ರಾಪಾನೂಯಿಯ ದುರಂತ ಕತೆ

ಗಿಡಮರಗಳನ್ನು, ಪಕ್ಷಿಗಳನ್ನು ಮುಗಿಸಿದ ಮೇಲೆ ಏನುಳಿದೀತು ಅಲ್ಲಿ?

ಶಾಂತ ಮಹಾಸಾಗರದಲ್ಲಿ ಈಸ್ಟರ್ ಐಲ್ಯಾಂಡ್ ಎಂಬ ಒಂದು ಪುಟ್ಟ ನತದೃಷ್ಟ ದ್ವೀಪ ಇದೆ. ಮೈಸೂರು ನಗರದಷ್ಟೇ ವಿಶಾಲವಾದ ದ್ವೀಪ. ಸುತ್ತ ಎರಡು ಸಾವಿರ ಕಿಲೊಮೀಟರ್‌ವರೆಗೆ ಎಲ್ಲೂ ದೊಡ್ಡ ಜನವಸತಿಯ ದ್ವೀಪಗಳೇ ಇಲ್ಲ. ೧೭೨೨ರಲ್ಲಿ ಡಚ್ಚರು ಈಸ್ಟರ್ ಹಬ್ಬದ ದಿನವೇ ಅಲ್ಲಿಗೆ ಹಡಗಿನಲ್ಲಿ ಬಂದಿಳಿದರು. ಆ ದ್ವೀಪಕ್ಕೆ ‘ಈಸ್ಟರ್ ದ್ವೀಪ’ ಎಂದೇ ಹೆಸರಿಟ್ಟರು. ಆಗ ಅಲ್ಲಿ ಸುಮಾರು ೭೦೦ ಜನ ವಾಸಿಸುತ್ತಿದ್ದರು. ಹಿಪ್ಪುನೇರಳೆ ನಾರಿನ ಬಟ್ಟೆ ತುಂಡನ್ನು ಸುತ್ತಿಕೊಂಡು, ಗಡ್ಡೆಗೆಣಸು, ಹುಲ್ಲಿನ ಧಾನ್ಯ ತಿನ್ನುತ್ತ ತಂತಮ್ಮ ಪಂಗಡಗಳ ಮಧ್ಯೆ ಕಾದಾಡುತ್ತ್ತ ಹೇಗೋ ಬದುಕಿದ್ದರು. ಕತ್ತಿ, ಕೊಡಲಿ ಇಲ್ಲ; ಕುರಿ, ಎಮ್ಮೆ, ಕುದುರೆಗಳಿಲ್ಲ. ತೀರಾ ಕಾಡು ಜನ. ತಮ್ಮನ್ನು ಅವರು ‘ರಾಪಾ ನೂಯಿ’ ಎಂದು ಕರೆದುಕೊಳ್ಳುತ್ತಿದ್ದರು.

ಸುತ್ತ ನೋಡಿದರೆ, ಅದು ಒಂದು ಕಾಲಕ್ಕೆ ತುಂಬ ಶ್ರೀಮಂತ ದ್ವೀಪವಾಗಿದ್ದಂತೆ ಕಾಣುತ್ತಿತ್ತು. ೨೦-೩೦ ಅಡಿ ಎತ್ತರದ ಕಲ್ಲಿನ ಮೂರ್ತಿಗಳು ಎಲ್ಲೆಂದರಲ್ಲಿ ಕಾಣುತ್ತಿದ್ದವು. ಕೈಯಲ್ಲಿ ಕಬ್ಬಿಣದ ಹಾರೆ, ಚಾಣ, ಏನೂ ಇಲ್ಲದೆ ಹೇಗೆ ಇದೆಲ್ಲ ಸಾಧ್ಯವಾಯಿತು? ಇದೊಂದು ನಿಗೂಢ ಪ್ರಶ್ನೆಯಾಗಿಯೇ ಉಳಿದಿತ್ತು. ಈಚಿನ ಐವತ್ತು ವರ್ಷಗಳಲ್ಲಿ ಸಾಕಷ್ಟು ವೈಜ್ಞಾನಿಕ ಸಂಶೋಧನೆಯ ನಂತರ ಆ ದ್ವೀಪದ ದುರಂತದ ಬಗ್ಗೆ ವಿವರವಾದ ಮಾಹಿತಿಗಳು ಸಿಕ್ಕಿವೆ.

