ಸಂಸ್ಥೆಯ ಗುರಿಸಾಧನೆಯಲ್ಲಿ ಸಾಂಘಿಕಪ್ರಯತ್ನದ ಮಹತ್ವ

ಡಾ. ಹೆಚ್. ಸತ್ಯನಾರಾಯಣಾಚಾರ್ಯ
ಪ್ರಾಧ್ಯಾಪಕರು, ಪೂರ್ಣಪ್ರಜ್ಞ ವಿದ್ಯಾಪೀಠ
ಪೂರ್ಣಪ್ರಮತಿ ತಂಡ

ನಿಶ್ಚಿತಗುರಿ ಹಾಗು ಸಮಾನ ಉದ್ದೇಶಗಳನ್ನು ಮುಂದಿಟ್ಟುಕೊಂಡು ಹಲವು ವ್ಯಕ್ತಿಗಳ ಭಾಗವಹಿಸುವಿಕೆಯಿಂದ ಕಾರ್ಯನಿರ್ವಹಿಸುವ ಘಟಕಕ್ಕೆ ‘ಸಂಸ್ಥೆ’ ಎಂದು ಹೆಸರು. ಅಂತಹ ಗುರಿ ಹಾಗೂ ಉದ್ದೇಶವು ‘ವಿದ್ಯಾದಾನ’ ವೂ ಆಗಿದ್ದಾಗ ಆ ಸಂಸ್ಥೆ ವಿದ್ಯಾಸಂಸ್ಥೆಯೆನಿಸಿದೆ.

ಒಂದು ವಿದ್ಯಾಸಂಸ್ಥೆ ಇನ್ನೊಂದು ಸಂಸ್ಥೆಗಿಂತ ಗುರಿತಸಲ್ಪಡುವುದು ಅದರ ಅಸಾಧಾರಣ ಧ್ಯೇಯಗಳಿಂದ. ಸಂಸ್ಥೆಗೆ ಹಲವು ಧ್ಯೇಯಗಳಿರುತ್ತವೆ. ಉದಾಹರಣೆಗೆ ಆದರ್ಶಸಂಸ್ಥೆಯೊಂದರ ಧ್ಯೇಯಗಳು ಹೀಗಿದ್ದಿರಬಹುದು.
ಶಿಕ್ಷಕರು ಭಾರತೀಯ ಆರ್ಷಸಂಸ್ಕೃತಿ – ಸಂಸ್ಕೃತಗಳನ್ನು ಆಧರಿಸಿರಬೇಕು.
ಆರ್ಥಿಕ ಲಾಭೋದ್ದೇಶಗಳು ವಿದ್ಯಾಸಂಸ್ಥೆಯಲ್ಲಿ ಎಂದೂ ಸುಳಿಯಕೂಡದು.
ಜಾತಿ-ಹಣದ ಭೇದವಿಲ್ಲದೇ ಸಮಾಜದ ಎಲ್ಲಾ ವರ್ಗದ ಜನರಿಗೂ ಸಂಸ್ಥೆಯ ಬಾಗಿಲು ತರೆದಿರಬೇಕು.
ಇಲ್ಲಿ ಶಿಕ್ಷಣಪಡೆದು ಹೊರಬರುವಾತ ವಿಜ್ಞಾನ-ತತ್ತ್ವಜ್ಞಾನ ಉಭಯ ಕುಶಲನಾಗಿ ಸಮಾಜಮುಖೀ ಪ್ರವೃತ್ತಿಯನ್ನು ರೂಢಿಸಿಕೊಂಡಿರಬೇಕು.
ಎಲ್ಲಾ ಬಗೆಯ ಸಂಕುಚಿತತೆಯನ್ನು ತ್ಯಜಿಸಿ ವಿಕಸಿತಭಾವದ ಪ್ರಾಮಾಣಿಕಪ್ರಜೆ ಈ ಸಂಸ್ಥೆಯ ಉತ್ಪಾದನೆಯಾಗಿರಬೇಕು. ಇತ್ಯಾದಿ.

