ಅಜಾತಶತ್ರು, ನಿಗರ್ವಿ ಡಾ|ಹರೀಶ್‍ ಭಟ್

ಕೆ.ಎಸ್‍. ನವೀನ್
ಸಂಗ್ರಹಾಲಯ ನಿರ್ವಾಹಕ, “ವಿಶ್ವರೂಪ”
ಪೂರ್ಣಪ್ರಮತಿ ಬೋಧನಾತ್ಮಕ ಸಂಗ್ರಹಾಲಯ
ಆನಂದವನ, ಮಾಗಡಿ.

“ಯಶ್ವಂತ್‍, ಇವರು ನವೀನ್‍ ಅಂತ ಪುಸ್ತಕ ಬರಿತಾ ಇದಾರೆ. ಅವರಿಗೆ ಯಾವುದಾದರು ರೆಫೆರೆನ್ಸ್ ಪುಸ್ತಕ ಬೇಕಾದರೆ ನನ್ನ ಹೆಸರಲ್ಲಿ ಕೊಡಿ” ಇದು ಹರೀಶ್ ಭಟ್‍, ನನ್ನ ಪರಿಚಯ ಹೆಚ್ಚೇನು ಇರದಿದ್ದ ಸಂದರ್ಭದಲ್ಲೇ ಭಾರತೀಯ ವಿಜ್ಞಾನ ಸಂಸ್ಥೆಯ, ಪರಿಸರ ಅಧ್ಯಯನ ಕೇಂದ್ರದ ಗ್ರಂಥಪಾಲಯರಿಗೆ ಮಾಡಿದ ಶಿಫಾರಸು! ಇದನ್ನು ಯಾಕೆ ಹೇಳುತ್ತಿದ್ದೇನೆಂದರೆ ಭಟ್ಟರ ವಿಶ್ವಾಸದ ಮಾತ್ರವಲ್ಲ ವಿದ್ಯಾಪ್ರೀತಿಯ ಒಂದು ಮುಖ ಇದು. ಯಾರೇ ಏನೇ ಮಾಹಿತಿ ಕೇಳಿಕೊಂಡು ಬಂದರೂ ಬರಿಗೈಲಿ ಕಳಿಸಿದವರಲ್ಲ ಇವರು. ಮತ್ತೊಬ್ಬ ಚಿಟ್ಟೆ ತಜ್ಞರಿಗಾಗಿ ಸಂಸ್ಥೆಯ ಗ್ರಂಥಾಲಯವನ್ನೆಲ್ಲಾ ತಡಕಿ ಸುಮಾರು ಹತ್ತು ಸಾವಿರ ಪುಟಗಳಷ್ಟು ಮಾಹಿತಿಯನ್ನು ಪ್ರತಿ ಮಾಡಿಸಿಕೊಳ್ಳಲು ಸಹಾಯ ಮಾಡಿದವರು ಇದೇ ಹರೀಶ್ ಭಟ್.

ನನಗೆ ಇವರ ಪರಿಚಯ ಯಾವಾಗ, ಹೇಗಾಯಿತು ಎಂಬುದೇ ಮರೆತುಹೊಗಿದೆ. ಅದೆಷ್ಟೋ ಕಾಲದಿಂದ ಜೊತೆಗಿದ್ದವರಂತೆ ವ್ಯವಹರಿಸುತ್ತಿದ್ದರು. ಜೊತೆಗೆ ಅವನ್ನೆಲ್ಲ ಯೋಚಿಸಬೇಕಾದ ಅಗತ್ಯವೂ ಇರಲಿಲ್ಲ.

