ಮರೆಯಲಾಗದ ಆ ಕ್ಷಣ

ನಮ್ಮ ಗುರುಗಳಾದ ಪೇಜಾವರ ಮಠಾಧೀಶರಾದ ಶ್ರೀವಿಶ್ವೇಶತೀರ್ಥಶ್ರೀಪಾದರು ಯಾತ್ರಿಕರನ್ನು ಕರೆದುಕೊಂಡು ಪ್ರತಿ ವರ್ಷ ಉತ್ತರ ಭಾರತ ಯಾತ್ರೆಯನ್ನು ಮಾಡುತ್ತಾರೆ. ೨೦೦೯-೧೦ ರಲ್ಲಿ ಗುರುಗಳ ಜೊತೆ ಉತ್ತರ ಭಾರತ ಯಾತ್ರೆ ಮಾಡುವ ಸೌಭಾಗ್ಯ ನನಗೆ ಸಿಕ್ಕಿತ್ತು. ಯಾತ್ರಿಕರೆಲ್ಲ ಬೇರೆ ವಾಹನದಲ್ಲಿ ಬರುತ್ತಿದ್ದರೆ ನಾನು ಗುರುಗಳ ಜೊತೆಗೆ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದೆ. ಸಾವಿರಾರು ಕಿ.ಮೀ ಪ್ರಯಾಣದ ನಂತರ ನೈಮಿಷಾರಣ್ಯಕ್ಕೆ ಬಂದೆವು. ಅಲ್ಲಿ ಗೋಮತಿ ನದಿಯ ತೀರಕ್ಕೆ ಹೊರಟೆವು. ಆಗಲೇ ಬಹಳ ಪ್ರಯಾಣ ಮಾಡಿದ್ದರಿಂದ ಸಹಜವಾಗಿ ಎಲ್ಲರಿಗೂ ಸ್ವಲ್ಪ ಸುಸ್ತಾಗಿತ್ತು. ಗುರುಗಳಿಗೂ ಆಗಿತ್ತು. ಆದರೆ ನಮಗೆ ಸುಸ್ತಾದರೆ ಅದು ಮುಖದಲ್ಲಿ ಎದ್ದು ಕಾಣುತ್ತದೆ. ಗುರುಗಳಿಗೆ ಸುಸ್ತಾದರೆ ಅದರ ಗೆರೆಯೂ ಕಾಣುವುದಿಲ್ಲ. ಅಷ್ಟು ಉತ್ಸಾಹದಿಂದ ಇರುತ್ತಾರೆ. ಗೋಮತಿ ತೀರಕ್ಕೆ ಹೋಗಲು ಸುಮಾರು ೫೦ ಮೆಟ್ಟಿಲುಗಳನ್ನು ಇಳಿಯಬೇಕಿತ್ತು. ಶ್ರೀಪಾದರು “ತುಂಬಾ ಆಯಾಸ ಆಗಿದೆ. ನಡೆಯುವುದು ಕಷ್ಟ” ಎಂದರು. ಆಗಾಗ ವಿನೋದಕ್ಕಾಗಿ ಶಿಷ್ಯರಿಗೆ ಗುರುಗಳು ಇಂತಹ ಬಿಸಿಗಳನ್ನು ಮುಟ್ಟಿಸುತ್ತಿರುತ್ತಾರೆ. ಆಗಲೇ ನಾನು ತೀರ್ಮಾನ ಮಾಡಿದೆ. ಮರಳಿ ಬರುವಾಗ ಮೆಟ್ಟಿಲು ಹತ್ತುವಾಗ ಗುರುಗಳನ್ನು ಎತ್ತಿಕೊಂಡು ಹತ್ತಬೇಕು ಎಂದು. ಆದರೆ ಗುರುಗಳು ಬಹಳ ಸಂಕೋಚದ ಸ್ವಭಾವದವರು. ಇದಕ್ಕೆ ಒಪ್ಪೊಲ್ಲ ಅಂತ ಗೊತ್ತು. ಒಮ್ಮೆ ಅವರ ಬಳಿ ನಿವೇದಿಸಿ ಸುಮ್ಮನಾದೆ.

