯತ್ನದಲ್ಲಿ ಹುಲ್ಲುಗಾವಲು, ಬುಡಕಟ್ಟು ಜನಾಂಗ, ಸಂಖ್ಯಾಶಾಸ್ತ್ರ, ಜೀವ ವಿವಿಧತೆ ತಾಣಗಳು, ಪ್ರಾಚೀನ ಸಾಹಿತ್ಯ-ಸಂಸ್ಕೃತಿ, ಹಿಮಾಲಯದ ಗಂಗೆ, ಆಧುನಿಕ ಮಾನವನ ಅಭಿವೃದ್ಧಿ ಪ್ರಯತ್ನಗಳ ದೃಷ್ಟಿಕೋನದಲ್ಲಿ ಜೀವೋ ಜೀವಸ್ಯ ಜೀವನಮ್ ಎಂಬ ವಿಷಯವನ್ನು ಅಧ್ಯಯನವನ್ನು ಮಾಡಲಾಯಿತು. ಕಲಿತ ವಿಷಯಗಳನ್ನು ಮತ್ತೊಬ್ಬರೊಂದಿಗೆ ಹಂಚಿಕೊಳ್ಳುವ, ತಜ್ಞರ ಮುಂದೆ ಪ್ರಸ್ತುತ ಪಡಿಸುವ ತನ್ಮೂಲಕ ಮತ್ತಷ್ಟು ಕಲಿಯುವ ಪ್ರಯತ್ನವಾಗಿ ೨೦೧೩-೧೪ರ ಉತ್ಸವವನ್ನು ನಡೆಸಲಾಯಿತು.

ಐದು ದಿನಗಳ ಈ ಕಾರ್ಯಕ್ರಮವು ಪ್ರಾರಂಭೋತ್ಸವ, ಜಾತ್ರೆ, ಮಹೋತ್ಸವ, ವಿಚಾರಸಂಕಿರಣಗಳಾಗಿ ವಿಭಾಗಿಸಲ್ಪಟ್ಟಿತ್ತು. ಸಾಂಸ್ಕೃತಿಕ ಕಾರ್ಯಕ್ರಮಗಳು, ಅಂತರ್ ಶಾಲಾ ಚಟುವಟಿಕೆಗಳು, ವಸ್ತುಪ್ರದರ್ಶನಗಳ ಮೂಲಕ ನಮ್ಮ ಕಲಿಕೆಗಳನ್ನು ಪೋಷಕರ ಮುಂದೆ, ಆಯಾ ಕ್ಷೆತ್ರಜ್ಞರ ಮುಂದೆ ಇಡಲಾಯಿತು. ಇಡೀ ವರ್ಷದ ತಯಾರಿಯನ್ನು ಸಮಾಜದ ಮುಂದೆ ಪ್ರಸ್ತುತ ಪಡಿಸುವ ನಿಟ್ಟಿನಲ್ಲಿ ಹಗಲು-ರಾತ್ರಿ ಯೋಜನೆಗಳು ತಯಾರಾದವು, ಅಧ್ಯಾಪಕರು-ವಿದ್ಯಾರ್ಥಿಗಳು ಉತ್ಸಾಹದಿಂದ ಗಡಿಯಾರವನ್ನು ಲೆಕ್ಕಿಸದೆ, ದೈಹಿಕ ಶ್ರಮಕ್ಕೆ ಧೃತಿಗೆಡದೆ ಕಾರ್ಯೋನ್ಮುಖರಾದರು. ಇವೆಲ್ಲದರ ಫಲವಾಗಿ ದಿನಾಂಕ ೧೯/೧೨/೨೦೧೩ ರಂದು ನಾವೆಲ್ಲ ಕಾಯುತ್ತಿದ್ದ ಪ್ರಾರಂಭದ ದಿನ ಬಂದೇ ಬಿಟ್ಟಿತು.

ಪೂರ್ವಪ್ರಾಥಮಿಕ ಶಾಲೆಯ ಮಕ್ಕಳ ಕಾರ್ಯಕ್ರಮಗಳಿಂದ ಪ್ರಾರಂಭೋತ್ಸವವು ನಡೆಯಿತು. ಮುಖ್ಯ ಅತಿಥಿಗಳಾಗಿ ಟಿ.ಜಿ. ವೆಂಕಟೇಶಾಚಾರ್ (ಕಾರ್ಯದರ್ಶಿ, ಪ್ರಭಾತ್ ಕಲಾವಿದರು), ಅರ್ಚನಾ ಉಡುಪ (ಗಾಯಕಿ), ಎಲ್.ಎ.ರವಿಸುಬ್ರಮಣ್ಯ (ಸಂಸತ್ ಸದಸ್ಯರು, ಬಸವನಗುಡಿ ಕ್ಷೇತ್ರ), ಸಂಜಯ್ ಗುಬ್ಬಿ (ಹುಲಿ ಸಂರಕ್ಷಣಾ ಯೋಜನೆಯ ಸಂಯೋಜಕರು), ಡಾ.ನಾಗೇಶ್ ಹೆಗಡೆ (ಪರಿಸರ ತಜ್ಞರು), ಶ್ರೀನಿ ಶ್ರೀನಿವಾಸ್ (ನಾಸಾ ವಿಜ್ಞಾನಿ), ಪ್ರೊ.ಡಿ.ಪ್ರಹ್ಲಾದಾಚಾರ್  ಆಗಮಿಸಿದ್ದರು. ಪೋಷಕರು ಮಕ್ಕಳು ಸಂತೋಷದಿಂದ ಭಾಗವಹಿಸಿ ಪ್ರಾರಂಭವು ಮುಂದಿನ ಕಾರ್ಯಕ್ರಮಗಳಿಗೆ ಶುಭವನ್ನು ತರುವಂತೆ ಮಾಡಿದರು.