ಮುಂದೆ 2004-5ರಲ್ಲಿ ನಾವು ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ವಿಶ್ವಕೋಶವನ್ನು ಅಂಕೀಕರಣ (ಡಿಜಿಟೈಸೇಷನ್‍) ಮಾಡಿ ಸಿಡಿ/ಡಿವಿಡಿ ರೂಪದಲ್ಲಿ ಲೋಕಾರ್ಪಣೆ ಮಾಡಿದೆವು. ಆಗ ಸಸ್ಯವಿಜ್ಞಾನದ ಬಹುತೇಕ ಲೇಖನಗಳನ್ನು ಪರಿಷ್ಕರಿಸಿ ಕೊಟ್ಟವರು ಹರೀಶ್ ಭಟ್‍. ಇದೇ ಸಂದರ್ಭದಲ್ಲಿ ನಮ್ಮ ಸಂಬಂಧ ಗಟ್ಟಿಯಾಗಿದ್ದು.

ಕೆಲವೇ ಮಂದಿ ತಜ್ಞರಲ್ಲಿ ಕಾಣಬಹುದಾಗಿದ್ದ ಎಳೆಯರಿಗೆ ತರಬೇತಿ ಕೊಡುವ ಕೌಶಲ ಹರೀಶ್‍ ಭಟ್ಟರಿಗೆ ಒಲಿದಿತ್ತು. ಅಥವಾ ಅದಕ್ಕಾಗಿ ಅವರು ಸಾಕಷ್ಟು ಹೋಮ್‍ ವರ್ಕ್ ಮಾಡಿ ಒಲಿಸಿಕೊಂಡಿದ್ದರು. ಸದಾ ತಜ್ಞಮಿತ್ರರು ಇಲ್ಲವೆ ಕಿರಿಯ ವಿದ್ಯಾರ್ಥಿಗಳ ಗುಂಪಿನಲ್ಲಿಯೇ ಇರುತ್ತಿದ್ದ ಭಟ್ಟರನ್ನು ಏಕಾಂಗಿಯಾಗಿ ಕಾಣಲು ಸಾಧ್ಯವೇ ಇರಲಿಲ್ಲ! ತಲೆತುಂಬ ಯೋಜನೆಗಳನ್ನು ಹಾಕಿಕೊಂಡು ಜೊತೆಗೆಯವರೊಡನೆ ಅದನ್ನು ಹೇಳುತ್ತಾ ಅವರು ಕೇಳಿದ್ದರ ವಿಷಯವಾಗಿ ಮಾತನಾಡುತ್ತಾ ತೇರು ಸರಿಯುತ್ತಿತ್ತು. ಅವರ ಸಸ್ಯವಿಜ್ಞಾನದ ಜ್ಞಾನ ಎಷ್ಟಿತ್ತೆಂದರೆ ಮಿತ್ರರೊಬ್ಬರು ಅವರೊಂದಿಗೆ ಕಾಡು ತಿರುಗಿದ ಅನುಭವವನ್ನು ಬರೆದಾಗ ಬರೆದದ್ದು “ಆ ಕಾಡಿನಲ್ಲಿ ಹರೀಶ್‍ ಭಟ್‍ ಸಹ ಗುರುತಿಸಲಾಗದ ಮರಗಳಿದ್ದವು” ಅವರನ್ನು ಬಲ್ಲವರಿಗೆ ಖಂಡಿತಾ ಇದು ಉತ್ಪ್ರೇಕ್ಷೆಯಾಗಿ ಕಾಣುತ್ತಿರಲಿಲ್ಲ.

