ಅಧ್ಯಯನಕ್ಕೊಂದು ದಾರಿದೀಪ…ಹಯಗ್ರೀವ ಜಯಂತಿಯಂದು

ಸಾಧನೆಗಾಗಿ ಕಿವಿಮಾತು, ಸಾಧಕರಿಂದ ಹೀಗಿತ್ತು,

ಸಾಗುವ ಹಾದಿ ತೆರೆದು ಸುರಿದ ಸೋನೆಮುತ್ತು

ಸಾರ್ಥಕ ’ಹಯಗ್ರೀವ ಜಯಂತಿಯ’ ದಿನವದಾಗಿತ್ತು…..

ಶ್ರಾವಣ ಮಾಸದ ಪ್ರಥಮ ಹುಣ್ಣಿಮೆಯಂದು (21ನೇ ಆಗಸ್ಟ್ 2013) ಹಯಗ್ರೀಯ ಜಯಂತಿಯ (ಜ್ಞಾನದ ದಿನ) ಆಚರಣೆ ನಮ್ಮ ಶಾಲೆಯಲ್ಲಿನಡೆಯಿತು. ಭಗವಂತ ಹಯಗ್ರೀವ ರೂಪದಿಂದ ಬ್ರಹ್ಮ ದೇವರಿಗೆ ಜ್ಞಾನೋಪದೇಶ ಮಾಡಿದ ದಿನ ಇದಾಗಿದೆ. ಶ್ರದ್ಧೆಯಿಂದ ಜ್ಞಾನಕ್ಕಾಗಿ ಬೇಡುವುದು ಈ ದಿನದ ಮಹತ್ವದ ಕಾರ್ಯಕ್ರಮವಾಗಿತ್ತು.

ವಿದ್ಯಾಪೀಠದ ಹಿರಿಯ ವಿದ್ವಾಂಸರೂ ನಮ್ಮ ಶಾಲೆಯ ಹಿರಿಯ ಮಾರ್ಗದರ್ಶಕರೂ ಆದ ಶ್ರೀ ಸತ್ಯನಾರಾಯಣಾಚಾರ್ಯರು ಮತ್ತು ಹಿರಿಯ ವಿದ್ವಾಂಸರೂ ಸ್ವಾತಂತ್ರ ಹೋರಾಟಗಾರರೂ ಆದ ಶ್ರೀ ಸುಧಾಕರ ಚತುರ್ವೇದಿ ಅವರು ನಮಗೆ ಮಾರ್ಗದರ್ಶನ ಮಾಡಲು ಆಗಮಿಸಿದ್ದುದು ನಮ್ಮ ಸುಕೃತವೇ ಸರಿ. ಔಪಚಾರಿಕ ಸ್ವಾಗತ ಭಾಷಣ, ಸಾಂಸ್ಕೃತಿಕ ಚಟುವಟಿಕೆಗಳಿಲ್ಲದೆ ಅಧ್ಯಯನವನ್ನು ಪ್ರಖರಗೊಳಿಸುವ ನಿಟ್ಟಿನಲ್ಲಿ ಎಲ್ಲರ ಗಮನವೂ ನೆಟ್ಟಿತ್ತು.

ಸಮಯ ಪಾಲಕರಾದ ಸತ್ಯನಾರಾಯಣಾಚಾರ್ಯರು 8.30ಕ್ಕೆ ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆರನೆಯ ತರಗತಿಯ ವಿದ್ಯಾರ್ಥಿ ವಿಷ್ಣು ಪುಟ್ಟ ಆಚಾರ್ಯರಿಗೆ ಸ್ವಾಗತ ಕೋರಿದ. ಆಚಾರ್ಯರ ಮಾತುಗಳು, ಮಕ್ಕಳಿಂದ ಪ್ರಶ್ನೆ, ಆಚಾರ್ಯರಿಂದ ಸೂಕ್ತ ಉತ್ತರಗಳು ಇಂದಿನ ಕಾರ್ಯಕ್ರಮ.

ಮುಂದಿನ ಸಂದೇಶ ಆಚಾರ್ಯರ ಮಾತುಗಳಲ್ಲೇ ಕೇಳಿ…

ಗ್ರೀವ ಎಂದರೆ ಕಂಠ, ಹಯ ಎಂದರೆ ಕುದುರೆ. ಗ್ರೀವ ಎಂದರೆ ತಲೆ ಎಂಬ ಅರ್ಥವೂ ಇದೆ. ಹಯ-ಗತೌ ಎಂಬುದು ಧಾತು ಪಾಠ. ಹಯ ಎಂದರೆ ಜ್ಞಾನ ಎಂದು ಅರ್ಥ. ಕುದುರೆ ಬಹಳ ಬೇಗ ಹೋಗುವುದರಿಂದ ಹಯ ಎಂದು ಹೆಸರು. ಆಶು ವಾತಿ ಇತಿ ಅಶ್ವ. ಶೀಘ್ರವಾಗಿ ಹೋಗುವುದರಿಂದ ಹಯ ಎಂಬ ಹೆಸರು ಬಂದಿದೆ. ನಮ್ಮ ತಲೆಯೂ ಶೀಘ್ರವಾಗಿ ಓಡುತ್ತಿದ್ದರೆ ಹಯಗ್ರೀವ ಎಂದು ಹೆಸರು. ನಮ್ಮದು ಜ್ಞಾನದ ತಲೆ ಆಗಬೇಕು. ಅದಕ್ಕಾಗಿ ಈ ಹಯಗ್ರೀವ ಜಯಂತಿಯ ಆಚರಣೆ.

ಅಧ್ಯಯನದಲ್ಲಿ ಶಿಸ್ತು ಬರಬೇಕಾದರೆ ಏನು ಬೇಕು?

ಪಾಠ ಹೇಳುವವರು ಪಾಠ ಹೇಳಿದರೆ ಅವರು ಬುದ್ಧಿವಂತರಾಗುತ್ತಾ ಹೋಗುತ್ತಾರೆ ಮತ್ತು ಕೇಳುವವರು ಕೇಳುವ ಹಾಗೆ ಕೇಳಿದರೆ, ಚೆನ್ನಾಗಿ ಅಧ್ಯಯನ ಮಾಡಿದರೆ ಅವರಂತೆ ಬುದ್ಧಿವಂತರಾಗುತ್ತಾರೆ. ಆದರೆ ಕೆಲವರಿಗೆ ಪಾಠ ಹೇಳುವವರು ಚೆನ್ನಾಗಿ ಹೇಳಿದರೂ ತಲೆಯ ಒಳಗೆ ಹೋಗುವುದಿಲ್ಲ. ನಾಲ್ಕು ಕಾರಣಗಳನ್ನು ಹೇಳುತ್ತೇನೆ ನಿಮಗೆ.