ಇವುಗಳಲ್ಲಿ ಮೊದಲ ಮೂರು ಆಡಲಿತಕ್ಕೆ ಸಂಬಂಧಪಟ್ಟವುಗಳು. ಗಟ್ಟಿ ಸಂಕಲ್ಪವುಳ್ಳ ನಿಃಸ್ವಾರ್ಥಿಯಾದ ಆಡಳಿತವರ್ಗ ಒಮ್ಮನಸ್ಸಿನಿಂದ ಈ ಧ್ಯೇಯಗಳನ್ನು ಸುಲಭವಾಗಿ ಸಾಧಿಸಬಹುದು. ಆದರೆ ಧ್ಯೇಯಗಳನ ಅನುಷ್ಠಾನ ತುಸು ಕಷ್ಟಸಾಧ್ಯ. ಅದರ ಹಿಂದೆ ಬಹಳಷ್ಟು ಆಲೋಚನೆಯ ಅಗತ್ಯವಿದೆ. ದೂರದೃಷ್ಟಿಯ ಚಿಂತನೆಯ ಆವಶ್ಯಕತೆಯಿದೆ. ಲಭ್ಯವಿರುವ ಹನ್ನೆರಡು ವರ್ಷದ ವಿದ್ಯಾಭ್ಯಾಸದಲ್ಲಿ ನಮ್ಮ ವಿದ್ಯಾರ್ಥಿ ಉದ್ದೇಶಿತಮಟ್ಟಕ್ಕೆ ಬೆಳೆಯಬೇಕಾದರೆ ವರ್ಷ-ವರ್ಷವೂ ಎಷ್ಟೆಷ್ಟನ್ನು ಆತನಲ್ಲಿ ತುಂಬಬೇಕು. ಪಾಠ್ಯವಿಷಯ, ಕಲಿಕೆಯ ವಿಧಾನ, ಪಠ್ಯೇತರ ಆಯ್ಕೆಗಳು ಹೇಗಿರಬೇಕು ಎಂಬ ಬಗೆಯ ವ್ಯವಸ್ಥಿತ ನಿರ್ಣಯವು ಇಲ್ಲಿ ಮುಖ್ಯವಾಗುತ್ತದೆ.

ಇಂತಹ ಧ್ಯೇಯೋದ್ದೇಶಗಳು ಯಶಸ್ವಿಯಾಗಿ ಗುರಿಮುಟ್ಟುವಲ್ಲಿ ಒಬ್ಬೊಬ್ಬ ವ್ಯಕ್ತಿಯ ಪ್ರಯತ್ನ ಬಹು ಮುಖ್ಯವಾದರೂ ಸಾಂಘಿಕ ಇಚ್ಛಾಶಕ್ತಿಯಿಲ್ಲದೆ ನಿರೀಕ್ಷಿತ ಯಶಸ್ಸು ಅಸಾಧ್ಯ. ಈ ನಿಟ್ಟಿನಲ್ಲಿ ಪ್ರಾಂಶುಪಾಲರಿಂದ ಹಿಡಿದು ಅರೆಕಾಲಿಕ ಪಾಠಕ-ಕಾರಕೂನನ ತನಕ; ಅಧ್ಯಾಪಕನನ್ನು ನಿಯಮಿಸುವ ಸಂಸ್ಥ್ಯಾವ್ಯವ್ಯವಸ್ಥಾಪಕನಿಂದ ಆರಂಭಸಿ ವಿದ್ಯಾರ್ಥಿಗಳ ಪೋಷಕರ ತನಕ ಪ್ರತಿಯೊಬ್ಬರಿಗೂ ಈ ಧ್ಯೇಯದ ಬಗೆಗೆ ತಿಳುವಳಿಕೆ ಮತ್ತು ಗೌರವ ಅತ್ಯಪೇಕ್ಷಿತವಾಗಿದೆ. ಒಂದು ಸಂಸ್ಥೆಯಲ್ಲಿ ದುಡಿಯುವ ಪ್ರತಿಯೋರ್ವ ವ್ಯಕ್ತಿಯೂ ಆ ಸಂಸ್ಥೆಯ ಆಧಾರಸ್ತಂಭ. ಸ್ತಂಭ ಗಟ್ಟಿಯಾಗಿದ್ದರೆ ಸಂಸ್ಥೆಗೆ ಭದ್ರನೆಲೆ ಶತಶಸ್ಸಿದ್ಧ.