ಭಟ್ಟರ ಮತ್ತೊಂದು ಮಹೋನ್ನತ ಗುಣವೆಂದರೆ ಅವರೊಂದಿಗೆ ಜಗಳವಾಡಬಹುದಾಗಿತ್ತು. ವಿಷಯಾಧಾರಿತ ಚರ್ಚೆಗಂತು ಅವರು ಎಂದಿಗೂ ಸಿದ್ಧೆರಿರುತ್ತಿದ್ದರು. ಕೆಲವೊಮ್ಮೆ ಜಗಳವೇ ಆಗುತ್ತಿತ್ತು. ಆನಂತರ ಸಿಕ್ಕಾಗ ಮೊದಲು ಮಾತನಾಡಿಸುತ್ತಿದ್ದದು ಭಟ್ಟರೇ! ಅವರು ಹಕ್ಕಿ ಪ್ರಪಂಚ ಪುಸ್ತಕ ಬರೆದಾಗ ಹಕ್ಕಿಗಳ ಆಯಸ್ಸನ್ನು ಸೇರಿಸಿದ್ದರು. ಈ ಕುರಿತಾಗಿ ನಮ್ಮಲ್ಲಿ ಭಿನ್ನಾಭಿಪ್ರಾಯವಿತ್ತು. ಅದೇನು ಅವರ ಮನಸ್ಸಿನಲ್ಲಿ ಉಳಿಯಲಿಲ್ಲ. ಈ ಪುಸ್ತಕಕ್ಕಾಗಿ ಅವರು (ಮತ್ತು ಪ್ರಮೋದ್) ಪಟ್ಟ ಕಷ್ಟ ಹೇಳತೀರದು. ಸಾಧ್ಯವಾದಷ್ಟೂ ಪರಿಷ್ಕಾರವಾಗಿರಬೇಕೆಂದು ಅವರು ಹಾಕಿದ ಸಮಯ, ಶ್ರಮ ವ್ಯರ್ಥವಾಗಲಿಲ್ಲ. ಇತರರಿಗೆ ಅದೊಂದು ಮಾದರಿ. ರಾಜ್ಯಮಟ್ಟದ ಎರಡು ಪ್ರಶಸ್ತಿಗಳು ಆ ಪುಸ್ತಕಕ್ಕೆ ಇಂದಿನ ವಶೀಲಿಬಾಜಿ ದಿನಗಳಲ್ಲೂ ಸಿಕ್ಕಿತು ಎಂದರೆ ಅದರ ಗುಣಮಟ್ಟದ ಅರಿವಾಗುತ್ತದೆ. ನಿತ್ಯೋತ್ಸವದ ಕವಿ ನಿಸಾರರು ಅದನ್ನೊಮ್ಮೆ ಕರಡು ತಿದ್ದಿಕೊಟ್ಟಿದ್ದರು. ಹಕ್ಕಿಗಳ ಸಂಸ್ಕೃತ ಹೆಸರನ್ನು ಸೇರಿಸಬೇಕೆಂದು ಪ್ರೊ ಎಸ್‍ ಕೆ ರಾಮಚಂದ್ರರಾಯರನ್ನು ಸಂಪರ್ಕಿಸಿ ಅವರ ಸಹಾಯದಿಂದ ಅದನ್ನು ಮಾಡಿಸಿದರು. ಇದು ಎಷ್ಟು ಮಹತ್ವದ ಕೆಲಸವೆಂದು ತಟ್ಟನೆ ಅರಿವಾಗದಿರಬಹುದು. ಹೊರಗಿನ ವೈಜ್ಞಾನಿಕ ಜಗತ್ತಿನಲ್ಲಿರುವ ಮಾತೆಂದರೆ, “ಭಾರತೀಯರು ಭಾವುಕರು, ಅವರಿಗೆ ಅವರಲ್ಲೇ ಇರುವ ಗಿಡ, ಮರ, ಪಕ್ಷಿ, ಪ್ರಾಣಿಗಳನ್ನು ಕುರಿತು ಕಿಂಚಿತ್ತೂ ಜ್ಞಾನವಿಲ್ಲ. ಬ್ರಿಟೀಶರು ಭಾರತಕ್ಕೆ ಬಂದು ಗಿಡಮರ ಮತ್ತು ಪ್ರಾಣಿಗಳ ಬಗ್ಗೆ ಬರೆದಾಗಲೇ ಆ ಜೀವಿವೈವಿಧ್ಯ ಹೊರಜಗತ್ತಿಗೆ ಗೊತ್ತಾದದ್ದು” ಎಂಬ ಭಾವನೆ. ಸಂಸ್ಕೃತದ ಹೆಸರುಗಳನ್ನು ಕೊಡುವುದರ ಮೂಲಕ ಇಂತಹವರ ಬಾಯಿ ಮುಚ್ಚಿಸಿದರು, ಹರೀಶ್ ಭಟ್! ಸಂಸ್ಕೃತ ಕಾವ್ಯ ನಾಟಕಗಳಲ್ಲಿ ಬರುವ ಗಿಡಮರ,ಪಕ್ಷಿಗಳ ವಿವರಗಳನ್ನೆಲ್ಲ ಪಟ್ಟಿಮಾಡಿಕೊಂಡಿದ್ದರು. ಇವರೊಂದಿಗೆ ಚರ್ಚಿಸಿದವರೊಬ್ಬರು ಆ ಎಳೆಗಳನ್ನು ಹಿಡಿದು ಕನ್ನಡ ಕಾವ್ಯಗಳಲ್ಲಿ ಪಕ್ಷಿಗಳು ಎಂದು ಲೇಖನವನ್ನೇ ಬರೆದರು. ಇದು ಪ್ರಜಾವಾಣಿಯಲ್ಲಿ ಪ್ರಕಟವಾಯಿತೆಂದು ನೆನಪು.