ಪಾಠ ಅರ್ಥವಾಗದಿರಲು ಮೂಲ ಕಾರಣ ವಿದಾರ್ಥಿಗಳ ಗಮನ ಬೇರೆಡೆ ಇರುವುದು. ಅಂದರೆ ಅನ್ಯಾಸಕ್ತಿ. ತಲೆ ಎಲ್ಲರಿಗೂ ಇರುತ್ತದೆ, ಬುದ್ಧಿಯೂ ಇರುತ್ತದೆ, ಬುದ್ಧಿಯನ್ನು ಬೇಕಾದ ಕಡೆ ಬಿಟ್ಟು ಬೇರೆ ಎಲ್ಲೆಲ್ಲೋ ಉಪಯೋಗಿಸುವುದು ಮೊದಲ ಕಾರಣ.

ಎರಡನೆಯ ಕಾರಣ ಅನಾಸಕ್ತಿ. ತಪ್ಪುತಪ್ಪಾಗಿ ಹೇಳಿದರೂ ಲೆಕ್ಕ ಪಾಠ ಇಷ್ಟ, ಆದರೆ ಸಂಸ್ಕೃತ ರಗಳೆ. ಪುಲ್ಲಿಂಗಕ್ಕೆ ಭವಾನ್, ಸ್ತ್ರೀಲಿಂಗಕ್ಕೆ ಭವತೀ, ನಪುಂಸಕ ಲಿಂಗ ಬಂದರೆ ಭವತ್. ಒಟ್ಟು ಅರ್ಥವಾಗುವುದಿಲ್ಲ. ಇಷ್ಟವಾಗುವುದಿಲ್ಲ ಎಂದು ಮನಸ್ಸಿನಲ್ಲಿ ಇದ್ದರೆ ವಿಷಯ ಅರ್ಥವಾಗುವುದೇ ಇಲ್ಲ. ಸಂಸ್ಕೃತ ಇಷ್ಟವಾದವನಿಗೆ ಸಮಾಜಶಾಸ್ತ್ರವೆಂದರೆ ತಲೆಗೆ ಹೋಗುವುದಿಲ್ಲ. ಬೇಡದನ್ನೆಲ್ಲ ಹೇಳಿಕೊಡುತ್ತಾರೆ ಎಂದು ತಲೆ ಕೆರೆಯುತ್ತಾನೆ ಅವನು. ಒಂದು ಕಡೆ ಆಸಕ್ತಿ, ಒಂದು ಕಡೆ ಅನಾಸಕ್ತಿ ಇದ್ದರೆ ವಿಷಯ ತಲೆಯ ಒಳಗೆ ಹೋಗುವುದಿಲ್ಲ. ಅನ್ಯಾಸಕ್ತಿ ಇಲ್ಲದಿದ್ದರೂ ಆಸಕ್ತಿ ಇಲ್ಲದಿದ್ದರೆ ಹೇಳಿದ್ದು ತಿಳಿಯುವುದಿಲ್ಲ. ಹಾಡುವಾಗ ಹಾಡಿನಲ್ಲಿ, ಊಟಮಾಡುವಾಗ ಊಟದಲ್ಲಿ, ಆಟವಾಡುವಾಗ ಆಟದಲ್ಲಿ, ಓದುವಾಗ ಓದಿನಲ್ಲಿ, ಟಿ.ವಿ. ನೋಡುವಾಗ ಟಿ.ವಿ.ಯಲ್ಲಿ ಆಸಕ್ತಿ ಇಲ್ಲದಿದ್ದರೆ ಆ ವಿಷಯ ಅರ್ಥವಾಗುವುದೇ ಇಲ್ಲ.

ಇನ್ನೊಂದು ಕಾರಣ ಇದೆ. ನನಗೆ ಇವರೇನು ಪಾಠ ಹೇಳುವುದು? ಇವರಿಗೇನು ಗೊತ್ತು? ಇಂಟರ್‌ನೆಟ್ ನೋಡಿ ನಾನು ಎಷ್ಟೆಲ್ಲ ಕಲಿತಿದ್ದೇನೆ ಇವರಿಗೆ ಅದೆಲ್ಲ ಗೊತ್ತಿದೆಯಾ? ಎಂದುಕೊಳ್ಳುವುದು. ಇದಕ್ಕೆ ಅಗೌರವ ಎಂದು ಹೆಸರು. ಗುರುಗಳ ಮೇಲೆ ಗೌರವ ಇಲ್ಲದಿರುವುದು. ಅವರೇನು ನನಗೆ ಪಾಠ ಹೇಳುವುದು ನಾನು ಅವನಿಗೆ ಹೇಳಬಹುದು. ಹೇಳುವವರನ್ನು ಗೌರವಿಸದಿರುವುದು, ಉದಾಸೀನ ಮಾಡುವುದು ಅಗೌರವ. ಅದಕ್ಕಾಗಿ ಹಿಂದಿನ ಕಾಲದಲ್ಲಿ ಹಿರಿಯರು ಮನೆಗೆ ಬಂದಾಗ ಕಾಲಿಗೆ ನಮಸ್ಕಾರ ಮಾಡುವುದು, ಶಾಲೆಯಲ್ಲಿ ಅಭಿವಾದಯೇ ಎಂದು ಗೌರವಿಸುವುದು. ಇದೆಲ್ಲಾ ನಮ್ಮ ಮನಸ್ಸಿಗೆ ಬರಬೇಕು. ಅವರು ಚೆನ್ನಾಗಿ ಓದಿಕೊಂಡಿದ್ದಾರೆ ನಾನು ಅವರಂತೆ ಆಗಲು ಕಲಿಯುತ್ತಿರುವವನು ಎಂಬ ಭಾವ ಮನಸ್ಸಿಗೆ ಬರಬೇಕು. ಅದಕ್ಕೆ ಅಧ್ಯಾಪಕರಲ್ಲಿ ಗೌರವ ಬೆಳೆಸಿಕೊಳ್ಳಬೇಕು.

