ಅವಧೂತ ಗೀತೆ

ದೃಶ್ಯ – ೨

(ಹರೀಶ್ ಭಟ್ ಅವರು ತಮ್ಮ ಕೊಠಡಿಯಲ್ಲಿ ಕುಳಿತು ತಮ್ಮ ಪಿ.ಹೆಚ್.ಡಿ ವಿದ್ಯಾರ್ಥಿಗಳಿಗೆ ಏನೋ ವಿವರಣೆ ಕೊಡ್ತಾ ಇರ್ತಾರೆ. ಅವರಿಗೆ ತೊಂದರೆ ಕೊಡುವುದು ಬೇಡವೆಂದು ಇವರೆಲ್ಲ ಸುಮ್ಮನೆ ಕೇಳುತ್ತಾ ಕುಳಿತುಕೊಳ್ಳುತ್ತಾರೆ. ಹರೀಶ್ ಅವರು behavioral study of animals ಬಗ್ಗೆ ವಿವರಿಸುತ್ತಾ ತಾವೂ ಆಶ್ಚರ್ಯ ಪಡುತ್ತಿರುತ್ತಾರೆ. ಯಾವುದೋ ಕಾರಣಕ್ಕೆ ಇತ್ತ ಕಡೆ ತಿರುಗಿದಾಗ ಪೂರ್ಣಪ್ರಮತಿಯ ಮಕ್ಕಳನ್ನು ಕಂಡು ಆಶ್ಚರ್ಯವಾಯಿತು. ಬನ್ನಿ ಬನ್ನಿ ನೀವು ಸೇರಿಕೊಳ್ಳಿ ಎಂದು ಅವರನ್ನು ತಮ್ಮ ವಿವರಣೆಯಲ್ಲಿ ಸೇರಿಸಿಕೊಂಡರು.)

ಹರೀಶ್ -ಒಳ್ಳೆಯದಾಯಿತು ನೀವು ಬಂದದ್ದು. ಮಕ್ಕಳು ಕುತೂಹಲದಿಂದ ಇನ್ನಷ್ಟು ಮತ್ತಷ್ಟು ಪ್ರಶ್ನೆಗಳನ್ನು ಕೇಳುತ್ತಾ ಹೋದರೆ ನನಗೂ ಹೇಳಲು ಸ್ಪೂರ್ತಿ ಬರುವುದು. ಏನು ವಿಶೇಷ ನೀವೆಲ್ಲ ಬಂದದ್ದು?

ಪುಟ್ಟ – ನೀವು ಕನಸಿನಲ್ಲಿ ಬಂದು ಆನೆ, ಹಾವು, ಚಿಟ್ಟೆ ಬಗ್ಗೆ ಏನೋ ಹೇಳುವಂತೆ ನೋಡಿದೆ. ಅದಕ್ಕೆ ಅಪ್ಪನಿಗೆ ಹೇಳಿ ನಿಮ್ಮನ್ನು ನೋಡಿ ಅದನ್ನು ಹೇಳಬೇಕು ಅಂತ ನಾವೆಲ್ಲ ಬಂದೆವು.

ಹರೀಶ್ – ಒಳ್ಳೆ ಕೆಲಸ, ಕನಸಿನಲ್ಲಿ ಕೂಡ ನಾನು ಹೇಳಿರೋದು ಬಂದಿತ್ತಾ? ಇದನ್ನೇ ಧ್ಯಾನ ಅಂತ ಹೇಳೋದು. ನಿರಂತರವಾಗಿ ಅದರ ಸ್ಮರಣೆ ಮಾಡೋದೇ ಧ್ಯಾನ. ನೀನು ಈಗ ಪ್ರಾಣಿಗಳ ಧ್ಯಾನ ಮಾಡ್ತಿದ್ದಿಯಾ ಅನ್ನಿಸತ್ತೆ. ಒಳ್ಳೆಯದು. ಯಾವುದೆ ವಿಷಯವನ್ನು ಕಲಿಯಬೇಕೆಂದರೂ ಅದನ್ನು ಆಳವಾಗಿ ಆಲೋಚಿಸಬೇಕು.

ಪುಟ್ಟ – ನೀವು ಮೀನು ಎಷ್ಟು ಹೊತ್ತು ನೀರಿಂದ ಆಚೆ ಬಂದಾಗ ಬದುಕತ್ತೆ, ಹೇಗೆ ಮೊಟ್ಟೆ ಇಡತ್ತೆ ಅಂತ ಹೇಳಿದ್ರಲ್ಲ. ನನಗೆ ಒಂದು ಪ್ರಶ್ನೆ ಬಂತು. ಈ ಮೀನುಗಳಿಗೆ ಕಣ್ಣು ಚುರುಕಾಗಿ ಇರಲ್ವಾ?

ಹರೀಶ್ – ಯಾಕೆ ಹಾಗೆ ಕೇಳ್ತಿದ್ದೀಯಾ? ಹೌದು, ಮೀನುಗಳಿಗೆ ಕಣ್ಣು ಚುರುಕಾಗೇ ಇದೆ.