ದಟ್ಟದರಿದ್ರ ಜನರಿರುವ ನಿರ್ಜನ ದ್ವೀಪದಲ್ಲಿ ೨೦-೩೦ ಅಡಿ ಎತ್ತರದ ಶಿಲ್ಪಗಳು ಎಲ್ಲಿಂದ ಬಂದವು?

ಸುಮಾರು ಕ್ರಿ.ಶ. ೭೦೦ರ ಸುಮಾರಿಗೆ ಅಲ್ಲಿಗೆ ಎಲ್ಲಿಂದಲೋ ಹೇಗೋ ಮೊದಲ ಜನರು ಬಂದಾಗ ದ್ವೀಪ ಸಮೃದ್ಧವಾಗಿತ್ತು. ಮೂರು ನಿದ್ರಿತ ಜ್ವಾಲಾಮುಖಿಗಳು ಕೆರೆಗಳಾಗಿತ್ತವು. ಮಳೆಗಾಲದಲ್ಲಿ ಅವು ತುಂಬಿ ಹರಿದು ವರ್ಷವಿಡೀ ತೊರೆಗಳು ಹರಿಯುತ್ತಿದ್ದವು. ತಾಳೆ-ತೆಂಗಿನ ಮರಗಳು ಹೇರಳವಾಗಿದ್ದವು. ಇತರ ೨೦-೨೫ ಜಾತಿಯ ವೃಕ್ಷಗಳು, ಹುಲ್ಲಿನ ಧಾನ್ಯ, ಗಡ್ಡೆಗೆಣಸುಗಳಿದ್ದವು. ನಾನಾ ಬಗೆಯ ಪಕ್ಷಿಗಳಿದ್ದವು. ಓತಿಕ್ಯಾತ, ಕಪ್ಪೆ, ಉಡದಂಥ ಪ್ರಾಣಿಗಳಿದ್ದವು. ಈ ಜನರು ಬರುವಾಗ ತಮ್ಮೊಂದಿಗೆ ಕೋಳಿಗಳನ್ನು ತಂದಿದ್ದರು. ಅವರ ಚೀಲದಲ್ಲಿ ಅವಿತು ಕೆಲವು ಇಲಿಗಳೂ ಬಂದಿದ್ದವು. ಬಂದಿಳಿದ ಜನರು ತೆಂಗು ತಾಳೆ ತಿನ್ನುತ್ತ, ಕೃಷಿ ನಡೆಸಿದರು. ಕೋಳಿಗಳನ್ನು ಬೆಳೆಸಿದರು. ಒಂದೆರಡು ತಲೆಮಾರಿನ ನಂತರ ಆಯುಧಗಳೆಲ್ಲ ಮುಗಿದ ಮೇಲೆ ಜ್ವಾಲಾಮುಖಿ ಶಿಲೆಗಳನ್ನೇ ಚೂಪು ಮಾಡಿ ಆಯುಧಗಳನ್ನಾಗಿ ಬಳಸಿಕೊಳ್ಳತೊಡಗಿದರು. ರಾಪಾನೂಯಿ ಜನರು ಮರಗಳನ್ನು ಕಡಿದು ದೋಣಿ ನಿರ್ಮಿಸಿ ಮೀನುಗಾರಿಕೆ ಆರಂಭಿಸಿದರು. ಜನಸಂಖ್ಯೆ ಹೆಚ್ಚಾಯಿತು. ಅವರಲ್ಲೊಬ್ಬ ರಾಜನಾದ. ಮಾಂಡಲಿಕರಾದರು. ಮರದ ದೊಡ್ಡ ದೊಡ್ಡ ಮನೆಗಳೂ ಬಂದವು. ಕೃಷಿ ಕೆಲಸ ತೀರ ಕಮ್ಮಿ ಇದ್ದುದರಿಂದ ಸಾಂಸ್ಕೃತಿಕ ಚಟುವಟಿಕೆ ಆಟೋಟ ಜಾಸ್ತಿಯೇ ಇತ್ತು. ಅಗಲಿದ ಹಿರಿಯ ಚೇತನಗಳ ಹೆಸರಿನಲ್ಲಿ ಮೂರ್ತಿಗಳನ್ನು ನಿಲ್ಲಿಸುವ ಸಂಪ್ರದಾಯ ಆರಂಭವಾಯಿತು. ಜ್ವಾಲಾಮುಖಿ ಬಂಡೆಗಳನ್ನು, ಅಲ್ಲಿನದೇ ಚೂಪುಕಲ್ಲುಗಳಿಂದಲೇ ಕೊರೆದ ಭವ್ಯಶಿಲ್ಪಗಳನ್ನು ತಮ್ಮ ಭುಜಬಲ ಪರಾಕ್ರಮದಿಂದಲೇ ಪೈಪೋಟಿಯ ಮೇಲೆ ಸಾಗಿಸಿ ನಿಲ್ಲಿಸತೊಡಗಿದರು. ಅವುಗಳನ್ನು ನಿಲ್ಲಿಸಲೆಂದು ‘ಆಹೂ’ ಎಂಬ ಪವಿತ್ರ ಕಟ್ಟೆಗಳನ್ನು ನಿರ್ಮಿಸುತ್ತಿದ್ದರು. ಅವುಗಳಲ್ಲಿ ಅನೇಕವು  ಅವರವರ ಅಂತಸ್ತಿಗೆ ತಕ್ಕಂತೆ ವಿವಿಧ ಗಾತ್ರದ, ಆದರೆ ಏಕರೂಪವಾದ ಶಿಲ್ಪಗಳನ್ನು ಕೊರೆದು ಮೊದಮೊದಲು ಅವುಗಳ ಸಾಗಾಟಕ್ಕೂ ಹೆಮ್ಮರಗಳ ಉರುಟು ದಿಮ್ಮಿಗಳನ್ನೇ ಬಳಸುತ್ತಿದ್ದಿರಬಹುದು. ಆ ಪುಟ್ಟ ದ್ವೀಪದಲ್ಲಿ ೯೦೦ಕ್ಕೂ ಹೆಚ್ಚು ಪ್ರತಿಮೆಗಳು ತಲೆಎತ್ತಿದವು. ಅವುಗಳನ್ನು