ಮತ್ತೊಂದು ಕಾರಣ ನಾನು ಎಂಬ ಅಹಂಕಾರ. ನನ್ನ ಮುಂದೆ ರಾವಣನೂ ಲೆಕ್ಕವಿಲ್ಲ. ಶಕುನಿಯ ತಲೆಯನ್ನು ಮೀರಿಸಬಲ್ಲ ತಲೆ ಇದೆ ಎಂಬ ಭಾವ. ಅಗೌರವದಲ್ಲಿದ್ದುದು ಗುರುಗಳ ಬಗ್ಗೆ ಅನಾದರ, ಈಗ ತನ್ನ ಬಗ್ಗೆ ಅಹಂಕಾರ. ಅಂತಹ ಪಂಡಿತರ ಮಗ, ಮೊಮ್ಮಗ ನಾನು. ನನಗೆ ಇವರೇನು ಪಾಠ ಹೇಳುವುದು ಎಂಬ ಮನೋಭಾವ. ಇಂತಹವರಿಗೆ ಪಂಡಿತ ಪುತ್ರ ಎಂದು ಹೆಸರು. ಅಂದರೆ ದಡ್ಡಂಭಟ್ಟ ಎಂದು ಅರ್ಥ. ತಾನು ಕಲಿತದ್ದೇನು ಇಲ್ಲ. ತನ್ನ ಅಪ್ಪ, ಅಜ್ಜ ಇಂತಹ ಪಂಡಿತರೆಂದು ಹೇಳಿಕೊಳ್ಳುವುದೇ ದೊಡ್ಡಸ್ತಿಕೆ. ಮತ್ತು ಕೆಲವರಿಗೆ ಧನಮದ, ರೂಪಮದ, ಜ್ಞಾತಿಮದ ಇರುತ್ತದೆ. ಈ ಅಹಂಕಾರಗಳೆಲ್ಲ ವಿದ್ಯಾರ್ಥಿಗಳಿಗೆ ಇದ್ದರೆ ಓದು ತಲೆಗೆ ಹತ್ತುವುದಿಲ್ಲ. ಒಂದು ಪಾತ್ರೆಯಲ್ಲಿ ತುಂಬ ನೀರಿದ್ದು ಮತ್ತೆ ಹಾಕಲು ಹೋದರೆ ಚೆಲ್ಲಬಹುದಷ್ಟೆ. ಅಹಂಕಾರ ತಲೆಯೊಳಗಿದ್ದರೆ ವಿದ್ಯೆ ಒಳಗೆ ಹೋಗುವುದೇ ಇಲ್ಲ. ಹೊರಗೆ ಚೆಲ್ಲಬಹುದು. ಓದಲು ಬಗ್ಗಿ ಕೇಳುವ, ಬಾಗುವ ಗುರುಗಳಿಗೆ ಒಪ್ಪಿಸಿಕೊಳ್ಳುವ ಭಾವ ಬೇಕು. ಗುರುಗಳು ಚೆನ್ನಾಗಿ ಓದಿಕೊಂಡವರು. ನಾನು ಕಲಿಯಲು ಬಂದಿರುವವ ಎಂಬ ವಿನಯ ಇರಬೇಕು. ವಿಧೇಯತೆ ಬೆಳಸಿಕೊಳ್ಳಬೇಕು.

ಅಸಾಮರ್ಥ್ಯ ಎಂದು ಮಗದೊಂದು ಕಾರಣ ಶಿಕ್ಷಣತಜ್ಞರು ಹೇಳುತ್ತಾರೆ. ಕೆಲವರಿಗೆ ಅನಾಸಕ್ತಿ, ಅನ್ಯಾಸಕ್ತಿ, ಅಗೌರವ, ಅಹಂಕಾರ ಯಾವುದೂ ಇಲ್ಲದಿದ್ದರೂ ಸಾಮರ್ಥ್ಯವೇ ಇರುವುದಿಲ್ಲ. ಆದರೆ ಇದಕ್ಕೆ ಚರಕ ಎಂಬ ಆಯುವೇದಕ್ಕೆ ಸಂಬಂಧಪಟ್ಟ ಋಷಿ ಕೆಲವು ಉಪಾಯಗಳನ್ನೂ ಹೇಳುತ್ತಾರೆ. ಒಂದೆಲಗ (ಬ್ರಾಹ್ಮಿ) ತಿನ್ನಲು, ಪ್ರಾಣಾಯಾಮ ಮಾಡಿ ದೇವರಲ್ಲಿ ಪ್ರಾರ್ಥನೆ ಮಾಡಬೇಕೆಂಬ ಮಾರ್ಗ ಹೇಳುತ್ತಾರೆ. ಬೇರೆ ಶಾಲೆಗಳಲ್ಲಿ ಸಿಗದ ದೇವರನ್ನು ಪ್ರಾರ್ಥಿಸುವ ಮಂತ್ರಗಳು, ಶ್ಲೋಕಗಳು ಸಿಗುತ್ತವೆ ಪೂರ್ಣಪ್ರಮತಿಯಲ್ಲಿ ಸಿಗುತ್ತವೆ. ಅದೊಂದು ಲಾಭವೇ ಸರಿ. ಚರಕ-ಸುಶ್ರುತ ಋಷಿಗಳು ಬೆಳಗ್ಗೆ ಸೂರ್ಯೋದಯಕ್ಕೂ ಮೊದಲು ಎದ್ದು ಓದಬೇಕು ಎಂದು ಹೇಳುತ್ತಾರೆ. ಸೂರ್ಯ ಉದಯಿಸುವ ಒಂದೂ ಕಾಲು ಗಂಟೆ ಪೂರ್ವ ಕೆಂಪಾಗುವುದು. ಅದಕ್ಕೆ ಅರುಣೋದಯ ಎಂದು ಹೆಸರು. ಈ ಕಾಲದಲ್ಲಿ ಒಂದು ವಿಶಿಷ್ಟ ವಾತಾವರಣದ ಶಕ್ತಿ, ಕಂಪನ ಇರುತ್ತದೆ. ಇದನ್ನು ದೈವೀಶಕ್ತಿ ಎನ್ನುತ್ತಾರೆ. ಇದನ್ನು ಪ್ರಾಣಿಗಳೂ ಅರ್ಥಮಾಡಿಕೊಳ್ಳುತ್ತವೆ. ಹಸು, ಪಕ್ಷಿಗಳೂ ಎಚ್ಚೆತ್ತು ಖುಷಿಪಡುತ್ತಿರುತ್ತವೆ.