ಪುಟ್ಟ – ಮತ್ತೆ ಮೀನು ಹಿಡಿಯೋಕೆ ಯಾರಾದ್ರೂ ಬಂದು, ಗಾಳಕ್ಕೆ ಆಹಾರ ಸಿಕ್ಕಿಸಿ ನೀರೊಳಗೆ ಬಿಟ್ಟರೆ ಹಿಡಿದುಕೊಳ್ಳಲು ಬರತ್ತೆ. ಆ ಆಹಾರದ ಹಿಂದೆ ದಾರ ಇರೋದು ಕಾಣಲ್ವಾ?

ಹರೀಶ್ – ಓಹೋ ನಿನ್ನ ಪ್ರಶ್ನೆ ನನಗೆ ಈಗ ಗೊತ್ತಾಯಿತು. ಮೀನಿನ ಕಣ್ಣು-ಬುದ್ಧಿ ಎರಡು ಚುರುಕಾಗೇ ಇದೆ. ಆದರೆ ಆಹಾರದ ಆಸೆ ಅದೆಲ್ಲವನ್ನೂ ಮೀರಿ ಹಿಡಿದುಕೊಳ್ಳುವಂತೆ ಮಾಡುತ್ತದೆ. ಇದೇ ವಿಚಿತ್ರ. ನಮಗೆ ಎಷ್ಟೇ ಬುದ್ಧಿ ಇದ್ದರೂ ಆಸೆ ಅದೆಲ್ಲವನ್ನೂ ಮೀರಿ ಕೆಲಸ ಮಾಡತ್ತೆ. ನಾವೂ ಮೀನಿನಂತೆ ಆಸೆಗೆ ಒಳಗಾಗಿ ಸಿಕ್ಕಿಹಾಕಿಕೊಳ್ಳುತ್ತೇವೆ. ನಿಮಗೆ ಎಷ್ಟೆ ಬುದ್ದಿ ಇದ್ದರೂ, ಚಾಕ್ಲೇಟ್-ಐಸ್ ಕ್ರೀಮ್ ತಿನ್ನುವುದು ತಪ್ಪೆಂದು ಗೊತ್ತಿದರೂ ಆಸೆಯಿಂದ ತಿಂದು ಆರೋಗ್ಯ ಹಾಳುಮಾಡಿಕೊಳ್ಳಲ್ವಾ…. ಹಾಗೆ !

ಪುಟ್ಟ ೧ – ನನಗೆ ಇನ್ನೊಂದು ನೆನಪಾಯ್ತು. ನಮಗೆ ಪದ್ಯದಲ್ಲಿ ‘ಹಾಡಿಗೆ ಮನಸೋತ ಕಸ್ತೂರಿಮೃಗದಂತೆ ಕನ್ನಡಿಗರ ಪಾಡು’ ಎಂದು ಬಂದಿತ್ತು. ನಮಗೆ ಶಶಿ ಅಕ್ಕ ಇದನ್ನೇ ಹೇಳಿದ್ರು. ಇಂಗ್ಲಿಷ್‌ಗೆ ಮನಸೋತು ಕನ್ನಡದ ಬಲಿಯಾಯಿತು ಎಂದು ಹೇಳಿದ್ರು. ಕಸ್ತೂರಿ ಮೃಗ ಬೇಟೆಗಾರರು ನುಡಿಸುವ ಕೊಳಲ ನಾದಕ್ಕೆ, ಹಾಡಿಗೆ ಮನಸೋತು ಕೇಳುತ್ತಾ ನಿಲ್ಲುವುದಂತೆ, ಆಗ ಅದನ್ನು ಭೇಟೆ ಆಡ್ತಾರಂತೆ. ಹಾಗೆ ನಮ್ಮ ಕನ್ನಡವೂ ಆಗಿದೆ ಎಂದು ಅಕ್ಕ ಹೇಳಿದ್ದು ನೆನಪಾಯಿತು.

ಹರೀಶ್ – ನೀನು ಚೆನ್ನಾಗಿ ಹೇಳಿದೆ. ಕಸ್ತೂರಿ ಮೃಗ ದಟ್ಟದ ಅರಣ್ಯದ ಮಧ್ಯ ಭಾಗಗಳಲ್ಲಿ ಮಾತ್ರ ಸಿಗೋದು. ಅದನ್ನು ಹಿಡಿಯೋಕೆ ಬಹಳ ಬುದ್ಧಿವಂತಿಕೆ ಬೇಕು. ಶಶಿ ಅಕ್ಕ ಸರಿಯಾಗೇ ಹೇಳಿದ್ದಾರೆ. ಬ್ರಿಟಿಷರು ಚೆನ್ನಾಗಿ ಬುದ್ಧಿವಂತಿಕೆಯಿಂದಲೇ ನಮ್ಮ ಕನ್ನಡವನ್ನು, ಹಾಗೇ ಎಷ್ಟೋ ಭಾಷೆಗಳನ್ನು ನಾಶ ಮಾಡುವ ಯೋಜನೆಗಳನ್ನು ಮಾಡಿದ್ದರು. ಭಾರತದಲ್ಲಿ ಈಗ ಎಷ್ಟೋ ಭಾಷೆಗಳು ನಾಶವಾಗಿ ಹೋಗಿವೆ. ನಾವು ಆ ಮೀನಿನಂತೆ, ಈ ಜಿಂಕೆಯಂತೆ ಆಸೆಗೆ ಬಲಿಯಾಗ ಸಿಕ್ಕಿಹಾಕಿಕೊಳ್ಳಬಾರದು ಎನ್ನುವ ಪಾಠವನ್ನು ಕಲಿಯಬೇಕು.