ವಿದ್ಯಾಸಂಸ್ಥೆಯ ಯಶಸ್ಸು ಅಧ್ಯಾಪಕವರ್ಗವನ್ನು ಹೆಚ್ಚು ಅವಲಂಬಿಸಿದೆ. ಅಧ್ಯಾಪಕನು ತನ್ನನ್ನು ಪೂರ್ತಿಯಾಗಿ ಸಂಸ್ಥೆಯ ಧ್ಯೇಯಕ್ಕೆ ಅನುಗುಣವಾಗಿ ತೊಡಗಿಸಿಕೂಳ್ಳುವಲ್ಲಿ ಈ ಧ್ಯೇಯದಲ್ಲಿ ಆತನಿಗಿರುವ ಶ್ರದ್ಧೆ ಹಾಗೂ ಆತ್ಮತೃಪ್ತಿ ಪ್ರಧಾನಪಾತ್ರವನ್ನು ವಹಿಸುತ್ತದೆ. ಇದರೊಂದಿಗೆ ಆತನ ಕೌಟುಂಬಿಕ ನಿರ್ವಹಣೆಗೆ ಅನುಗುಣವಾದ ಆರ್ಥಿಕ ಸ್ಥಿರತೆ ಅಪೇಕ್ಷಿಸುತ್ತದೆ. ಪ್ರಸ್ತುತ ಪಟ್ಟಣಜೀವನದಲ್ಲಿ ಸಾಮಾನ್ಯ ಜೀವನ ನಿರ್ವಹಣೆಗೆ ಸಾಕಾಗುವಷ್ಟೂ ಮಾಸಿಕಸಂಪಾದನೆ ಇಲ್ಲವಾದರೆ ಶ್ರೀಸಾಮಾನ್ಯ ಅಧ್ಯಾಪಕನೋರ್ವ ತನ್ನನ್ನು ಪೂರ್ಣಮಟ್ಟದಲ್ಲಿ ಧ್ಯೇಯ ಸಾಧನೆಯಲ್ಲಿ ತೊಡಗಿಸಿಕೊಳ್ಳಲಾರ. ಅಂತಹ ಆವಶ್ಯಕತೆಗಳನ್ನು ನಿರ್ವಹಿಸುವ ಭಾರವನ್ನು ಹೊರುವುದಲ್ಲದೇ ಅಧ್ಯಾಪಕರ ಕಷ್ಟಕಾರ್ಪಣ್ಯಗಳಲ್ಲಿ ಬೆಂಬಲವಾಗಿ ನಿಲ್ಲುವ ಆಡಳಿತವರ್ಗ ಸಂಸ್ಥೆಯ ಬೆನ್ನುಹುರಿ. ಆಡಳಿತವರ್ಗ ಹಾಗೂ ಅಧ್ಯಾಪಕವರ್ಗ ಕುಟುಂಬಭಾವದಿಂದ ಬಾಳುವುದು ಸಂಸ್ಥೆಯ ಸರ್ವತೋಮುಖ ಏಳ್ಗೆಗೆ ಸಹಕಾರಿ.

ದುಡಿಸುವವನಲ್ಲಿ ಅಸಹಾಯಕತೆಯ ಭಾವ, ದುಡಿಯುವನಲ್ಲಿ ಅಭದ್ರತೆಯಭಾವ ಇವು ಸಂಸ್ಥೆಯೆಂಬ ಜ್ಯೋತಿಯನ್ನು ನಂದಿಸುವ ಗಾಳಿ-ಮಳೆಗಳು ಎಂಬುದು ಅರ್ಥಶಾಸ್ತ್ರದ ಅಂಬೋಣ. ‘ನಾನು ದುಡಿಯುವವ ಅವನು ದುಡಿಸುವವ’ ಎಂಬ ಭಾವಕ್ಕೆ ಆಸ್ಪದವಿಲ್ಲದಂತಹ ಪರಸ್ಪರ ಪ್ರೀತಿ ನಂಬಿಕೆಗಳ ಸಹಯೋಗ ಸಂಸ್ಥೆಗೆ ಭದ್ರ ಬುನಾದಿ.