ಹಿಂದೆ ಸಂಕಲ್ಪ ಮಾಡಿದ್ದು ನೆನಪಿದೆಯೇ, ಎಷ್ಟು ಜನ ಪಾಲಿಸುತ್ತಿದ್ದೀರಿ? ಅಂದು ಸಂಕಲ್ಪ ಮಾಡಿದವರಿಗೆ ಅದನ್ನು ನಡೆಸುವ ಜವಾಬ್ದಾರಿ ಇರುತ್ತದೆ. ಒಂದು ವೇಳೆ ಪಾಲಿಸಲು ಆಗದಿದ್ದರೆ ಪ್ರಾಯಶ್ಚಿತ್ತ ಎಂದು ಮಾಡಬೇಕು. ಎದ್ದ ನಂತರ ಹಲ್ಲು ತೊಳೆದು ಗೀತೆಯ ಒಂದು ಅಧ್ಯಾಯವನ್ನು ಪಾರಾಯಣ ಮಾಡುವುದು. ಹಾಗೆಂದು ನಿತ್ಯ ತಡವಾಗಿ ಏಳುವುದು ಗೀತೆ ಪಾರಾಯಣ ಮಾಡುವುದಲ್ಲ. ಪ್ರಾಯಶ್ಚಿತ್ತ ಇದೆ ಎಂದು ತಪ್ಪುಮಾಡುವುದಲ್ಲ. ಅನಿವಾರ್ಯವಾಗಿ ತಪ್ಪಾದಾಗ ಪ್ರಾಯಶ್ಚಿತ್ತ ಮಾಡಿಕೊಳ್ಳುವುದು. ಪೂರ್ಣಪ್ರಮತಿಯ ಮಕ್ಕಳೆಂದರೆ ಬೆಳಗ್ಗೆ 6 ಗಂಟೆಯ ನಂತರ ಮಲಗುವುದೇ ಇಲ್ಲ ಎಂದು ಊರಿನವರೆಲ್ಲ ಮಾತನಾಡಿಕೊಳ್ಳುವಂತಾಗಲಿ. ನಾವೆಲ್ಲರೂ ಸೂರ್ಯೋದಯಕ್ಕಿಂತ ಮುಂಚೆ ನಿಶ್ಚಯವಾಗಿಯೂ ಎದ್ದು, ಹಲ್ಲು ತೊಳೆದು ಅಧ್ಯಯನ ಮಾಡುತ್ತೇವೆ ಎಂಬುದು ಸಂಕಲ್ಪವಾಗಲಿ. ಈ ದಿನ ಹಿಂದಿನ ಸಂಕಲ್ಪವನ್ನೇ ಮತ್ತಷ್ಟು ಗಟ್ಟಿಮಾಡಿಕೊಳ್ಳಿ. ಪಾಠ ಸರಿಯಾಗಿ ಅರ್ಥವಾಗುವ ಕಾರಣ ಆಸಕ್ತಿ, ಹೇಳಿದ ವಿಷಯದಲ್ಲೇ ಆಸಕ್ತಿ, ಗುರುಗಳಲ್ಲಿ ಗೌರವ ಎಂಬುದು ಇಂದಿನ ಪಾಠದಿಂದ ತಿಳಿಯಿತು.

ಆಚಾರ್ಯರಿಂದ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರ

ಪ್ರಶ್ನೆ: ಅನ್ಯಾಸಕ್ತಿ, ಅನಾಸಕ್ತಿ, ಅಗೌರವ, ಅಹಂಕಾರಗಳಲ್ಲಿ ಯಾವುದೇ ಒಂದು ಇದ್ದರೂ ಯಾವ ವಿದ್ಯೆಯೂ ಬರುವುದಿಲ್ಲವೇ ? (ಅನಂತ ಕೃಷ್ಣ, ಮೂರನೆಯ ತರಗತಿ)

ಉತ್ತರ: ವಸ್ತುತಃ ಸ್ವಲ್ಪ ವಿದ್ಯೆ ಬರಬಹುದು. ಅನ್ಯಾಸಕ್ತಿ ಇಲ್ಲ, ಅಹಂಕಾರ ಇಲ್ಲ. ಆದರೆ ಗೌರವ ಇಲ್ಲದಿದ್ದರೆ ಆಸಕ್ತಿ ಬರುವುದೇ ಇಲ್ಲ. ಗುರುಗಳ ಮೇಲೆ ಗೌರವ ಇಲ್ಲದಿದ್ದರೆ ಆಸಕ್ತಿ ಕಡಿಮೆ ಆಗುತ್ತಾ ಹೋಗುತ್ತದೆ. ಈ ನಾಲ್ಕು ಒಂದಕ್ಕೊಂದು ಸಂಬಂಧ ಹೊಂದಿದೆ. ನಮಗೆ ಯಾವುದಾದರೂ ವಿಷಯದಲ್ಲಿ ಆಸಕ್ತಿ ಹೇಗೆ ಬರುತ್ತದೆ?! ಅದರ ಪ್ರಯೋಜನ ತಿಳಿದು ಅದರ ಬಗ್ಗೆ ಆಸಕ್ತಿ ಬರುತ್ತದೆ. ಬಾಲ್ಯದಲ್ಲಿ ಯಾವುದು ಪ್ರಯೋಜನ ಎಂಬುದು ವಿದ್ಯಾರ್ಥಿಗಳಿಗೆ ತಿಳಿದಿರುವುದಿಲ್ಲ. ಗುರುಗಳಿಗೆ ಹೇಳಿಕೊಡುವ ವಿಷಯ ಹೇಗೆ ಪ್ರಯೋಜನಕ್ಕೆ ಬರುತ್ತದೆ ಎಂಬುದು ತಿಳಿದಿರುತ್ತದೆ. ಅವರು ತಮ್ಮ ಇಚ್ಛೆಯಿಂದ ಹೇಳಿಕೊಡುತ್ತಾರೆ. ಗುರುಗಳ ಬಗ್ಗೆ ಗೌರವದಿಂದ ಕಲಿಯದಿದ್ದರೆ ಆಸಕ್ತಿ ಬರುವುದೆ ಇಲ್ಲ. ಅದರಿಂದ ಸಿಗಬೇಕಾದ ಪೂರ್ಣಫಲವು ಸಿಗುವುದೂ ಇಲ್ಲ. ವಿಧೇಯತೆ ಇದ್ದರೆ ಕಲಿತ ವಿದ್ಯೆ ದೊಡ್ಡ ಫಲವನ್ನು ಕೊಡುತ್ತದೆ.