ಪುಟ್ಟ – (ಮನಸ್ಸಿನಲ್ಲಿ) ಓಹೋ ಅಜ್ಜ ಹೇಳಿದ್ದ ಆ ಅವಧೂತ ಜಿಂಕೆ-ಮೀನುಗಳಿಂದ ಈ ಪಾಠವನ್ನು ಕಲಿತಿರಬೇಕು.

(ಮತ್ತೆ ಎಲ್ಲರೂ ವೈಜ್ಞಾನಿಕ ಪ್ರಪಂಚಕ್ಕೆ ಬಂದರು. ಚಿಟ್ಟೆಗಳ ಬಗ್ಗೆ ಆಗಿರುವ ಅಧ್ಯಯನದ ಬಗ್ಗೆ ಹೇಳುತ್ತಾ ಹರೀಶ್ ಭಟ್ ಅವರು ಚಿಟ್ಟೆಗಳು ಎಷ್ಟು ದೂರ ಹಾರಬಲ್ಲವು, ಅವುಗಳ ಬಗ್ಗೆ ಹೇಳುತ್ತಿದ್ದಾಗ)

ಪುಟ್ಟ ೨ – ನೆನಪಾಯಿತು, ಚಿಟ್ಟೆಗಳ ಕಾಲಿಗೆ ದಾರವನ್ನು ಕಟ್ಟಿ ಅಧ್ಯಯನ ಮಾಡಿದ್ದ ಕಥೆ ನೀವು ಹೇಳಿದ್ರಿ. ನಮಗೆ. ಫ್ರೆಡ್ ನೊರಾರ್ಕ್ ಹಾರ್ಟ್ ಅವರು ಚಿಟ್ಟೆಗಳ ಬಗ್ಗೆ ಅಧ್ಯಯನ ಮಾಡಿದ್ರು. ಚಿಟ್ಟೆಗಳು ಎಷ್ಟು ಚೆಂದ ನೋಡಲು. ಆದರೆ ಅದಕ್ಕೂ ಬುದ್ದಿ ಕಡಿಮೆಯೆ. ಬೆಳಕನ್ನು ನೋಡಿ ಸಾಯುತ್ತೇನೆ ಎಂದು ಗೊತ್ತಿಲ್ಲದೆ ಅದರಲ್ಲೇ ಹೋಗಿ ಬೀಳುವುದು. ಪಾಪ ಎನಿಸತ್ತೆ.

ಪುಟ್ಟ೩ – ಆದರೆ ಪಾರಿವಾಳ ಹಾಗಲ್ಲ. ಅದಕ್ಕೆ ತುಂಬಾ ಬುದ್ಧಿ ಇದೆ. ಗುಂಪಿನಲ್ಲಿ ಇರತ್ತೆ ಆದರೆ ಯಾರೊಂದಿಗೂ ಅತಿ ಸ್ನೇಹ ಮಾಡಿಕೊಳ್ಳಲ್ಲ. ಹರೀಶ್ ಭಟ್ ಅಣ್ಣ ನೀವೆ ಹೇಳಿದ್ರಿ. ಪಾರಿವಾಳದ ಹಾಗೆ ನಾವೂ ಎಲ್ಲರನ್ನೂ ಫ್ರೇಂಡ್ ಮಾಡಿಕೊಳ್ಳಬೇಕು ಆದರೆ ಅತಿಯಾಗಿ ಯಾರನ್ನೂ ಹಚ್ಚಿಕೊಳ್ಳಬಾರದು ಅಂತ.

ಹರೀಶ್ – ನಾನು ಹೇಳಿದ ಪ್ರತಿಯೊಂದು ವಿಷಯವನ್ನು ನೀವು ಹೇಗೆ ನೆನಪಿಟ್ಟುಕೊಳ್ಳುತ್ತೀರಿ. ನಾನೇನೊ ಎಷ್ಟೋ ದಿನಗಳ ಕಾಲ ಕಾಡಿನಲ್ಲಿದ್ದು, ಪ್ರಾಣಿಗಳನ್ನು ಅಧ್ಯಯನ ಮಾಡಿ ಅದೇ ವಿಷಯವನ್ನು ಯೋಚಿಸುತ್ತಾ ಇರುತ್ತೇನೆ. ನೆನಪಿರತ್ತೆ. ಆದರೆ ನೀವು ನೆನಪಿಟ್ಟುಕೊಂಡು ಹೇಳುವುದು ಆಶ್ಚರ್ಯ. ಅದಕ್ಕೆ ನನಗೆ ನಿಮ್ಮ ಶಾಲೆಗೆ ಬರುವುದೆಂದರೆ ಇಷ್ಟ. ನಿಮ್ಮಂದಲೆ ನನಗೆ ಸ್ಪೂರ್ತಿ.