Anantha Shayana -Teacher

ಗೋಮತಿ ನದಿಯ ಪವಿತ್ರಜಲವನ್ನು ನಮಗೆ ಪ್ರೋಕ್ಷಿಸಿ ನಮ್ಮ ಮನದ ಕಲ್ಮಶ ತೆಗೆದು ಗುರುಗಳು ಹೊರಟರು. ನಾವು ಅವರನ್ನು ಹಿಂಬಾಲಿಸಿದೆವು. ಮೆಟ್ಟಿಲು ಹತ್ತಿರ ಬರುತ್ತಿದ್ದಂತೆ ಗುರುಗಳು ಹಾವಿಗೆಯನ್ನು ಬಿಟ್ಟು ಬರಿಗಾಲಿನಿಂದ ಮೆಟ್ಟಿಲನ್ನು ನಿಧಾನ ಹತ್ತಲು ಆರಂಭಿಸಿದರು. ನಾನು ಅವರ ಹಿಂದೆ ಹೋಗಿ ಅವರನ್ನು ಮಗುವಂತೆ ಎತ್ತಿಕೊಂಡು ಮೆಟ್ಟಿಲುಗಳನ್ನು ಹತ್ತಿದೆ. ನನ್ನ ಕೈ ಹಿಡಿದ ನಗುಮೊಗದ ಗುರುಗಳು “ರಾಮ-ಕೃಷ್ಣ” ಎನ್ನುತ್ತಿದ್ದರು. ಮೇಲೆ ಏರಿ ಗುರುಗಳನ್ನು ಕೆಳಗೆ ಇಳಿಸಿದೆ. ಗುರುಗಳು ಹಸನ್ಮುಖರಾಗಿ ಒಮ್ಮೆ ನನ್ನ ನೋಡಿ ಅನುಗ್ರಹಿಸಿದರು. ನಾರಾಯಣನನ್ನು ಹೊತ್ತ ಗರುಡನಿಗೆ ಯಾವ ಕೃತಾರ್ಥ ಭಾವನೆ ಇರುತ್ತದೋ ಆ ಭಾವನೆ ನನಗಾಗ ಮೂಡಿತ್ತು. ನನ್ನ ಜೀವನ ಸಾರ್ಥವಾಯಿತು ಎಂದೆನಿಸಿತು. ನನ್ನ ಜೀವನದ ಈ ಅಮೂಲ್ಯ ಕ್ಷಣವನ್ನು ನನ್ನ ಮಿತ್ರ ಕ್ಯಾಮೆರಾದಲ್ಲಿ ಸೆರೆ ಹಿಡಿದ. ಅದನ್ನು ಈಗಲೂ ನೋಡಿ ಧನ್ಯತೆಯನ್ನು ಅನುಭವಿಸುತ್ತಿರುತ್ತೇನೆ. ಗುರುಗಳನ್ನು ನಾನು ಎತ್ತಿಕೊಂಡಿದ್ದನ್ನು ನೋಡಿ  ಕೆಲವರು ನನ್ನ ಬೈದರು. “ಬೀಳಿಸಿದ್ದರೆ ಏನಾಗುತ್ತಿತ್ತು” ಅಂತ. ಪಾಪ ! ಅವರಿಗೂ ಗುರುಗಳ ಕಾಳಜಿ. ಆ ಕಾಳಜಿ ನನಗೂ ಇದ್ದಿದ್ದರಿಂದ ದೇವರು ಈ ಕೆಲಸ ಮಾಡಿಸಿದ. ಜೀವನವನ್ನು ಪಾವನ ಮಾಡಿಸಿದ.

Leave a Reply

Notice Board

Pūrṇapramati is recruiting teachers

Pūrṇapramati is recruiting dedicated research oriented teachers for 1 to 10 grades and pre-primary Montessori.

 

Registration is open for the next academic year

Purnapramati opens its registration for the next academic year: November 2017 and June 2018-19. Applications are being issued. Kindly help spread the word to interested parents.

Socialize & Share

Follow us on different social networking website and share it