ಕಾವೇರಿ ತೀರದಲ್ಲಿ ಒಂದು ಕಾಡು… ಎಂಬ ರೂಪಕವನ್ನು ಪುಟಾಣಿಗಳು ಅಭಿನಯಿಸಿದರು. ಕಾಡುಪ್ರಾಣಿಗಳ ಅನುಕರಣೆ, ಸೃಷ್ಟಿಯ ಚರಾಚರ ಜೀವಿಗಳ ಪರಿಚಯ, ಗುಲ್ಲುಮಾಡಿದ ಗೋಪಾಲ ಕೃಷ್ಣ ಹೀಗೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ತಾವು ಅರಿತ ಜೀವೋ ಜೀವಸ್ಯ ಜೀವನಮ್ ವಿಷಯವನ್ನು ಪ್ರೇಕ್ಷಕರ ಮುಂದಿಟ್ಟರು. ೨೦೧೩-೧೪ ನೇ ಶೈಕ್ಷಣಿಕ ಸಾಲಿನ ಹೊಸ ಸೇರ್ಪಡೆಯಾದ ವಿಶೇಷ ಅಧ್ಯಯನ ಕ್ಷೇತ್ರಗಳಾದ ಚಿತ್ರಕಲೆ, ಕಲಾರಿಪಯಟ್ಟು, ನೃತ್ಯ, ಸಂಗೀತ, ಯೋಗ, ಪರಿಸರ ಅಧ್ಯಯನಗಳಲ್ಲಿ ತಾವು ಕಲಿತ ವಿಷಯಗಳನ್ನು ಪ್ರಾಥಮಿಕ ವಿದ್ಯಾರ್ಥಿಗಳು ಪ್ರದರ್ಶಿಸಿದರು. ಸಂಗೀತ-ನೃತ್ಯಗಳ ಜುಗಲ್ ಬಂದಿ ಎಲ್ಲರನ್ನು ಮುದಗೊಳಿದರೆ, ಕಲಾರಿ ಪಯಟ್ಟು ಪ್ರದರ್ಶನ ಚಕಿತಗೊಳಿಸಿತು. ಮಕ್ಕಳ ಅರಿವು, ಆಟ-ಪಾಠಗಳನ್ನು ಗಮನಿಸುತ್ತಿದ್ದ ಅತಿಥಿಗಳು ಮೂಕವಿಸ್ಮಿತರಾಗಿ ನುಡಿದ ಮಾತುಗಳ ಪ್ರತಿಧ್ವನಿ ಇಲ್ಲಿದೆ:

For more photos click here

ಅರ್ಚನಾ ಉಡುಪ
ಹಲವು ಶಾಲಾ ಕಾರ್ಯಾಕ್ರಮಗಳಿಗೆ ಹೋಗಿದ್ದರೂ ಪೂರ್ಣಪ್ರಮತಿಯ ಉತ್ಸವದಲ್ಲಿ ಭಾಗವಹಿಸುವ ಅನುಭವವೇ ಬೇರೆ. ಬೇರೆ ಶಾಲೆಗಳಲ್ಲಿ ಎಲ್ಲವೂ ಇಂಗ್ಲಿಷ್ ಮಯವಾಗಿರುತ್ತದೆ. ಪಾಶ್ಚಾತ್ಯ ಸಂಸ್ಕೃತಿಯನ್ನು ಮೈಮೇಲೆ ಎಳೆದುಕೊಂಡುಬಿಟ್ಟಿರುತ್ತಾರೆ. ನಿರಾಸೆಯಿಂದಲೇ ವಾಪಾಸು ಬರಬೇಕಾಗುತ್ತಿತ್ತು. ಎಷ್ಟೋ ಶಾಲೆಗಳಲ್ಲಿ ಅವರು ಬೇಸರ ಮಾಡಿಕೊಂಡರೂ ನಾನು ಈ ವಿಚಾರವನ್ನು ಕಟುವಾಗೇ ಹೇಳಿ ಬಂದಿದ್ದೇನೆ. ಏನೇ ಆದರೂ ತಾಯಿಯನ್ನು ಮರೆಯಬಾರದು. ಇಂದಿನ ದಿನದಲ್ಲಿ ನಮ್ಮ ಭಾಷೆ, ಸಂಸ್ಕೃತಿ ಮಹತ್ವವನ್ನು ಕಳೆದುಕೊಳ್ಳುತ್ತಿದೆ ಎಂದು ನಮ್ಮೆಲ್ಲರಿಗೂ, ವಿಶೇಷವಾಗಿ ನನಗೆ ಆತಂಕವಾಗುತ್ತಿತ್ತು, ಭಯವಾಗುತ್ತಿತ್ತು. ಇಲ್ಲಿಗೆ ಬಂದು ಆ ಭಯ ಹೋಯಿತು ನನಗೆ. ಖಂಡಿತವಾಗಿ ನಮ್ಮ ಸಂಸ್ಕೃತಿ ಉಳಿಯುತ್ತದೆ. ನನ್ನನ್ನು ಅತಿಥಿಯಾಗಿ ಕರೆದಿದ್ದೀರೆಂದು ಈ ಮಾತನ್ನು ಹೇಳುತ್ತಿಲ್ಲ. ನನಗೆ ಆ ಅಭ್ಯಾಸವೂ ಇಲ್ಲ. ಮಕ್ಕಳೇ, ನೀವೆಲ್ಲ ಸರಿಯಾದ ದಾರಿಯಲ್ಲಿ ಹೋಗುತ್ತಿದ್ದೀರಿ. ನನ್ನ ಮಕ್ಕಳನ್ನೇ ನೋಡಿದಾಗ ನನಗೆ ಬೇಸರವಾಗುತ್ತದೆ. ನನ್ನ ಮಗನನ್ನೂ ಈ ಶಾಲೆಗೆ ಸೇರಿಸುತ್ತೇನೆ.

ಓದು…ಓದು ಎಷ್ಟು ಓದಿದರೂ ಸಾಲದು! ಮಕ್ಕಳಿಗೆ ಓದು ಎಲ್ಲಿಯವರೆಗೆ ಸಹಕಾರಿಯಾಗುತ್ತದೆ. ಪರಿಸರ, ಸಹಜೀವಿಗಳ ಬಗ್ಗೆ ತಿಳಿಯುವುದು ಬಹಳ ಮುಖ್ಯ. ಇಂದು ನಾವೇ ನಮ್ಮ ಸುತ್ತ ಕೋಟೆ ಕಟ್ಟಿಕೊಂಡು ಬದುಕುತ್ತಿರುತ್ತೇವೆ. ಅಂತಹುದರಲ್ಲಿ ವಿದ್ಯಾಭ್ಯಾಸ ಸೆಕೆಂಡರಿ, ಅಥವಾ ವಿದ್ಯಾಭ್ಯಾಸದಷ್ಟೇ ಪ್ರಮುಖವಾದದ್ದು ಸಮಗ್ರ ಬೆಳವಣಿಗೆ, ವ್ಯಕ್ತಿತ್ವ ಬೆಳವಣಿಗೆ, ಮೂಲಭೂತ ವಿದ್ಯೆ ಬೇಕು. ಬಹಳ ಉತ್ಕೃಷ್ಟವಾದ ಕೆಲಸ ಮಾಡುತ್ತಿದ್ದಾರೆ. ಅಧ್ಯಾಪಕರಿಗೂ, ಪೂರ್ಣಪ್ರಮತಿ ತಂಡಕ್ಕೂ ಅಭಿನಂದನೆಗಳು. ಪೋಷಕರಿಗೆ ಅಭಿನಂದನೆಗಳು, ಏಕೆಂದರೆ ನಿಮ್ಮ ಮಕ್ಕಳನ್ನು ಇಲ್ಲಿ ಸೇರಿಸಿದ್ದೀರಿ. ನಿಜವಾಗಲೂ ಅವರೆಲ್ಲ ಸತ್ಪ್ರಜೆಗಳಾಗುತ್ತಾರೆ. ಶಾಲೆ ಇಂದಿನ ಮಕ್ಕಳಿಗೆ ಒಂದು ಪಂಜರವಾಗಿದೆ. ಎಷ್ಟು ಗಂಟೆಗೆ ಬೆಲ್ ಆಗತ್ತೋ ಎಂದು ಕಾಯುತ್ತಿರುತ್ತಾರೆ. ಓದು ಒಂದೇ ಗುರಿಯಲ್ಲ ಮಕ್ಕಳೆ, ಹೇಗೆ ಬದುಕಬೇಕು, ಸ್ನೇಹಿತರೊಂದಿಗೆ ಹೇಗೆ ಇರಬೇಕು, ಪ್ರತಿಯೊಂದು ಪ್ರಾಣಿಗಳಿಗೂ ಜೀವಿಸುವ ಹಕ್ಕಿದೆ, ಗಿಡ-ಮರಗಳ ಸಹಬಾಳ್ವೆಯನ್ನು ನಿಮ್ಮ ಶಾಲೆಯಲ್ಲಿ ಹೇಳಿಕೊಡುತ್ತಾರೆ. ಅದರಲ್ಲೇ ಜೀವನದ ಸಾರ ಇರುವುದು. ಇಂತಹ ಶಾಲೆ, ಕಲಿಕಾ ಕ್ರಮ ದೇಶದ ಎಲ್ಲೆಡೆ ಮಾದರಿಯಾಗಬೇಕು. ನನನ್ನು ಇಲ್ಲಿ ಕರೆದು ಇಷ್ಟೆಲ್ಲ ಸಂತೋಷ ಕೊಟ್ಟದ್ದಕ್ಕಾಗಿ ಧನ್ಯವಾದಗಳು.