ಪುಟ್ಟ ೩ – ಹೆಬ್ಬಾವು ಇನ್ನೂ ಬುದ್ಧಿವಂತ ಅಲ್ವಾ ಅಣ್ಣ. ಯಾವಾಗಲೂ ಮರಕ್ಕೆ ಸುತ್ತಿಕೊಂಡಿರತ್ತೆ, ಸ್ವಲ್ಪ ಸೋಮಾರಿ. ಅದಕ್ಕೆ ಆಹಾರ ಅದಾಗೇ ಬಾಯಿ ಹತ್ರ ಬರಬೇಕು, ಇಲ್ಲದಿದ್ದರೆ ಅಲ್ಲೇ ಬಿದ್ದುಕೊಂಡಿರತ್ತೆ. ಕಷ್ಟಾನೇ ತಗೊಳ್ಳಲ್ಲ.

ಪಿ.ಹೆಚ್.ಡಿ ವಿದ್ಯಾರ್ಥಿ – ಹೌದು, ಅದು ಸೋಮಾರಿನೇ. ಆದರೆ ಒಂದು ಒಳ್ಳೆ ವಿಷಯ ಏನು ಗೊತ್ತಾ, ಆಹಾರ ಸಿಗದೇ ಇದ್ರೆ ಎಷ್ಟೋ ದಿನ ಹಾಗೇ ಇರತ್ತೆ. ಅಂದ್ರೆ ಆಹಾರಕ್ಕೋಸ್ಕರ ಅದು ಹುಡುಕಾಡೊಲ್ಲ. ಸಿಕ್ಕರೆ ತಿನ್ನತ್ತೆ, ಇಲ್ಲದಿದ್ದರೆ ಹಾಗೆ ಇರತ್ತೆ.

ಪುಟ್ಟ – ಅಮ್ಮ ಹೇಳ್ತಿದ್ರು, ದೇವರು ಕೊಟ್ಟಿದ್ದನ್ನು ಪ್ರೀತಿಯಿಂದ ಸ್ವೀಕರಿಸಬೇಕು, ಕೊಡದೆ ಇರೋದನ್ನು ಆಸೆ ಪಡಬಾರದು ಅಂತ. ಹೆಬ್ಬಾವಿನ ಹಾಗೆ ಇರಬೇಕು ಅಂತ.

ಪಿ.ಹೆಚ್.ಡಿ ವಿದ್ಯಾರ್ಥಿ – ಇದೇನು ಹರೀಶ್ ಸಾರ್, ಈ ಮಕ್ಕಳು ಅವರ ವಯಸ್ಸಿಗಿಂತ ಹೆಚ್ಚಾಗೇ ತಿಳಿದುಕೊಂಡಿದ್ದಾರೆ. ದೊಡ್ಡವರಾಗಿ ನಮಗೇ ಈ ವಿಚಾರಗಳನ್ನು ಅರ್ಥಮಾಡಿಕೊಳ್ಳೋದು ಕಷ್ಟ.

ಹರೀಶ್ – ಹೌದು, ಅದಕ್ಕೆ ನಾನು ಹೇಳೋದು ಅಧ್ಯಯನ ಮಾಡುವ ಆಸಕ್ತಿಯನ್ನು ಚಿಕ್ಕ ವಯಸ್ಸಿನಿಂದಲೇ ಕಲಿಸಬೇಕು ಎಂದು. ಪೂರ್ಣಪ್ರಮತಿ ಆ ಕೆಲಸ ಮಾಡುತ್ತ ಇದೆ. ನೀವು ಒಮ್ಮೆ ಶಾಲೆಗೆ ಬಂದು ಮಕ್ಕಳ ಹತ್ರ ಮಾತಾಡಿ ನೀವೂ ಖುಷಿ ಪಡ್ತೀರ. ಅಂದ ಹಾಗೆ ಹಾವು ಕೂಡ ಬುದ್ಧಿವಂತನೇ. ನಿಮಗೆ ನೆನಪಿದೆಯಾ ಗೆದ್ದಲು ಹುಳು ಮಾಡಿದ ಮನೆಯಲ್ಲಿ ಅದು ವಾಸ ಮಾಡೋದು, ಒಳಗೆ ಏರ್ ಕಂಡೀಷನ್ ತರಹ ಇರತ್ತೆ ಅಂತೆಲ್ಲ ಹೇಳಿದ್ದೆ.

ಪುಟ್ಟ ೪ – ಓಹೋ ನೆನಪಿದೆ. ಬೇಕಾದಾಗ ಕೋಣೆ ಬದಲಾಯಿಸಿಕೊಂಡು ತನಗೆ ಬೇಕಾದ ಹಾಗೆ ತಣ್ಣಗೆ, ಬಿಸಿ ಮಾಡಿಕೊಳ್ಳತ್ತೆ. ಆದರೆ ಗೆದ್ದಲು ಹುಳುಗಳಿಗೆ ತೊಂದರೆ. ಅದು ಕಷ್ಟ ಪಟ್ಟು ಮಾಡಿದ್ದಕ್ಕೆ ಇದು ಬಂದು ಸೇರಿಕೊಳ್ಳತ್ತೆ.