ಯಾರೂ ಕೈಹಾಕಲು ಯೋಚಿಸದನ್ನು ಮಾಡುವುದು ಭಟ್ಟರ ಮತ್ತೊಂದು ಗುಣ. ಪ್ರಾಯಃ ಗುಬ್ಬಚ್ಚಿಗಳ ಸಂಖ್ಯೆೈಯಲ್ಲ ಕಾಗೆಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ ಎಂದು ಹೇಳಿದ ಮೊಟ್ಟಮೊದಲ ತಜ್ಞರು ಹರೀಶ್‍ ಭಟ್, ಇದಕ್ಕಾಗಿ ಒಂದು ಪರಿಯೋಜನೆಯನ್ನೇ ಹಮ್ಮಿಕೊಂಡಿದ್ದರು. ಹಿಂದೆ ಕಾಗೆಗಳು ಹೆಚ್ಚು ಕಂಡುಬರುವ ಕಡೆ ಹೋಗಿ ಇಂದಿನ ಸ್ಥಿತಿಗತಿಗಳನ್ನು ದಾಖಲಿಸಿದರು.

ನಮ್ಮ ಶಾಲೆಯ ಕುರಿತಾಗಿಯೂ ಅವರಲ್ಲಿ ಅನೇಕ ಯೋಜನೆಗಳಿದ್ದವು. ಅದರಲ್ಲಿಯೂ ಆನಂದವನದಂತಹ ಜಾಗದಲ್ಲಿ ಮಾಡಬಹುದಾದ ಅನೇಕ ಕಾರ್ಯಗಳನ್ನು ಕುರಿತಾಗಿ ಚರ್ಚಿಸಿದ್ದೆವು. ಇಲ್ಲಿ ನಾನು ಯೋಜಿಸಿದ್ದ ಮ್ಯೂಸಿಯಮ್ನಾ ವಿವರ ಕೇಳಿ ಸಂತೋಷಪಟ್ಟಿದ್ದರು. ಹರ್ಬೇರಿಯಂ ಮಾಡಬೇಕು ಅದಕ್ಕೆ ನಿಮ್ಮ ಸಹಾಯ ಬೇಕಾಗುತ್ತದೆ ಎಂದಿದ್ದೆ. ಎಂದಿನಂತೆ “ಆಗಲಿ, ಬನ್ನಿ” ಎಂದಿದ್ದರು.
ಅವರ ವೈಯಕ್ತಿಕ ಜೀವನ ಕುರಿತಾಗಿ ನನಗೆ ಹೆಚ್ಚಿನ ಮಾಹಿತಿಯಿಲ್ಲ. ನಮ್ಮೂರಿಗೆ ಬನ್ನಿ ಎಂದು ಸದಾ ಎನ್ನುತ್ತಿದ್ದ ಅವರ ಆಹ್ವಾನವನ್ನು ಬಳಸಿಕೊಂಡು ಅವರಲ್ಲಿಗೆ ಹೋಗಿಬರುವ ಅವಕಾಶಗಳು ನನ್ನ ವೈಯಕ್ತಿಕ ಪರಿಸ್ಥಿತಿಯಲ್ಲಿ ಆಗಲೇ ಇಲ್ಲ. ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿನ ಒಂದು ಖಾಸಗಿ ಸಭೆಯಲ್ಲಿ ಅಲ್ಲಿನ ಹಿರಿಯ ವಿಜ್ಞಾನಿಗಳೊಬ್ಬರು ಹರೀಶ್‍ ಭಟ್ ಈಸ್‍ ನಾಟ್ ಫಾರ್ಮಲಿ ವಿದ್‍ ಇಂಡಿಯನ್ ಇನ್ಸ್ಟಿಿಟ್ಯೂಟ್‍ (ಹರೀಶ್‍ ಭಟ್ ಈ ಸಂಸ್ಥೆಯ ಖಾಯಂ ಉದ್ಯೋಗಿಯಲ್ಲ) ಎಂದಿದ್ದರು. ಇದು ಮನಸ್ಸಿಗೆ ಹಿತಕೊಡುವ ವಿಷಯವಲ್ಲ.