 For more photos click here

ಪ್ರಶ್ನೆ: ನಾಲ್ಕೂ ಕಾರಣಗಳೂ ಒಂದಕ್ಕೊಂದು ಹೇಗೆ ಸಂಬಂಧ ಹೊಂದಿದೆ? (ಪುರುಜಿತ್, ಮೂರನೆಯ ತರಗತಿ)

ಉತ್ತರ: ಒಂದಕ್ಕೊಂದು ಅವುಗಳ ಕಾರ್ಯಕಾರಣಭಾವವನ್ನು ಕೇಳುತ್ತಿದ್ದಾನೆ ಪುರುಜಿತ್. ಅನಾಸಕ್ತಿಯಿಂದ ಮನಸ್ಸು ಬೇರೆಡೆಗೆ ಹೋಗುತ್ತದೆ, ಅದರಿಂದ ಅನ್ಯಾಸಕ್ತಿ ಬರುತ್ತದೆ, ಮುಂದೆ ಗುರುಗಳಿಗೆ ಕೀಟಲೆ ಮಾಡಬೇಕು ಅನಿಸುತ್ತದೆ. ಏಕೆಂದರೆ ಗುರುಗಳು ಸದಾ ಬೈಯುತ್ತಾರೆ, ಗಮನ ಎಲ್ಲೋ ಇರುತ್ತದೆ ಎಂದು. ಗುರುಗಳ ಬಗ್ಗೆ ಗೌರವ ಹೋಗುತ್ತದೆ. ಮುಂದೆ ಹೇಗಾದರೂ ಎಲ್ಲರ ಗಮನದಲ್ಲೂ ತಾನು ದೊಡ್ಡವನಾಗಬೇಕೆಂಬ ಅಹಂಕಾರ ಬೆಳೆಯುತ್ತದೆ.

ಪ್ರಶ್ನೆ: ಒಂದು ದೋಷ ಬಿಟ್ಟರೆ ಎಲ್ಲವೂ ಹೊರಟುಹೋಗತ್ತಾ? (ಶ್ರೀಹರಿ, ನಾಲ್ಕನೆಯ ತರಗತಿ)

ಉತ್ತರ: ದೋಷವನ್ನು ಬಿಡುವುದು ಎಂಬುದೆ ಕಷ್ಟ. ಬಲವಂತವಾಗಿ ಬಿಟ್ಟರೆ ಸ್ವಲ್ಪ ಕಾಲಕ್ಕೆ ಹೋದಂತೆ ಅನಿಸಬಹುದು. ಆದರೆ ಒಂದು ಹೋದರೆ ಎಲ್ಲವೂ ತಾನಾಗಿ ಹೋಗುತ್ತವೆ.

ಪ್ರಶ್ನೆ: ಅನ್ಯಾಸಕ್ತಿ, ಅನಾಸಕ್ತಿ ಎಲ್ಲ ಎಷ್ಟು ಬೇಗ ಬರುತ್ತದೆ? (ವೇದೇಶ, ಮೂರನೆಯ ತರಗತಿ)

ಉತ್ತರ: ಮಕ್ಕಳಲ್ಲಿ ಎಷ್ಟು ಬೇಗ ಬರುವುದೋ ಅಷ್ಟು ಬೇಗ ಹೋಗುತ್ತದೆ. ಆದರೆ ಎಷ್ಟು ಬೇಗ ಬಂದರೆ ಅಷ್ಟು ಒಳ್ಳೆಯದು. ಬಂದ ಕೂಡಲೆ ತಡೆದು ನಿಲ್ಲಿಸುವ ಪ್ರಯತ್ನ ಮಾಡಬೇಕು.

ಪ್ರಶ್ನೆ: ಯಾವುದೇ ದೋಷವನ್ನು ಬಿಡುವುದು ಹೇಗೆ? (ಸುರಭಿ, ಆರನೆಯ ತರಗತಿ)

ಉತ್ತರ: ದೋಷ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು ನಂತರ ಬಿಡಬೇಕು, ಒಂದೊಕ್ಕೊಂದು ಸಂಬಂಧ ಇರುವುದರಿಂದ ಒಂದು ಬಿಟ್ಟರೆ ಉಳಿದವು ಬಿಡುತ್ತವೆ. ಆದರೆ ನಮ್ಮಲ್ಲಿ ದೋಷ ಇರುವುದೇ ತಿಳಿಯುವುದಿಲ್ಲ. ತಿಳಿದರೆ ನಂತರ ಸರಿಮಾಡಿಕೊಳ್ಳಲು ನಾವೇ ಪ್ರಯತ್ನ ಮಾಡಬಹುದು.

-೦-

ಇಷ್ಟು ವಿಚಾರಗಳನ್ನು ತಿಳಿಸಿ ಆಚಾರ್ಯರು ನಿರ್ಗಮಿಸಿದರು ತಮ್ಮ ಮುಂದಿನ ಕಾರ್ಯಕ್ಕಾಗಿ. ಅವರನ್ನು ಬೀಳ್ಕೊಟ್ಟು ಸುಧಾಕರ ಚತುರ್ವೇದಿಯವರನ್ನು ಸ್ವಾಗತಿಸಿದೆವು. ಅನಂತಣ್ಣ ೧೧೮ ವಯಸ್ಸಿನ ಹಿರಿಯ ಜೀವ, ಸ್ವಾತಂತ್ರ ಹೋರಾಟಗಾರ, ನಾಲ್ಕು ವೇದಗಳನ್ನು ಪ್ರಸ್ತುತ ನೆನಪಿಟ್ಟುಕೊಂಡು ಪಾಠ-ಪ್ರವಚನ ಮಾಡುವ ಅಪರೂಪದ ವ್ಯಕ್ತಿಯನ್ನು ಸೊಗಸಾಗಿ ಪರಿಚಯಿಸಿದರು. ಜಲಿಯನ್ ವಾಲಾಬಾಗ್ ಘಟನೆಯನ್ನು ಕಣ್ಣಾರೆ ಕಂಡ ಜೀವಂತ ಐತಿಹಾಸಿಕ ಪುರುಷ ಇವರಾಗಿದ್ದಾರೆ. ತಮಗಿಟ್ಟ ಚತುರ್ವೇದಿ ಎಂಬ ಹೆಸರನ್ನು ಸಾರ್ಥಕವಾಗಿಸಿದ್ದಾರೆ. ಚತುರ್ವೇದಿಯವರ ಸಂದೇಶ ಹೀಗಿದೆ:

ಸಭೆಯಲ್ಲಿರುವ ಸಜ್ಜನರೇ, ಮಕ್ಕಳೇ….

ಮೊದಲು ಮಕ್ಕಳನ್ನು ಹೇಳಬೇಕು, ಇಂದು ಚಿಕ್ಕವರಾಗಿರುವವರೇ ಮುಂದೆ ಬೆಳೆದು ದೇಶದ ಭಾರವನ್ನು ಹೊರುವ ಜವಾಬ್ದಾರಿ ಹೊಂದಿದ್ದೀರಿ. ಅದಕ್ಕೆ ಈಗಿನಿಂದಲೇ ತಯಾರಿ ಆಗಬೇಕು. ಚಿಕ್ಕವಯಸ್ಸಿನಲ್ಲಿ ಏನು ಕಲಿಯುತ್ತೇವೆ ಅದು ಬಹಳ ಮುಖ್ಯ. ದೊಡ್ಡವರು ಕಲಿಯುತ್ತಾರೆ, ಮರೆಯುತ್ತಾರೆ. ಚಿಕ್ಕಂದಿನಲ್ಲಿ ಕಲಿತದ್ದು ನನಗೆ ಈಗಲೂ ನೆನಪಿದೆ. ನನ್ನ ಉದ್ದೇಶ ಇದ್ದದ್ದು ನಾನು ಯಾವ ರೀತಿಯ ಶಿಕ್ಷಣವನ್ನು ಪಡೆದೆನೋ ಅದನ್ನು ಸಮಾಜಕ್ಕೆ ಕೊಡಬೇಕು. ಯಾವ ಹಣತೆ ಉರಿಯುತ್ತಿರುತ್ತದೋ ಅದರಿಂದ ನೂರಾರು ಹಣತೆಗಳನ್ನು ಹಚ್ಚಿಕೊಳ್ಳಬಹುದು. ನಾನು ಹಾಗೆ ನೋಡಿಕೊಳ್ಳುತ್ತಿದ್ದೇನೆ, ನನ್ನಲ್ಲಿರುವ ಹಣತೆ ತಣ್ಣಗಾಗಿದೆಯೋ, ಇನ್ನೂ ಉರಿಯುತ್ತಿದ್ದೆಯೋ ಎಂದು. ನಿರಾಸೆ ಎಂಬುದು ನನ್ನ ಜೀವನದಲ್ಲಿ ಇಲ್ಲವೇ ಇಲ್ಲ. ಧೀರ ಸಂನ್ಯಾಸಿಯ ವಿವೇಕಾನಂದರ ಶಿಷ್ಯ ನಾನು. ಅವರಿಗಿದ್ದ ಶರೀರ ನನಗಿಲ್ಲ. ನನ್ನದು ಸಣ್ಣ ಶರೀರ.  ನಾನು ಭಗವಂತನನ್ನು ಅದಕ್ಕೆ ಅಭಿನಂದಿಸುತ್ತೇನೆ. ಆನೆಯಂತಹ ಶರೀರ ಕೊಟ್ಟಿದ್ದರೆ ಇಷ್ಟು ಲವಲವಿಕೆಯಿಂದ ಇರಲು ಆಗುತ್ತಿರಲಿಲ್ಲ.