ಪಿ.ಹೆಚ್.ಡಿ ವಿದ್ಯಾರ್ಥಿ – (ನಗುತ್ತಾ) ಎರಡೂ ನಿಜ. ಗೆದ್ದಲು ಕಟ್ಟಿದ ಹುತ್ತಕ್ಕೆ ಹಾವು ಬಂದು ಸೇರಿಕೊಳ್ಳುವುದು. ಆದರೆ ಒಂದು ವಿಶೇಷ ಗೊತ್ತಾ ಹಾವಿಗೆ ಇದು ನನ್ನದೆ ಹುತ್ತ, ಬೇರೆಯದಕ್ಕೆ ಹೋಗಬಾರದು, ಬೇರೆ ಹಾವು ಬರಬಾರದು ಎಂಬ ಆಗ್ರಹ ಇಲ್ಲ. ಅಂದರೆ ಅದಕ್ಕೆ ಇದು ನನಗೆ ಮಾತ್ರ ಸೇರಿದ್ದು ಅನ್ನುವ ಮೋಹವೇ ಇರುವುದಿಲ್ಲ. ಇದು ಬಹಳ ದೊಡ್ಡ ಗುಣ. ಯಾವುದೇ ವಸ್ತು ನನಗೆ ಮಾತ್ರ ಸೇರಿದ್ದು ಎನ್ನುವ ಮೋಹ ಬಂದರೆ ಸಾಕು ಜಗಳ, ಯುದ್ಧ ಎಲ್ಲ ಶುರುವಾಗತ್ತೆ. ಈಗ ಕಾವೇರಿ ಗಲಾಟೆ, ಕಾರ್ಗಿಲ್ ಯುದ್ಧ ನಡೆದದ್ದು ಗೊತ್ತಿದೆ ಅಲ್ವಾ. ಪ್ರಕೃತಿಯಲ್ಲಿರುವ ಎಲ್ಲವೂ ಎಲ್ಲರಿಗೂ ಸೇರಿದ್ದು. ಅದನ್ನು ಎಲ್ಲರೂ ಸೇರಿ ರಕ್ಷಿಸಿಕೊಳ್ಳಬೇಕು.

ಪುಟ್ಟ – ಅಬ್ಬ ಆ ಅವಧೂತ ಹಾವಿನಿಂದ ಆಸೆ ಪಡಬಾರದು ಎಂಬ ವಿಷಯ ಕಲಿತಿರಬೇಕು ಎಂದು ಗುನುಗಿದ

ಪುಟ್ಟ ೩ – ಯಾರೋ ಅದು ಅವಧೂತ, ಆಗಿನಿಂದ ಅದನ್ನೇ ಯೋಚಿಸುತ್ತಿದ್ದೀಯ?

ಪುಟ್ಟ – ನಿನಗೆ ಎಲ್ಲಾ ಆಮೇಲೆ ಹೇಳ್ತೀನಿ. Very interesting.

ಪುಟ್ಟ ೪ – ಜೇನುಗಳೇನು ಕಡಿಮೆ ಇಲ್ಲ. ಎಷ್ಟು ಸ್ಕಿಲ್‌ಫುಲ್, ನಾವು ಯಾರೂ ಮಾಡಲಾಗದ ಕೆಲಸ ಅವು ಮಾಡುತ್ತವೆ. ಜೇನನನ್ನು ಸಂಗ್ರಹಿಸಲು ಎಷ್ಟು ಚೆನ್ನಾಗಿ ಗೂಡನ್ನು ಕಟ್ಟಿ, ಮರಿಗಳಿಗೆ ಬೇರೆ, ಜೇನಿಗೆ ಬೇರೆ ಕಂಪಾರ್ಟ್‌ಮೆಂಟ್ ಮಾಡಿಕೊಂಡು ಇರತ್ತೆ. ನಾವಾದರೆ ಒಂದು ಕಿಲೋಮೀಟರ ನಡೆಯುವಷ್ಟರಲ್ಲಿ ಸುಸ್ತಾಗಿ ಬೀಳುತ್ತೇವೆ. ಜೇನುಗಳು ಅದೆಷ್ಟು ಹೂವುಗಳಿಗೆ ಹಾರಿ ಹೋಗಿ ಮಧುವನ್ನು ಸಂಗ್ರಹಿಸತ್ತೆ. ಎಲ್ಲ ಹೂವುಗಳ ರಸ ಒಂದೆ ಜೇನುಗೂಡಿನಲ್ಲಿ ನಮಗೆ ಸಿಗತ್ತೆ.

ಹರೀಶ್ – ಚೆನ್ನಾಗಿ ಹೇಳಿದೆ. ಈಗ ಪೂರ್ಣಪ್ರಮತಿಯ ಮಕ್ಕಳು ಒಳ್ಳೆಯ ವಿಷಯವನ್ನು ಎಲ್ಲರಿಂದಲೂ ಕೇಳಿ ತಿಳಿದುಕೊಳ್ಳುತ್ತಿದ್ದೀರಲ್ಲಾ ಹಾಗೆ (ಎಲ್ಲರೂ ನಗುವರು)

ಪಿ.ಹೆಚ್.ಡಿ ವಿದ್ಯಾರ್ಥಿ – ಸರ್ ಇವರಿಗೆ ಜೇಡರ ಹುಳುವಿನ ಬಗ್ಗೆ ಹೇಳಿದ್ದೀರಾ?

ಹರೀಶ್ – ಅವರನ್ನೇ ಕೇಳಿ. ಕುಮಾರ ಪರ್ವತಕ್ಕೆ ಹೋದಾಗ ಏನು ನೋಡಿದರು ಎಂದು?