ಸುಖೀ ಜೀವನ. ಜನಸಂಖ್ಯೆ ಆರೇಳು ಸಾವಿರ ತಲುಪಿತು. ಮರಗಳ ಸಂಖ್ಯೆ ಕಮ್ಮಿಯಾಗುತ್ತ ಹೋಯಿತು. ತಾವಾಗಿ ಬೆಳೆಯುತ್ತಿದ್ದ ತಾಳೆ/ತೆಂಗಿನ ಹೊಸ ಸಸಿಗಳೂ ಹುಟ್ಟುತ್ತಿರಲಿಲ್ಲ. ಏಕೆಂದರೆ ಇಲಿಗಳ ಸಂಖ್ಯೆಯೂ ಹೆಚ್ಚುತ್ತ ಹೋಗಿ ಅವು ಎಳೆ ಮೊಳಕೆಯ ತಿರುಳನ್ನೇ ತಿಂದು ಹಾಕುತ್ತಿದ್ದವು. ದೋಣಿ ಹಾಳಾದರೆ ಹೊಸ ದೋಣಿಯ ನಿರ್ಮಾಣಕ್ಕೆ ಮರಗಳು ಇರಲಿಲ್ಲ. ಇದ್ದ ಕೆಲವೇ ಮರಗಳಿಗಾಗಿ ಪರಸ್ಪರರಲ್ಲಿ ಕಾದಾಟ ಜೋರಾಯಿತು. ಪ್ರತಿಮೆಗಳನ್ನು ಬೀಳಿಸಿ ಜಗಳ ಕಾಯುವವರು ಹೆಚ್ಚಾದರು.  ಮರ ಕಡಿಮೆ ಆದುದರಿಂದ ಮಣ್ಣು ಬರಡಾಗುತ್ತ ಹೋಯಿತು. ಹಳ್ಳಗಳು ಒಣಗಿದವು. ಧಾನ್ಯ ಬೆಳೆಯುವುದು ಕಷ್ಟವಾಯಿತು. ಆಹಾರಕ್ಕಾಗಿ ಪೈಪೋಟಿ ಹೆಚ್ಚಿದ್ದರಿಂದ ಕಡಲಪಕ್ಷಿಗಳನ್ನೂ ಬಡಿದು ತಿನ್ನತೊಡಗಿದರು. ಆ ಪಕ್ಷಿಗಳು ಪಾಪ ಮೀನು ಹಿಡಿದು ತಂದು ಮರಗಳ ಮೇಲೆ ಕೂತು, ಹಿಕ್ಕೆ ಹಾಕುತ್ತಿದ್ದವು. ಮಣ್ಣಿಗೆ ರಂಜಕ, ಕ್ಯಾಲ್ಸಿಯಂ ಸೇರ್ಪಡೆ ಆಗುತ್ತಿತ್ತು. ಕ್ರಮೇಣ ಅವೂ ಇಲ್ಲವಾದವು. ಇಲಿಗಳಿಂದ ಧಾನ್ಯ ರಕ್ಷಣೆಯೂ ಕಷ್ಟವಾಯಿತು. ನೀರು ಸಿಗುವುದು ದುಸ್ತರವಾಯಿತು. ಕೊನೆಕೊನೆಗೆ ಕಟ್ಟಿದ ಮನೆಗಳು ಕುಸಿದ ಮೇಲೆ, ಹುಲ್ಲಿನ ಛಾವಣಿಯಲ್ಲಿ ವಾಸ. ಕೆಲವರು ಬಂಡೆಗಳನ್ನು ಕೊರೆದ ಗುಹೆಗಳಲ್ಲಿ ವಾಸ ಮಾಡತೊಡಗಿದರು. ಬಟ್ಟೆ ನೇಯ್ದುಕೊಳ್ಳಲು, ಮೀನುಗಾರಿಕೆಗೆ ಬಲೆ ನೇಯಲು ನಾರು ಸಿಗುವುದೂ ದುಸ್ತರವಾಯಿತು. ತೆಂಗು-ತಾಳೆಗಿಂತ ಭಿನ್ನವಾದ, ಆ ದ್ವೀಪದಲ್ಲಿ ಮಾತ್ರ ಬೆಳೆಯುತ್ತಿದ್ದ ವೈನ್‌ಪಾಮ್ ವೃಕ್ಷದ ಕೊಟ್ಟಕೊನೆಯ ಮೊಳಕೆಯೂ ಯಾವುದೋ ಹೆಗ್ಗಣದ ಹೊಟ್ಟೆಗೆ ಹೋಯಿತು. ಬದುಕಿನ ಪೈಪೋಟಿಯಲ್ಲಿ ಕೂಳಿಗಾಗಿ, ಕೋಳಿಗಾಗಿ, ಸೌದೆಗಾಗಿ ಪರಸ್ಪರ ಜಗಳ, ಕಾದಾಟ ತೀವ್ರವಾಯಿತು. ಜನಸಂಖ್ಯೆ ಮತ್ತೆ ಕಡಿಮೆ ಆಗುತ್ತ ಆಗುತ್ತ, ಒಂದೆರಡು ಸಾವಿರ ಜನ ರಾಪಾನೂಯಿಗಳು ಉಳಿದರು. ಇಡೀ ಸಮಾಜವೇ ಕಡುಬಡತನಕ್ಕೆ ಜಾರಿ, ದ್ವೀಪವೇ ದಟ್ಟದರಿದ್ರವಾಯಿತು.