ಈಗಿನ ಮಾತು ಬಿಡಿ, ಸ್ವಾತಂತ್ರ ಪೂರ್ವದಲ್ಲಿ ಇಂದು ಮುಂಬೈನಲ್ಲಿದ್ದರೆ ನಾಳೆ ಮದ್ರಾಸು. ಬಿಟ್ಟರೆ ದೆಹಲಿ. ಸಂಪೂರ್ಣ ಸುತ್ತಾಟ. ನಾನು ಇಂದು ಬೆಂಗಳೂರಿಗೆ ಹೋಗಬೇಕೆಂದರೆ ಹೆಲಿಕಾಫ್ಟರ್ ರೆಡಿ ಎನ್ನುತ್ತಿದ್ದರು. ಸರ್ಕಾರಕ್ಕೂ ಜನರಿಗೂ ಬೇಕಾದವನಾಗಿದ್ದೆ. ನಮಗಿರುವುದು ಒಂದು ಸಣ್ಣ ಶರೀರ, ಅದರಲ್ಲಿ ಸಣ್ಣ ಹೊಟ್ಟೆ. ಅದನ್ನು ತುಂಬಿಸಿಕೊಳ್ಳಲು ಬಡವರನ್ನು-ಬಗ್ಗರನ್ನು ಗೋಳಾಡಿಸಿ, ಮೋಸಮಾಡುವುದಾದರೂ ಏನಿದೆ?! ನನ್ನ ನಂಬಿಕೆ ಎಂದರೆ ಕರ್ತವ್ಯಪ್ರಜ್ಞೆ. ನಿನ್ನ ಕರ್ತವ್ಯ, ಪ್ರಾರಬ್ಧ ನಿನ್ನೊಂದಿಗೆ ಇದ್ದೇ ಇದೆ. ನಿನಗೆ ಸಿಗಬೇಕಾದ್ದು ಎಲ್ಲೇ ಹೋದರೂ ಸಿಕ್ಕೆ ಸಿಗುತ್ತದೆ. ಹಾಗೆ ಆಗುತ್ತಿದೆ ನನ್ನ ಜೀವನದಲ್ಲಿ. ಏನು ಕೆಲಸ ಮಾಡಬೇಕೋ ಆಲೋಚನೆ ಮಾಡಿ ಅದನ್ನು ಸರಿಯಾದ ರೀತಿಯಲ್ಲಿ ಮಾಡುವವನೇ ಮನುಷ್ಯ. ಕೇವಲ ಮನುಷ್ಯನಿಗೆ ಮಾತ್ರ ವಿಶಿಷ್ಟ ಶಕ್ತಿಗಳನ್ನು ಭಗವಂತ ಕೊಟ್ಟಿದ್ದಾನೆ. ನಿಮ್ಮಲ್ಲೂ ಅದು ಇದೆ. ಜ್ಞಾನ ಇದೆ. ಅದು ಹೊರಗೆ ಬರಬೇಕಷ್ಟೆ. ಅದಕ್ಕೆ ಸರಿಯಾದ ಮಾರ್ಗದರ್ಶನ ಬೇಕಷ್ಟೆ. ನಾನು ಈ ಸಂಸ್ಥೆಯಲ್ಲಿ ಅಂತಹ ಮಾರ್ಗದರ್ಶಕರು ಇದ್ದಾರೆ ಎಂದು ನಂಬಿದ್ದೇನೆ. ನನ್ನ ನಂಬಿಕೆ ಸುಳ್ಳಾಗಬಾರದು. ನಾನು ಯಾವಾಗಲೂ ಆಶಾವಾದಿ. ನಾನು ಏನು ಹೇಳಬೇಕೊ ಅದನ್ನು ಹೇಳಬೇಕೆಂಬುದು ನಿಜ. ಆದರೆ ನಾನು ಹೇಳಿದನ್ನು ಎಲ್ಲರೂ ನೂರಕ್ಕೆ ನೂರು ಒಪ್ಪುತ್ತಾರೆ ಎಂಬ ನಂಬಿಕೆ ಇಲ್ಲ. ನೂರು ಜನರಲ್ಲೂ ಒಬ್ಬನೇ ಒಬ್ಬ ನನ್ನ ದಾರಿಗೆ ಬಂದರೆ ಅದೇ ನನಗೆ ಲಾಭ. ಉಳಿದವರು ಅವರವರ ದಾರಿಯಲ್ಲೇ ಹೋಗಲಿ. ದೇವರು ಅವರನ್ನು ನೋಡಿಕೊಳ್ಳುತ್ತಾರೆ. ಆ ಒಬ್ಬನೇ ಒಬ್ಬ ನನಗೆ ಸಂತೋಷ.

ಸಮಾಜ ಸೇವೆಎಂಬುದು ಬಹಳ ಕಷ್ಟ. ಮನುಷ್ಯ ಪ್ರಾಣಿಯೂ ಅಲ್ಲ, ಪಕ್ಷಿಯೂ ಅಲ್ಲ. ನನ್ನ ಗುರುಗಳು ನನಗೆ ಹೇಳಿದ್ದಾರೆ. ನಿನಗೆ ಸಂತೋಷ ನೀನು ಕೆಲಸ ಮಾಡುವುದರಲ್ಲಿ ಇರಲಿ ಎಂದಿದ್ದಾರೆ. ಅದರಲ್ಲೇ ತೃಪ್ತಿ ಇರಬೇಕು. ಭಗವಂತ ಕಾಪಾಡುತ್ತಾನೆ. ಮಕ್ಕಳಿಗೆ ಅರ್ಥವಾಗುವುದು ಸ್ವಲ್ಪ ಕಷ್ಟ. ನನ್ನ ಅನುಭವವೆಂದರೆ ಚಿಕ್ಕವಯಸ್ಸಿನಲ್ಲಿ ನನ್ನ ಅಕ್ಕ ಪದ್ಮಾವತಿ ಬಾಯಿ ಏನೇನು ಶ್ಲೋಕಗಳನ್ನು ಹೇಳಿಕೊಟ್ಟಿದ್ದಾರೆ ಅದು ಈಗಲೂ ನೆನಪಿದೆ. ಕನ್ನಡ ಸಾಹಿತ್ಯದ ಮಟ್ಟಿಗೆ ನನ್ನ ಚಿಕ್ಕ ಅಕ್ಕ ಪದ್ಮಾವತಿ ಬಾಯಿಯೇ ನನ್ನ ಗುರು. ಆಗ ಕಲಿತ ವಿದ್ಯೆ ಇವತ್ತಿಗೂ ನೆನಪಿದೆ. ನಾನು ಚಿಕ್ಕಮಗುವೇ. ಶರೀರ ದುರ್ಬಲವಾಗಿರಬಹುದು, ಮನಸ್ಸು ದುರ್ಬಲವಾಗಿಲ್ಲ, ಮಾತನಾಡುವ ಶಕ್ತಿ ನೆನಪಿನ ಶಕ್ತಿ ಸ್ವಲ್ಪವೂ ಕುಂದಿಲ್ಲ. ಇದೆಲ್ಲ ಭಗವಂತನ ವರದಾನ. ಎಲ್ಲರಿಗೂ ಆ ಭಾಗ್ಯ ಇರುವುದಿಲ್ಲ. ೪೦ ವರ್ಷವಾದಾಗೆಲ್ಲ ಆಯಿತು ವಯಸ್ಸಾಯಿತು ಎನ್ನುತ್ತಾರೆ. ನಾನು 118 ವರ್ಷವಾದರೂ ಚಿಕ್ಕ ಯುವಕ ಎನ್ನುತ್ತೇನೆ. ನನಗೆ ಮುದುಕ ಎಂದು ಅನಿಸುವುದೇ ಇಲ್ಲ. ಬ್ರಿಟಿಷ್ ಸೈನಿಕರು ಬಾಯಿ ಬಿಗಿದು, ಲಾಠಿ ತಿವಿದು ಹಲ್ಲು ಮುರಿಯದಿದ್ದರೆ ಹಲ್ಲುಗಳು ಇಂದಿಗೂ ಚೆನ್ನಾಗಿರುತ್ತಿದ್ದವು. ಈಗ ಚಿಕ್ಕವರು ನೀವು, ಹೆಚ್ಚಿನ ಮಾತು ಅರ್ಥವಾಗದಿರಬಹುದು. ದೊಡ್ಡವರಾದ ನಂತರ ಒಬ್ಬರು ಮುದುಕರು ಬಂದಿದ್ದರು ಎಂದು ನೆನಪಿಸಿಕೊಳ್ಳುತ್ತೀರಿ. ಆಗ ನನ್ನ ಮಾತುಗಳು ಅರ್ಥವಾಗುತ್ತವೆ. ನನಗೆ ನಂಬಿಕೆ ಇದೆ. ಮಕ್ಕಳಿಗೆ ಒಂದು ಕೊನೆ ಮಾತು ಶತ್ರು ಒಳಗಿಲ್ಲ. ಒಳಗಿದೆ. ಎಲ್ಲಕ್ಕಿಂತ ದೊಡ್ಡ ಶತ್ರು ಭಯ. ಹೆಜ್ಜೆ ಇಟ್ಟರೆ ಹಳ್ಳ, ಈಕಡೆ ಬಂದರೆ ಏನೋ ಎಂದು ಹೆದರುವುದೇ ದೊಡ್ಡ ಶತ್ರು. ಸಾಯುವವನು ಒಂದೆ ಬಾರಿ ಸಾಯುವುದು. ಹೆದರುವವನು ಹೆಜ್ಜೆ ಹೆಜ್ಜೆಗೂ ಸಾಯುತ್ತಾನೆ. ಮರ್‌ನೆ ವಾಲಾ ಏಕ್ ಬಾರ್ ಮರ್‌ತಾ ಹೈ, ಢರ್‌ನೆ ವಾಲಾ ಬಾರ್ ಬಾರ್ ಮರ್‌ತಾ ಹೈ. ನೀವು ಧೀರರಾಗಬೇಕು, ವೀರರಾಗಬೇಕು. ಮಕ್ಕಳೆ ಕುಲ, ಜಾತಿ ಯಾವುದೂ ಬೇಡ, ನಾವೆಲ್ಲ ಮಾನವರು ಎಂದು ತಿಳಿಯಿರಿ. ಬ್ರಾಹ್ಮ, ಒಕ್ಕಲಿಗ ಎಂದೆಲ್ಲ ತಿಳಿಯಬೇಡಿ. ಜಾತಿ ಮಾನವ ಜಾತಿ, ದೇಶ ಭಾರತ ದೇಶ, ಭಾಷೆ ಸಂಸ್ಕೃತ ನಂತರ ನಮ್ಮ ತಾಯಿನುಡಿ. ಹೀಗೆ ಕ್ರಮವಾಗಿ ತಿಳಿದು ದೊಡ್ಡವರಾಗಬೇಕು. ನಿಮಗೆ ಉಪದೇಶ ಮಾಡುವುದು ನನ್ನ ಆಸೆ ಅಲ್ಲ. ನನ್ನ ಹಂಬಲ ಏನಿದೆ ಅದನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ದೇವರು ನಿಮಗೆ ವಿಶಾಲವಾದ ಮನೋಭಾವ ಕರುಣಿಸಲಿ, ನೀವು ಮೊಟ್ಟ ಮೊದಲು ಮನುಷ್ಯರು ನಂತರ ಬೇರೆ ಎಲ್ಲ. ಭಗವಂತ ನಿಮಗೆ ಒಳಿತನ್ನು ಕರುಣಿಸಲಿ.