ಪುಟ್ಟ – ನನಗೆ ಚೆನ್ನಾಗಿ ನೆನಪಿದೆ. ಬಿಳಿ ಜೇಡವನ್ನು, ಜೇಡರ ಬಲೆಯನ್ನು ನೋಡಿದೆವು.

ಪಿ.ಹೆಚ್.ಡಿ ವಿದ್ಯಾರ್ಥಿ – ಅದಕ್ಕೆ ಎಷ್ಟು ಶಕ್ತಿ ಇದೆ ಎಂದರೆ ಮನೆ ಬೇಕಾದಾಗ ತನ್ನ ಜೊಲ್ಲಿನಿಂದಲೇ ಕಟ್ಟಿಕೊಳ್ಳತ್ತೆ, ಬೇಡವೆಂದಾಗ ತಾನೇ ಅದನ್ನು ವಾಪಾಸು ನುಂಗಿಬಿಡತ್ತೆ. ಅದು ಕಟ್ಟುವ ಮನೆ ಎಷ್ಟು ಚೆನ್ನಾಗಿರತ್ತೆ ಎಂದರೆ ಯಾವ ಇಂಜಿನಿಯರ್‌ಗಿಂತ ಕಡಿಮೆ ಇಲ್ಲ. ಬೇಟೆಯಾಡಬೇಕಾದ ಹುಳು ಬಂದರೆ ಅದರ ಕಾಲು ಅಂಟಿಕೊಳ್ಳುವಂತೆ ಕೆಲವು ಪಾಯಿಂಟ್ಸ್ ಮಾಡಿರತ್ತೆ. ಅಲ್ಲಿ ತಾನು ಮಾತ್ರ ಕಾಲು ಇಡೊಲ್ಲ. ತಾವು ಮಧ್ಯದಲ್ಲಿದ್ದು ಗಮನಿಸುತ್ತಾ ಇರತ್ತೆ.
ಅಪ್ಪ – ಜೇಡರ ಹುಳು ಎಂದಾಗ ನೆನಪಾಯಿತು – ಉಪನಿಷತ್ತಿನಲ್ಲಿ ಊರ್ಣನಾಭದಂತೆ ದೇವರು ಈ ಜಗತ್ತನ್ನು ಸೃಷ್ಟಿಸುತ್ತಾನೆ ಬೇಕಾದಾಗ ಲಯ ಮಾಡುತ್ತಾನೆ ಎಂದು ಬಂದಿದೆ.

ಪುಟ್ಟ – ಓಹೋ ಆ ಅವಧೂತ ಇದೇ ಪಾಠ ಕಲಿತಿರಬೇಕು. ಅಜ್ಜನಿಗೆ ನಾನೇ ಈ ವಿಷಯ ಹೇಳುವೆ ಎಂದುಕೊಂಡ.

ಪಿ.ಹೆಚ್.ಡಿ ವಿದ್ಯಾರ್ಥಿ – ಸರ್ ನೀನು ಇವರೊಂದಿಗೆ ಮಾತು ಮುಂದುವರೆಸಿ, ಬಹಳ ಚೆನ್ನಾಗಿದೆ. ನನಗೆ ಸ್ವಲ್ಪ ಕೆಲಸ ಇದೆ, ನಾನು ಆಮೇಲೆ ಸಿಗ್ತೇನೆ, ಇವರ ಶಾಲೆಗೆ ಒಮ್ಮೆ ಕರೆದುಕೊಂಡು ಹೋಗಿ. (ಎಂದು ಹೇಳಿ ಹೊರಡುವರು)

ಹರೀಶ್ – ಖಂಡಿತ ಕರೆದುಕೊಂಡು ಬರುತ್ತೇನೆ. ಶಾಲೆಯಲ್ಲಿ ಹೇಳದ ಒಂದು ವಿಷಯ ಈಗ ಹೇಳುತ್ತೇನೆ ಕೇಳಿ. ಇದೀಗ ನಾವು ಕುರರಿ ಪಕ್ಷಿ ಬಗ್ಗೆ ಅಧ್ಯಯನ ಮಾಡುತ್ತಿದ್ದೆವು. ಅವುಗಳ ವರ್ತನೆಯ ಬಗ್ಗೆ ನೀವು ಬರುವ ಮೊದಲು ಮಾತನಾಡುತ್ತಿದ್ದೆವು. ಈ ಕುರರಿ ಪಕ್ಷಿ ಎಷ್ಟು ಜಾಣ ಎಂದರೆ, ಮಾಂಸಹಾರಿ ಪಕ್ಷಿಗಳಿಗೆ ಯಾವುದಾದರೂ ಒಂದು ಪಕ್ಷಿ ಮಾಂಸದ ತುಂಡನ್ನು ಹಿಡುಕೊಂಡು ಬಂದರೆ ಅದಕ್ಕಿಂತಲೂ ಬಲಿಷ್ಠವಾದ ಹಕ್ಕಿಗಳು ಮುತ್ತಿಗೆ ಹಾಕುವವು. ಆಗ ಮಾಂಸದ ತುಂಡನ್ನು ಹಿಡಿಕೊಂಡು ಬಂದ ಪಕ್ಷಿ ಏನು ಮಾಡಬೇಕು?! ಯೋಚಿಸಿ.