ಅದೇ ವೇಳೆಗೆ (ಈಸ್ಟರ್ ಹಬ್ಬದ ದಿನ) ಯುರೋಪಿಯನ್ನರು ೧೭೨೨ರಲ್ಲಿ ಬಂದರು. ಒಂದೇ ಒಂದು ಮರವೂ ಇಲ್ಲದ ಬೆಂಗಾಡನ್ನು ನೋಡಿದರು. ಎತ್ತರದ ನಿಲುವಿನ ಕಾಡು ಜನರಿದ್ದಾರೆ, ಅಲ್ಲಲ್ಲಿ ತುಸು ಕೃಷಿ ನಡೆಯುತ್ತಿದೆ ಎಂದು ವರದಿ ಮಾಡಿದರು. ಮುಂದಿನ ಐವತ್ತು ವರ್ಷಗಳ ಕಾಲ ಯಾರೂ ಬರಲಿಲ್ಲ. ಆ ಅವಧಿಯಲ್ಲಿ ದ್ವೀಪವಾಸಿಗಳ ಸ್ಥಿತಿ ಇನ್ನಷ್ಟು ದಾರುಣವಾಗಿತ್ತು. ಆಮೇಲೆ ಸ್ಪೇನಿನ ಎರಡು ಹಡಗುಗಳು ಬಂದವು. ‘ಜನಸಂಖ್ಯೆ ತೀರ ಕಮ್ಮಿ ಇದೆ. ಕಡಲಂಚಿನಲ್ಲಿ ದೊಡ್ಡ ಪ್ರತಿಮೆಗಳ ಸಾಲೇ ಇದೆ’ ಎಂದರು. ಆ ಬಳಿಕ ಬ್ರಿಟಿಷರು ಬಂದರು. ಆಮೇಲೆ ಫ್ರೆಂಚರು, ತದನಂತರ ರಷ್ಯನ್ನರು ಬಂದರು. ಅಷ್ಟರೊಳಗೆ ದ್ವೀಪವಾಸಿಗಳು ನಾನಾ ಬಗೆಯ ‘ಬಿಳಿಯರ ಕಾಯಿಲೆಗೆ’ ಸಿಲುಕಿದರು. ಸಿಡುವು, ಕಾಲರಾ, ಕ್ಷಯ ಮುಂತಾದ ರೋಗಗಳಿಗೆ ತುತ್ತಾಗಿ ಅವರ ಸಂಖ್ಯೆ ೭೦೦ಕ್ಕೂ ಕೆಳಕ್ಕೆ ಬಂತು. ಅಷ್ಟರೊಳಗೆ ದಕ್ಷಿಣ ಅಮೆರಿಕದವರಿಗೆ ಇವರನ್ನು ಗುಲಾಮರಾಗಿಸಿಕೊಳ್ಳುವ ಚಪಲ ಬಂತು. ಅವರ ನಂತರ ವಿವಿಧ ಕ್ರಿಶ್ಚಿಯನ್ ಮಿಶನರಿಗಳು ಬಂದು ಇಡೀ ದ್ವೀಪದವರನ್ನು ರೋಮನ್ ಕೆಥೊಲಿಕ್‌ರನ್ನಾಗಿಸಿ ಹೊಸ ಹೆಸರು ಕೊಡುವ ವೇಳೆಗೆ, ಅಂದರೆ ೧೯೦೦ರ ಸುಮಾರಿಗೆ ರಾಪಾನೂಯಿಗಳ ಸಂಖ್ಯೆ ೨೫೦ಕ್ಕೆ ಇಳಿದಿತ್ತು. ಈಗ ಇಡೀ ದ್ವೀಪ ಚಿಲಿ ದೇಶದ ಆಡಳಿತಕ್ಕೆ ಸೇರಿದೆ. ಮತ್ತೆ ಈಸ್ಟರ್ ಐಲ್ಯಾಂಡನಲ್ಲಿ ಗಿಡಮರಗಳನ್ನು ಬೆಳೆಸಿ ಅದನ್ನು ಸಮೃದ್ಧಗೊಳಿಸುವ ಯತ್ನ ನಡೆದಿದೆ.