ರವಿ ಸುಬ್ರಹ್ಮಣ್ಯ
ಶಾಲೆ ಪ್ರಾರಂಭವಾಗಿ ೪ನೇ ವರ್ಷದಲ್ಲಿ ಬಹಳ ಒಳ್ಳೆಯ ಕಾರ್ಯಕ್ರಮ ಕೊಡುತ್ತಿದ್ದೀರಿ. ಶಾಲೆ ಪ್ರಾರಂಭವಾದಾಗ ನಾನು ಹೋಗಿದ್ದೆ. ಕೇಲವೇ ಮಕ್ಕಳಿದ್ದರು. ಅಂದು ಅಲ್ಲಿ ಪಾಠ ಹೇಳಿಕೊಡುತ್ತಿದ್ದ ಪದ್ಧತಿ, ಅಧ್ಯಾಪಕರಲ್ಲಿದ್ದ ಆಸಕ್ತಿ ನೋಡಿ ಗುರುಕುಲ ಪದ್ಧತಿ ನಾಶವಾಗಿದೆ ಎಂದು ತಿಳಿದದ್ದು ಸುಳ್ಳಾಯಿತು ಎಂದು ಮನವರಿಕೆಯಾಯಿತು. ನಾವು ಶಾಲೆಯಲ್ಲಿ ಮಕ್ಕಳಿಗೆ ಕೇವಲ ಪಠ್ಯಪುಸ್ತಕದಲ್ಲಿರುವುದನ್ನು ಮಾತ್ರ ಹೇಳಿಕೊಡುತ್ತೇವೆ, ವಿದ್ಯಾವಂತರಾಗಲು ಏನು ಬೇಕು ಅಷ್ಟು ಮಾತ್ರ ಮಾಡುತ್ತೇವೆ. ಆದರೆ ಬದುಕು ಎಂದರೆ ಏನು? ಎಂಬ ಪಾಠವನ್ನು ಹೇಳಿಕೊಡುವ ಬುದ್ಧಿವಂತರಾಗಿಸುವ ಏಕೈಕ ಶಾಲೆ ಎಂದರೆ ಪೂರ್ಣಪ್ರಮತಿ ಎಂದರೆ ತಪ್ಪಾಗಲಾರದು. ನಾನು ಕಾರ್ಯಕ್ರಮದಲ್ಲಿ೩೦-೪೫ ನಿಮಿಷ ಮಾತ್ರ ಇರಲು ಸಾಧ್ಯ ಎಂದು ಹೇಳಿದ್ದೆ. ಆದರೆ ಇಲ್ಲಿ ಸಮಯ ಹೋದದ್ದೇ ತಿಳಿಯಲಿಲ್ಲ. ಮಕ್ಕಳು ಎಷ್ಟು ತಲ್ಲೀನರಾಗಿ ಭಾಗವಹಿಸಿದರು. ಅಧ್ಯಾಪಕರ ಪರಿಶ್ರಮ ಎಲ್ಲವೂ ನಮಗೆ ಅರಿವನ್ನು ಮೂಡಿಸುವ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದೆನಿಸುತ್ತಿದೆ. ಪರಿಸರದ ಬಗ್ಗೆ ಇರುವ ಕಾಳಜಿ ಸಹಬಾಳ್ವೆ ಮರೆತವರಿಗೆ, ಗಣಿಗಾರಿಕೆಯಲ್ಲಿ ತೊಡಗಿರುವವರಿಗೆ ಇದು ಪಾಠವಾಗಿದೆ. ನಮ್ಮ ಹಿರಿಯರು ಹೇಳಿಕೊಟ್ಟಿರುವ ಸಮುದ್ರ ವಸನೇ ದೇವಿ…ಸಂಸ್ಕೃತಿಯನ್ನು ಮರೆತು ಎಲ್ಲಿಗೆ ಹೊರಟಿದ್ದೇವೆ ಎಂದು ಹೋಚಿಸಬೇಕಿದೆ? ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಏನು ಹೇಳಿಕೊಡಬೇಕು! ಪರಿಸರ, ಭೂಮಿ ಎಲ್ಲವನ್ನೂ ಹಿಂದಿನವರು ನಮಗಾಗಿ ಉಳಿಸಿಕೊಟ್ಟಿದ್ದಾರೆ, ನಾವು ಅದನ್ನು ಉಳಿಸಿ ನಮ್ಮ ಮುಂದಿನ ಪೀಳಿಗೆಗೆ ಕೊಡಬೇಕಾದುದು ನಮ್ಮ ಜವಾಬ್ದಾರಿ. ಈ ಜವಾಬ್ದಾರಿಯನ್ನು ಪೂರ್ಣಪ್ರಮತಿ ಸರಿಯಾಗಿ ನಿಭಾಯಿಸುತ್ತಿದೆ. ಪೂರ್ಣಪ್ರಮತಿ ಕೇವಲ ಸಿಲಬಸ್ ಪಾಠ ಮಾಡಿ ಕಳಿಸದೆ ಒಬ್ಬ ಸಂಪೂರ್ಣವ್ಯಕ್ತಿಯಾಗಿ ಮಾಡಿ ರಾಷ್ಟ್ರಕ್ಕೆ ಕೊಡುತ್ತಿದೆ. ಸಂಗೀತ, ಸಾಹಿತ್ಯ, ಆತ್ಮರಕ್ಷಣೆ ಹೀಗೆ ಎಲ್ಲ ಆಯಾಮಗಳಲ್ಲೂ ಶಿಕ್ಷಣವನ್ನು ಕೊಡಲಾಗುತ್ತಿದೆ.