ಯಾವುದೇ ಉದಾತ್ತಧ್ಯೇಯವುಳ್ಳ ಸಂಸ್ಥೆಗೆ ಆರಂಭದ ಕಾಲ ಅಗ್ನಿಪರೀಕ್ಷೆಯಂತಿರುತ್ತದೆ. ಆರಂಭದಲ್ಲಿಯೇ ಆರ್ಥಿಕಬಲವಾಗಲೀ, ಸಮಾಜದ ತುಂಬುಸಹಕಾರವಾಗಲೀ ದೊರೆಯಲಾರದು. ಪರಮಪೂಜ್ಯ ಪೇಜಾವರಶ್ರೀಗಳು ಜೋಳಿಗೆ ಹಿಡಿದು ಮನೆ ಮನೆಗೆ ನಡೆದು ವಿದ್ಯಾಪೀಠದಂತಹ ಸಂಸ್ಥೆಯ ಸದ್ಯೋಭವಿಷ್ಯದ ಆವಶ್ಯಕತೆಗಳನ್ನು ಜನರಿಗೆ ತಿಳಿ ಹೇಳಿ ಸಂಸ್ಥೆ ಕಟ್ಟಿದರು. ಇಂದು ಗಟ್ಟಿನೆಲೆ ಕಂಡಿರುವ ಸಂಸ್ಥೆಗಳ ಮೂಲ ಹೋಗಿ ನೋಡಿದಾಗ ಎಲ್ಲೆಲ್ಲೂ ಕಾಣುವ ಸ್ಥಿತಿಯದು.

ಸೌಧವೇರುವವನು ಕೆಳಗಿನ ಮೆಟ್ಟಿಲುಗಳನ್ನು ಕ್ರಮವಾಗಿ ದಾಟುತ್ತಾ ಮೇಲೇರಿ ತುತ್ತ ತುದಿಯನ್ನು ಮುಟ್ಟುವಂತೆ ಉದಾತ್ತಗುರಿಯ ಸಾಧನೆಗಾಗಿ ಸೈರಣಿ ಅನಿವಾರ್ಯ. ನಾವು ನೆಟ್ಟ ಸಸಿಗೆ ಗೊಬ್ಬರ ಹಾಕಬಹುದು. ಕಾಲಕಾಲಕ್ಕೆ ನೀರನ್ನೂ ಹಾಕಬಹುದು. ಬೇಲಿಕಟ್ಟಿ ಗಿಡವನ್ನು ಸಂರಕ್ಷಿಸಬಹುದು. ಆದರೆ ಬೇಗನೇ ಫಲಕೊಡುವಂತೆ ಸಸಿಯನ್ನು ಅವಸರಪಡಿಸಲಾಗದು. ಬೇಗನೇ ಫಲಕೊಡುವ ಸಸಿಯನ್ನೇ ನೆಟ್ಟಿಯದ್ದರೂ ಅದು ಗೊತ್ತಾದ ಸಮಯದಲ್ಲಿಯೇ ಫಲವನ್ನು ಕೊಟ್ಟೀತು. ನಮ್ಮ ಪಾಲಿನ ಕೆಲಸ ಮಾಡಿ ಫಲಬರುವವರೆಗೆ ಶಾಂತಚಿತ್ತದಿಂದ ಕಾಯುವ ತಾಳುವಿಕೆ ನಮ್ಮಲ್ಲಿರಬೇಕು. “ಒಳ್ಳೆಯ ಸಂಕಲ್ಪದಿಂದ ಸತ್ಕಾರ್ಯವನ್ನು ಮಾಡಹೊರಟವನಿಗೆ ಎಂದಿಗೂ ದುರ್ಗತಿ-ದುಮ್ಮಾನಗಳಿಲ್ಲ” ಎಂಬ ಗೀತಾವಾಣಿಯಲ್ಲಿ ದೃಢನಂಬಿಕೆಯಿರಬೇಕು.