ಮುಕ್ತಾಯದ ಮಾತುಗಳು…..

ಇಷ್ಟೆಲ್ಲ ಅನುಭವದ ಮಾತುಗಳನ್ನು ಕೇಳಿದ ಮೇಲೆ ನಾವೆಲ್ಲರೂ ಮೂಕರಾಗಿದ್ದೆವು. ಇಬ್ಬರು ಹಿರಿಯರ ಮಾತುಗಳು ನಮ್ಮನ್ನು ಮಂತ್ರಮುಗ್ದವಾಗಿಸಿತ್ತು. ಪ್ರಾಂಶುಪಾಲರು ಮತ್ತೊಮ್ಮೆ ಇಂದಿನ ಪಾಠಗಳನ್ನು ಒಮ್ಮೆ ನೆನಪಿಸಿ ಸುಧಾಕರ ಚತುರ್ವೇದಿ ಅವರಿಗೆ ವಂದನೆಗಳನ್ನು ಸಲ್ಲಿಸಿದರು. ಗೌರವ ಸೂಚಕ ಶಾಲು ಹೊದಿಸಿ ಸ್ಮರಣಸಂಚಿಕೆಗಳನ್ನು ನೀಡಿದೆವು. ಸುಧಾಕರ ಚತುರ್ವೇದಿಯವರೊಂದಿಗೆ ಬಂದಿದ್ದ ಡಾ. ಸುಮಿತ್ರಾ ಅವರು (ಸುಧಾಕರ ಚತುರ್ವೇದಿ ಅವರ ಮೊಮ್ಮಗಳು) ಹಿರಿಯಜ್ಜನ ದಿನಚರಿಗಳನ್ನು ನಮ್ಮೊಂದಿಗೆ ಹಂಚಿಕೊಂಡರು. ಮಕ್ಕಳು ತಾವು ಕಲಿತ ಭಗವದ್ಗೀತೆ, ವ್ಯಾಕರಣ ಸೂತ್ರಗಳನ್ನು ಹಿರಿಯ ಮುಂದೆ ಒಪ್ಪಿಸುವುದರ ಮೂಲಕ ಮುಂದಿನ ಅಧ್ಯಯನಕ್ಕೆ ಮತ್ತಷ್ಟು ಶಕ್ತಿಯನ್ನು ಪಡೆದರು. ಹಯಗ್ರೀವ ಜಯಂತಿ ಹೀಗೆ ಸಾರ್ಥಕವಾಯಿತು, ನಮಗೆ ಮಾರ್ಗದರ್ಶನವೂ ಆಯಿತು. ಮುಂದಿನ ಕಾರ್ಯಕ್ಕೆ ಪ್ರವೃತ್ತರಾದೆವು.

-೦-

Leave a Reply

Notice Board

pūrṇapramati is recruiting teachers

pūrṇapramati is recruiting dedicated research oriented teachers for 1 to 10 grades and pre-primary Montessori.

 

Registration is open for the next academic year

Purnapramati opens its registration for the next academic year: November 2017 and June 2018-19. Applications are being issued. Kindly help spread the word to interested parents.

Socialize & Share

Follow us on different social networking website and share it