ಬೇರೆ ಶಾಲೆಗಳ ಕಾರ್ಯಕ್ರಮಗಳಲ್ಲಿ ಯಾವುದೋ ಸಿನಿಮಾ ಹಾಡುಗಳಿಗೆ ನರ್ತನ ಮಾಡಿಸಿ, ಅರೆಬೆತ್ತಲೆ ಕುಣಿಸಿ, ಕಲಿಸಿದ ಇಂಗ್ಲಿಷ್ ಪದ್ಯವನ್ನು ನಾಲ್ಕು ಜನರ ಮುಂದೆ ಹೇಳಿಸಿದರೆ ನಮ್ಮ ಮಕ್ಕಳು ಸಂಪೂರ್ಣರಾದರು ಎಂದು ಪೋಷಕರು ಎಣಿಸುವುದೇ ಹೆಚ್ಚು ಕಂಡುಬರುತ್ತದೆ. ಈ ಶಾಲೆಗೆ ಮಕ್ಕಳನ್ನು ಕಳುಹಿಸುತ್ತಿರುವ ಪೋಷಕರಿಗೆ ಸಾರ್ಥಕತೆ ಖಂಡಿತ ಇದೆ. ಯಾವುದೋ ಕಾನ್ವೆಂಟ್‌ಗಳಲ್ಲಿ ಒಂದು ಸೀಟ್ ಕೊಡಿಸುವಂತೆ ಕೇಳುವ ಪೋಷಕರಿಗೆ ಪೂರ್ಣಪ್ರಮತಿಯಲ್ಲಿ ಅವಕಾಶವಿದೆಯೇ ಎಂದು ಪ್ರಯತ್ನಿಸುತ್ತೇನೆ, ಕೇಳಿ ನೋಡುತ್ತೇನೆ ಎಂದು ಹೇಳಿದ ಸಂದರ್ಭಗಳಿವೆ. ಏಕೆಂದರೆ ಯೋಗ್ಯತೆ ಇದ್ದರೆ ಮಾತ್ರೆ ಇಲ್ಲಿ ಕಲಿಯಲು ಅವಕಾಶ ಸಿಗುತ್ತದೆ. ಇಡೀ ಪೂರ್ಣಪ್ರಮತಿ ತಂಡ ಒಂದು ತಪಸ್ಸನ್ನು ಆಚರಿಸುತ್ತಿದೆ. ಗುಣಮಟ್ಟದ ವಿದ್ಯಾಭ್ಯಾಸವನ್ನು ಕೊಡುತ್ತಿರುವ ತಂಡಕ್ಕೆ ನಾನು ಅಭಿನಂದಿಸುತ್ತೇನೆ. ಇನ್ನು ಹೆಚ್ಚಿನ ಮಟ್ಟದಲ್ಲಿ ಬೆಳೆಯಲಿ. ನಮ್ಮ ಪುರಾತನ ಸಂಸ್ಕೃತಿ, ಮರೆಯುತ್ತಿರುವ ಸಂಪ್ರದಾಯವನ್ನು, ಆಧುನಿಕ ವಿಜ್ಞಾನವನ್ನು ಕಲಿಸುವ ದಾರಿಯಲ್ಲಿ ನಿಮಗೆ ಯಶಸ್ಸು ಸಿಗಲೆಂದು ಆಶಿಸುತ್ತೇನೆ.