ಒಂದೇ ತಿಂಗಳಲ್ಲಿ ಅಥವಾ ಒಂದೇ ವರ್ಷದಲ್ಲಿ ಯಾವುದೇ ವಿದ್ಯಾಸಂಸ್ಥೆ ಜಗನ್ಮಾನ್ಯವಾಗಲಾರದು. ಹಾಗೊಂದು ವೇಳೆ ಇದ್ದಕ್ಕಿದ್ದಂತೆ ಬೆಳೆದು ಬೆಳಗಿದೆಯೆಂದರೆ ಅದು ಪ್ರಾತಃಕಾಲದ ನೆರಳಿನಂತೆ. ಆರಂಭದಲ್ಲಿ ಮಹತ್ತಾಗಿದ್ದು ನಂತರ ಅಲ್ಪತೆಯ ಕಡೆ ಸಾಗತೊಡಗುತ್ತದೆ. ಮಧ್ಯಾಹ್ನಾನಂತರದ ನೆರಳಿನಂತೆ ಅಲ್ಪತೆಯಿಂದ ಕ್ರಮೇಣ ಊರ್ಧ್ವತೆಯನ್ನೂ ಮಹತ್ತೆಯನ್ನೂ ಪಡೆಯುವಿಕೆ ಎಂಬುದೇ ಸಂಸ್ಥೆಯ ನಿಜಧರ್ಮ ಎಂಬುದನ್ನು ಅರಿತಿರಬೇಕು. ಉದಾತ್ತಧ್ಯೇಯದಿಂದ ಇಡುವ ನಿಧಾನದ ಪುಟ್ಟ ಹೆಜ್ಜೆಯೂ ಕಾಲಕ್ಕೆ ಗುರಿಯನ್ನು ಮುಟ್ಟಿಸುತ್ತದೆ. ತಾಳ್ಮೆ ಹಾಗೂ ತ್ಯಾಗ ಸಂಸ್ಥೆಯನ್ನು ಕಟ್ಟಿ ಬೆಳೆಸುವಲ್ಲಿ ಅಮೃತ-ಸಂಜೀವಿನಿಗಳು. ಎಲ್ಲರೂ ಒಪ್ಪಲಾರದ(?) ಅಭಿಪ್ರಾಯವೊಂದನ್ನು ಬರೆದುಬಿಡುತ್ತೇನೆ. ಅದೇನೆಂದರೆ ಧರ್ಮ ಅಥವಾ ಆಸ್ತಿಕನಿಷ್ಠೆಯೂ ಒಂದು ಸಂಸ್ಥೆ ಬಲಗೊಳ್ಳುವಲ್ಲಿ ಪ್ರಧಾನಪಾತ್ರವನ್ನು ವಹಿಸುತ್ತದೆ ಎಂಬುದು.

ಮಾನವನ ಯಾವುದೇ ಕೆಲಸ ಕಾರ್ಯಗಳಲ್ಲಿ ಎರಡು ಉದ್ದೇಶಗಳು ನಿಯತವಾದವುಗಳು. ಒಂದು ಐಹಿಕ ಮತ್ತೊಂದು ಪಾರತ್ರಿಕ. ಐಹಿಕಫಲ ಕೆಲೆವೆಡೆ ಧನವಾಗುತ್ತದೆ. ಕೆಲೆವೆಡೆ ಕೀರ್ತಿ ಪ್ರತಿಷ್ಠೆಗಳಾಗಿರುತ್ತವೆ. ಪಾರತ್ರಿಕವಾದುದು ದೇವಪ್ರೀತಿ ಪುಣ್ಯಸಂಪಾದನೆ ಆಗಿರಬಹುದಾಗಿದೆ. ಪರವನ್ನು ತಿರಸ್ಕರಿಸಿ ಕೇವಲ ಇಹವನ್ನು ನಂಬಿದ ಮಂದಿ ಸಮಾಜೋಪಕಾರಕ ಸಂಸ್ಥೆಯೊಂದನ್ನು ದೀರ್ಘಕಾಲಿಕವಾಗಿ ನಡೆಸಲಾರರೆಂಬುದು ಇತಿಹಾಸ ಹಾಗು ಅವಲೋಕನಗಳಿಂದ ನಾವು ತಿಳಿವ ಅಂಶ. ಧರ್ಮದ ನೆಲೆಯಲ್ಲಿ ಇದು ಸುಲಭಸಾಧ್ಯ. ಧರ್ಮನಿಷ್ಠಪಾದ್ರಿ ಮೌಲ್ವಿಗಳು ಪ್ರಾಮಾಣಿಕ ಬಾಬಾಗಳು. ಧರ್ಮಗುರುಗಳು ನಡೆಸುವ ಸಂಸ್ಥೆಗಳು ಸುಸೂತ್ರವಾಗಿ ನಡೆಯುವಂತೆ ಇತರ ಸಂಸ್ಥೆಗಳು ನಡೆಯುತ್ತಿಲ್ಲ.