ನಮಗೆ ಅರ್ಥವಾಗದೆ ಬ್ಬೆ ಬ್ಬೆ ಬ್ಬೆ ಎನ್ನುವಂಥಹ ವಿಷಯವೆಂದರೆ ಸಾವು! ಭಟ್ಟರ ವಿಷಯದಲ್ಲಿ ನನಗಾಗಿದ್ದು ಅದೇ. ಇಷ್ಟೆಲ್ಲಾ ಚಟುವಟಿಕೆಗಳಿದ್ದ ಸಣ್ಣಪ್ರಾಯದ ಹರೀಶ್ ಭಟ್ಟ್ ಇದ್ದಕ್ಕಿದ್ದಂತೆ ಇನ್ನಿಲ್ಲವೆಂದರೆ ಅದೇ ಬ್ಬೆ ಬ್ಬೆ ಬ್ಬೆ ಎನ್ನುವಂತಾಗುತ್ತದೆ.

ನಮ್ಮಲ್ಲಿನ ಎನ್ವಿಸ್‍ (ENVIS)ಗೆ ಅವರ ಹೆಸರಿಡಬಹುದು. ಅವರಿಗೆ ಪ್ರಿಯವಾದ ಕಾರ್ಯಗಳನ್ನು ಮಾಡಿಕೊಂಡು ಹೋಗಬೇಕು. ಹರೀಶ್ ಸಾಯುವವರಲ್ಲ, ಅದೆಲ್ಲೋ ಒಂದಷ್ಟು ಮಕ್ಕಳನ್ನು ಅಟ್ಟಿಕೊಂಡು ಗಿಡಮರಗಳನ್ನು ತೋರಿಸುತ್ತಿರುತ್ತಾರೆ…. ಆ ಗುರು ಸಮಾನ ಮಿತ್ರರಿಗೆ ಇದೋ ಒಂದು ಹನಿ ಕಣ್ಣೀರು.

Leave a Reply

Notice Board

Pūrṇapramati is recruiting teachers

Pūrṇapramati is recruiting dedicated research oriented teachers for 1 to 10 grades and pre-primary Montessori.

 

Registration is open for the next academic year

Purnapramati opens its registration for the next academic year: November 2017 and June 2018-19. Applications are being issued. Kindly help spread the word to interested parents.

Socialize & Share

Follow us on different social networking website and share it