ಸಂಜಯ್ ಗುಬ್ಬಿ
ನಾನು ಹುಲಿ ಮತ್ತು ಚಿರತೆ ಸಂರಕ್ಷಣೆಯ ಬಗ್ಗೆ ಕೆಲಸ ಮಾಡುತ್ತಿದ್ದೇನೆ. ಬೆಂಗಳೂರಿನವರೆಂದರೆ ಐ.ಟಿ-ಬಿ.ಟಿ ಯ ಬಗ್ಗೆ ಮಾತನಾಡುತ್ತಾರೆ. ವನ್ಯಜೀವಿಗಳೂ ಕೂಡ ಅಷ್ಟೇ ಮುಖ್ಯ. ನನಗೆ ಒಂದು ಸಂತೋಷವೆಂದರೆ ಪ್ರಪಂಚದಲ್ಲೇ ಅತಿ ಹೆಚ್ಚು ಹುಲಿಗಳಿರುವ ರಾಜ್ಯ ನಮ್ಮ ಕರ್ನಾಟಕ. ಏಷಿಯಾದ ಆನೆಗಳು ಹೆಚ್ಚಾಗಿರುವ ರಾಜ್ಯ ಕೂಡ ನಮ್ಮ ಕರ್ನಾಟಕವೇ. ಆದ್ದರಿಂದ ಕಲೆ ಸಂಸ್ಕೃತಿಯಷ್ಟೆ ದೊಡ್ಡದಾಗಿರುವುದು ನಮ್ಮ ನಿಸರ್ಗ ಮತ್ತು ವನ್ಯಜೀವಿಗಳು. ಇದರ ಬಗ್ಗೆ ಪೂರ್ಣಪ್ರಮತಿ ಇಷ್ಟೆಲ್ಲ ಅರಿವನ್ನು ಮೂಡಿಸಿ ಇಷ್ಟು ಒಳ್ಳೆಯ ಕಾರ್ಯಕ್ರಮ ನೀಡುತ್ತಿರುವುದು ಸಂತೋಷದ ಸಂಗತಿ. ಇಂತಹ ಶಾಲೆ ಎಲ್ಲಾ ಕಡೆಗಳಲ್ಲೂ ಬರಬೇಕು.

ಟಿ.ಜಿ.ವೆಂಕಟೇಶಾಚಾರ್
ದೊಡ್ಡವರೇ ಮಾಡುವ ಕಾರ್ಯಕ್ರಮ ನೋಡಿ ಈಗ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನೋಡಿ ಸಂತೋಷವಾಯಿತು. ಅರ್ಚನಾ ಉಡುಪ ಮತ್ತು ರವಿ ಸುಬ್ರಹ್ಮಣ್ಯ ಅವರು ಹೇಳಿದರು ಅವರ ಮಕ್ಕಳನ್ನು ಈ ಶಾಲೆಗೆ ಸೇರಿಸಬೇಕಿತ್ತು, ಆದರೆ ಅವರು ದೊಡ್ಡವರೆಂದು. ನಾನು ಅದೃಷ್ಟವಂತ. ಏಕೆಂದರೆ ನಮ್ಮ ಮೊಮ್ಮಕ್ಕಳು ಈಗಾಗಲೇ ಈ ಶಾಲೆಯಲ್ಲಿ ಓದುತ್ತಿದ್ದಾರೆ. ಮಕ್ಕಳಿಗೆ ಸಂಸ್ಕೃತಿ ಬರುವುದೆ ಮನೆ ಮತ್ತು ಶಾಲೆಯಿಂದ. ಮನೆಯಲ್ಲಿ ಹೇಳಿಕೊಡುವುದು ಕಡಿಮೆಯಾಗಿದೆ. ಏಕೆಂದರೆ ಎಲ್ಲರೂ ಕೆಲಸಕ್ಕೆ ಹೋಗಿ ಬಿಡುತ್ತಾರೆ. ಆದ್ದರಿಂದ ಏನೇ ಕಲಿತರು ಅದು ಶಾಲೆಯಿಂದಲೇ ಬರಬೇಕು. ನಮ್ಮ ಮಕ್ಕಳಿಗೆ ಆ ಅವಕಾಶ ಸಿಕ್ಕಿದೆ. ಈ ಶಾಲೆ ಇನ್ನೂ ಎತ್ತರಕ್ಕೆ ಬೆಳೆಯಲಿ, ಇಂತಹ ಕಾರ್ಯಕ್ರಮಗಳು ಮತ್ತಷ್ಟು ಕೊಡುವಂತಾಗಲಿ ಎಂದು ಹಾರೈಸುವೆ.