– Nagesh Hegde

ಅಂತೂ ಒಂದು ಸಮೃದ್ಧ ದ್ವೀಪ ಏಳೆಂಟು ನೂರು ವರ್ಷಗಳ ಅವಧಿಯಲ್ಲಿ ಮನುಷ್ಯನ ಕೈಗೆ ಸಿಕ್ಕು ನಲುಗಿ, ತನ್ನ ಧಾರಣಶಕ್ತಿಯನ್ನು ಕಳೆದುಕೊಂಡು, ನಂತರದ ಕೇವಲ ನೂರು ವರ್ಷಗಳಲ್ಲಿ ಇಳಿಜಾರಿನಲ್ಲಿ ಉರುಳಿದ ಮಣ್ಣುಂಡೆಯ ಹಾಗೆ ಎಲ್ಲವನ್ನೂ ಕಳೆದುಕೊಂಡು ನಶ್ವರವಾಗುವ ಹಂತಕ್ಕೆ ಬಂತು.

Leave a Reply

Notice Board

Pūrṇapramati is recruiting teachers

Pūrṇapramati is recruiting dedicated research oriented teachers for 1 to 10 grades and pre-primary Montessori.

 

Registration is open for the next academic year

Purnapramati opens its registration for the next academic year: November 2017 and June 2018-19. Applications are being issued. Kindly help spread the word to interested parents.

Socialize & Share

Follow us on different social networking website and share it