ಇದರ ಅರ್ಥ ಇಷ್ಟೇ. ಒಂದು ಶಕ್ತಿಗೆ ತಲೆಬಾಗಿ ಒಪ್ಪಿ ನಡೆಯುವ ಹಲವು ವ್ಯಕ್ತಿಗಳಿಂದ ಸಂಸ್ಥೆ ಅಭಿವೃದ್ಧಿಪಥದಲ್ಲಿ ನಡೆಯುತ್ತದೆ. ಅಹಂಭಾವದಿಂದ ದುರ್ಧಾಂತರಾದ ವ್ಯಕ್ತಿಗಳಿಂದ ಸಂಸ್ಥೆ ಬಡವಾಗುತ್ತದೆ. ಸ್ವತಃ ದುರ್ದಾಂತನಾದ ಮಾನವ ದೇವ-ಧರ್ಮಗಳಿಗೆ ಬಗ್ಗುವಂತೆ ಇತರರಿಗೆ ಬಗ್ಗಲಾರ. ಆದ್ದರಿಂದಲೇ ಧರ್ಮದ ಧೃಢನೆಲೆಗಟ್ಟಿನಲ್ಲಿ, ಧರ್ಮದ ಗಾಢಸೆಳೆತ ಹಾಗೂ ಸಂಯೋಜಕ ಶಕ್ತಿಯ ಬಲದಿಂದ ಸಮಾಜೋಪಕಾರಕ ಸಂಸ್ಥೆಯನ್ನು ಬಲಗೊಳಿಸಬಹುದು.

ಇಲ್ಲಿ ‘ಧರ್ಮ’ ಎಂಬ ಪದವನ್ನು ವಿಶಾಲಾರ್ಥದಲ್ಲಿ ಬಳಸಲಾಗಿದೆ. ದೇವನು ಸರ್ವವ್ಯಾಪಿ. ನಮ್ಮೆಲ್ಲರ ಕೆಲಸಗಳನ್ನು ಒಳಹೊರಗಿದ್ದು ನಿರೀಕ್ಷಿಸುವ ಸರ್ವಸಾಕ್ಷಿ ಆತ. ನಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದು ಅವನ ಪೂಜೆ. ಆ ದೇವನ ಪೂಜೆಗೆ ಪ್ರತೀಕಗಳಾಗಿ ಸೃಷ್ಟರಾದವರು ಈ ನಾನಾ ಜನರು. ಪ್ರತಿಯೊಬ್ಬ ಜೀವನಲ್ಲೂ ದೇವನು ಅಂತರ್ಯಾಮಿ. ಜೀವನನ್ನು ತುಚ್ಛೀಕರಿಸುವುದೆಂದರೆ ದೇವನನ್ನು ತುಚ್ಚೀಕರಿಸದಂತೆ. ನಮ್ಮಿಂದ ಸಾಧ್ಯವಾದ ಉಪಕಾರವನ್ನು ಮಾಡುವುದರಿಂದ ದೇವನು ಪ್ರೀತನಾಗುತ್ತಾನೆ. ‘ತಸ್ಯ ಪ್ರಾಣ್ಯುಪಕಾರೇಣ ಪ್ರೀತೋ ಭವತಿ ಮಾಧವಃ’. ಇಂತಹ ವಿಶ್ವಧರ್ಮದ್ದಲ್ಲಿ ಅಚಲನಂಬಿಕೆಗಾಗಿ ತಲೆತಲಾಂತರದಿಂದ ನಂಬಿಕೊಂಡು ಬಂದ ಸಂಪ್ರದಾಯಪ್ರವರ್ತಕಗುರುಗಳಲ್ಲಿ ಅತಿಶಯಿತ ಗೌರವ-ಶ್ರದ್ಧೆಗಳೂ ಬೇಕು. ಈ ರೀತಿಯ ಶ್ರದ್ಧೆ ಅತ್ಯಪೇಕ್ಷಿತ. ಆದರೆ ಅದು ಇನ್ನೊಂದು ಪಂಥೀಯರ ದ್ವೇಷ ಅಥವಾ ತುಚ್ಛೀಕರಣಕ್ಕೆ ಎಂದೂ ಕಾರಣವಾಗಕೂಡದು.

ಧಾರ್ಮಿಕ ತಳಹದಿಯ ತೆರೆದ ಮನಸ್ಸಿನ ಜನಸಮುದಾಯ ಸಂಸ್ಥೆಯ ಆಸ್ತಿ.

Source:  ಊರ್ಧ್ವಮೂಲ Purnapramati Souvenir 2012

Leave a Reply

Notice Board

pūrṇapramati is recruiting teachers

pūrṇapramati is recruiting dedicated research oriented teachers for 1 to 10 grades and pre-primary Montessori.

 

Registration is open for the next academic year

Purnapramati opens its registration for the next academic year, June 2017-18. Applications will be issued from 26th October onwards. Kindly help spread the word to interested parents.

Socialize & Share

Follow us on different social networking website and share it