ಪುಟ್ಟ ೪ – ಬೇಗ ಅಲ್ಲಿಂದ ಹಾರಿ ಹೋಗಬೇಕು.
ಪುಟ್ಟ ೩ – ಅವುಗಳ ಜೊತೆ ಫೈಟ್ ಮಾಡಬೇಕು.
ಪುಟ್ಟ ೨ – ಅದರ ಅಮ್ಮನನ್ನು ಕರೆಯಬೇಕು.
ಹರೀಶ್ – ಕುರರಿ ಪಕ್ಷಿ ಏನು ಮಾಡತ್ತೆ ಗೊತ್ತಾ? ತನ್ನ ಬಾಯಲ್ಲಿರುವ ಮಾಂಸದ ತುಂಡನ್ನು ಕೆಳಗೆ ಎಸೆದು ತಾನು ಅಲ್ಲಿಂದ ಹಾರಿ ಹೋಗತ್ತೆ.
ಪುಟ್ಟ – ಹಾ…ಹೌದಾ ಏಕೆ?

ಹರೀಶ್ – ಅದು ಬುದ್ಧಿವಂತ ಎಂದು ಹೇಳಿದೆನಲ್ಲ ಅದಕ್ಕೆ. ನಮಗಿಂತ ಬಲಿಷ್ಠರು ಬಂದು ನಮ್ಮನ್ನು ಆವರಿಸಿದರೆ ಅದರ ಜೊತೆ ಜಗಳ ಆಡುವುದು ಬುದ್ಧಿವಂತರ ಲಕ್ಷಣ ಅಲ್ಲ. ಆಗ ಶರಣಾಗಬೇಕು, ಮತ್ತೆ ಉಪಾಯದಿಂದ ಗೆಲ್ಲಬೇಕು.

ಪುಟ್ಟ ೩ – ನಮಗೆ ಮಹಾಭಾರತದಲ್ಲಿ ಹಂಸ-ಕಾಕದ ಕಥೆ ಹೇಳಿದ್ದರು. ಕಾಕ ಹಂಸದಷ್ಟೆ ದೂರ ನಾನೂ ಹಾರುತ್ತೇನೆ ಎಂದು ಪಂದ್ಯ ಕಟ್ಟಿ ಸೋತು ಹೋಗಿತ್ತು.

ಹರೀಶ್ – ನೋಡಿ ಕುರರಿ ಪಕ್ಷಿಯಿಂದ ನಾವೂ ಈ ಪಾಠ ಕಲಿಯಬಹುದಲ್ಲವೇ?

ಅಪ್ಪ – ನಮ್ಮ ತಂದೆ ನಮಗೆ ನೀನು ಒಳ್ಳೆ ಕಣಜದ ಹುಳುವಿನಂತೆ ಎಂದು ಬೈಯ್ಯುತ್ತಿದ್ದರು. ಯಾಕೆಂದು ಗೊತ್ತಾಗಿಲ್ಲ ಸರ್. ಏನು ಈ ಕಣಜದ ವಿಶೇಷ.

ಹರೀಶ್ – ಮಕ್ಕಳಂತೆ ದೊಡ್ಡವರಿಗೂ ಎಷ್ಟೋ ವಿಷಯಗಳನ್ನು ತಿಳಿದುಕೊಳ್ಳುವ ಕುತೂಹಲ ಇರತ್ತೆ. ನಾವು ಪ್ರಶ್ನೆ ಕೇಳಲ್ಲ ಅಷ್ಟೇ. ಕಣಜದ ಹುಳು ತನ್ನ ಗೂಡಿಗೆ ಆಹಾರವನ್ನು ಭೇಟೆ ಆಡಿ ತಂದು ಇಟ್ಟುಕೊಳ್ಳುವುದು. ಅದನ್ನೇ ನೋಡುತ್ತಾ ಅದನ್ನೆ ಚಿಂತಿಸುತ್ತಾ ಹಾಗೇ ಆಗುವುದು. ಅದರಂತೆಯೇ ಇರಲು ಪ್ರಾರಂಭಿಸಿವುದು. ಅದಕ್ಕೆ ನಿಮ್ಮ ತಂದೆ ಹಾಗೆ ಹೇಳಿರಬೇಕು. ನೀವು ನಿಮ್ಮ ಯಾರೋ ಸ್ನೇಹಿತರಂತೆಯೇ ಮಾಡುತ್ತಿದ್ದರೇನೋ?! (ಎಲ್ಲರೂ ನಗುವರು)

ಅಪ್ಪ – ಹೌದು ನನಗೆ ಸಚಿನ್ ತೆಂಡೂಲ್ಕರ್ ಅಂತೆಯೇ ಆಗಬೇಕೆಂಬ ಆಸೆ ಇತ್ತು. ಅವರಂತೆ ಬ್ಯಾಟ್, ಕ್ರಿಕೆಟ್ ಸೆಟ್ ಬೇಕೆಂದು ಹಠ ಮಾಡುತ್ತಿದ್ದೆ. ಅವರಂತೆ ಟೀ ಶರ್ಟ್, ಪ್ಯಾಂಟ್, ವಾಚ್ ಬೇಕೆಂದು ಕೇಳುತ್ತಿದ್ದೆ. ಅದಕ್ಕೆ ನನ್ನ ಅಪ್ಪ ಹಾಗೆ ಹೇಳಿರಬೇಕು.