ನಾಗೇಶ್ ಹೆಗಡೆ
ಪೂರ್ಣಪ್ರಮತಿ ಶಾಲೆಗೆ ಪ್ರತಿ ಶನಿವಾರ ನಾನು ಭೇಟಿ ಕೊಡುತ್ತೇನೆ. ಮಕ್ಕಳೊಂದಿಗೆ ನಾನು ಹೊಸದಾಗಿ ಕಲಿಯಲು ಆರಂಭಿಸಿದ್ದೇನೆ. ಈ ಮಕ್ಕಳೊಂದಿಗೆ ಪೋಷಕರೂ ಇದ್ದಿದ್ದರೆ ಚೆನ್ನಾಗಿತ್ತು ಎನಿಸುತ್ತದೆ. ಮುಂದಿನ ದಿನಗಳಲ್ಲಿ ಬದುಕುವುದು ಇಂದಿನಷ್ಟು ಸುಲಭವಲ್ಲ. ಏಕೆಂದರೆ ಮುಂದೆ ಬಹಳಷ್ಟು ನೀರಿನ ಆಭಾವವಿರುತ್ತದೆ, ಬರಗಾಲ ಬರಬಹುದು, ಅತಿವೃಷ್ಟಿಯಾಗಬಹುದು, ಆಹಾರದ ಅಭಾವವಾಗಬಹುದು. ಮಕ್ಕಳಿಗೆ ಹಿರಿಯರು ಮಾರ್ಗದರ್ಶನ ಮಾಡುತ್ತಿದ್ದರೆ ಅವರು ಕಲಿಯುತ್ತಾರೆ. ಆದ್ದರಿಂದ ಪೋಷಕರಿಗೆ ಈ ವಿಷಯಗಳನ್ನು ತಿಳಿಸುವುದು ಮುಖ್ಯ. ಭಾಷಣ, ನರ್ತನ ಕಲಿಯುವಷ್ಟೇ ಮುಖ್ಯ ಶಕ್ತಿಯ ಉಳಿತಾಯವನ್ನು ಕಲಿಯುವುದು. ೨೫-೨೬ ನೇ ದಿನಾಂಕಗಳಂದು ಬಂದಾಗ ಪೋಷಕರೊಂದಿಗೆ ಇನ್ನಷ್ಟು ಸಂವಹನ ನಡೆಸಬಹುದು. ಶಕ್ತಿಶಾಲಿ ಸಮಾಜವನ್ನು ನಿರ್ಮಿಸುವುದರಲ್ಲಿ ನಾವೆಲ್ಲ ಒಟ್ಟಾಗಿ ಶ್ರಮಿಸೋಣ.

ಶ್ರೀನಿ ಶ್ರೀನಿವಾಸ್
ಈ ವರ್ಷ ನಾನು ಐದು-ಆರನೇ ತರಗತಿಯ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದೇನೆ. ಅದರಷ್ಟು ಖುಷಿ ಕೊಡುವ ವಿಚಾರ ಮತ್ತಾವುದೂ ಇಲ್ಲ.

ಪ್ರೊ.ಡಿ.ಪ್ರಹ್ಲಾದಾಚಾರ್ಯರು
ಪೂರ್ಣಪ್ರಮತಿ ೪ ವರ್ಷದ ಬಾಲಿಕೆ. ನಮಗೆಲ್ಲಾ ಒಂದು ರೀತಿಯ ಭಯ, ಆತಂಕ. ಮಕ್ಕಳನ್ನು ಒಳ್ಳೆಯ ವ್ಯಕ್ತಿಗಳಾಗಿ ರೂಪಿಸಲು ಬೇಕಾದ ಅನುಭವವಿಲ್ಲದೆ ಯಾವ ರೀತಿ ಮುಂದುವರೆಯುತ್ತೇವೆ, ಎಷ್ಟು ಸಫಲರಾಗುತ್ತೇವೆ ಎಂಬ ಭಯ ಇತ್ತು. ಆದರೆ ವರ್ಷದಿಂದ ವರ್ಷಕ್ಕೆ ಮುಂದೆ ಹೋಗುತ್ತಿರುವಂತೆ ಒಂದು ಆತ್ಮ ವಿಶ್ವಾಸ ಮೂಡುತ್ತಿದ್ದೆ. ಮಕ್ಕಳು ಶಾಲೆಗೆ ಏಕೆ ಬರುತ್ತಾರೆ? ಸ್ವಾತಂತ್ರ ಬಂದ ಸಂದರ್ಭದಲ್ಲಿ ಅನಕ್ಷರಸ್ಥರು ಇದ್ದದ್ದೆ ಹೆಚ್ಚು. ಅವರೆಲ್ಲ ಅಕ್ಷರಸ್ಥರಾಗಬೇಕು ಎಂಬುದೆ ಗುರಿಯಾಗಿತ್ತು. ನಮ್ಮ ದೇಶ ಒಳ್ಳೆಯ ನಾಗರಿಕರನ್ನು ಪಡೆಯಬೇಕು. ಆದರೆ ಕೇವಲ ಅಕ್ಷರಸ್ಥರಾದರೆ ಸಾಲದು. ‘ಸಾಕ್ಷರಾಃ… ರಾಕ್ಷಸಾಃ ಏವ ಕೇವಲಮ್’ ಸಾಕ್ಷರ ಎಂಬ ಅಕ್ಷರಗಳನ್ನು ಹಿಂದುಮುಂದು ಮಾಡಿದರೆ ರಾಕ್ಷಸರಾಗುತ್ತಾರೆ. ವಿದ್ಯಾವಂತರಾಗಿದ್ದು ಸಂಸ್ಕಾರ ರಹಿತರಾದರೆ ಏನು ಪ್ರಯೋಜನವಿಲ್ಲ. ಪ್ರತಿನಿತ್ಯ ಪತ್ರಿಕೆಗಳಲ್ಲಿ ಓದುತ್ತಿದ್ದೇವೆ. ಆದ್ದರಿಂದ ಸಾಕ್ಷಕರರಾಗಬೇಕು ಮತ್ತು ಸುಸಂಸ್ಕೃತರಾಗಬೇಕು. ಆ ಜವಾಬ್ದಾರಿ ಶಾಲೆಯ ಮೇಲಿದೆ. ಸಂಸ್ಕಾರವನ್ನು ಕೊಡುವ ಪ್ರಯತ್ನವನ್ನು ಪೂರ್ಣಪ್ರಮತಿ ಕೊಡುತ್ತಿದೆ. ಹಲವು ಹಿರಿಯರ ಮಾರ್ಗದಶನದಲ್ಲಿ ಪೂರ್ಣಪ್ರಮತಿ ನಡೆಯುತ್ತಿದೆ. ನಾಲ್ಕೇ ವರ್ಷಗಳಲ್ಲಿ ಉತ್ತರ ಭಾರತದ ಹಲವು ವಿದ್ಯಾವಂತರು, ಪ್ರಜ್ಞಾವಂತರು ಪೂರ್ಣಪ್ರಮತಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಪೋಷಕರು ವಿಶ್ವಾಸವಿಟ್ಟು ಶಾಲೆಗೆ ಮಕ್ಕಳನ್ನು ಕಳುಹಿಸುತ್ತಿದ್ದಾರೆ. ಪ್ರತಿಯೊಂದು ಕಾರ್ಯಕ್ರಮದಲ್ಲೂ ಅವರ ವಿಶ್ವಾಸಕ್ಕೆ ತಕ್ಕ ಪ್ರತಿಫಲ ಕಂಡುಬರುತ್ತಿದೆ. ಯಾವ ಮಗುವಿನ ಮುಖದಲ್ಲೂ ಭಯ ಕಂಡುಬರುತ್ತಿಲ್ಲ. ಸಹಜ ಭಾವದಿಂದ ಮಾತನಾಡುತ್ತಿದ್ದಾರೆ. ಈ ರೀತಿಯ ಮನೋಭೂಮಿಕೆಯನ್ನು ಕೊಡುವಲ್ಲಿ ಪೂರ್ಣಪ್ರಮತಿ ಯಶಸ್ವಿಯಾಗುತ್ತಿದೆ. ಅಧ್ಯಾಪಕರ ಸಮರ್ಪಣಾ ಭಾವ, ಪ್ರಾಂಶುಪಾಲರ ಅನುಭವ ಇಡೀ ತಂಡ ಬಹಳ ಶ್ರದ್ಧೆಯಿಂದ ಕೆಲಸ ಮಾಡುತ್ತಿರುವುದು ಕಂಡುಬರುತ್ತಿದೆ.

ಹೀಗೆ ಹಿರಿಯರ, ಅನುಭವಿಗಳ ಮಾತುಗಳನ್ನು ಕೇಳಿ ತುಂಬು ಮನಸ್ಸಿನಿಂದ ವಂದನಾರ್ಪಣೆಯನ್ನು ನಡೆಸಿದೆವು. ಅವರೆಲ್ಲರ ಹಾರೈಕೆಯಂತೆ ಸಫಲತೆಯ ಹಾದಿಯಲ್ಲಿ ಹೆಜ್ಜೆಯನ್ನು ಇಡುವತ್ತ ಸಾಗಿದೆವು. ಮುಂದೆ ನಡೆಯಬೇಕಿದ್ದ ಜಾತ್ರೆಯ ಒಂದು ಸಣ್ಣ ಝಲಕ್‌ನ್ನು ಪ್ರಾರಂಭೋತ್ಸವದಲ್ಲಿ ಪ್ರೇಕ್ಷಕರಿಗೆ ತೋರಿಸುವುದರ ಮೂಲಕ ಜಾತ್ರೆಯ ಸುದ್ದಿಯನ್ನು ಸಾರಲಾಯಿತು.

Leave a Reply

Notice Board

Pūrṇapramati is recruiting teachers

Pūrṇapramati is recruiting dedicated research oriented teachers for 1 to 10 grades and pre-primary Montessori.

 

Registration is open for the next academic year

Purnapramati opens its registration for the next academic year: November 2017 and June 2018-19. Applications are being issued. Kindly help spread the word to interested parents.

Socialize & Share

Follow us on different social networking website and share it