ಪುಟ್ಟ – ಆದರೆ ನನಗೆ ಮಾತ್ರ ಕ್ರಿಕೆಟ್ ಆಡಲು ಬಿಡುವುದೇ ಇಲ್ಲ ನೀವು.

(ಮನಸ್ಸಿನಲ್ಲಿ, ಆ ಅವಧೂತ ಏನು ಕಲಿತಿರಬಹುದು, ಈ ಕಣಜದ ಹುಳುವಿನಿಂದ..!!??? ಅಜ್ಜನನ್ನೇ ಕೇಳಬೇಕು)
ಹರೀಶ್ – ನಿಮಗೆ ಪ್ರಹ್ಲಾದ, ಧ್ರುವನ ಕಥೆ ಎಲ್ಲ ಹೇಳಿದ್ದಾರಲ್ಲವೇ?
ಮಕ್ಕಳು – ಹೌದು. ಹೇಳಿದ್ದಾರೆ
ಹರೀಶ್ – ಅವರಂತೆ ನೀವೂ ಆಗಬೇಕೆಂದರೆ ಕಣಜದ ಹುಳುವಿನಂತೆ ಆಗಬೇಕು.
ಪುಟ್ಟ – ಹಾ…ಈಗ ಉತ್ತರ ಸಿಕ್ಕಿತು. (ಎಂದು ಕೂಗುವ)

ಪುಟ್ಟ ೪ – ಏನೋ ತಿಳಿದವನಂತೆ ಕುಮಾರಪರ್ತವದಲ್ಲಿ ಆನೆ ಲದ್ದಿ ನೋಡಿದ್ದೆವು ಎಂದು ಕೂಗುವ.
(ಎಲ್ಲರೂ ನಗುವರು. ಇವನು ಯಾವಾಗಲೂ ಹೀಗೆಯೇ ಅಪ್ರಸ್ತುತ ಪ್ರಸಂಗಿ. ನಾವು ಏನೋ ಹೇಳುತ್ತಿದ್ದರೆ, ಇವನು ಏನೋ ಹೇಳ್ತಾನೆ)
ಹರೀಶ್ – ಅವನಿಗೆ ಆನೆಯ ಬಗ್ಗೆ ಕೇಳಬೇಕು ಎನಿಸಿರಬೇಕು. ಅಲ್ವೇನೋ?
ಪುಟ್ಟ ೪ – ಹೌದು.
ಹರೀಶ್ – ಆನೆ ನೋಡಲು ದೊಡ್ಡ ಪ್ರಾಣಿ. ಆದರೆ ಬೇಗ ತೀರ್ಮಾನ ಮಾಡಿ ತಪ್ಪಿಸಿಕೊಳ್ಳೊಲ್ಲ. ಬಹಳ ಬೇಗ ಗೊಂದಲಕ್ಕೆ ಒಳಗಾಗತ್ತೆ. ಸ್ವಲ್ಪ ಸದ್ದು ಹೆಚ್ಚಾದ್ರೂ ತುಂಬಾ ಡಿಸ್ಟರ್ಬ್ ಆಗತ್ತೆ. ಒಂದರಲ್ಲೇ ಮೈ ಮರೆತು ಅಪ್ಪಾಯಕ್ಕೆ ಸಿಕ್ಕಿಕೊಳ್ಳತ್ತೆ. ಇವತ್ತಿಗೆ ಇಷ್ಟು ಸಾಕು. ನನಗೂ ಬೇರೆ ಕಡೆ ಹೋಗಬೇಕಿದೆ. ರಜೆ ಮುಗಿದು ಶಾಲೆ ಪ್ರಾರಂಭವಾಗಲಿ. ನಾನು ಮತ್ತೆ ಶಾಲೆಗೇ ಬಂದು ಪಾಠ ಮಾಡ್ತೇನೆ. ನೀವು ಬಂದಿದ್ದು ಬಹಳ ಖುಷಿ ಆಯಿತು. (ಎಂದು ಎಲ್ಲರೂ ಹೊರಡುವರು)

(ಹೀಗೆ ಹರೀಶ್ ಭಟ್ ಅವರ ಬಳಿ ಕೇಳಿದ ವಿಷಯಗಳನ್ನು ಅವರೆಲ್ಲ ಮೆಲುಕು ಹಾಕುತ್ತಿದ್ದರು. ಪುಟ್ಟನಿಗೆ ಅಜ್ಜ ಹೇಳಿದ್ದ ಅವಧೂತನ ಕತೆ ಗೊತ್ತಾಯಿತು.)

1 Response to ಅವಧೂತ ಗೀತೆ

  1. Aniruddh Kamath

    Helpful for Kannada class 7 ;FA 3 activity

Leave a Reply

Notice Board

Pūrṇapramati is recruiting teachers

Pūrṇapramati is recruiting dedicated research oriented teachers for 1 to 10 grades and pre-primary Montessori.

 

Registration is open for the next academic year

Purnapramati opens its registration for the next academic year: November 2017 and June 2018-19. Applications are being issued. Kindly help spread the word to interested parents.

Socialize & Share

Follow us on different social networking website and share it